ಬೆಂಗಳೂರು: ಗೃಹಜ್ಯೋತಿ (Gruha Jyoti) ಯೋಜನೆಗೆ ಜು.26, 27ರವರೆಗೆ ಅರ್ಜಿ ಸಲ್ಲಿಸಬಹುದು. ಜುಲೈ ತಿಂಗಳ ಬಿಲ್ ಮುಂದಿನ ತಿಂಗಳ ಮೊದಲ ವಾರ ಬರುತ್ತದೆ. ಇನ್ನೆರಡು ತಿಂಗಳಲ್ಲಿ ಕೆಇಬಿ (KEB) ಕಚೇರಿಗಳಲ್ಲಿ ಅದಾಲತ್ ನಡೆಸುತ್ತೇವೆ ಎಂದು ಇಂಧನ ಸಚಿವ ಕೆ ಜೆ ಜಾರ್ಜ್ (KJ George) ಹೇಳಿದರು. ರಾಜ್ಯ ಸರ್ಕಾರದ ಮಹತ್ವದ ಐದು ಗ್ಯಾರೆಂಟಿಗಳಲ್ಲಿ ಒಂದಾದ “ಗೃಹ ಜ್ಯೋತಿ” ಯೋಜನೆ ಬಗ್ಗೆ ಪ್ರಶ್ನೆಗೆ ಉತ್ತರಿಸಿದ ಕೆ ಜೆ ಜಾರ್ಜ್ ಗೃಹಜ್ಯೋತಿ ಯೋಜನೆಗೆ ಅರ್ಜಿ ಹಾಕದವರಿಗಾಗಿ ಈ ಅದಾಲತ್ ಪ್ರಾರಂಭಿಸುತ್ತೇವೆ. ಎಲ್ಲ ಅರ್ಹರಿಗೂ ಉಚಿತ ವಿದ್ಯುತ್ ಕೊಡಲು ಪ್ರಯತ್ನ ಮಾಡುತ್ತೇವೆ ಎಂದರು.
ಸದನದಲ್ಲಿ ಮಾತನಾಡಿದ ಅವರು ಯಾರೆಲ್ಲಾ ಗೃಹಜ್ಯೋತಿಯಡಿ ಅರ್ಜಿ ಹಾಕುವುದರಿಂದ ಬಿಟ್ಟು ಹೋಗಿದ್ದಾರೋ ಅವರಿಗಾಗಿ ಈ ಅದಾಲತ್. ಅದಕ್ಕಾಗಿಯೇ ನಾವು ಈ ಯೋಜನೆಗೆ ಕಟ್ ಆಫ್ ಡೇಟ್ ಇನ್ನೂ ಕೊಡಲಿಲ್ಲ. ಆದಷ್ಟು ಎಲ್ಲಾ ಅರ್ಹರಿಗೂ ಉಚಿತ ವಿದ್ಯುತ್ ಕೊಡಲು ಪ್ರಯತ್ನ ಮಾಡುತ್ತೇವೆ ಎಂದು ತಿಳಿಸಿದರು.
16ನೇ ವಿಧಾನಸಭೆಯ ಮೊದಲ ಅಧಿವೇಶನ ಆರಂಭವಾಗಿದ್ದು, ರಾಜ್ಯಪಾಲರ ಭಾಷಣದ ಮೇಲೆ ಚರ್ಚೆ ಆರಂಭವಾಗಿದೆ. ಇಂದು (ಜು.12) ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿಯವರು ರಾಜ್ಯ ಸರ್ಕಾರದ ಮಹತ್ವದ ಐದು ಗ್ಯಾರೆಂಟಿಗಳ ಬಗ್ಗೆ ಪ್ರಸ್ತಾಪಿಸಿದರು. ಹೆಚ್ ಡಿ ಕುಮಾರಸ್ವಾಮಿಯವರ ಮಾತಿಗೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬೆಂಬಲ ವ್ಯಕ್ತಪಡಿಸುತ್ತಿದ್ದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಧ್ಯೆ ಪ್ರವೇಶಿಸಿದರು.
ಯತ್ನಾಳ್ ಅವರೇ ನೀವು ತಿಂಗಳಿಗೆ 100, 110 ಯೂನಿಟ್ ವಿದ್ಯುತ್ ಸರಾಸರಿ ಬಳಸುತ್ತಿದ್ದೀರಿ ಅಂದುಕೊಳ್ಳಿ, ಒಂದು ವರ್ಷದಿಂದ ಬಳಸುತ್ತಿದ್ದರೇ ಸರಾಸರಿ ಅಷ್ಟೇ ಬರುತ್ತದೆ. ಹಾಗಾಗಿ ನಿಮಗೆ 200 ಯೂನಿಟ್ ವಿದ್ಯುತ್ ಕೊಡೋ ಅಗತ್ಯ ಇದೆಯಾ? ನೀವು ಪದೇ ಪದೇ ಮಾತಾಡಿದರೇ ಸಂಸದೀಯ ಪಟು ಆಗಲ್ಲ. ನಿಮ್ಮನ್ನು ವಿಪಕ್ಷ ನಾಯಕನಾಗಿಯೂ ಮಾಡಲ್ಲ. ನನಗೆ ಇರುವ ಮಾಹಿತಿ ಪ್ರಕಾರ ನಿಮ್ಮನ್ನು ವಿಪಕ್ಷ ನಾಯಕ ಮಾಡಲ್ಲ ಎಂದು ಕಾಲೆಳೆದರು.
ನೀವು ಅಪ್ಪನಾಣೆ ಸಿಎಂ ಆಗಲ್ಲ ಅಂತಾ ಹೇಳಿ ಅವರು ಸಿಎಂ ಆದರು, ಪದೇ ಪದೇ ಹೇಳುತ್ತಿದ್ದೀರಿ ಅಂದ್ರೆ ನಾನೇ ವಿಪಕ್ಷ ನಾಯಕ ಆಗೋದು ಎಂದು ಸಿಎಂ ಮಾತಿಗೆ ಬಸನಗೌಡ ಪಾಟೀಲ್ ಯತ್ನಾಳ್ ತಿರುಗೇಟು ನೀಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ ನನಗಿರುವ ಮಾಹಿತಿ ಪ್ರಕಾರ ಯತ್ನಾಳ್ ಆಗಲ್ಲ, ಆರಗ ಆಕಾಂಕ್ಷಿ ಅಲ್ಲ, ಅಶ್ವಥ್ ನಾರಾಯಣ, ಬೊಮ್ಮಾಯಿ, ಅಶೋಕ್ ಆಕಾಂಕ್ಷಿಗಳಾಗಿದ್ದಾರೆ ಎಂದರು.
ನೀವೆಷ್ಟೇ ಬೆಂಕಿ ಹಚ್ಚಿದ್ದರೂ ಹತ್ತಿಕೊಳ್ಳಲ್ಲ. ನೀವು ನನಗೆ ಪದೇ ಪದೇ ವಿಪಕ್ಷ ನಾಯಕ ಆಗಲ್ಲ ಅಂತಿದ್ದರೇ ನೀವು ಯಾರ ಜೊತೆಗೋ ಅಡ್ಜಸ್ಟ್‌ಮೆಂಟ್ ಮಾಡ್ಕೊಂಡಿದ್ದೀರಿ ಅಂತಾಯ್ತು ಎಂದು ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು.
ನಾನು ಯಾರ ಜೊತೆಗೂ ನನ್ನ ಜೀವನದಲ್ಲಿ ಅಡ್ಜಸ್ಟ್‌ಮೆಂಟ್ ಪಾಲಿಟಿಕ್ಸ್ ಮಾಡಿಲ್ಲ. ಯಾರ ಜೊತೆಗಾದರೂ ಅಡ್ಜಸ್ಟ್‌ಮೆಂಟ್ ಮಾಡ್ಕೊಂಡಿರೋದನ್ನು ಸಾಬೀತು ಮಾಡಿದರೇ ನಾನು ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ