ಆರೋಪಿಯಿಂದ ದೇಣಿಗೆ ಪಡೆದು ಪೀಕಲಾಟಕ್ಕೆ ಸಿಲುಕಿದ್ರಾ ಬಬಲಾದಿ ಮುತ್ತ್ಯಾ? ಸಿಐಡಿ ವಿಚಾರಣೆ
ಗೋಕಾಕ್‌ನ ಮಹಾಲಕ್ಷ್ಮೀ ಅರ್ಬನ್ ಕೋ-ಆಪರೇಟಿವ್ ಸೊಸೈಟಿಯಲ್ಲಿ ನಡೆದ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಬಲಾದಿ ಮಠದ ಸದಾಶಿವ ಸ್ವಾಮೀಜಿಯನ್ನು ಸಿಐಡಿ ಅಧಿಕಾರಿಗಳು ವಿಚಾರಣೆ ಮಾಡಿ, ಬಿಟ್ಟುಕಳುಹಿಸಿದ್ದಾರೆ. ಆರೋಪಿಯಿಂದಲೇ ಸ್ವಾಮೀಜಿ 80 ಲಕ್ಷ ರೂ ದೇಣಿಗೆ ಪಡೆದಿರುವ ಬಗ್ಗೆ ಮಾಹಿತಿ ಲಭ್ಯವಾಗಿದ್ದು, ಈ ಕುರಿತು ವಿಚಾರಣೆ ಮಾಡಲಾಗಿದೆ. ಈ ಪ್ರಕರಣದ ತನಿಖೆ ಚುರುಕುಗೊಂಡಿದೆ.

ಬೆಳಗಾವಿ, ಮಾರ್ಚ್ 22: ಜಿಲ್ಲೆ ಗೋಕಾಕ್ನಲ್ಲಿರುವ ಮಹಾಲಕ್ಷ್ಮೀ ಅರ್ಬನ್ ಕೋ ಆಪರೇಟಿವ್ ಸೊಸೈಟಿಯಲ್ಲಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ (CID) ಪೊಲೀಸರಿಂದ ಬಬಲಾದಿ ಮಠದ ಸ್ವಾಮೀಜಿ (Babaladi Sadashiva) ವಿಚಾರಣೆ ಮುಕ್ತಾಯವಾಗಿದ್ದು, ಇದೀಗ ಬಿಟ್ಟುಕಳಿಸಿದ್ದಾರೆ. ಬಾಗಲಕೋಟೆ ಜಿಲ್ಲೆಯ ಜಮಖಂಡಿಯಲ್ಲಿರುವ ಹೊಸ ಬಬಲಾದಿ ಮಠ ಸದಾಶಿವ ಮುತ್ತ್ಯಾರನ್ನು ವಶಕ್ಕೆ ಪಡೆದು ಅಧಿಕಾರಿಗಳು ವಿಚಾರಣೆ ಮಾಡಿದ್ದಾರೆ. ಆರ್ಥಿಕವಾಗಿ ದಿವಾಳಿಯಾಗಿರುವ ಮಹಾಲಕ್ಷ್ಮೀ ಸಹಕಾರ ಬ್ಯಾಂಕ್ನ ಹಣ ಲಪಟಾಯಿಸಿದ್ದ ಆರೋಪಿಯಿಂದ ಸ್ವಾಮೀಜಿ 80 ಲಕ್ಷ ರೂಪಾಯಿ ದೇಣಿಗೆ ಪಡೆದುಕೊಂಡಿದ್ದರೆಂಬ ಮಾಹಿತಿ ಬಗ್ಗೆ ಸಿಐಡಿ ತನಿಖೆಯಲ್ಲಿ ಗೊತ್ತಾಗಿ ಸ್ವಾಮೀಜಿ ವಿಚಾರಣೆ ಮಾಡಲಾಗಿದೆ. ಮೂರನೇ ಬಾರಿಗೆ ಸದಾಶಿವ ಮುತ್ತ್ಯಾರನ್ನು ವಿಚಾರಣೆ ಮಾಡಿರುವ ಸಿಐಡಿ, ಬಳಿಕ ಬಿಟ್ಟು ಕಳಿಸಿದ್ದಾರೆ.
ಮಹಾಲಕ್ಷ್ಮೀ ಕೋ ಆಪರೇಟಿವ್ ಬ್ಯಾಂಕ್ ಬಹುಕೋಟಿ ವಂಚನೆ
ಬಾಗಲಕೋಟೆ ಜಿಲ್ಲೆಯ ಜಮಖಂಡಿಯ ಹೊಸ ಬಬಲಾದಿ ಮಠದ ಸದಾಶಿವ ಹಿರೇಮಠ ಸ್ವಾಮೀಜಿಯನ್ನ ಸಿಐಡಿ ಅಧಿಕಾರಿಗಳು ವಶಕ್ಕೆ ಪಡೆದು ವಿಚಾರಣೆ ಮಾಡಿದ್ದಾರೆ. ಇದಕ್ಕೆ ಪ್ರಮುಖ ಕಾರಣ, ಗೋಕಾಕ್ ಮಹಾಲಕ್ಷ್ಮೀ ಕೋ ಆಪರೇಟಿವ್ ಬ್ಯಾಂಕ್ ಬಹುಕೋಟಿ ವಂಚನೆ ಪ್ರಕರಣ. ಕಳೆದ ಮೂರ್ನಾಲ್ಕು ತಿಂಗಳ ಹಿಂದೆ ಸೊಸೈಟಿಯ ವಂಚನೆ ಪ್ರಕರಣ ಬಯಲಾಗಿತ್ತು. ಇದರಿಂದ ನೂರಾರು ಗ್ರಾಹಕರು ಸೊಸೈಟಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡಿದ್ದರು. ಬಳಿಕ ಪ್ರಕರಣವನ್ನ ಬೆಳಗಾವಿ ಪೊಲೀಸರು ಸಿಐಡಿಗೆ ವರ್ಗಾವಣೆ ಮಾಡಿದ್ದರು.
ಇದನ್ನೂ ಓದಿ: ಐತಿಹಾಸಿಕ ಬೆಂಕಿ ಬಬಲಾದಿ ಮಠದ ಕಾಲಜ್ಞಾನ ವಾಣಿಗೆ ಅಪಸ್ವರ: ಏನದು?
ಬಹುಕೋಟಿ ವಂಚನೆ ಪ್ರಕರಣದ ಆರೋಪಿಯಿಂದಲೇ ಸದಾಶಿವ ಹಿರೇಮಠ ಸ್ವಾಮೀಜಿ ಖಾತೆಗೆ ಲಕ್ಷ ಲಕ್ಷ ರೂ ಹಣ ವರ್ಗಾವಣೆ ಆಗಿದೆ ಎನ್ನಲಾಗಿದೆ. ಸುಮಾರು 80 ಲಕ್ಷಕ್ಕೂ ಅಧಿಕ ಹಣ ಸ್ವಾಮೀಜಿ ಹಾಗೂ ಕುಟುಂಬಸ್ಥರಿಗೆ ವರ್ಗಾವಣೆ ಮಾಡಲಾಗಿದೆ ಎಂಬ ಮಾಹಿತಿ ಇದೆ. ಸ್ವಾಮೀಜಿ, ಸ್ವಾಮೀಜಿ ಪತ್ನಿ ಹಾಗೂ ಪುತ್ರನ ಖಾತೆಗೆ ಹಣ ವರ್ಗಾವಣೆ ಆಗಿರೋದು ತನಿಖೆಯಿಂದ ಬಯಲಾಗಿದೆ. ಇದೇ ಹಣದಲ್ಲಿ ಸ್ವಾಮೀಜಿ ನಿವೇಶನ ಖರೀದಿಸಿದ್ದಾರೆಂಬ ಮಾಹಿತಿ ಸಹ ಇದೆ. ಈ ಹಿನ್ನೆಲೆ ಸಿಐಡಿ ಅಧಿಕಾರಿಗಳು ಶ್ರೀಗಳನ್ನ ವಶಕ್ಕೆ ಪಡೆದು ತನಿಖೆ ಮಾಡಿದ್ದಾರೆ.
ಇನ್ನೂ ನಿವೇಶನ ಅಷ್ಟೇ ಅಲ್ಲದೇ ಹೊಸ ಬಬಲಾದಿ ಮಠದ ಜಾತ್ರೆ ಹಾಗೂ ಅನ್ನ ಸಂತರ್ಪಣೆಗೂ ಲಕ್ಷಾಂತರ ಹಣವನ್ನು ಆರೋಪಿ ನೀಡಿದ್ದಾನೆ. ಈ ಹಿನ್ನೆಲೆಯಲ್ಲಿ ನಿನ್ನೆ ಸಂಜೆಯೇ ಸದಾಶಿವ ಹಿರೇಮಠ ಸ್ವಾಮೀಜಿ ವಶಕ್ಕೆ ಪಡೆದಿದ್ದ ಸಿಐಡಿ, ಇಂದು ಕೋರ್ಟ್ಗೆ ಹಾಜರು ಪಡಿಸಿದರು.
ಮಹಾಲಕ್ಷ್ಮಿ ಕೋ ಆಪರೇಟಿವ್ ಸೊಸೈಟಿಯಲ್ಲಿ ಗುಮಾಸ್ತನಾಗಿದ್ದ ಸಾಗರ ಸಬಕಾಳೆ ಹಾಗೂ ಇತರೇ ಸಿಬ್ಬಂದಿ ಬ್ಯಾಂಕ್ನಲ್ಲಿ ಇದ್ದ ನೂರಾರು ಕೋಟಿ ರೂ ವಂಚನೆ ಮಾಡಲಾಗಿತ್ತು. ಬ್ಯಾಂಕ್ನಲ್ಲಿ ಅಕ್ರಮವಾಗಿ 76 ಕೋಟಿ ರೂ ಸಾಲ ಪಡೆದು ಮರಳಿಸದೇ ವಂಚನೆ ಮಾಡಲಾಗಿತ್ತು. ಪ್ರಕರಣ ಸಂಬಂಧ ಆರ್‌ಬಿಐ ಅಧಿಕಾರಿಗಳೇ ದಂಗಾಗುವಂತೆ ಆರೋಪಿಗಳು ವಂಚನೆ ಮಾಡಿದರು. ಆಡಿಟ್ ವೇಳೆ ಸಾಲಗಾರರ ಸೀಟ್ ಹಾಗೂ ಠೇವಣಿ ಸೀಟ್ ತಿದ್ದುಪಡಿಯನ್ನು ಆರೋಪಿಗಳು ಮಾಡಿದರು. ಈ ರೀತಿ ವಂಚನೆ ಪ್ರಕರಣ ಕಳೆದ ಕೆಲ ತಿಂಗಳ ಹಿಂದೆ ಬೆಳಕಿಗೆ ಬಂದಿತ್ತು, ಇದನ್ನ ತನಿಖೆ ನಡೆಸಿ ಆರೋಪಿಗಳನ್ನ ಬಂಧಿಸುವಲ್ಲಿ ಗೋಕಾಕ್ ಪೊಲೀಸರು ಯಶಸ್ವಿಯಾಗಿದ್ದರು. ಕೋಟ್ಯಾಂತರ ರೂಪಾಯಿ ವಂಚನೆ ಹಿನ್ನೆಲೆ ಬೆಳಗಾವಿ ಎಸ್ ಪಿ ಡಾ.ಭೀಮಾಶಂಕರ್ ಗುಳೇದ್ ಸಿಐಡಿಗೆ ವಹಿಸಿದ್ದರು. ಇದೀಗ ಪ್ರಕರಣ ಗಂಭೀರವಾಗಿ ಪರಿಗಣಿಸಿರುವ ಸಿಐಡಿ ಟೀಮ್ ತನಿಖೆಯನ್ನ ಚುರುಕುಗೊಳಿಸಿದೆ.
ಇದನ್ನೂ ಓದಿ: ರಾಜ್ಯ ರಾಜಕೀಯದಲ್ಲಿ ಮತ್ತಷ್ಟು ಬದಲಾವಣೆ: ಬಬಲಾದಿಯ ಸದಾಶಿವ ಮುತ್ಯಾ ಕಾಲಜ್ಞಾನ ಭವಿಷ್ಯ
ಮೂರು ವರ್ಷಗಳ ಆಡಿಟ್ ವೇಳೆ ವಂಚನೆ ಪ್ರಕರಣ ಬೆಳಕಿಗೆ ಬಾರದಂತೆ ಆರೋಪಿಗಳು ನೋಡಿಕೊಂಡಿದ್ರು. ಈ ಹಣದಿಂದಲೇ ಗೋಕಾಕ್, ಬೆಳಗಾವಿ ನಗರದಲ್ಲಿ, ಹುಬ್ಬಳ್ಳಿಯಲ್ಲಿ ಜಮೀನನ್ನು ಖರೀದಿ ಮಾಡಲಾಗಿತ್ತು. ಬ್ಯಾಂಕ್ ಮಾಲೀಕ ನೀಡಿದ ದೂರಿನನ್ವಯ ಪ್ರಕರಣ ಬೇಧಿಸಿದ್ದ ಗೋಕಾಕ್ ಪೊಲೀಸರು, ಸದ್ಯ ಆರೋಪಿಗಳ ಸೈಟ್, ಜಾಗ ಎಲ್ಲವನ್ನೂ ಮಾರಾಟ ಮಾಡಿ ಠೇವಣಿದಾರರಿಗೆ ಹಣ ಕೊಡುವ ಕೆಲಸ ಮಾಡಿದ್ದಾರೆ. ಮುಂದೆ ಯಾವ ಹಂತಕ್ಕೆ ಪ್ರಕರಣ ಹೋಗುತ್ತೆ ಕಾದುನೋಡಬೇಕಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:21 pm, Sat, 22 March 25