ಈಗಾಗಲೇ ಕೊರೊನಾ ಮಹಾಮಾರಿಯ ಆರ್ಭಟದಿಂದ ಜನರೆಲ್ಲಾ ನಲುಗಿ ಹೋಗಿದ್ದಾರೆ. ಈ ನಡುವೆ ಸದ್ದಿಲ್ಲದೇ ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆಯತ್ತ ಸಾಗುತ್ತಲೇ ಇದೆ. ಕೊರೊನಾ ಸಂಕಷ್ಟದ ನಡುವೆಯೂ ಇಂಧನ ದರ ಏರಿಕೆ ಕಂಡು ಗಗನಕ್ಕೇರಿರುವುದು ಜನರಿಗೆ ಗಾಯದ ಮೇಲೆ ಬರೆ ಬಿದ್ದಂತಾಗಿದೆ. ಕರ್ನಾಟಕದ ಜಿಲ್ಲೆಗಳಾದ ಚಿಕ್ಕಮಗಳೂರು, ಬಳ್ಳಾರಿ, ಉತ್ತರಕನ್ನಡದ ಶಿರಸಿ ಸೇರಿ ಮಲೆನಾಡು ಭಾಗಗಳಲ್ಲಿ ಲೀಟರ್ ಪೆಟ್ರೋಲ್ ದರ 100ರ ಗಡಿ ದಾಟಿದೆ.
ಉತ್ತರಕನ್ನಡದ ಶಿರಸಿಯಲ್ಲಿ ಲೀಟರ್ ಪೆಟ್ರೋಲ್ ಬೆಲೆ 100.22 ರೂಪಾಯಿ ನಿಗದಿ ಮಾಡಲಾಗಿದೆ. ಬಳ್ಳಾರಿಯಲ್ಲಿ ಲೀಟರ್ ಪೆಟ್ರೋಲ್ ದರ 100.08 ರೂಪಾಯಿಗೆ ಏರಿಕೆಯಾಗಿದೆ. ಇನ್ನಿತರ ಜಿಲ್ಲೆಗಳು ಕೂಡಾ ಶತಕ ಬಾರಿಸುವಲ್ಲಿ ಗಡಿಯ ಸಮೀಪದಲ್ಲಿಯೇ ನಿಂತಿದೆ. ಇದೇ ರೀತಿ ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆಯತ್ತ ಸಾಗಿದರೆ ಅವುಗಳೂ ಕೂಡಾ ಶತಕ ಬಾರಿಸುವುದರಲ್ಲಿ ಯಾವುದೇ ಸಂದೇಹವಿಲ್ಲ.
ಕೊರೊನಾದಿಂದ ದಿನನಿತ್ಯದ ಬದುಕು ಸಾಗಿಸಲು ಹೆಣಗಾಡುತ್ತಿರುವ ಜನರಿಗೆ ಪೆಟ್ರೋಲ್-ಡೀಸೆಲ್ ದರ ಏರಿಕೆ ಸಂಕಷ್ಟ ತಂದೊಡ್ಡಿದೆ. ಲಾಕ್ಡೌನ್ನಲ್ಲಿ ಎಲ್ಲರೂ ಆರೋಗ್ಯದ ಬಗ್ಗೆ ತಲೆಕೆಡಿಸಿಕೊಳ್ಳುತ್ತಿದ್ದರು. ಇದರ ನಡುವೆ ಸದ್ದಿಲ್ಲದಂತೆ ಪೆಟ್ರೋಲ್ ರೇಟ್ ನೂರರ ಗಡಿ ದಾಟಿ ನಿಂತಿದೆ. ಹೀಗೆ ಬಹುತೇಕ ಜಿಲ್ಲೆಗಳಲ್ಲಿ ಪೆಟ್ರೋಲ್ ದರ ಶತಕ ಬಾರಿಸುವ ನಿರೀಕ್ಷೆಯಿದೆ. ನಿರಂತರ ಏರಿಕೆಯತ್ತ ಸಾಗುತ್ತಿರುವ ಪೆಟ್ರೋಲ್, ಡೀಸೆಲ್ ದರ ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಕಾರವಾರದಲ್ಲಿ ಲೀಟರ್ ಪೆಟ್ರೋಲ್ ದರ 99.85 ರೂಪಾಯಿ ಇದೆ. ಹಾಗೆಯೇ ಡೀಸೆಲ್ ದರವೂ ಕೂಡಾ ಏರಿಕೆ ಕಂಡಿದೆ. ಶಿರಸಿಯಲ್ಲಿ ಲೀಟರ್ ಡೀಸೆಲ್ ದರ 92.88 ರೂಪಾಯಿ ದಾಖಲಾಗಿದೆ. ಪಂಚ ರಾಜ್ಯಗಳ ಚುನಾವಣೆಯ ಸಂದರ್ಭದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ದ ಬೆಲೆ ಏರಿಕೆಯಾಗಿರಲಿಲ್ಲ. ಆ ನಂತರ ಮೇ 4ರಿಂದ ಏರಿಕೆ ಕಾಣುತ್ತಲಿರುವ ಇಂಧನ ದರ ಇಂದಿನವರೆಗೂ ಏರುತ್ತಲೇ ಇದೆ. ಇದುವರೆಗೆ ಒಟ್ಟು 20 ಬಾರಿ ಏರಿಕೆ ಕಂಡಿದೆ.
ಇನ್ನು, ಮಂಡ್ಯ ಜಿಲ್ಲೆಯಲ್ಲಿ ಲೀಟರ್ ಪೆಟ್ರೋಲ್ ದರ 98.32 ರೂಪಾಯಿಗೆ ಏರಿಕೆಯಾಗಿದೆ. ಹಾಗೂ ಲೀಟರ್ ಡಿಸೇಲ್ ದರ 91.25 ರೂಪಾಯಿ ಆಗಿದೆ. ಹಾಗೂ ಹಾವೇರಿಯಲ್ಲಿ ಲೀಟರ್ ಪೆಟ್ರೋಲ್ ದರ 98.96 ರೂಪಾಯಿ ಹಾಗೂ ಲೀಟರ್ ಡೀಸೆಲ್ ಡಿಸೇಲ್ ದರ 91.85 ರೂಪಾಯಿಗೆ ಏರಿಕೆಯಾಗಿದೆ. ಇನ್ನು, ಮಂಗಳೂರಿನಲ್ಲಿ ಪೆಟ್ರೋಲ್ ದರ 97.75 ರೂ. ಹಾಗೂ ಡಿಸೇಲ್ ದರ 90.69 ರೂಪಾಯಿಗೆ ಹೆಚ್ಚಳವಾಗಿದೆ.
ಪ್ರಮುಖ ಮೆಟ್ರೋ ನಗರಗಳಲ್ಲಿ ಇಂಧನ ದರ
ವಾಣಿಜ್ಯ ನಗರಿ ಮುಂಬೈ, ಜೈಪುರ, ಮಹಾರಾಷ್ಟ್ರ, ತೆಲಂಗಾಣ, ಮಧ್ಯಪ್ರದೇಶ ಹಾಗೂ ರಾಜಸ್ಥಾನದಲ್ಲಿ ಪೆಟ್ರೋಲ್ ದರ ಈಗಾಗಲೇ 100ರ ಗಡಿ ದಾಟಿದೆ. ಮುಂಬೈನಲ್ಲಿ ಲೀಟರ್ ಪೆಟ್ರೋಲ್ ದರ 101.03, ಜೈಪುರದಲ್ಲಿ 101.59 ಹಾಗೂ ಮಧ್ಯಪ್ರದೇಶದಲ್ಲಿ 103.17 ರೂಪಾಯಿಗೆ ಏರಿಕೆಯಾಗಿದೆ. ಇನ್ನು ಬೆಂಗಳೂರಿನಲ್ಲಿ ಲೀಟರ್ ಪೆಟ್ರೋಲ್ ದರ 98.20 ರೂಪಾಯಿಗೆ ಏರಿಕೆಯಾಗಿದೆ.
ಬೆಲೆ ಏರಿಕೆಯ ಬಳಿಕ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಲೀಟರ್ ಪೆಟ್ರೋಲ್ ದರ 95.31 ರೂಪಾಯಿಗೆ ಏರಿಕೆಯಾಗಿದೆ. ಹಾಗೆಯೇ ಮುಂಬೈನಲ್ಲಿ ಲೀಟರ್ ಪೆಟ್ರೋಲ್ ದರ 101.52 ರೂಪಾಯಿ ಆಗಿದೆ. ಕೋಲ್ಕತ್ತಾದಲ್ಲಿ ಲೀಟರ್ ಪೆಟ್ರೋಲ್ ಬೆಲೆ 95.28 ರುಪಾಯಿ ಆಗಿದ್ದು, ಚೆನ್ನೈನಲ್ಲಿ 96.71 ರೂಪಾಯಿ ನಿಗದಿ ಮಾಡಲಾಗಿದೆ.
ಮೆಟ್ರೋ ನಗರಗಳಲ್ಲಿ ಡೀಸೆಲ್ ಬೆಲೆ
ದೆಹಲಿಯಲ್ಲಿ ಲೀಟರ್ ಡೀಸೆಲ್ ಬೆಲೆ 86.22 ರೂಪಾಯಿ ಇದೆ. ಹಾಗೆಯೇ ಮುಂಬೈನಲ್ಲಿ 93.58 ರೂಪಾಯಿ ಇದೆ. ಕೋಲ್ಕತ್ತಾದಲ್ಲಿ ಲೀಟರ್ ಡೀಸೆಲ್ ದರ 89.07 ರೂಪಾಯಿ ಇದೆ. ಹಾಗೂ ಚೆನ್ನೈನಲ್ಲಿ ಲೀಟರ್ ಡೀಸೆಲ್ ದರ 90.92 ರೂಪಾಯಿಗೆ ಏರಿಕೆಯಾಗಿದೆ.
ಇದನ್ನೂ ಓದಿ:
Petrol Price Today: ಮತ್ತೆ ಏರಿದ ತೈಲ ಬೆಲೆ; ಶತಕ ದಾಟಿದ ಮುಂಬೈ ನಗರದ ಪೆಟ್ರೋಲ್ ದರ
Petrol Price Today: ಸ್ಥಿರತೆಯಲ್ಲಿ ಇಂಧನ ಬೆಲೆ; ವಿವಿಧ ನಗರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಹೀಗಿದೆ
Published On - 8:26 am, Mon, 7 June 21