IPL 2025: ಸುಯೇಶ್ ಗೂಗ್ಲಿಗೆ ಗಿರ್ಕಿ ಹೊಡೆದ ಡೇಂಜರಸ್ ರಸೆಲ್; ವಿಡಿಯೋ
KKR vs RCB: ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ಅಜಿಂಕ್ಯ ರಹಾನೆ ಮತ್ತು ಸುನಿಲ್ ನರೈನ್ ಅವರ ಅದ್ಭುತ ಜೊತೆಯಾಟದ ನೆರವಿನಿಂದ 175 ರನ್ ಗಳಿಸಿತು. ಆರ್‌ಸಿಬಿ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಆದರೆ ರಹಾನೆ ಮತ್ತು ನರೈನ್ ಅವರ ಸ್ಫೋಟಕ ಬ್ಯಾಟಿಂಗ್‌ನಿಂದ ಕೆಕೆಆರ್ ಉತ್ತಮ ಮೊತ್ತವನ್ನು ಗಳಿಸಿತು. ಆದರೆ ಆ ನಂತರ ವಿಕೆಟ್‌ಗಳ ಪತನದಿಂದ ಮೊತ್ತ 200ರ ಗಡಿ ದಾಟಲು ಸಾಧ್ಯವಾಗಲಿಲ್ಲ. ಆಂಡ್ರೆ ರಸೆಲ್ ಕೇವಲ 4 ರನ್ ಗಳಿಸಿ ನಿರಾಶೆ ಮೂಡಿಸಿದರು.
ಅಜಿಂಕ್ಯ ರಹಾನೆ ಮತ್ತು ಸುನಿಲ್ ನರೈನ್ ಅವರ ಶತಕದ ಜೊತೆಯಾಟದ ನೆರವಿನಿಂದ, ಕೋಲ್ಕತ್ತಾ ನೈಟ್ ರೈಡರ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ 175 ರನ್‌ಗಳ ಗುರಿ ನೀಡಿದೆ. ಈಡನ್ ಗಾರ್ಡನ್ಸ್‌ನಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ, ಆರ್‌ಸಿಬಿ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಹೀಗಾಗಿ ಮೊದಲು ಬ್ಯಾಟ್ ಮಾಡಿದ ಕೋಲ್ಕತ್ತಾಕ್ಕೆ ಆರಂಭಿಕ ಆಘಾತ ಎದುರಾಯಿತು. ಮೊದಲ ಓವರ್‌ನಲ್ಲೇ ಜೋಶ್ ಹ್ಯಾಜಲ್‌ವುಡ್ ಕ್ವಿಂಟನ್ ಡಿ ಕಾಕ್ ಅವರ ವಿಕೆಟ್ ಪಡೆದರು. ಆದರೆ ಆ ಬಳಿಕ ಜೊತೆಯಾದ ನಾಯಕ ರಹಾನೆ ಹಾಗೂ ನರೈನ್ ಸ್ಫೋಟಕ ಬ್ಯಾಟಿಂಗ್ ನಡೆಸಿದರು. ಇವರಿಬ್ಬರ ಬ್ಯಾಟಿಂಗ್ ನೋಡಿದವರು ತಂಡದ ಮೊತ್ತ 200ರ ಗಡಿ ದಾಟುತ್ತದೆ ಎಂದು ನಿರೀಕ್ಷೆಸಿದ್ದರು. ಆದರೆ ಈ ಇಬ್ಬರ ವಿಕೆಟ್ ಪತನದ ನಂತರ ಕೆಕೆಆರ್ ಪೆವಿಲಿಯನ್ ಪರೇಡ್ ಆರಂಭವಾಯಿತು.
107 ರನ್ಗಳಿಗೆ 2ನೇ ವಿಕೆಟ್ ಕಳೆದುಕೊಂಡು ಕೆಕೆಆರ್ 150 ರನ್ ಆಗುವಷ್ಟರಲ್ಲಿ ಪ್ರಮುಖ 6 ವಿಕೆಟ್ಗಳನ್ನು ಕಳೆದುಕೊಂಡಿತು. ಅದರಲ್ಲೂ ಡೆತ್ ಓವರ್ಗಳಲ್ಲಿ ಡೇಂಜರಸ್ ಆಗಬಲ್ಲ ವೆಸ್ಟ್ ಇಂಡೀಸ್ನ ಸ್ಫೋಟಕ ಬ್ಯಾಟ್ಸ್‌ಮನ್ ಆಂಡ್ರೆ ರಸೆಲ್ ಅವರನ್ನು ಸುಯೇಶ್ ಶರ್ಮಾ ಬಲಿ ಪಡೆದರು. 16ನೇ ಓವರ್ನ 4ನೇ ಎಸೆತವನ್ನು ಸಿಕ್ಸರ್ಗಟ್ಟಲು ಯತ್ನಿಸಿದ ರಸೆಲ್ ಕ್ಲೀನ್ ಬೌಲ್ಡ್ ಆದರು. ರಸೆಲ್ ಈ ಪಂದ್ಯದಲ್ಲಿ ಕೇವಲ 4 ರನ್ ಬಾರಿಸಲಷ್ಟೇ ಶಕ್ತರಾದರು.