Covid Curfew: ಸಾರಿಗೆ ಬಸ್ ಸ್ಥಗಿತ, ಸ್ವಗ್ರಾಮಕ್ಕೆ ಹಿಂದಿರುಗುತ್ತಿರುವ ಜನ: ಬಸ್ ನಿಲ್ದಾಣಗಳೆಲ್ಲಾ ಫುಲ್ ರಶ್
ಸಾರಿಗೆ ಬಸ್ ಸಂಚಾರ ಸ್ಥಗಿತ ಹಿನ್ನೆಲೆಯಲ್ಲಿ ಮನೆ ಬಿಟ್ಟು ಉದ್ಯೋಗ ಹುಡುಕಿಕೊಂಡು ಬೇರೆ ಕಡೆಗಳಲ್ಲಿ ಕೆಲಸ ಮಾಡುತ್ತಿದ್ದ ಜನರೆಲ್ಲಾ ತಮ್ಮ ಊರುಗಳಿಗೆ ಸೇರಿಕೊಳ್ಳಲು ಇದ್ದ ಜಾಗದಿಂದ ಕಾಲ್ಕಿತ್ತು ಹೊರಟಿದ್ದಾರೆ. ಜನರು ಬಸ್ಗಾಗಿ ಕಾಯುತ್ತಾ ನಿಂತಿದ್ದು, ನಿಲ್ದಾಣವೆಲ್ಲ ಜನಜಂಗುಳಿಯಿಂದ ಕೂಡಿದೆ.
ಬೆಂಗಳೂರು: ಕೊರೊನಾ ಹಾವಳಿ ಹೆಚ್ಚಾದ ಹಿನ್ನೆಲೆಯಲ್ಲಿ ಬಿಗಿಬಂದೊಬಸ್ತ್ ಜಾರಿಗೆ ತರಲಾಗಿದೆ. ಕರ್ನಾಟಕದಲ್ಲಿ 14 ದಿನಗಳ ಕಾಲ ಕೊರೊನಾ ಕರ್ಫ್ಯೂ ಜಾರಿ ಮಾಡಲಾಗಿದೆ. ಅಗತ್ಯ ವಸ್ತುಗಳ ಖರೀದಿಗೆ ಮಾತ್ರ ಸಮಯಾವಕಾಶ ಮಾಡಿಕೊಡಲಾಗಿದ್ದು, ಉಳಿದ ಸಮಯದಲ್ಲಿ ಜನರು ಅಡ್ಡಾಡದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಮನೆ ಬಿಟ್ಟು ಉದ್ಯೋಗ ಹುಡುಕಿಕೊಂಡು ಬೇರೆ ಕಡೆಗಳಲ್ಲಿ ಕೆಲಸ ಮಾಡುತ್ತಿದ್ದ ಜನರೆಲ್ಲಾ ತಮ್ಮ ಊರುಗಳಿಗೆ ಸೇರಿಕೊಳ್ಳಲು, ಇದ್ದ ಜಾಗದಿಂದ ಕಾಲ್ಕಿತ್ತು ಹೊರಟಿದ್ದಾರೆ. ಪ್ರಯಾಣಿಕರೆಲ್ಲಾ ಬಸ್ ನಿಲ್ದಾಣದಲ್ಲಿ ಬಸ್ಗಾಗಿ ಕಾಯುತ್ತಾ ನಿಂತಿದ್ದು, ನಿಲ್ದಾಣಗಳೆಲ್ಲ ಜನಜಂಗುಳಿಯಿಂದ ಕೂಡಿದೆ.
ತಮ್ಮ ಊರುಗಳಿಗೆ ತಲುಪಲು ಲಗೇಜ್ ಸಮೇತವಾಗಿ ಜನರು ನಿಲ್ದಾಣದಲ್ಲಿ ನಿಂತಿದ್ದಾರೆ. ಕೊರೊನಾ ಕಾಟ ಮುಗಿಯುವಂತೆ ಅನಿಸುತ್ತಿಲ್ಲ. ಇನ್ನೆಷ್ಟು ದಿನಗಳ ಕಾಲ ಲಾಕ್ಡೌನ್ ಮಾಡಲಾಗುತ್ತದೋ ಎಂಬ ಭಯದಲ್ಲಿ ವಿದ್ಯಾರ್ಥಿಗಳು, ಸಾಫ್ಟ್ವೇರ್ ಉದ್ಯೋಗಿಗಳು ತಮ್ಮ ತಮ್ಮ ಮನೆಗಳಿಗೆ ಹಿಂದಿರುಗುವ ಸಿದ್ಧತೆಯಲ್ಲಿ ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣಕ್ಕೆ ಆಗಮಿಸಿದ್ದಾರೆ.
ಹುಬ್ಬಳ್ಳಿ ಬಸ್ ನಿಲ್ದಾಣ ಫುಲ್ ರಶ್ ಇಂದು ರಾತ್ರಿಯಿಂದ ಸಾರಿಗೆ ಬಸ್ ಸಂಚಾರ ಸ್ತಬ್ಧವಾಗುತ್ತಿರುವ ಹಿನ್ನೆಲೆಯಲ್ಲಿ ನಗರದ ಜನ ತಮ್ಮ ಊರುಗಳಿಗೆ ತೆರಳಲು ಸಜ್ಜಾಗಿದ್ದಾರೆ. ಸಮಯ ಕಳೆಯುತ್ತಿದ್ದಂತೆಯೇ ಹೆಚ್ಚು ಹೆಚ್ಚು ಸಂಖ್ಯೆಯಲ್ಲಿ ಪ್ರಯಾಣಿಕರು ಬಸ್ ನಿಲ್ದಾಣಕ್ಕೆ ಆಗಮಿಸುತ್ತಿದ್ದಾರೆ.
ಬೆಂಗಳೂರು ಬಿಟ್ಟು ಊರಿಗೆ ಹೋಗುತ್ತಿರುವ ಜನ; ತುಮಕೂರಿನ ಟೋಲ್ ಬಳಿ ವಾಹನಗಳ ಕ್ಯೂ ಬೆಂಗಳೂರು ತೊರೆದು ಜನರು ತಮ್ಮ ಊರುಗಳಿಗೆ ಹೊರಟಿದ್ದಾರೆ. ಹೀಗಾಗಿ ತುಮಕೂರು ಟೋಲ್ ಬಳಿ ವಾಹನಗಳು ಕ್ಯೂ ನಿಲ್ಲುವ ಪರಿಸ್ಥಿತಿ ಉಂಟಾಗಿದೆ. ಏಕಾಏಕಿ ಎಲ್ಲರೂ ಬೆಂಗಳೂರು ಬಿಟ್ಟು ಹೊರಡುತ್ತಿರುವುದರಿಂದ ವಾಹನ ದಟ್ಟಣೆ ಉಂಟಾಗಿದೆ.
ಕಲಬುರಗಿ ಬಸ್ ನಿಲ್ದಾಣದಲ್ಲಿ ಬಸ್ಗಾಗಿ ಕಾಯುತ್ತಾ ನಿಂತ ವಿದ್ಯಾರ್ಥಿಗಳು ನಾಳೆಯಿಂದ ಬಸ್ ಸಂಚಾರ ಇರದೇ ಇರುವುದರಿಂದ ನಗರದಲ್ಲಿ ವಾಸಿಸುತ್ತಿದ್ದ ವಿದ್ಯಾರ್ಥಿಗಳೆಲ್ಲ ತಮ್ಮ ಊರಿಗೆ ಹಿಂತಿರುಗುತ್ತಿದ್ದಾರೆ. ಕೆಲವರು ನಗರದಲ್ಲಿದ್ದು ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ ನಡೆಸಿಕೊಳ್ಳುತ್ತಿದ್ದರು. ಆದರೆ, ಕಲಬುರಗಿ ನಗರದಲ್ಲಿ ಕೊರೊನಾ ಆರ್ಭಟ ಹೆಚ್ಚಾಗಿರುವುದರಿಂದ ಅಲ್ಲೇ ಇದ್ದರೆ ಹೆಚ್ಚಿನ ಸಮಸ್ಯೆ ಉಂಟಾಗುತ್ತದೆ ಎಂದು ಕಾಲ್ಕಿತ್ತಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಘನಘೋರ ಪರಿಸ್ಥಿತಿ; ಕೊರೊನಾದಿಂದ ಮೃತಪಟ್ಟು 3 ದಿನವಾದ್ರೂ ನಡೆದಿಲ್ಲ ಅಂತ್ಯಸಂಸ್ಕಾರ