ಕೋಲಾರ: ಬರದ ನಾಡು ಕೋಲಾರದಲ್ಲಿ ಬೇಸಿಗೆ ಆರಂಭದಲ್ಲೇ ನೀರಿಗಾಗಿ ಜನರ ಪರದಾಟ ಶುರುವಾಗಿದೆ. ಜಿಲ್ಲೆಯಲ್ಲಿ 42 ಕ್ಕೂ ಹೆಚ್ಚು ಗ್ರಾಮಗಳಲ್ಲಿ ನೀರಿನ ಸಮಸ್ಯೆ ತಲೆದೂರಿದ್ದು, ಜಿಲ್ಲಾಡಳಿತ ಬೇಸಿಗೆಯನ್ನು ಎದುರಿಸಲು ಸಿದ್ಧವಾಗುತ್ತಿದೆ. ಈ ಬಾರಿಯ ಬಿರು ಬಿಸಿಲನ್ನು ಗೆಲ್ಲುವುದು ಜಿಲ್ಲಾಡಳಿತಕ್ಕೆ ದೊಡ್ಡ ಸವಾಲಾಗಿದೆ.ಬರದ ಹಣೆಪಟ್ಟಿ ಕಟ್ಟಿಕೊಂಡಿರುವ ಕೋಲಾರ ಜಿಲ್ಲೆಯ ಹಳ್ಳಿಗಳಲ್ಲಿ ನೀರು ಹಿಡಿದುಕೊಳ್ಳಲು ಮಹಿಳೆಯರು ಮುಗಿ ಬೀಳುತ್ತಿದ್ದು, ಬೇಸಿಗೆಯ ಆರಂಭದಲ್ಲಿ ನೀರಿಗಾಗಿ ಜನರು ಪರದಾಡುತ್ತಿದ್ದಾರೆ. ಯಾವುದೇ ನದಿ ನಾಲೆಗಳಿಲ್ಲದ ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಜನರನ್ನು ಬಿಟ್ಟು ಬಿಡದೆ ಕಾಡುತ್ತಿದೆ.
ಜಿಲ್ಲೆಯ ಜನರು ಕುಡಿಯುವ ನೀರು ಹಾಗೂ ದಿನ ಬಳಕೆ ನೀರಿಗಾಗಿ ಪ್ರತಿನಿತ್ಯ ಬಿಂದಿಗೆಗಳೊಂದಿಗೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಗ್ರಾಮ ಪಂಚಾಯತಿಗಳಿಂದ ಸರಿಯಾದ ನೀರು ಸರಬರಾಜು ಆಗದ ಹಿನ್ನೆಲೆಯಲ್ಲಿ ಜನರು ಖಾಸಗಿ ಟ್ಯಾಂಕರ್ಗಳ ಮೊರೆ ಹೋಗಿ ಒಂದು ಬಿಂದಿಗೆ ಕುಡಿಯುವ ನೀರಿಗೆ 8 ರಿಂದ 10 ರೂಪಾಯಿ ಹಣ ಕೊಟ್ಟು ಖರೀದಿ ಮಾಡುತ್ತಿದ್ದಾರೆ.
ಕೆಲವೆಡೆ ಗ್ರಾಮಕ್ಕೆಲ್ಲಾ ಒಂದೆ ಒಂದು ಕೊಳವೆ ಬಾವಿ ಇದ್ದು, ಎಲ್ಲರೂ ಒಂದೆ ನಲ್ಲಿಯಲ್ಲಿ ನೀರು ಹಿಡಿದು ಕೊಳ್ಳಬೇಕು. ಇನ್ನು ಈ ಬಗ್ಗೆ ಅಧಿಕಾರಿಗಳನ್ನ ಮತ್ತು ಜನಪ್ರತಿನಿಧಿಗಳನ್ನ ಕೇಳಿದರೆ ಬೋರ್ ವೆಲ್ ಕೆಟ್ಟೋಗಿದೆ ಅಥವಾ ನೀರಿಗಾಗಿ ನಮ್ಮ ಬಳಿ ಹಣ ಇಲ್ಲ ಎಂದು ಹೇಳುವ ಮೂಲಕ ಜಾರಿಕೊಳ್ಳುತ್ತಿದ್ದಾರೆ ಎಂದು ಜನರು ಹೇಳುತ್ತಿದ್ದಾರೆ.
ಒಂದು ಬಿಂದಿಗೆಗೆ 8 ರಿಂದ 10 ರೂ. ಕೊಟ್ಟು ನೀರನ್ನು ಖರೀದಿಸುತ್ತಿದ್ದಾರೆ
ಟ್ಯಾಂಕರ್ಗಳ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ
42 ಗ್ರಾಮಗಳಲ್ಲಿ ನೀರಿನ ಸಮಸ್ಯೆ
ನೀರಿನ ನಾಲೆಗಳಾದ ಕೆರೆ, ಕುಂಟೆ, ಬಾವಿಗಳು ಭತ್ತಿ ಹೋಗಿದ್ದು, ಸದ್ಯ ಕೊಳವೆ ಬಾವಿಗಳಲ್ಲಿ ಸಿಗುತ್ತಿರುವ ಅಲ್ಪಸ್ವಲ್ಪ ನೀರೇ ಈಗ ಜನರಿಗೆ ಆಸರೆಯಾಗಿದೆ. ಕುಡಿಯುವ ನೀರಿನ ಸಮಸ್ಯೆ ಹೆಚ್ಚಾದ ಹಿನ್ನೆಲೆ ಜಿಲ್ಲೆಯಾದ್ಯಂತ ಜನರು ನೀರಿಗಾಗಿ ಊರಿಂದ ಊರಿಗೆ ಬಿಂದಿಗೆಗಳನ್ನು ಹಿಡಿದುಕೊಂಡು ಪರದಾಡುವ ಪರಿಸ್ಥಿತಿ ಬಂದೊದಗಿದೆ. ಸದ್ಯ ಅಧಿಕಾರಿಗಳ ಲೆಕ್ಕಾಚಾರದ ಪ್ರಕಾರ ಜಿಲ್ಲೆಯಲ್ಲಿ 42 ಗ್ರಾಮಗಳಲ್ಲಿ ನೀರಿನ ಸಮಸ್ಯೆ ಎದುರಾಗಿದೆ. ಈ ಎಲ್ಲಾ ಗ್ರಾಮಗಳಿಗೂ ಖಾಸಗಿ ಕೊಳವೆ ಬಾವಿಗಳ ಮೂಲಕ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದೆ. ಕೆಲವೆಡೆ ಟ್ಯಾಂಕರ್ಗಳ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಇನ್ನು ನಗರಸಭೆ ಹಾಗೂ ಪುರಸಭೆ ವ್ಯಾಪ್ತಿಯಲ್ಲಿನ ವಾರ್ಡ್ಗಳಿಗೆ ಟ್ಯಾಂಕರ್ಗಳ ಮೂಲಕವೇ ನೀರನ್ನು ಸರಬರಾಜು ಮಾಡಲು ಸೂಚನೆ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೇವಿನ ಸಮಸ್ಯೆ ಈವರೆಗೆ ಕಂಡು ಬಂದಿಲ್ಲ. ಆದರೆ ಅದಕ್ಕೆ ಬೇಕಾದ ಪೂರಕ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಆರ್. ಸೆಲ್ವಮಣಿ ತಿಳಿಸಿದ್ದಾರೆ.
ತಲೆ ಮೇಲೆ ಮತ್ತು ಕೈಯಲ್ಲಿ ನೀರನ್ನು ಹಿಡಿದು ಸಾಗುತ್ತಿರುವ ಮಹಿಳೆ
ನೀರಿಗಾಗಿ ಕೊಡಗು ಜನರ ಪರದಾಟ
ಪ್ರತಿನಿತ್ಯ ಮಹಿಳೆಯವರು, ಮಕ್ಕಳು ಕೊಡ ಹೊತ್ತು ನೀರಿಗಾಗಿ ಗಂಟೆಗಟ್ಟಲೆ ಕಾಯುವ ಪರಿಸ್ಥಿತಿ ಎದುರಾಗಿದೆ. ಗ್ರಾಮಗಳಲ್ಲಿ ಮತ್ತೆ ನೀರಿನ ರಾಜಕೀಯ ಶುರುವಾಗಿದ್ದು, ಗ್ರಾಮೀಣ ಭಾಗದ ಜನರು ಈಗ ಅಡ್ಡಕತ್ತರಿಯಲ್ಲಿ ಸಿಲುಕಿಕೊಂಡು ನಮ್ಮ ಗೋಳು ಕೇಳುವವರು ಯಾರು ಎಂದು ಅಳಲು ತೋಡಿಕೊಳ್ಳುತ್ತಿದ್ದಾರೆ.
ಇದನ್ನೂ ಓದಿ
ಈ ಬಾರಿ ಬೇಸಿಗೆಯಲ್ಲಿ ಬನ್ನೇರುಘಟ್ಟ ಜೈವಿಕ ಉದ್ಯಾನವನದ ಪ್ರಾಣಿಗಳಿಗಿಲ್ಲ ನೀರಿನ ತೊಂದರೆ