ಉಡುಪಿಯಲ್ಲಿ ರಸ್ತೆ ಕಾಮಗಾರಿ ವಿರುದ್ಧ ಸಿಡಿದೆದ್ದ ಜನತೆ; ಅತ್ಯುತ್ತಮ ಸ್ಥಿತಿಯಲ್ಲಿದ್ದ ರಸ್ತೆಯನ್ನೇ ಅಗೆದು ತೇಪೆ ಹಚ್ಚುತ್ತಿರುವ ಅಧಿಕಾರಿಗಳು
ಉದ್ದೇಶಿತ ಕಾಮಗಾರಿ ನಡೆಸಲು ಮುಂದಾಗಿರುವ ಈ ಪ್ರದೇಶದಲ್ಲಿ ಸಮರ್ಪಕ ಚರಂಡಿ ನಿರ್ಮಿಸದೆ ಇರುವುದು ಸಮಸ್ಯೆ ಮೂಲವಾಗಿದೆ, ಮರದಿಂದ ನೀರು ಬಿದ್ದು ರಸ್ತೆ ಹಾಳಾಗುತ್ತದೆ. ಅದಕ್ಕೆ ಕಾಂಕ್ರೀಟ್ ಹಾಕಲಾಗುತ್ತಿದೆ ಎನ್ನುವುದು ಅಧಿಕಾರಿಗಳ ಸಮರ್ಥನೆ.
ಉಡುಪಿ: ಊರಿಗೊಂದು ರಸ್ತೆ ಮಾಡಿಕೊಡಿ, ಯಾರಿಗಾದರೂ ಅನಾರೋಗ್ಯ ಆಯ್ತು ಎಂದರೆ ರೋಗಿಯನ್ನು ಸಾಗಿಸುವುದಕ್ಕೂ ಸಾಧ್ಯವಿಲ್ಲ ಎಂದು ಹಳ್ಳಿಗಳಲ್ಲಿ ಲಕ್ಷಾಂತರ ಜನ ಹೊಸ ರಸ್ತೆಗಾಗಿ ಬಕಪಕ್ಷಿಗಳಂತೆ ಕಾಯುತ್ತಿದ್ದಾರೆ. ಆದರೆ ಉಡುಪಿಯಲ್ಲಿ ಸುಸ್ಥಿತಿಯಲ್ಲಿರುವ ರಸ್ತೆಗೆ ಮತ್ತೆ ತೇಪೆ ಹಾಕಲಾಗುತ್ತಿದೆ. ಇದಕ್ಕಾಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡಲು ಲೋಕೋಪಯೋಗಿ ಇಲಾಖೆ ಸಿದ್ಧತೆ ಮಾಡಿಕೊಂಡಿದೆ. ರಸ್ತೆ ಇಲ್ಲದ ಊರುಗಳಲ್ಲಿ, ಹದಗೆಟ್ಟಿರುವ ಪ್ರದೇಶಗಳಲ್ಲಿ ಅಭಿವೃದ್ಧಿ ಕೈಗೊಳ್ಳುವ ಬದಲು ಚೆನ್ನಾಗಿ ಇರುವ ರಸ್ತೆಗೆ ಮತ್ತೆ ಹಣ ಸುರಿದು ದುಂದು ವೆಚ್ಚ ಮಾಡುತ್ತಿರುವ ಇಲಾಖೆಯ ನಡೆ ವಿರುದ್ಧ ಪ್ರಜ್ಞಾವಂತ ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ.
ಮಳೆಗಾಲ ಶುರುವಾಗುವುದಕ್ಕಿಂತ ಮುಂಚೆ ಒಳ್ಳೆ ರಸ್ತೆ ಮಾಡಬೇಕು ಎಂದು ಜನ ಬೇಡಿಕೆ ಇಡುವುದು, ಓಡಾಡಲು ಆಗುತ್ತಿಲ್ಲ ರಸ್ತೆ ಮಾಡಿಕೊಡಿ ಎಂದು ಪರಿಪರಿಯಾಗಿ ಆಗ್ರಹಿಸುವುದು ಆ ಆಗ್ರಹಕ್ಕೆ ಎರಡು ಮೂರು ವರ್ಷ ಆಯಸಸು ಆಗಿ ಕೊನೆಗೆ ರಸ್ತೆಯೇ ಇಲ್ಲ ಎನ್ನುವಂತಹ ದುಸ್ಥಿತಿ ಎದುರಾದ ಮೇಲೆ ಸರ್ಕಾರದ ವತಿಯಿಂದ ಹೊಸ ರಸ್ತೆ ಮಂಜೂರು ಆಗುವುದನ್ನು ಕೇಳಿದ್ದೇವೆ, ಆದರೆ ಇಲ್ಲಿ ಯಾರ ಆಗ್ರಹವೂ ಇಲ್ಲದೆ ರಸ್ತೆ ಕಾಮಗಾರಿಯೊಂದನ್ನು ಲೋಕೋಪಯೋಗಿ ಇಲಾಖೆ ಕೈಗೆತ್ತಿಕೊಂಡಿದೆ. ರಸ್ತೆ ಮಾಡಿಕೊಡಿ ಎಂದು ಬೇಡಿಕೆ ಇಡಬೇಕಾದ ಜನರೇ ನೀವು ರಸ್ತೆ ಮಾಡಿದ್ದು ಸಾಕು ಎಂದು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ.
ಕಾಪು ಕ್ಷೇತ್ರದ ಶಿರ್ವ- ಕಟಪಾಡಿ ರಸ್ತೆಯನ್ನು ಮೂರು ವರ್ಷಗಳ ಹಿಂದಷ್ಟೇ ಏಳು ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿತ್ತು. ಇದೀಗ ಇದೇ ರಸ್ತೆಗೆ ಕಾಂಕ್ರೀಟ್ ತೇಪೆ ಹಾಕಲು ರಸ್ತೆ ಅಗೆಯಲಾಗುತ್ತಿದೆ. ಅತ್ಯುತ್ತಮ ಸ್ಥಿತಿಯಲ್ಲಿರುವ ರಸ್ತೆಯನ್ನು ಕೆಡವಿ ಸುಮಾರು ಎಂಟು ಮೀಟರ್ ಅಗಲ 140 ಮೀಟರ್ ಉದ್ದದ ಕಾಂಕ್ರಿಟೀಕರಣಕ್ಕೆ ಈಗಾಗಲೇ ಶಾಸಕರು ಗುದ್ದಲಿ ಪೂಜೆಯನ್ನು ಮಾಡಿದ್ದಾರೆ.
ತರಾತುರಿಯಲ್ಲಿ ಕಾಮಗಾರಿ ನಡೆಸಲು ಸಿದ್ಧತೆಗಳು ಕೂಡಾ ನಡೆಯುತ್ತಿವೆ. ಮಳೆಹಾನಿ ನಿರ್ವಹಣೆಗೆ ಬಂದಿರುವ ಅನುದಾನವನ್ನು ವ್ಯಯಿಸಲೇ ಬೇಕು ಎಂಬ ಒಂದೇ ಉದ್ದೇಶದಿಂದ ಸಮರ್ಪಕವಾಗಿರುವ ರಸ್ತೆಯನ್ನು ಹಾಳುಗೆಡವಿ ಪುನಃ ಸರಿಪಡಿಸಲಾಗುತ್ತದೆ. ಈ ರೀತಿಯ ಅನಾವಶ್ಯಕ ಕಾಮಗಾರಿ ತರವಲ್ಲ. ಕೋಟ್ಯಾಂತರ ರೂಪಾಯಿ ಸುರಿದರೂ ಈಗ ಮತ್ತೆ 20 ಲಕ್ಷದಷ್ಟು ಬಾರಿ ಮೊತ್ತದಲ್ಲಿ ಈ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ ಎಂದು ಸ್ಥಳೀಯರಾದ ರಮೇಶ್ ಬೇಸರ ವ್ಯಕ್ತಪಡಿಸಿದ್ದಾರೆ.
ಉದ್ದೇಶಿತ ಕಾಮಗಾರಿ ನಡೆಸಲು ಮುಂದಾಗಿರುವ ಈ ಪ್ರದೇಶದಲ್ಲಿ ಸಮರ್ಪಕ ಚರಂಡಿ ನಿರ್ಮಿಸದೆ ಇರುವುದು ಸಮಸ್ಯೆ ಮೂಲವಾಗಿದೆ, ಮರದಿಂದ ನೀರು ಬಿದ್ದು ರಸ್ತೆ ಹಾಳಾಗುತ್ತದೆ. ಅದಕ್ಕೆ ಕಾಂಕ್ರೀಟ್ ಹಾಕಲಾಗುತ್ತಿದೆ ಎನ್ನುವುದು ಅಧಿಕಾರಿಗಳ ಸಮರ್ಥನೆ. ಚರಂಡಿ ನಿರ್ಮಿಸುವುದಕ್ಕೆ ಬದಲಾಗಿ ಸುಸಜ್ಜಿತ ರಸ್ತೆಗೆ ತೇಪೆ ಹಚ್ಚಲು ಮುಂದಾಗಿರುವುದು ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಎಳೆದಂತಾಗಿದೆ.
ಈ ಭಾಗದಲ್ಲಿ ನಿರ್ಮಿಸಿರುವ ಕಲ್ವರ್ಟ್ಗೆ ಡ್ರೈನೇಜ್ ಸಂಪರ್ಕ ಕಲ್ಪಿಸದಿರುವುದರಿಂದ ಜೋರು ಮಳೆ ಬಂದರೆ ಇಳಿಜಾರಾದ ಈ ಭಾಗದಲ್ಲಿ ಚರಂಡಿ ಇಲ್ಲದ ನೀರು ರಸ್ತೆಯಲ್ಲಿ ಹರಿದು ಹೋಗುತ್ತದೆ. ಇದರಿಂದ ಅಲ್ಲಲ್ಲಿ ಹೊಂಡಗಳು ಬಿದ್ದಿದ್ದು, ಅವುಗಳನ್ನು ಡಾಮರು ತೇಪೆ ಹಚ್ಚಿ ಈಗಾಗಲೇ ಸರಿಪಡಿಸಲಾಗಿದೆ. ರಸ್ತೆಯ ಇಕ್ಕೆಲಗಳಲ್ಲಿ ಚರಂಡಿ ನಿರ್ಮಿಸಿದ್ದರೆ ರಸ್ತೆಗೆ ಹಾನಿಯಾಗುವುದನ್ನು ಶಾಶ್ವತವಾಗಿ ತಪ್ಪಿಸಬಹುದಿತ್ತು. ಕೇವಲ ನಾಲ್ಕೈದು ಲಕ್ಷ ರೂಪಾಯಿ ವೆಚ್ಚದಲ್ಲಿ ಫೇವರ್ ಫಿನಿಶ್ ಮಾಡಿದ್ದರೆ ಇಷ್ಟೆಲ್ಲ ಹಣ ಖರ್ಚು ಮಾಡುವ ಅಗತ್ಯವೇ ಇರಲಿಲ್ಲ ಎಂದು ಮಾಜಿ ಗ್ರಾಮ ಪಂಚಾಯತಿ ಸದಸ್ಯೆ ಆಶಾ ಹೇಳಿದ್ದಾರೆ.
ಇದೇ ಮೊತ್ತವನ್ನು ವಿನಿಯೋಗಿಸಿ, ಬೇರೆ ಯಾವುದಾದರೂ ಕಾಮಗಾರಿ ಮಾಡಿದ್ದರೆ ನಮ್ಮ ಆಕ್ಷೇಪ ಇರಲಿಲ್ಲ ಸಾರ್ವಜನಿಕರ ತೆರಿಗೆ ಹಣವನ್ನು ಈ ರೀತಿ ದುರ್ವಿನಿಯೋಗ ಮಾಡುತ್ತಿದ್ದಾರೆ. ಸಾರ್ವಜನಿಕರ ಹಣವನ್ನು ವಿನಾಕಾರಣ ಪೋಲುಮಾಡುವ ಅಧಿಕಾರಿಗಳ ವಿರುದ್ಧ ಸದ್ಯ ಜಿಲ್ಲೆಯ ಜನರು ಹೋರಾಟ ನಡೆಸುವುದಾಗಿ ಎಚ್ಚರಿಸಿದ್ದಾರೆ.
ಇದನ್ನೂ ಓದಿ:
ರಸ್ತೆ ಕಾಮಗಾರಿ ನೆಪ ಮರಗಳ ಮಾರಣ ಹೋಮ; ಸರ್ಕಾರಿ ಜಾಗವಲ್ಲ ಎನ್ನುತ್ತಿರುವ ಜನ, ಕ್ರಮಕ್ಕೆ ಮುಂದಾದ ಅರಣ್ಯ ಇಲಾಖೆ
ಕೋಟೆನಾಡಿನಲ್ಲಿ ಮುಗಿಯದ ರಸ್ತೆ ಕಾಮಗಾರಿ: ಹೆಚ್ಚಿನ ಧೂಳಿನಿಂದ ಸೃಷ್ಟಿಯಾಯ್ತು ಕೊರೊನಾ ಆತಂಕ
( People opposed road construction in Udupi as government body planning to construct new road)