Karnataka Bandh: ಮರಾಠಿ ಪುಂಡರ ವಿರುದ್ಧ ಆಕ್ರೋಶ: ಕರ್ನಾಟಕ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ
ಕನ್ನಡಿಗರ ಮೇಲಿನ ದೌರ್ಜನ್ಯ ಖಂಡಿಸಿ ಇಂದು ವಿವಿಧ ಪರ ಕನ್ನಡ ಸಂಘಟನೆಗಳು ಕರೆ ನೀಡಿದ್ದ ಕರ್ನಾಟಕ ಬಂದ್ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹಲವೆಡೆ ಜನ ಜೀವನ ಸೇರಿದಂತೆ ವಾಹನಗಳ ಓಡಾಟವೂ ಸಹಜವಾಗಿತ್ತು. ಬಸ್ ಓಡಾಟ ಎಲ್ಲವೂ ನಾರ್ಮಲ್ ಕಂಡು ಬಂದರೆ ಹೋಟೆಲ್ ಕೂಡ ಓಪನ್ ಆಗಿತ್ತು. ಹೀಗಾಗಿ ಇಂದು ಬಂದಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಬೆಂಗಳೂರು, ಮಾರ್ಚ್ 22: ದೌರ್ಜನ್ಯ ಹೆಚ್ಚಾಗಿತ್ತು. ಪುಂಡಾಟ ಮಿತಿ ಮೀರಿತ್ತು. ಹೀಗಾಗಿ ಮರಾಠಿ ಪುಂಡರಿಗೆ ಪಾಠ ಕಲಿಸಬೇಕು ಅಂತಾ ಹೊರಟ ಕನ್ನಡ ಸಂಘಟನೆಗಳು ಇಂದು ಕರ್ನಾಟಕ ಬಂದ್‌ಗೆ (Karnataka Bandh) ಕರೆ ನೀಡಿದ್ದವು. ಬಂದ್‌ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆಯಾದರೂ ಹಲವು ಜಿಲ್ಲೆಗಳಲ್ಲಿ ಹೋರಾಟ (protest) ಜೋರಾಗಿತ್ತು. ಸೂರ್ಯೋದಯಕ್ಕೂ ಮುನ್ನವೇ ರಸ್ತೆಯಲ್ಲೇ ಧಗಧಗ, ಬಸ್‌ಗಳ ಓಡಾಟಕ್ಕೆ ತಡೆ, ಪೊಲೀಸರ ಜತೆ ವಾಗ್ವಾದ, ಮಡಕೆ ಒಡೆದು ಆಕ್ರೋಶ, ಹೊರೆ ಹೊತ್ತು ಪ್ರತಿಭಟನೆ, ರಸ್ತೆಯಲ್ಲೇ ಮಲಗಿ ಧರಣಿ ಇವುಗಳೆಲ್ಲಾ ಕರ್ನಾಟಕ ಬಂದ್ ವೇಳೆ ಕಂಡುಬಂದವು.
ಬೆಂಗಳೂರಿನಲ್ಲಿ ಹೋರಾಟ: ಜಿಲ್ಲೆ ಜಿಲ್ಲೆಗಳಲ್ಲೂ ಕಿಚ್ಚು!
ಜನರಿಂದಲೇ ಗಿಜಿಗಿಜಿ ಅಂತಿದ್ದ ಜಾಗ, ರಸ್ತೆಗಳು ಕಾಣದಂತೆ ವಾಹನಗಳ ಓಡಾಡುತ್ತಿದ್ದ ಸ್ಥಳಗಳು ಇಂದು ಎಲ್ಲವೂ ಬಿಕೋ ಅಂತಿತ್ತು. ಬೆಂಗಳೂರಿನಲ್ಲಿ ದೊಡ್ಡಮಟ್ಟದ ಹೋರಾಟಕ್ಕೆ ವಾಟಾಳ್ ನಾಗರಾಜ್ ಮುಂದಾಗಿದ್ದರು. ಆದರೆ ಆರಂಭದಲ್ಲೇ ಹೋರಾಟವನ್ನ ಪೊಲೀಸರು ಕಂಟ್ರೋಲ್ ಮಾಡಿದ್ದರು. ವಾಟಾಳ್‌ರನ್ನ ವಶಕ್ಕೆ ಪಡೆದಿದ್ದರು. ಇದು ಹೋರಾಟಗಾರ ಆಕ್ರೋಶಕ್ಕೆ ಕಾರಣವಾಗಿತ್ತು.
ಮಹಾರಾಷ್ಟ್ರದಿಂದ ಬೆಳಗಾವಿಗೆ ನಿತ್ಯ ನೂರಾರು ಬಸ್‌ಗಳು ಎಂಟ್ರಿ ಆಗುತ್ತವೆ. ಆದರೆ ಮುನ್ನೆಚ್ಚರಿಕೆ ಕ್ರಮವಾಗಿ ಮಹಾರಾಷ್ಟ್ರ ಸಾರಿಗೆ ಬಸ್‌ಗಳನ್ನ ನಿನ್ನೆ ರಾತ್ರಿಯೇ ವಾಪಸ್ ಕಳಿಸಲಾಗಿತ್ತು. ಇಂದು ಒಂದೇ ಒಂದು ಬಸ್‌ಗಳು ಕೂಡಾ ರಾಜ್ಯಕ್ಕೆ ಬಂದಿಲ್ಲ. ಬೆಂಗಳೂರಿಗೆ ಬರಬೇಕಿದ್ದ ಎರಡು ಬಸ್‌ಗಳ ಸಂಚಾರವೂ ಕ್ಯಾನ್ಸಲ್ ಆಗಿತ್ತು.
ಬೆಳಗಾವಿ ಚೆನ್ನಮ್ಮ ಸರ್ಕಲ್‌ನಲ್ಲಿ ಪ್ರತಿಭಟನೆ
ಇದರ ನಡುವೆ ಬೆಳಗಾವಿಯಲ್ಲಿ ಹೋರಾಟ ಜೋರಾಗಿತ್ತು. ಎಂಇಎಸ್ ನಿಷೇಧ ಮಾಡ್ಬೇಕು ಅಂತಾ ಆಗ್ರಹಿಸಿ ಕನ್ನಡಪರ ಸಂಘಟನೆಗಳು ಪ್ರತಿಭಟಿಸಿದ್ದವು. ಚೆನ್ನಮ್ಮ ಸರ್ಕಲ್‌ನಲ್ಲಿ ಪ್ರತಿಭಟನೆಗೆ ಇಳಿದಿದ್ದ 30 ಕ್ಕೂ ಹೆಚ್ಚು ಕರವೇ ಕಾರ್ಯಕರ್ತರನ್ನ ಪೊಲೀಸರು ವಶಕ್ಕೆ ಪಡೆದರು. ಈ ವೇಳೆ ತಳ್ಳಾಟ, ನೂಕಾಟ ವಾಗ್ವಾದ ಉಂಟಾಯಿತು.
ಇದನ್ನೂ ಓದಿ: ಕರ್ನಾಟಕ ಬಂದ್: ಫ್ರೀಡಂ ಪಾರ್ಕ್ ಬರುತ್ತಿದ್ದಂತೆಯೇ ವಾಟಾಳ್ ನಾಗರಾಜ್ರನ್ನು ವಶಕ್ಕೆ ಪಡೆದ ಪೊಲೀಸ್
ಚಿಕ್ಕಮಗಳೂರಿನಲ್ಲಿ ಬಂದ್‌ಗೆ ಉತ್ತಮ ಬೆಂಬಲ ವ್ಯಕ್ತವಾಗಿತ್ತು. ಬೆಳಗ್ಗೆಯಿಂದಲೇ ಅಂಗಡಿ ಮುಂಗಟ್ಟು ಬಂದ್ ಆಗಿದ್ವು. ಇದ್ರ ನಡುವೆ ಶಾಪ್ ಓಪನ್ ಮಾಡಿದ್ದವರಿಗೆ ಹೋರಾಟಗಾರರು ತರಾಟೆಗೆ ತೆಗೆದುಕೊಂಡ್ರು. ಇನ್ನು ಬಸ್ ಚಲಾಯಿಸಿದ ಚಾಲಕರಿಗೂ ಕ್ಲಾಸ್ ತೆಗೆದುಕೊಂಡು ಸನ್ಮಾನ ಮಾಡಿ ವ್ಯಂಗವಾಡಿದ್ರು. ಬಳಿಕ ಎಂಜಿ ರಸ್ತೆಯಿಂದ ಬೃಹತ್ ಮೆರವಣಿಗೆ ನಡೆಸಿದ್ರು.
ಶಾಪ್ ಕ್ಲೋಸ್
ಮಂಡ್ಯದ ಸಂಜಯ್ ವೃತ್ತದಿಂದ ಬೈಕ್ ರ್ಯಾಲಿ ನಡೆಸಿದ ಹೋರಾಟಗಾರರು, ಶಾಪ್‌ಗಳನ್ನ ಕ್ಲೋಸ್ ಮಾಡಿಸಿದರು. ಮೈಸೂರಿಗೆ ಹೊರಟಿದ್ದ ಸಾರಿಗೆ ಬಸ್ ತಡೆದು ಧರಣಿ ಮಾಡಿದವರು, ಬೆಂಗಳೂರು-ಮೈಸೂರು ಹೆದ್ದಾರಿ ಬಂದ್ ಮಾಡಿ ಆಕ್ರೋಶ ಹೊರಹಾಕಿದರು. ಕನ್ನಡ ಸೇನೆ ಕಾರ್ಯಕರ್ತರು, ತಲೆಯ ಮೇಲೆ ಒಣ ಹಾಗೂ ಹಸಿ ಹುಲ್ಲು ಹೊತ್ತು ಪ್ರೊಟೆಸ್ಟ್ ಮಾಡಿದರು.
ಕೊಪ್ಪಳದಲ್ಲಿ ಡಿಫ್ರೆಂಟ್ ಪ್ರತಿಭಟನೆ
ಕೊಪ್ಪಳ ಬಸ್ ನಿಲ್ದಾಣದ ಮುಂದೆ ಬೆಡ್‌ಶೀಟ್ ಹೊದ್ದು ಡಿಫ್ರೆಂಟ್ ಪ್ರತಿಭಟನೆ ಮಾಡಿದ್ರೆ, ದಾವಣಗೆರೆಯಲ್ಲಿ ಬೆಳ್ಳಂ ಬೆಳಗ್ಗೆಯೇ ಟೈರ್‌ಗೆ ಬೆಂಕಿ ಹಚ್ಚಿ ರಸ್ತೆ ತಡೆ ಆರಂಭಿಸಿದ್ರು. ಈ ವೇಳೆ ಹೋರಾಟಗಾರರನ್ನ ವಶಕ್ಕೆ ಪಡೆಯಲಾಯ್ತು. ಚಾಮರಾಜನಗರ ಕೂಡಾ ಬಂದ್‌ನಿಂದಾಗಿ ಬಿಕೋ ಅಂತಿತ್ತು. ಎಂಇಎಸ್ ಭಾವಚಿತ್ರಗಳಿಗೆ ಟೊಮ್ಯಾಟೊ ಹೊಡೆದು ಆಕ್ರೋಶ ಹೊರಹಾಕಿದರು.
ಆಂಧ್ರದ ಶ್ರೀಶೈಲಕ್ಕೆ ಹೋಗಲು ರಾಯಚೂರು ಬಸ್ ನಿಲ್ದಾಣದಲ್ಲಿ ನೂರಾರು ಭಕ್ತರು ಕಾದು ನಿಂತಿದ್ರು. ಆದ್ರೆ ಬಂದ್‌ನಿಂದಾಗಿ ಬಸ್‌ಗಳ ಸಂಖ್ಯೆ ಕಡಿಮೆ ಆಗುತ್ತೆ ಅನ್ನೋ ಆತಂಕ ಭಕ್ತರನ್ನ ಕಾಡಿತ್ತು. ಹೀಗಾಗಿ ಬರ್ತಿದ್ದ ಬಸ್‌ಗಳೆಲ್ಲಾ ರಶ್ ಆಗಿದ್ದವು. ಇದ್ರ ನಡುವೆ ಬಸ್ ನಿಲ್ದಾಣದಿಂದ ರೈಲ್ವೆ ನಿಲ್ದಾಣದವರೆಗೂ ಸಂಘಟನೆಗಳು ಬೈಕ್ ರ್ಯಾಲಿ ಮಾಡಿದರು.
ಇದನ್ನೂ ಓದಿ: ಕರ್ನಾಟಕ ಬಂದ್: ಬೆಂಗಳೂರು ನಗರದಿಂದ ಎಲ್ಲ ಬಸ್‌ಗಳು ಎಂದಿನಂತೆ ಓಡಾಡುತ್ತಿವೆ, ಪ್ರಯಾಣಿಕರ ಸಂಖ್ಯೆ ಮಾತ್ರ ಕಮ್ಮಿ
ಹಾಸನದಲ್ಲಿ ಪ್ರಯಾಣಿಕರಿಲ್ಲದೆ ನಿಲ್ದಾಣ ಬಿಕೋ ಅಂದ್ರೆ, ಬಳ್ಳಾರಿಯಲ್ಲಿ ಮರಾಠಿ ಪುಂಡರ ವಿರುದ್ಧ ಹೋರಾಟ ಜೋರಾಗಿತ್ತು. ಹೀಗೆ ಬಂದ್‌ಗೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಬೆಂಬಲ ವ್ಯಕ್ತವಾಯ್ತಾದ್ರೂ ಒಟ್ಟಾರಿ ಮಿಶ್ರ ಪ್ರತಿಕ್ರಿಯೆ ಕಂಡಿತ್ತು.
ವರದಿ: ಬ್ಯೂರೋ ರಿಪೋರ್ಟ್ ಟಿವಿ9. (Vishwa)
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.