ಗದಗ-ಬೆಟಗೇರಿ: ರಸ್ತೆಯಲ್ಲಿ ತಗ್ಗು ಗುಂಡಿಗಳ ಮಹಾಪುರ; ನಗರಸಭೆ ಅಧಿಕಾರಿಗಳ ವಿರುದ್ಧ ಜನರ ಆಕ್ರೋಶ

| Updated By: Skanda

Updated on: Jul 19, 2021 | 12:34 PM

ಆಟೋ ಚಾಲಕರು ಆಟೋ ಓಡಿಸಲು ಭಯ ಪಡುತ್ತಿದ್ದು, ಗರ್ಭಿಣಿ ಮಹಿಳೆಯರನ್ನು ಈ ರಸ್ತೆಗಳಲ್ಲಿ ಕರೆದುಕೊಂಡು ಬಂದರೆ, ಅಲ್ಲಿಯೇ ಹೆರಿಗೆ ಆಗುತ್ತದೆ ಎಂದು ಸ್ಥಳೀಯರಾದ ಗೋವಿಂದ ಗೌಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗದಗ-ಬೆಟಗೇರಿ: ರಸ್ತೆಯಲ್ಲಿ ತಗ್ಗು ಗುಂಡಿಗಳ ಮಹಾಪುರ; ನಗರಸಭೆ ಅಧಿಕಾರಿಗಳ ವಿರುದ್ಧ ಜನರ ಆಕ್ರೋಶ
ರಸ್ತೆಯಲ್ಲಿ ತಗ್ಗು ಗುಂಡಿ
Follow us on

ಗದಗ: ಅವಳಿ ನಗರದ ಪ್ರಮುಖ ರಸ್ತೆಗಳು ಸಂಪೂರ್ಣ ಹಾಳಾಗಿದ್ದು, ಜನರು ಸಂಚರಿಸಲು ಹರಸಾಹಸ ಪಡಬೇಕಾಗಿದೆ. ಗದಗ-ಬೆಟಗೇರಿಯ ಜನ ಜೀವ ಅಂಗೈಯಲ್ಲಿ ಹಿಡಿದು ಪ್ರತಿನಿತ್ಯ ಸಂಚಾರ ಮಾಡುತ್ತಿದ್ದಾರೆ. ಮಹಾತ್ಮಾ ಗಾಂಧಿ ಸರ್ಕಲ್, ಪಂಡಿತ ಪುಟ್ಟರಾಜ ಗವಾಯಿಗಳ ಸರ್ಕಲ್, ಬೆಟಗೇರಿಯ ರೈಲ್ವೆ ಬ್ರಿಡ್ಜ್ ರಸ್ತೆ, ಮುಳಗುಂದ ನಾಕಾ, ಮುಳಗುಂದ ರಸ್ತೆ ಸೇರಿದಂತೆ ಅವಳಿ ನಗರದ ಪ್ರಮುಖ ರಸ್ತೆಯಲ್ಲಿ ತಗ್ಗು ಗುಂಡಿಗಳು ರಾರಾಜಿಸುತ್ತಿವೆ. ಅದರಲ್ಲೂ ಮಳೆಯಾದರೆ ಸಾಕು ರಸ್ತೆಯಲ್ಲಿ ತಗ್ಗು ಗುಂಡಿಗಳು ನೀರಿನಿಂದ ತುಂಬಿಕೊಂಡು, ವಾಹನ ಸವಾರರು ಅಪಾಯಕ್ಕೆ ಸಿಲುಕುತ್ತಿದ್ದಾರೆ. ಈ ಅವ್ಯವಸ್ಥೆ ಸಹಜವಾಗಿಯೇ ಈ ಭಾಗದ ಜನರ ಆಕ್ರೋಶಕ್ಕೆ ಕಾರಣವಾಗಿದೆ.

ನೀರು ತುಂಬಿರುವುದರಿಂದ ತಗ್ಗು ಗುಂಡಿಗಳ ಆಳ ಗೊತ್ತಾಗದೆ ಅದೆಷ್ಟು ಬೈಕ್ ಸವಾರರು ಬಿದ್ದು, ಗಾಯ ಮಾಡಿಕೊಂಡಿದ್ದಾರೆ. ಆಟೋ ಚಾಲಕರು ಆಟೋ ಓಡಿಸಲು ಭಯ ಪಡುತ್ತಿದ್ದು, ಗರ್ಭಿಣಿ ಮಹಿಳೆಯರನ್ನು ಈ ರಸ್ತೆಗಳಲ್ಲಿ ಕರೆದುಕೊಂಡು ಬಂದರೆ, ಅಲ್ಲಿಯೇ ಹೆರಿಗೆ ಆಗುತ್ತದೆ ಎಂದು ಸ್ಥಳೀಯರಾದ ಗೋವಿಂದ ಗೌಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮೂರು ವರ್ಷಗಳಿಂದ ನಗರಸಭೆಗೆ ಸದಸ್ಯರಿಲ್ಲ. ಹೀಗಾಗಿ ಇಲ್ಲಿನ ಅಧಿಕಾರಿಗಳಿಗೆ ಹೇಳುವವರು, ಕೇಳುವವರು ಯಾರೂ ಇಲ್ಲ. ಅಭಿವೃದ್ಧಿ ಎನ್ನುವುದು ಮರಿಚೀಕೆಯಾಗಿದೆ. ಜಿಲ್ಲಾಡಳಿತ ಹಾಗೂ ಗದಗ-ಬೆಟಗೇರಿ ನಗರಸಭೆ ಅಧಿಕಾರಿಗಳು ರಸ್ತೆ ರಿಪೇರಿ ಮಾಡಬೇಕಿತ್ತು. ಆದರೆ ಅವರ ಬೇಜವಾಬ್ದಾರಿಯಿಂದ ಅವಳಿ ನಗರದ ರಸ್ತೆಯಲ್ಲಿ ಸಂಚಾರ ಮಾಡದಂತ ಸ್ಥಿತಿ ನಿರ್ಮಾಣವಾಗಿದೆ. ನಗರ ಪ್ರದೇಶದ ರಸ್ತೆಗಳ ಸ್ಥಿತಿಯೇ ಹೀಗಾದರೆ, ಗ್ರಾಮೀಣ ಭಾಗದ ರಸ್ತೆಗಳು ಹೇಗೆ ಇರಬಹುದು. ಗದಗ ಶಾಸಕ ಎಚ್. ಕೆ. ಪಾಟೀಲ್, ಜಿಲ್ಲಾ ಉಸ್ತುವಾರಿ ಸಚಿವರಾದ ಸಿ. ಸಿ. ಪಾಟೀಲ್ ಒಂದು ಸುತ್ತು ಈ ರಸ್ತೆಗಳಲ್ಲಿ ಸುತ್ತಾಡಲಿ ಆಗ ಇಲ್ಲಿನ ಪರಿಸ್ಥಿತಿ ಅವರಿಗೆ ಅರ್ಥವಾಗುತ್ತದೆ. ಕೂಡಲೇ ಗದಗ- ಬೆಟಗೇರಿ ನಗರ ಸಭೆ ಅಧಿಕಾರಿಗಳು ಹಾಗೂ ಜಿಲ್ಲಾಡಳಿತ ತಗ್ಗು ಗುಂಡಿಗಳನ್ನು ತುಂಬಿಸಿ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ಗದಗ ನಿವಾಸಿ ಆನಂದ ಒತ್ತಾಯ ಮಾಡಿದ್ದಾರೆ.

ಒಟ್ಟಾರೆ ಗದಗ-ಬೆಟಗೇರಿ ಅವಳಿ ನಗರದ ಪ್ರಮುಖ ರಸ್ತೆಯಲ್ಲಿ ಸಂಚಾರ ಮಾಡಲು ಜನರು ಭಯಪಡುತ್ತಿದ್ದಾರೆ. ಇನಾದರೂ, ಜಿಲ್ಲಾಧಿಕಾರಿಗಳು, ಗದಗ-ಬೆಟಗೇರಿ ನಗರಸಭೆ ಅಧಿಕಾರಿಗಳು ಎಚ್ಚೆತ್ತುಕೊಂಡು ತಗ್ಗು ಗುಂಡಿಗಳನ್ನು ಮುಚ್ಚಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕಾಗಿದೆ.

ವರದಿ: ಸಂಜೀವ ಪಾಂಡ್ರೆ

ಇದನ್ನೂ ಓದಿ:
Heavy Rain: ಭಾರೀ ಮಳೆಗೆ ನದಿಯಂತಾದ ವಾಣಿಜ್ಯ ನಗರಿ ರಸ್ತೆಗಳು; ತೇಲಿಹೋದ ಐಷಾರಾಮಿ ಕಾರುಗಳು

8 ವರ್ಷದಿಂದ ಅರ್ಧಕ್ಕೆ ನಿಂತಿದೆ ರಿಂಗ್​ ರಸ್ತೆ ಕಾಮಗಾರಿ; ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ಬೀದರ್​ ಜನರ ಆಕ್ರೋಶ

Published On - 4:17 pm, Sun, 18 July 21