ಹಾವೇರಿ: ಗೆಳೆಯನ ಹೆಸರಿನ ಟಗರಿಗೆ ಶಾಸ್ತ್ರೋಕ್ತ ಅಂತ್ಯಕ್ರಿಯೆ
ಮಂಜು ಪೈ ಹೆಸರಿನ ಟಗರು ರಾಜ್ಯದ ಅನೇಕ ಕಡೆಗಳಲ್ಲಿ ನಡೆದ ಟಗರಿನ ಕಾಳಗದಲ್ಲಿ ಪ್ರಶಸ್ತಿಗಳನ್ನು ಗೆದ್ದುಕೊಂಡು ಬಂದಿತ್ತು. ಗೆಳೆಯನಂತೆಯೇ ಹೆಸರು ಮಾಡುತ್ತಿದ್ದ ಟಗರು ಕಂಡು ದಿಲೀಪನಿಗೆ ಗೆಳೆಯನ ನೆನಪನ್ನು ಈ ಟಗರು ಮರೆಸಿತ್ತು.

ಹಾವೇರಿ: ಜಿಲ್ಲೆಯ ರಾಣೆಬೆನ್ನೂರು ಕುಸ್ತಿಪಟುಗಳಿಗೆ ಪ್ರಸಿದ್ಧಿ ಪಡೆದಿರುವ ನಗರ. ಕುಸ್ತಿಯಲ್ಲಿ ಹೆಸರು ಮಾಡಿರುವ ಸಾಕಷ್ಟು ಪೈಲ್ವಾನರು ನಗರದಲ್ಲಿದ್ದಾರೆ. ಭಾಗವಹಿಸಿದ ಕುಸ್ತಿ ಸ್ಪರ್ಧೆಗಳಲ್ಲಿ ಬೆಳ್ಳಿಯ ಗದೆ ಗೆದ್ದು ಬರುತ್ತಿದ್ದ ಮಂಜು ಪೈ ಎಂಬ ಪೈಲ್ವಾನ್ ಕೆಲವು ವರ್ಷಗಳ ಹಿಂದೆ ಮೃತಪಟ್ಟಿದ್ದರು. ಅವರ ಅತ್ಯಂತ ಕುಚುಕು ಗೆಳೆಯನಾಗಿದ್ದ ನಗರದ ಕುರುಬಗೇರಿ ನಿವಾಸಿ ದಿಲೀಪ ಎಂಬುವವರಿಗೆ ಗೆಳೆಯ ಮಂಜು ಪೈ ಅವರನ್ನು ಮರೆಯಲು ಆಗುತ್ತಿರಲಿಲ್ಲ. ಹೀಗಾಗಿ ಗೆಳೆಯ ಮಂಜು ಪೈ ಹೆಸರಿನಲ್ಲಿ ಒಂದು ಟಗರು ಸಾಕಿದ್ದರು. ಗೆಳೆಯ ಕುಸ್ತಿಯಲ್ಲಿ ಹೆಸರು ಮಾಡಿದ್ದರೆ ಟಗರು ಕಾಳಗದ ಅಖಾಡದಲ್ಲಿ ಪ್ರೇಕ್ಷಕರ ಮನಸ್ಸು ಗೆದ್ದಿತ್ತು.
ಅಖಾಡದಲ್ಲಿ ಮೃತಪಟ್ಟ ಟಗರು ಜಿಲ್ಲೆಯ ಹಾನಗಲ್ ತಾಲೂಕಿನ ತಿಳುವಳ್ಳಿ ಗ್ರಾಮದಲ್ಲಿ ರಾಜ್ಯಮಟ್ಟದ ಟಗರಿನ ಕಾಳಗ ಆಯೋಜಿಸಲಾಗಿತ್ತು. ದಿಲೀಪ ಅವರು ಗೆಳೆಯ ಮಂಜು ಪೈ ಹೆಸರಿನ ಟಗರನ್ನು ಕಾಳಗಕ್ಕೆ ತೆಗೆದುಕೊಂಡು ಹೋಗಿದ್ದರು. ಸಂಘಟಕರು ಮಂಜು ಪೈ ಎಂದು ಟಗರನ್ನು ಕೂಗಿ ಕರೆಯುತ್ತಿದ್ದಂತೆ ದಿಲೀಪ ಅವರ ಟಗರು ಕಾಳಗದ ಅಖಾಡ ಪ್ರವೇಶಿಸಿತ್ತು. ಆದರೆ ಅಖಾಡಕ್ಕೆ ಬಂದು ಕಾಳಗಕ್ಕೆ ನಿಲ್ಲುತ್ತಿದ್ದಂತೆ ಮಂಜು ಪೈ ಹೆಸರಿನಲ್ಲಿದ್ದ ಟಗರು ನೆಲಕ್ಕೆ ಬಿದ್ದು ಮೃತಪಟ್ಟಿತು.
ಗೆಳೆಯನಂತೆ ಪ್ರಶಸ್ತಿ ಬಾಚಿಕೊಂಡಿದ್ದ ಟಗರು ದಿಲೀಪ ಅವರ ಗೆಳೆಯ ಮಂಜು ಪೈ ರಾಜ್ಯದಲ್ಲಿ ನಡೆದ ಬಹುತೇಕ ಕುಸ್ತಿ ಪಂದ್ಯಾವಳಿಯಲ್ಲಿ ಭಾಗವಹಿಸಿ ಸೈ ಎನಿಸಿಕೊಂಡಿದ್ದರು. ಇನ್ನೂ ದೊಡ್ಡ ದೊಡ್ಡ ಸಾಧನೆ ಮಾಡಬೇಕು ಎನ್ನುತ್ತಿರುವಾಗಲೆ ಮಂಜು ಪೈ ಮೃತಪಟ್ಟಿದ್ದರಂತೆ. ಗೆಳೆಯ ಸಾಂಪ್ರದಾಯಿಕ ಕ್ರೀಡೆ ಕುಸ್ತಿಯಲ್ಲಿ ಫೇಮಸ್ ಆಗಿದ್ದರು. ಅವರ ಮರಣದ ನಂತರ ದಿಲೀಪ ಗೆಳೆಯನ ಹೆಸರಿನಲ್ಲಿ ಟಗರು ಸಾಕಿದ್ದರು. ಮಂಜು ಪೈ ಹೆಸರಿನ ಟಗರು ರಾಜ್ಯದ ಅನೇಕ ಕಡೆಗಳಲ್ಲಿ ನಡೆದ ಟಗರಿನ ಕಾಳಗದಲ್ಲಿ ಪ್ರಶಸ್ತಿಗಳನ್ನು ಗೆದ್ದುಕೊಂಡು ಬಂದಿತ್ತು. ಗೆಳೆಯನಂತೆಯೇ ಹೆಸರು ಮಾಡುತ್ತಿದ್ದ ಟಗರು ಕಂಡು ದಿಲೀಪನಿಗೆ ಗೆಳೆಯನ ನೆನಪನ್ನು ಈ ಟಗರು ಮರೆಸಿತ್ತು.

ಮೃತಪಟ್ಟ ಟಗರಿಗೆ ವಾಹನದ ಮೇಲೆ ಇಟ್ಟು ನಗರದ ತುಂಬ ಮೆರವಣಿಗೆ ಮಾಡಲಾಯಿತು

ಮನುಷ್ಯರಿಗೆ ಅಂತ್ಯಕ್ರಿಯೆ ಮಾಡುವ ರೀತಿಯಲ್ಲಿ ಟಗರಿಗೆ ಶಾಸ್ತ್ರೋಕ್ತವಾಗಿ ಅಂತ್ಯಕ್ರಿಯೆ ಮಾಡಲಾಯಿತು.

ಗೆಳೆಯನ ಹೆಸರಿನ ಟಗರು ಸಾವನ್ನಪ್ಪಿದ ಬಳಿಕ ಜಮೀನಿಗೆ ತೆಗೆದುಕೊಂಡು ಹೋಗಿ ಅಂತ್ಯಕ್ರಿಯೆ ಮಾಡಿದ ದಿಲೀಪ್.
ಮೃತಪಟ್ಟ ಟಗರಿಗೆ ಶಾಸ್ತ್ರೋಕ್ತ ಅಂತ್ಯಕ್ರಿಯೆ ಟಗರಿನ ಕಾಳಗದ ಅಖಾಡಕ್ಕೆ ಬಂದಿದ್ದ ಟಗರು ಮೃತಪಡುತ್ತಿದ್ದಂತೆ ದಿಲೀಪ ಮತ್ತು ಆತನ ಗೆಳೆಯರು ಟಗರಿನ ಕಳೇಬರವನ್ನು ರಾಣೆಬೆನ್ನೂರಿಗೆ ತೆಗೆದುಕೊಂಡು ಹೋದರು. ಮನೆಯಲ್ಲಿ ಪೂಜೆ ಮಾಡಿ ಟಗರನ್ನು ವಾಹನದ ಮೇಲೆ ಇಟ್ಟು ನಗರದ ತುಂಬ ಮೆರವಣಿಗೆ ಮಾಡಿದರು. ನಂತರ ದಿಲೀಪ ಅವರಿಗೆ ಸೇರಿದ ಜಮೀನಿಗೆ ತೆಗೆದುಕೊಂಡು ಹೋಗಿ ಗೆಳೆಯನ ಹೆಸರಿನಲ್ಲಿದ್ದ ಟಗರನ್ನು ಮನುಷ್ಯರಿಗೆ ಅಂತ್ಯಕ್ರಿಯೆ ಮಾಡುವ ರೀತಿಯಲ್ಲಿ ಶಾಸ್ತ್ರೋಕ್ತವಾಗಿ ಅಂತ್ಯಕ್ರಿಯೆ ನೆರವೇರಿಸಿದರು.
ಕಂಬನಿ ಮಿಡಿದ ಅಭಿಮಾನಿಗಳು ಮಂಜು ಪೈ ಹೆಸರಿನ ಟಗರು ಭಾಗವಹಿಸಿದಲ್ಲೆಲ್ಲ ಪ್ರಶಸ್ತಿ ತರದೇ ವಾಪಸ್ ಬರುತ್ತಿರಲಿಲ್ಲ. ಎಂತಹ ಎದುರಾಳಿ ಇದ್ದರೂ ಗೆಲುವಿನೊಂದಿಗೆ ಅಖಾಡದಿಂದ ಹೊರ ಬರುತ್ತಿತ್ತು. ಹೀಗಾಗಿ ಟಗರಿಗೆ ಸಾಕಷ್ಟು ಸಂಖ್ಯೆಯ ಅಭಿಮಾನಿಗಳು ಇದ್ದರು. ದಿಲೀಪ ಅವರ ಕುಟುಂಬಸ್ಥರಿಗಂತೂ ಟಗರು ಅತ್ಯಂತ ಅಚ್ಚುಮೆಚ್ಚಾಗಿತ್ತು. ಹೀಗಾಗಿ ಟಗರಿನ ಸಾವಿಗೆ ಕುಟುಂಬದವರು ಮಾತ್ರವಲ್ಲ ಸಾಕಷ್ಟು ಸಂಖ್ಯೆಯಲ್ಲಿ ಬಂದ ಟಗರಿನ ಅಭಿಮಾನಿಗಳು ಕಂಬನಿ ಮಿಡಿದರು. ಮೃತ ಟಗರಿಗೆ ಪೂಜೆ ಸಲ್ಲಿಸಿ ಅಂತಿಮ ನಮನ ಸಲ್ಲಿಸಿದರು.

ಪೈಲ್ವಾನ್ ಮಂಜು ಪೈ

ದಷ್ಟಪುಷ್ಟವಾಗಿದ್ದ ಟಗರು
‘ಕುಸ್ತಿ ಪೈಲ್ವಾನನಾಗಿದ್ದ ಮಂಜು ಪೈ ನನ್ನ ಅತ್ಯಂತ ಆತ್ಮೀಯ ಗೆಳೆಯನಾಗಿದ್ದ. 2015ರಲ್ಲಿ ಗೆಳೆಯ ಮಂಜು ಪೈ ಮರಣ ಹೊಂದಿದ್ದ. ನಾನೂ ಸಹ ಕುಸ್ತಿ ಪೈಲ್ವಾನನಾಗಿದ್ದೆ. ಹೀಗಾಗಿ, ಗೆಳೆಯನ ಹೆಸರನ್ನು ಟಗರಿಗೆ ಇಟ್ಟಿದ್ದೆ. ಟಗರು ಕಾಳಗದ ಅಖಾಡದಲ್ಲಿ ಮೃತಪಟ್ಟಿತು. ಗೆಳೆಯನಂತೆ ಟಗರು ಸೋಲಿಲ್ಲದ ಸರದಾರ ಎಂಬ ಹೆಸರು ಮಾಡಿತ್ತು. ಹೀಗಾಗಿ ಮನುಷ್ಯರಂತೆ ಶಾಸ್ತ್ರೋಕ್ತ ಅಂತ್ಯಕ್ರಿಯೆ ಮಾಡಿದೆವು. ಅಲ್ಲದೆ ಮೃತ ಟಗರಿಗೆ ಗುಡಿ ಕಟ್ಟಿಸುತ್ತೇವೆ’ ದಿಲೀಪ ಅವರ ಹೇಳುತ್ತಾರೆ.
ಇದನ್ನೂ ಓದಿ
Gold Silver Price: ಗ್ರಾಹಕರ ಬೇಡಿಕೆಯ ಚಿನ್ನ, ಬೆಳ್ಳಿ ದರದಲ್ಲಿ ಏರಿಳಿತ.. ಇಲ್ಲಿದೆ ನಿಖರ ಮಾಹಿತಿ
ಬೆಟ್ಟದಷ್ಟು ಆಸೆ ಇಟ್ಟುಕೊಂಡಿದ್ದ ಪುನೀತ್ ಫ್ಯಾನ್ಸ್ಗೆ ಭಾರೀ ನಿರಾಸೆ! ಆದರೂ ಒಂದು ಗುಡ್ ನ್ಯೂಸ್