ಆಹಾರ ಸಚಿವರ ತವರಿನ ಪಡಿತರ ಅಕ್ಕಿಯಲ್ಲಿ ಪ್ಲಾಸ್ಟಿಕ್​ ಅಂಶ ಆರೋಪ; ಬಡವರ ಹೊಟ್ಟೆಗೆ ಏನು ಗತಿ ಎಂದು ಜನರ ಆಕ್ರೋಶ

|

Updated on: May 29, 2021 | 9:13 AM

ಪ್ಲಾಸ್ಟಿಕ್ ಅಂಶದ ಬಗ್ಗೆ ಪರಿಶೀಲನೆಗೆ ಅಕ್ಕಿ ಸ್ಯಾಂಪಲ್ ಸಂಗ್ರಹ ಮಾಡಿಕೊಂಡಿರುವ ಅಧಿಕಾರಿಗಳು 2 ಕೆಜಿ ಅಕ್ಕಿ ತೆಗೆದುಕೊಂಡು ಹೋಗಿದ್ದು, 2 ದಿನದೊಳಗೆ ವರದಿ ನೀಡುವುದಾಗಿ ತಿಳಿಸಿದ್ದಾರೆ. ಆದರೆ, ವರದಿ ಬರುವ ತನಕ ಬಡವರು ಏನು ತಿನ್ನಬೇಕು ಅವರ ಹೊಟ್ಟೆಗೆ ಏನು ಗತಿ ಎಂದು ಆಹಾರ ಇಲಾಖೆ ವಿರುದ್ಧ ಬಡಾಲ ಅಂಕಲಗಿ ಜನ ಆಕ್ರೋಶ ಹೊರಹಾಕಿದ್ದಾರೆ.

ಆಹಾರ ಸಚಿವರ ತವರಿನ ಪಡಿತರ ಅಕ್ಕಿಯಲ್ಲಿ ಪ್ಲಾಸ್ಟಿಕ್​ ಅಂಶ ಆರೋಪ; ಬಡವರ ಹೊಟ್ಟೆಗೆ ಏನು ಗತಿ ಎಂದು ಜನರ ಆಕ್ರೋಶ
ಪ್ಲಾಸ್ಟಿಕ್​ ಅಂಶ ಇದೆ ಎಂದು ಹೇಳಲಾಗುತ್ತಿರುವ ಅಕ್ಕಿ
Follow us on

ಬೆಳಗಾವಿ: ಸರ್ಕಾರದ ವತಿಯಿಂದ ನೀಡಲಾಗುವ ಪಡಿತರ ಅಕ್ಕಿಯಲ್ಲಿ ಪ್ಲಾಸ್ಟಿಕ್ ಅಂಶ ಪತ್ತೆಯಾಗಿರುವ ಆರೋಪ ಬೆಳಗಾವಿಯಲ್ಲಿ ಕೇಳಿ ಬಂದಿದೆ. ಬೆಳಗಾವಿಯ ಬಡಾಲ ಅಂಕಲಗಿ ಗ್ರಾಮಸ್ಥರು ಈ ಬಗ್ಗೆ ಆಕ್ರೋಶ ಹೊರ ಹಾಕಿದ್ದು ಕಳೆದ ಎರಡು ದಿನಗಳ ಹಿಂದೆ ಗ್ರಾಮದಲ್ಲಿ ವಿತರಣೆ ಮಾಡಿದ್ದ ಅಕ್ಕಿಯಲ್ಲಿ ಪ್ಲಾಸ್ಟಿಕ್ ಅಕ್ಕಿ ಪತ್ತೆಯಾಗಿದೆ. ಮನೆಗೆ ತಂದ ‌ಪಡಿತರ ಅಕ್ಕಿಯ ಕೆಲ ಕಾಳುಗಳಿಗೆ ಬೆಂಕಿ ಹಚ್ಚಿದಾಗ ಪ್ಲಾಸ್ಟಿಕ್ ಅಂಶ ಕಂಡುಬಂದಿದೆ ಎಂದು ಆರೋಪಿಸಿದ್ದಾರೆ. ಅಲ್ಲದೇ, ಪ್ಲಾಸ್ಟಿಕ್ ಅಕ್ಕಿ ಪತ್ತೆ ಬಗ್ಗೆ ಪಡಿತರ ಅಂಗಡಿ ಮಾಲೀಕನಿಗೆ ಹೇಳಿದ ನಂತರವೂ ಮತ್ತೆ ಅದೇ ಪಡಿತರ ಅಕ್ಕಿ ವಿತರಿಸಿದ ಮಾಲೀಕನ ಜೊತೆ ವಾಗ್ವಾದವೂ ನಡೆದಿದೆ. ಆ ಮೂಲಕ ಆಹಾರ ಸಚಿವ ಉಮೇಶ್ ಕತ್ತಿ ತವರಲ್ಲೇ ಪ್ಲಾಸ್ಟಿಕ್ ಅಕ್ಕಿ ಪತ್ತೆಯಾಯಿತಾ ಎಂಬ ಸಂಶಯ ಹುಟ್ಟಿಕೊಂಡಿದ್ದು, ಸುತ್ತಮುತ್ತಲ ಗ್ರಾಮಗಳಲ್ಲಿ ತೀವ್ರ ಚರ್ಚೆಗೆ ಕಾರಣವಾಗುತ್ತಿದೆ.

ಪಡಿತರ ಅಕ್ಕಿಯಲ್ಲಿ ಪ್ಲಾಸ್ಟಿಕ್ ಅಂಶ ಪತ್ತೆ ಆರೋಪ ಹಿನ್ನೆಲೆ ಬಡಾಲ ಅಂಕಲಗಿ ಗ್ರಾಮಕ್ಕೆ ಆಹಾರ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ಲಾಸ್ಟಿಕ್ ಅಂಶದ ಬಗ್ಗೆ ಪರಿಶೀಲನೆಗೆ ಅಕ್ಕಿ ಸ್ಯಾಂಪಲ್ ಸಂಗ್ರಹ ಮಾಡಿಕೊಂಡಿರುವ ಅಧಿಕಾರಿಗಳು 2 ಕೆಜಿ ಅಕ್ಕಿ ತೆಗೆದುಕೊಂಡು ಹೋಗಿದ್ದು, 2 ದಿನದೊಳಗೆ ವರದಿ ನೀಡುವುದಾಗಿ ತಿಳಿಸಿದ್ದಾರೆ. ಆದರೆ, ವರದಿ ಬರುವ ತನಕ ಬಡವರು ಏನು ತಿನ್ನಬೇಕು ಅವರ ಹೊಟ್ಟೆಗೆ ಏನು ಗತಿ ಎಂದು ಆಹಾರ ಇಲಾಖೆ ವಿರುದ್ಧ ಬಡಾಲ ಅಂಕಲಗಿ ಜನ ಆಕ್ರೋಶ ಹೊರಹಾಕಿದ್ದಾರೆ.

ಪಡಿತರ ಅಂಗಡಿಯಲ್ಲಿ ವಿತರಣೆಯಾದ ಅಕ್ಕಿಯಲ್ಲಿ ಪ್ಲಾಸ್ಟಿಕ್ ಅಂಶ ಇದೆ ಎಂಬ ಅನುಮಾನ ಬಂದ ಕೂಡಲೇ ಜನರು ಅಕ್ಕಿಯ ಕೆಲ ಕಾಳುಗಳಿಗೆ ಬೆಂಕಿ ಹಚ್ಚಿ ನೋಡಿದ್ದಾರೆ. ಆಗ ಅನುಮಾನ ಮತ್ತಷ್ಟು ಬಲಗೊಂಡು ಪ್ಲಾಸ್ಟಿಕ್ ಅಕ್ಕಿ ಪತ್ತೆಯಾಗಿದೆ ಎಂದು ಪಡಿತರ ಅಂಗಡಿ ಮಾಲೀಕನಿಗೆ ತಿಳಿಸಿದ್ದಾರೆ. ಆದರೆ, ಅದಾದ ನಂತರವೂ ಪಡಿತರ ಅಕ್ಕಿ ವಿತರಿಸಿದ ಕಾರಣ ಸಿಟ್ಟಿಗೆದ್ದ ಗ್ರಾಮಸ್ಥರು ಪಡಿತರ ಅಂಗಡಿ ಮಾಲೀಕನೊಂದಿಗೆ ವಾಗ್ವಾದ ನಡೆಸಿ, ಆಹಾರ ಇಲಾಖೆ ಜಂಟಿ ನಿರ್ದೇಶಕ ಸಿ.ಬಿ.ಕೊಡ್ಲಿಗೆ ದೂರವಾಣಿ ಮೂಲಕ ದೂರು ನೀಡಿದ್ದಾರೆ.

ಅದರಂತೆ ಗ್ರಾಮಕ್ಕೆ ಫುಡ್ ಇನ್ಸ್‌ಪೆಕ್ಟರ್ ಕಳಿಸಿ ಮಾಹಿತಿ ಸಂಗ್ರಹಿಸಿದ ಆಹಾರ ಇಲಾಖೆ ಜಂಟಿ ನಿರ್ದೇಶಕ. ಎರಡು ಕೆಜಿ ಸ್ಯಾಂಪಲ್ ಅಕ್ಕಿ ತರಿಸಿಕೊಂಡಿದ್ದಾರೆ. ಆ ಅಕ್ಕಿಯನ್ನು ಪ್ರಯೋಗಾಲಯಕ್ಕೆ ಕಳಿಸಿ ಎರಡು ದಿನಗಳಲ್ಲಿ ವರದಿ ತಿಳಿಸುವುದಾಗಿ ಅಧಿಕಾರಿಗಳು ಹೇಳಿದ್ದರೂ, ಲಾಕ್​ಡೌನ್​ ಕಾರಣ ಮನೆಯಲ್ಲೇ ಇರುವ ಬಡವರು ಹೊಟ್ಟೆಗೆ ಏನು ಮಾಡಬೇಕೆಂದು ಜನ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಇದನ್ನೂ ಓದಿ:
Umesh Katti: ಅಕ್ಕಿ ಕೇಳಿದವರಿಗೆ ಸತ್ತುಹೋಗಿ ಎಂದ ಆಹಾರ ಸಚಿವ ಉಮೇಶ್ ಕತ್ತಿ! 

ಬಿಪಿಎಲ್ ಕಾರ್ಡ್​ದಾರರಿಗೆ ನೀಡುವ ಅಕ್ಕಿಯ ಪ್ರಮಾಣ 5ರಿಂದ 10 ಕೆ.ಜಿಗೆ ಹೆಚ್ಚಳ

Published On - 9:13 am, Sat, 29 May 21