ರಸ್ತೆ ಕಾಮಗಾರಿ ನೆಪ ಮರಗಳ ಮಾರಣ ಹೋಮ; ಸರ್ಕಾರಿ ಜಾಗವಲ್ಲ ಎನ್ನುತ್ತಿರುವ ಜನ, ಕ್ರಮಕ್ಕೆ ಮುಂದಾದ ಅರಣ್ಯ ಇಲಾಖೆ
ರಾಮನಗರ: ಕನಕಪುರ ತಾಲೂಕಿನ ಕೂತಾಗನಹಳ್ಳಿಯಿಂದ ತೆಂಗನಾಯಕನಹಳ್ಳಿವರೆಗೆ ರಸ್ತೆ ಕಾಮಗಾರಿ ನಡೆಸುವ ಭರದಲ್ಲಿ ಕಳೆದ ಸೋಮವಾರ ಮತ್ತಷ್ಟು ಮರ ಗಿಡಗಳನ್ನು ಧರೆಗುರುಳಿಸಲಾಗಿದೆ. ಈ ಪ್ರಕರಣ ವಿವಾದಕ್ಕೂ ಕಾರಣವಾಗಿದೆ. ಈ ಸಂಬಂಧ ಮತ್ತೊಂದು ಎಫ್ಐಆರ್ ದಾಖಲಿಸಲು ಅರಣ್ಯ ಇಲಾಖೆ ಮುಂದಾಗಿದೆ.
ರಾಮನಗರ: ಒಂದೆಡೆ ಗಿಡ ಮರಗಳನ್ನು ಬೆಳೆಸಬೇಕೆನ್ನುವ ಅರಣ್ಯ ಇಲಾಖೆಯ ಗುರಿಗೆ ಗ್ರಾಮೀಣ ಭಾಗದ ರಸ್ತೆ ಕಾಮಗಾರಿಗಳು ತೊಡಕಾಗಿ ಪರಿಣಮಿಸಿವೆ. ರಸ್ತೆ ಕಾಮಗಾರಿ ನೆಪದಲ್ಲಿ ಮರಗಳನ್ನು ಬುಡ ಸಮೇತ ಕಿತ್ತೆಸೆಯುತ್ತಿದ್ದರೆ, ಇನ್ನೊಂದೆಡೆ ಅರಣ್ಯ ಇಲಾಖೆಗೆ ತಾವು ನೆಟ್ಟಿರುವ ಗಿಡಗಳು ಎಲ್ಲಿವೆ? ಯಾರಿಗೆ ಸೇರಿವೆ ಎಂಬುದರ ಸ್ಪಷ್ಟ ಮಾಹಿತಿಯೇ ಇಲ್ಲ. ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಕೂತಗಾನಹಳ್ಳಿಯಿಂದ ಇರುಳಗ ಕಾಲೋನಿಗೆ ಸಂಪರ್ಕ ಕಲ್ಪಿಸುವ ಗ್ರಾಮೀಣ ರಸ್ತೆ ಕಾಮಗಾರಿಗಳ ನೆಪದಲ್ಲಿ 2020ರ ಡಿಸೆಂಬರ್ 12ರಂದು ಅರಣ್ಯ ಇಲಾಖೆ ನೆಟ್ಟಿದ್ದ ಗಿಡಗಳಿಗೆ ಕೊಡಲಿ ಪೆಟ್ಟು ನೀಡಲಾಗಿತ್ತು. ಅಂದು 3 ವರ್ಷದಿಂದ 45 ವರ್ಷದೊಳಗಿನ ಹೊಂಗೆ, ಹಿಪ್ಪೆ ಸೇರಿದಂತೆ ವಿವಿಧ ಜಾತಿಯ ಮರಗಳ ಮಾರಣ ಹೋಮ ನಡೆಸಲಾಗಿತ್ತು. ಅಂದು ಗುತ್ತಿಗೆದಾರರ ವಿರುದ್ಧ ಅರಣ್ಯ ಇಲಾಖೆ ಪ್ರಕರಣ ದಾಖಲಿಸಿತ್ತು.
ಮತ್ತೆ ಮರಗಳ ಮಾರಣ ಹೋಮ ಜಿಲ್ಲೆಯ ಕನಕಪುರ ತಾಲೂಕಿನ ಕೂತಾಗನಹಳ್ಳಿಯಿಂದ ತೆಂಗನಾಯಕನಹಳ್ಳಿವರೆಗೆ ರಸ್ತೆ ಕಾಮಗಾರಿ ನಡೆಸುವ ಭರದಲ್ಲಿ ಕಳೆದ ಸೋಮವಾರ ಮತ್ತಷ್ಟು ಮರ ಗಿಡಗಳನ್ನು ಧರೆಗುರುಳಿಸಲಾಗಿದೆ. ಈ ಪ್ರಕರಣ ವಿವಾದಕ್ಕೂ ಕಾರಣವಾಗಿದೆ. ಈ ಸಂಬಂಧ ಎಫ್ಐಆರ್ ದಾಖಲಿಸಲು ಅರಣ್ಯ ಇಲಾಖೆ ಮುಂದಾಗಿದೆ.
ಏನಾಗುತ್ತಿದೆ ಸಮಸ್ಯೆ ವರ್ಷಕ್ಕೆ ಇಂತಿಷ್ಟು ಮರ ಗಿಡಗಳ್ನು ನೆಟ್ಟು ಪೋಷಿಸಬೇಕು ಎಂಬ ಗುರಿ ಅರಣ್ಯ ಇಲಾಖೆಗಿದೆ. ಅದರಂತೆ ಸಿಕ್ಕ ಸಿಕ್ಕ ಕಡೆಯೆಲ್ಲ ಅರಣ್ಯ ಇಲಾಖೆ ಮರಗಳನ್ನು ನೆಟ್ಟು ಮಳೆ ನೀರಿನಲ್ಲೆ ಬೆಳೆಯಲಿ ಎಂಬ ಧೋರಣೆ ಹೊಂದಿದ್ದಾರೆ. ಆದರೆ ಗಿಡಗಳನ್ನು ನೆಡುವಾಗ ಅದು ಯಾರ ಆಸ್ತಿ ಎಂಬ ಲೆಕ್ಕವನ್ನು ಇಲಾಕೆ ಇಟ್ಟುಕೊಳ್ಳುತ್ತಿಲ್ಲ.
ಮೇಲ್ನೋಟಕ್ಕೆ ಸರ್ಕಾರಿ ಆಸ್ತಿ ಎಂದರೆ ಸಾಕು ಎಂಬ ಮನಸ್ಥಿತಿ ಹೊಂದಿದೆ ಎಂದು ಆರೋಪ ಕೇಳಿಬಂದಿದೆ. ಕೂತಾಗನಹಳ್ಳಿಯಿಂದ ತೆಂಗನಾಯಕನಹಳ್ಳಿವರೆಗೆ ನಡೆಯುತ್ತಿರುವ ರಸ್ತೆ ಕಾಮಗಾರಿ ವೇಳೆ ಸಿಕ್ಕ ಸಿಕ್ಕ ಗಿಡ ಮರಗಳನ್ನು ಕತ್ತರಿಸಿ ಎಸೆಯಲಾಗಿದೆ. ಆದರೆ ಅವುಗಳು ಸರ್ಕಾರಿ ಜಾಗವೇ ಅಲ್ಲ ಎನ್ನಲಾಗುತ್ತಿದೆ. ರಸ್ತೆಗಳ ಬದಿಯಲ್ಲಿ ಅರಣ್ಯ ಇಲಾಖೆ ಗಿಡಗಳನ್ನು ನೆಟ್ಟು 2 ವರ್ಷ ನೋಡಿಕೊಳ್ಳುವುದೇ ದೊಡ್ಡ ಕೆಲಸ. ಇನ್ನು ರಸ್ತೆ ಕಾಮಗಾರಿ ವೇಳೆ ಸರ್ವೆ ನಡೆಸಲಾಗುವುದು. ಹೀಗಾಗಿ ಅರಣ್ಯ ಇಲಾಖೆಯ ಮರಗಳೆಲ್ಲವು ಧರೆಗುರುಳಿದರೂ, ಕೇಳುವವರೆ ಇಲ್ಲದಂತಾಗಿದೆ.
ನಾವೇನು ಮಾಡೋಣ ಎನ್ನುವ ಇಲಾಖೆ ನಾವು ರಸ್ತೆಗಳ ಇಕ್ಕೆಲ್ಲಗಳಲ್ಲಿ ಮರಗಳನ್ನು ನೆಟ್ಟು ಬಂದಿರುತ್ತೇವೆ. ಮಳೆಗಾಲದಲ್ಲಿ ನೀರಿನ ಅವಶ್ಯಕತೆ ಇಲ್ಲ. ಆದರೆ ನೆಡುವಾಗ ಸರ್ವೆ ಮಾಡಿ, ಸರ್ಕಾರಿ ಆಸ್ತಿಯಲ್ಲಿಯೇ ನೆಡಲು ಸಾಧ್ಯವೇ? ಇನ್ನೊಂದೆಡೆ ಮರಗಳಿಗೆ ಜಿಪಿಎಸ್ ಅಳವಡಿಸಿ, ಟ್ರ್ಯಾಕ್ ಮಾಡುವುದು ಸಹ ಕಷ್ಟ. ಇನ್ನು ಇಲಾಖೆ ಅನುಮತಿ ಇಲ್ಲದೇ ಗ್ರಾಮಗಳಲ್ಲಿ ಒಳಗೊಳಗೆ ಮರಗಳನ್ನು ಕಡಿಯಲಾಗುತ್ತಿದೆ. ಹೀಗಿರುವಾಗ ನಾವೇನು ಮಾಡಲು ಸಾಧ್ಯ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಹೇಳುತ್ತಾರೆ.
ಕಾನೂನು ಕ್ರಮ ಕರ್ನಾಟಕ ಅರಣ್ಯ ನಿಯಮ 1996ರ ನಿಯಮ ಉಲ್ಲಂಘಿಸಿ ಅನುಮತಿ ಪಡೆಯದೆ ರಸ್ತೆ ಅಗಲೀಕರಣ ನೆಪದಲ್ಲಿ ಮರಗಳನ್ನು ಕಡಿಯುವಂತಿಲ್ಲ. ಸರ್ಕಾರಿ ಮರಗಳನ್ನು ಯಾವುದೇ ಉದ್ದೇಶಕ್ಕೂ ಕಡಿಯುವ ಮುನ್ನ ಇಲಾಖೆಯ ಅನುಮತಿ ಪಡೆದುಕೊಳ್ಳಬೇಕು. ಅನಾಥ ಮರಗಳನ್ನು ಕಡಿಯುವ ಮುನ್ನ ಇಲಾಖೆಯಿಂದ ಲಿಖಿತ ಅನುಮತಿ ಪಡೆಯುವುದರೊಂದಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯಿಂದಲೂ ಅನುಮತಿ ಪಡೆಯುವುದು ಕಡ್ಡಾಯ. ಸರ್ಕಾರಿ ಜಾಗ, ಶಾಲೆ, ಜಿಲ್ಲಾ ಅರಣ್ಯ ವ್ಯಾಪ್ತಿ, ಸಂರಕ್ಷಿತ ಅರಣ್ಯ ಪ್ರದೇಶ ಸೇರಿದಂತೆ ವಿವಿಧ ಜಾಗಗಳಲ್ಲಿ ಮರಗಳನ್ನು ಕಡಿದರೆ, ವಿವಿಧ ರೀತಿಯ ಶಿಕ್ಷೆಗೆ ಒಳಗಾಗಬೇಕಾಗುತ್ತದೆ. ಅದರಲ್ಲೂ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಮರಗಳಿಗೆ ಕೊಡಲಿ ಹಾಕಿದರೆ, ಜೈಲು ಶಿಕ್ಷೆಯು ಕಟ್ಟಿಟ್ಟ ಬುತ್ತಿ.
ಕನಕಪುರ ತಾಲೂಕಿನ ಕೂತಾಗನಹಳ್ಳಿಯಿಂದ ತೆಂಗನಯಕನಹಳ್ಳಿವರೆಗೆ ಗ್ರಾಮದ ರಸ್ತೆ ನಿರ್ಮಾಣ ನೆಪದಲ್ಲಿ ಒಂದಷ್ಟು ಗಿಡಗಳನ್ನು ಕಡಿಯಲಾಗಿದೆ. ಸ್ಥಳ ಮಹಜರು ನಡೆಸಲಾಗುತ್ತಿದ್ದು, ಗುತ್ತಿಗೆದಾರನ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ಕನಕಪುರ ವಲಯ ಆರ್ಎಫ್ಒ ದಾಳೇಶ್ ತಿಳಿಸಿದರು.
ಅರಣ್ಯ ಇಲಾಖೆಗೆ ತಾವು ನೆಟ್ಟಿರುವ ಮರಗಿಡಗಳ ಬಗ್ಗೆ ಮಾಹಿತಿಯೇ ಇಲ್ಲ. ಕೆಲವೊಮ್ಮೆ ಖಾಸಗಿ ಜಾಗದಲ್ಲಿ ನೆಟ್ಟು ಕಿರಿಕ್ ಮಾಡುತ್ತಾರೆ. ಸರ್ಕಾರಿ ಜಾಗದಲ್ಲಿ ಮರಕ್ಕೆ ಕೊಡಲಿ ಹಾಕಿದರೂ, ನಮಗೆ ತಿಳಿದಿಲ್ಲವೆಂದು ಹೇಳುತ್ತಿದ್ದಾರೆ. ಶಾಲಾ, ಕಾಲೇಜು, ರಸ್ತೆಗಳ ಬದಿಯಲ್ಲಿ ಎಷ್ಟು ಮರಗಳಿಗೆ ಕೊಡಲಿ ಹಾಕಲಾಗಿದೆ ಎಂಬ ಮಾಹಿತಿ ಅರಣ್ಯ ಇಲಾಖೆ ಬಳಿಯೇ ಇಲ್ಲ ಎಂದು ಸ್ಥಳೀಯ ನಿವಾಸಿ ಕೃಷ್ಣಮೂರ್ತಿ ಹೇಳುತ್ತಾರೆ.
(ವರದಿ: ಪ್ರಶಾಂತ್ ಹುಲಿಕೆರೆ- 9980914134)
ಇದನ್ನೂ ಓದಿ