ಚಾಮರಾಜನಗರದ 23 ಕೆರೆಗೆ ನೀರು ತುಂಬಿಸಿ: ರಾಜ್ಯ ಸರ್ಕಾರಕ್ಕೆ ಸ್ಥಳೀಯರ ಆಗ್ರಹ
ವಿಧಾನ ಸಭಾ ಕ್ಷೇತ್ರವನ್ನ ಕಾಂಗ್ರೆಸ್ ಪಕ್ಷದ ಶಾಸಕರು ಪ್ರತಿನಿಧಿಸುತ್ತಿದ್ದಾರೆ ಎಂಬ ಕಾರಣಕ್ಕೆ ರಾಜ್ಯ ಸರ್ಕಾರ ಕೊರೊನಾ ನೆಪವೊಡ್ಡಿ ಹಣ ಬಿಡುಗಡೆ ಮಾಡುತ್ತಿಲ್ಲ ಎಂದು ಸ್ಥಳೀಯರು ಆರೋಪ ಮಾಡುತ್ತಿದ್ದಾರೆ. ಜನ ಜಾನುವಾರುಗಳ ಕುಡಿಯುವ ನೀರಿನಲ್ಲೂ ರಾಜಕೀಯ ಮಾಡಿದರೆ ಜನರು ಏನು ಮಾಡಬೇಕು ಎಂದು ಪ್ರಶ್ನೆ ಮಾಡಿದ್ದಾರೆ.
ಚಾಮರಾಜನಗರ: ನೀರಿಲ್ಲದೆ ಬರಿದಾಗಿ ಕೆರೆಕಟ್ಟೆಗಳು ನಿಂತಿವೆ. ಜನ, ಜಾನುವಾರುಗಳು ನೀರಿಲ್ಲದೇ ಪರದಾಟ ಪಡುತ್ತಿವೆ. ಈ ಸಮಸ್ಯೆಯನ್ನು ಹೋಗಲಾಡಿಸುವ ಉದ್ದೇಶದಿಂದಲೇ ರಾಜ್ಯ ಸರ್ಕಾರ ಚಾಮರಾಜನಗರ ಮತ್ತು ಯಳಂದೂರು ತಾಲೂಕಿನ 23 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ 2017ರಲ್ಲಿ ಚಾಲನೆ ನೀಡಿತ್ತು. ಎಲ್ಲಾ ಅಂದು ಕೊಂಡಂತೆ ಆಗಿದ್ದರೆ 2019ರ ಡಿಸೆಂಬರ್ ವೇಳೆಗೆ 323 ಕೋಟಿ ವೆಚ್ಚದ ಕಾಮಗಾರಿ ಮುಗಿದು 2020ರ ಜನವರಿಯಲ್ಲಿಯೇ 23 ಕೆರೆಗಳಿಗೆ ನೀರು ಹರಿಯುತ್ತಿತ್ತು. ಆದರೆ ಅಂದುಕೊಂಡಂತೆ ನಡೆಯದೇ ಇರುವುದರಿಂದ ಬೇಸಿಗೆ ಕಾಲ ಆರಂಭವಾಗುತ್ತಿದ್ದಂತೆ ಜಾನುವಾರುಗಳು ಕುಡಿಯುವ ನೀರಿಗೆ ಹಾಹಾಕಾರ ಪಡುವ ಪರಿಸ್ಥಿತಿ ಎದುರಾಗಿದೆ.
ಕಾಂಗ್ರೆಸ್ ನೇತೃತ್ವದ ಸರ್ಕಾರ ನಂಜನಗೂಡಿನ ಆಲಂಬೂರು ಬಳಿ ಕಬಿನಿಯಿಂದ ಏತ ನೀರಾವರಿ ಮೂಲಕ ಸುಮಾರು 27 ಕಿಲೋಮೀಟರ್ ದೂರ ನೀರನ್ನ ಪೈಪ್ ಮೂಲಕ ತಂದು ಆನಂತರ ಗ್ರಾವಿಟಿ ಮೂಲಕ ಚಾಮರಾಜನಗರ ತಾಲೂಕಿನ 20 ಮತ್ತು ಯಳಂದೂರು ತಾಲೂಕಿನ 3 ಕೆರೆಗಳಿಗೆ ನೀರು ಹರಿಸುವ ಯೋಜನೆ ರೂಪಿಸಲಾಗಿತ್ತು. ಆರಂಭದಲ್ಲಿ ನೂರಾರು ಕೋಟಿ ರುಪಾಯಿ ಸರ್ಕಾರದಿಂದ ಹಣ ಕೂಡ ಬಿಡುಗಡೆಯಾಗಿತ್ತು. ಕಾಮಗಾರಿ ಕೂಡ ತ್ವರಿತಗತಿಯಲ್ಲಿ ನಡೆಯುತ್ತಿತ್ತು. ಆದರೆ ಬಿಜೆಪಿ ಸರ್ಕಾರ ಬಂದ ನಂತರ ಯೋಜನೆ ಆಮೆ ಗತಿಯಲ್ಲಿ ಸಾಗುತ್ತಿದೆ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ
ಕೊರೊನಾ ನೆಪ ಚಾಮರಾಜನಗರ ವಿಧಾನ ಸಭಾ ಕ್ಷೇತ್ರವನ್ನ ಕಾಂಗ್ರೆಸ್ ಪಕ್ಷದ ಶಾಸಕರು ಪ್ರತಿನಿಧಿಸುತ್ತಿದ್ದಾರೆ ಎಂಬ ಕಾರಣಕ್ಕೆ ರಾಜ್ಯ ಸರ್ಕಾರ ಕೊರೊನಾ ನೆಪವೊಡ್ಡಿ ಹಣ ಬಿಡುಗಡೆ ಮಾಡುತ್ತಿಲ್ಲ ಎಂದು ಸ್ಥಳೀಯರು ಆರೋಪ ಮಾಡುತ್ತಿದ್ದಾರೆ. ಜನ ಜಾನುವಾರುಗಳ ಕುಡಿಯುವ ನೀರಿನಲ್ಲೂ ರಾಜಕೀಯ ಮಾಡಿದರೆ ಜನರು ಏನು ಮಾಡಬೇಕು ಎಂದು ಪ್ರಶ್ನೆ ಮಾಡಿದ್ದಾರೆ. ಸರ್ಕಾರವರು ಹಣ ಬಿಡುಗಡೆ ಮಾಡುವ ಮೂಲಕ ಕೆರೆಗೆ ನೀರು ತುಂಬಿಸಲು ಅವಕಾಶ ಕಲ್ಪಿಸಬೇಕು ಎಂದು ಆಗ್ರಹಿಸಿದ್ದಾರೆ.
ಜಿಲ್ಲೆಯ ಗಡಿಯಲ್ಲಿಯೇ ಕಾವೇರಿ ಮತ್ತು ಕಬಿನಿ ನದಿ ಹರಿದರೂ ಇಡೀ ಜಿಲ್ಲೆ ಬರದನಾಡು ಎಂದೇ ಅಪಖ್ಯಾತಿ ಪಡೆದಿದೆ. ಕೆರೆಗೆ ನೀರು ತುಂಬಿಸುವುದಾಗಿ ಹೇಳಿ ಪದೇ ಪದೇ ವಿಳಂಬ ಮಾಡುತ್ತಿರುವುದರಿಂದ ಕೆರೆಕಟ್ಟೆಗಳು ಬರಿದಾಗಿವೆ. ಅಂತರ್ ಜಲಮಟ್ಟ ಕುಸಿತ ಕಂಡಿದ್ದು, ಬೋರ್ವೆಲ್ ಬತ್ತಿ ಹೋಗಿವೆ. ಸರ್ಕಾರದಿಂದ ಕಳೆದ ಏಳು ತಿಂಗಳಿಂದ ಹಣ ಬಿಡುಗಡೆಯಾಗದೇ ಇರುವುದರಿಂದ ಕಾರ್ಮಿಕರಿಗೆ ವೇತನ ಕೊಟ್ಟಿಲ್ಲ. ಪಂಪ್ ಹೌಸ್ಗೆ ತಂದು ಹಾಕಲಾಗಿರುವ ನೀರಿನ ಪಂಪ್ಗಳು ತುಕ್ಕು ಹಿಡಿಯುತ್ತಿವೆ. ಲೋಡ್ ಗಟ್ಟಲೆ ಸಿಮೆಂಟ್ ಕಲ್ಲಾಗ ತೊಡಗಿದೆ. ಪೈಪ್ ಗಳು, ಎಲೆಕ್ಟ್ರಾನಿಕ್ ವಸ್ತುಗಳು ಎಲ್ಲಂದರಲ್ಲಿ ಬಿದ್ದಿವೆ. ಸರ್ಕಾರ ಆದಷ್ಟು ಬೇಗ ಕಾಮಗಾರಿ ಮುಗಿಸ ಬೇಕು ಎಂದು ಸ್ಥಳೀಯರು ಒತ್ತಾಯ ಮಾಡಿದ್ದಾರೆ.
ಇದನ್ನೂ ಓದಿ
ಯಾವುದೇ ಕಾರಣಕ್ಕೂ ಹೆಚ್ಚುವರಿ ಕಾವೇರಿ ನೀರು ಪಡೆಯಲು ತಮಿಳುನಾಡಿಗೆ ಅವಕಾಶ ನೀಡಲ್ಲ- ಮುಖ್ಯಮಂತ್ರಿ ಯಡಿಯೂರಪ್ಪ