ಆರ್ಥಿಕ ಸಂಕಷ್ಟದಲ್ಲಿ ಹಂಪಿ ವಿವಿ; ಅನುದಾನ ಬಿಡುಗಡೆಗೆ ಸರ್ಕಾರಕ್ಕೆ ಆಗ್ರಹ

ವಿಜಯನಗರ ಜಿಲ್ಲೆ ಹೊಸಪೇಟೆ ತಾಲೂಕಿನ ಕಮಲಾಪುರ ಬಳಿಯ ಹಂಪಿ ಕನ್ನಡ ವಿಶ್ವವಿದ್ಯಾಲಯ ರಾಜ್ಯದ ಇತರೆ ವಿವಿಗಳಿಗಿಂತ ಭಿನ್ನ. ರಾಜ್ಯ ಸೇರಿದಂತೆ ದೇಶದ ವಿವಿಧ ಭಾಗಗಳಿಂದ ಅನೇಕರು ಸಂಶೋಧನೆಗಾಗಿ ಕನ್ನಡ ವಿವಿಗೆ ಪ್ರವೇಶ ಪಡೆಯುತ್ತಾರೆ. ರಾಜ್ಯದ ಗಣ್ಯ ಸಾಧಕರಿಗೆ ಪ್ರತಿ ವರ್ಷ ವಿವಿಯಿಂದ ನಾಡೋಜ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.

ಆರ್ಥಿಕ ಸಂಕಷ್ಟದಲ್ಲಿ ಹಂಪಿ ವಿವಿ; ಅನುದಾನ ಬಿಡುಗಡೆಗೆ ಸರ್ಕಾರಕ್ಕೆ ಆಗ್ರಹ
ಕನ್ನಡ ವಿಶ್ವವಿದ್ಯಾಲಯ
Follow us
sandhya thejappa
|

Updated on: Mar 20, 2021 | 12:14 PM

ಬಳ್ಳಾರಿ: ಕನ್ನಡ ನಾಡು, ನುಡಿ, ಭಾಷೆಗಾಗಿ ಇರುವ ಏಕೈಕ ವಿಶ್ವವಿದ್ಯಾಲಯವೆಂದರೆ ಅದು ಕನ್ನಡ ವಿಶ್ವವಿದ್ಯಾಲಯ. ಕೇವಲ ಪದವಿ ನೀಡುವ ವಿವಿಯಾಗದೇ ಸಂಶೋಧನೆಗೆ ಮೀಸಲಿರುವ ವಿಶ್ವವಿದ್ಯಾಲಯವಿದು. ಇಂಥಹ ಕನ್ನಡ ವಿವಿ ಪ್ರತಿ ವರ್ಷವೂ ಅನುದಾನದ ಕೊರತೆ ಎದುರಿಸುತ್ತಿದೆ. ಅನುದಾನಕ್ಕಾಗಿ ಹಂಪಿ ವಿವಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುತ್ತಲೇ ಇದೆ. ಆದರೆ ಸರ್ಕಾರದಿಂದ ಮಾತ್ರ ಸಮರ್ಪಕ ಅನುದಾನ ಬಿಡುಗಡೆಯಾಗುತ್ತಿಲ್ಲ.

ವಿಜಯನಗರ ಜಿಲ್ಲೆ ಹೊಸಪೇಟೆ ತಾಲೂಕಿನ ಕಮಲಾಪುರ ಬಳಿಯ ಹಂಪಿ ಕನ್ನಡ ವಿಶ್ವವಿದ್ಯಾಲಯ ರಾಜ್ಯದ ಇತರೆ ವಿವಿಗಳಿಗಿಂತ ಭಿನ್ನ. ರಾಜ್ಯ ಸೇರಿದಂತೆ ದೇಶದ ವಿವಿಧ ಭಾಗಗಳಿಂದ ಅನೇಕರು ಸಂಶೋಧನೆಗಾಗಿ ಕನ್ನಡ ವಿವಿಗೆ ಪ್ರವೇಶ ಪಡೆಯುತ್ತಾರೆ. ರಾಜ್ಯದ ಗಣ್ಯ ಸಾಧಕರಿಗೆ ಪ್ರತಿ ವರ್ಷ ವಿವಿಯಿಂದ ನಾಡೋಜ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ. ಸಾವಿರಾರು ವಿದ್ಯಾರ್ಥಿಗಳು ಸಂಶೋಧನೆಯಲ್ಲಿ ನಿರತರಾಗುತ್ತಾರೆ. ಆದರೆ ಅನುದಾನದ ಕೊರತೆಯಿಂದ ವಿವಿ ಅಭಿವೃದ್ಧಿಗೆ ಗ್ರಹಣ ಬಂದಿದೆ. ಜ್ಞಾನಪೀಠ ಪುರಸ್ಕೃತ ಡಾ.ಚಂದ್ರಶೇಖರ್ ಕಂಬಾರ್ ಕನಸಿನ ಹಂಪಿಯ ಬಳಿಯ ಕನ್ನಡ ವಿಶ್ವವಿದ್ಯಾಲಯಕ್ಕೆ ಸರ್ಕಾರ ಕೊಡುತ್ತಿರುವ ಅನುದಾನ ಯಾವ ರೀತಿಯಿಂದಲೂ ಸಾಕಾಗುತ್ತಿಲ್ಲ. ಕನ್ನಡ ನಾಡು, ನುಡಿ, ಭಾಷೆ ಬೆಳವಣಿಗೆಗಾಗಿ ಇರುವ ದೇಶದ ಏಕೈಕ ವಿವಿಯೆಂದರೆ ಅದು ಕನ್ನಡ ವಿಶ್ವವಿದ್ಯಾಲಯ. ಅಭಿವೃದ್ದಿಗೆ ಬಜೆಟ್ನಲ್ಲಿ 70 ಕೋಟಿ ಅನುದಾನ ಘೋಷಣೆ ಮಾಡುವಂತೆ ವಿವಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಅನುದಾನಕ್ಕಾಗಿ ವಿವಿಯಿಂದ ಐದಾರು ಪ್ರಸ್ತಾವನೆ ಸಲ್ಲಿಸಲಾಗಿದೆ. ಇತ್ತ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಹಂಪಿ ಕನ್ನಡ ವಿವಿಗೆ 100 ಕೋಟಿ ವಿಶೇಷ ಅನುದಾನ ಘೋಷಣೆ ಮಾಡುವಂತೆ ಕನ್ನಡಪರ ಸಂಘಟನೆಗಳು, ಸಾಹಿತಿಗಳು ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ ಕೂಡ ಮಾಡಲಾಯಿತು. ಆದರೆ ಯಾವುದು ಫಲಕೊಡಲಿಲ್ಲ. ಇದರಿಂದ ವಿವಿ ಮತ್ತಷ್ಟು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ.

ನೌಕರರ ವೇತನಕ್ಕಾಗಿ ಪ್ರಸ್ತಾವನೆ ಸದ್ಯ ವಿವಿ ಬಳಿ ಅನುದಾನ ಇಲ್ಲದ ಇರುವ ಕಾರಣ ಇದೇ ಮೊದಲ ಬಾರಿಗೆ ಕಳೆದ 15-20 ವರ್ಷಗಳಿಂದ ಕೆಲಸ ಮಾಡುತ್ತ ಬಂದಿರುವ 140ಕ್ಕೂ ಹೆಚ್ಚು ಕ್ರೂಢೀಕೃತ, ಗುತ್ತಿಗೆ ನೌಕರರಿಗೆ ಹತ್ತು ತಿಂಗಳಿಂದ ವೇತನ ನೀಡಿಲ್ಲ. ಗುತ್ತಿಗೆ ನೌಕರರ ವೇತನಕ್ಕಾಗಿ 6 ಕೋಟಿ ಪ್ರತ್ಯೇಕ ಅನುದಾನ ಬಿಡುಗಡೆ ಮಾಡುವಂತೆ ಸಹ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ. ಆದರೆ ಇದುವರೆಗೆ ನಯಾಪೈಸೆ ಸರ್ಕಾರದಿಂದ ನೀಡಿಲ್ಲ. ಮೇಲಿಂದ ಮೇಲೆ ಪ್ರಸ್ತಾವನೆಗಳು ಕಳುಹಿಸಲಾಗುತ್ತಿದೆ ಹೊರತು ಸರ್ಕಾರದಿಂದ ಬಿಡಿಗಾಸು ಸಿಗುತ್ತಿಲ್ಲ ಎನ್ನುವ ಆರೋಪಗಳು ಕೇಳಿ ಬರುತ್ತಿವೆ. ಕನಿಷ್ಠ ವಿದ್ಯುತ್ ಬಿಲ್ ಕೂಡ ಪಾವತಿ ಮಾಡಲು ಅನುದಾನ ಇಲ್ಲದ ಪರಿಸ್ಥಿತಿ ವಿವಿಗೆ ನಿರ್ಮಾಣವಾಗಿದ್ದು, ಸುಮಾರು 60 ಲಕ್ಷ ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿದೆ. ಬಿಲ್ ಪಾವತಿ ಮಾಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಹಂಪಿ ಕನ್ನಡ ವಿವಿಗೆ ರಾಜ್ಯ ಸರ್ಕಾರ ಸಮರ್ಪಕ ಅನುದಾನ ಬಿಡುಗಡೆ ಮಾಡಬೇಕು ಅಂತಾ ಸಾಹಿತಿಗಳು ಒತ್ತಾಯಿಸುತ್ತಿದ್ದಾರೆ.

ಬೇರೆ ವಿಶ್ವವಿದ್ಯಾಲಯಗಳಲ್ಲಿ ಹೆಚ್ಚು ಕಾಲೇಜುಗಳಿರುವ ಕಾರಣ ವಿದ್ಯಾರ್ಥಿಗಳಿಂದ ನೀಡುವ ಶುಲ್ಕದಿಂದ ಖರ್ಚು ನಿಭಾಯಿಸುತ್ತವೆ. ಆದರೆ ಕನ್ನಡ ವಿವಿ ಸಂಶೋಧನಾ ಪ್ರಾಧಾನವಾಗಿರುವುದರಿಂದ ಸರ್ಕಾರದ ಅನುದಾನದ ಆಧಾರದ ಮೇಲೆ ನಿಂತಿದೆ.

ಇದನ್ನೂ ಓದಿ

ಮಾಡೋದೆಲ್ಲಾ ಅನಾಚಾರ ಮನೆ ಮುಂದೆ ಬೃಂದಾವನ! ಸಿಕ್ಕಾಪಟ್ಟೆ ಟ್ರೋಲ್​ ಆಗ್ತಿದೆ ಬುಮ್ರಾ ಹಂಚಿಕೊಂಡ ನವಜೋಡಿಗಳ ಫೋಟೋ!!

ನಿದ್ರಾಹೀನತೆಯಿಂದ ಕೆಲಸ ಕಳೆದುಕೊಳ್ಳುವ ಭಯ ಹುಟ್ಟುತ್ತೆ ಎಚ್ಚರ!