ಕೊಪ್ಪಳ: ಕರ್ನಾಟಕ ರಾಜ್ಯದ ಬಗ್ಗೆ ಕೇಂದ್ರ ಸರ್ಕಾರ ನಿರ್ಲಕ್ಷ್ಯ ವಹಿಸುತ್ತಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಪ್ರಧಾನ ಮಂತ್ರಿ ಮೋದಿ ಕಿರುಕುಳ ನೀಡುತ್ತಿದ್ದಾರೆ. ರಾಜ್ಯದ 25 ಸಂಸದರನ್ನು ಕೂಡಾ ಮೋದಿ ತನ್ನ ಹತ್ತಿರಕ್ಕೆ ಬಿಟ್ಟುಕೊಳ್ಳುತ್ತಿಲ್ಲ. ಪ್ರಧಾನಿಗೆ ಕರ್ನಾಟಕ ಎಂದರೆ ಅಲರ್ಜಿ ಆಗಿದೆ ಎಂದು ಕಾಂಗ್ರೆಸ್ ಶಾಸಕ ಅಮರೇಗೌಡ ಬಯ್ಯಾಪುರ ಕೊಪ್ಪಳ ಜಿಲ್ಲೆಯ ಕುಷ್ಟಗಿಯಲ್ಲಿ ಆರೋಪಿಸಿದ್ದಾರೆ. ಕರ್ನಾಟಕಕ್ಕೆ ಸಮರ್ಪಕವಾಗಿ ಅನುದಾನ ಕೊಡದ ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದ ಅವರು ನರೇಂದ್ರ ಮೋದಿ ಕರ್ನಾಟಕವನ್ನು ಮುಗಿಸುವ ಸಂಚು ರೂಪಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಾವಾಗಿಯೇ ಖುರ್ಚಿ ಖಾಲಿ ಮಾಡಲಿ ಎಂಬ ಕಾರಣಕ್ಕೆ ಪ್ರಧಾನಿ ನರೇಂದ್ರ ಮೋದಿ ಕಿರುಕುಳ ನೀಡುತ್ತಿದ್ದಾರೆ. ಅದಕ್ಕಾಗಿಯೇ ಕರ್ನಾಟಕಕ್ಕೆ ಅನುದಾನವನ್ನೂ ಸೂಕ್ತವಾಗಿ ಕೊಡದೆ ನಿರ್ಲಕ್ಷ್ಯ ತೋರುತ್ತಿದ್ದಾರೆ. ಮೋದಿ ತಮ್ಮ ಬಳಿಗೆ ಪ್ರಲ್ಹಾದ್ ಜೋಶಿಯೊಬ್ಬರನ್ನು ಬಿಟ್ಟುಕೊಂಡಿದ್ದಾರೆ. ಡಿ.ವಿ.ಸದಾನಂದ ಗೌಡರಿಗೂ ಹತ್ತಿರಕ್ಕೆ ಹೋಗಲು ಅವಕಾಶವಿಲ್ಲ. ಇಂತಹ ಸಮಯದಲ್ಲಿ ಜನ ಸಾಮಾನ್ಯರ ರಕ್ಷಣೆ ಮಾಡುವ ಕೆಲಸ ಮಾಡಬೇಕಿತ್ತು. ಆದರೆ ಅವರು ಅದನ್ನು ಮಾಡುತ್ತಿಲ್ಲ. ಬಿಜೆಪಿಯವರು ಬಹಳ ಬುದ್ದಿವಂತರು, ವಿಷಯಾಂತರ ಮಾಡುತ್ತಾರೆ ಎಂದು ಅಮರೇಗೌಡ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ವಿರುದ್ಧ ಕಿಡಿಕಾರಿದ್ದಾರೆ.
ವೈದ್ಯರ ಮೇಲೆ ದಬ್ಬಾಳಿಕೆ ಆರೋಪ; ಜಂಟಿ ನಿರ್ದೇಶಕ ಅಮಾನತು
ಬೆಂಗಳೂರು: ವೈದ್ಯರ ಮೇಲೆ ದಬ್ಬಾಳಿಕೆ ಮಾಡಿ ಔಷಧ, ರೆಮ್‌ಡಿಸಿವಿರ್ ಹಾಗೂ ಹಣವನ್ನು ಪಡೆದ ಆರೋಪ ಹೊತ್ತಿದ್ದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಡಾ.ಮುರಳಿ ಕೃಷ್ಣ ಅವರನ್ನು ಅಮಾನತು ಮಾಡಲಾಗಿದೆ. ಬೆಂಗಳೂರು ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಡಾ.ಮುರಳಿ ಕೃಷ್ಣ, ಆರೋಗ್ಯ ಸಚಿವರ ಜೊತೆ ಚಿಕ್ಕಬಳ್ಳಾಪುರ ಜಿಲ್ಲೆಗೆ ಪ್ರವಾಸಕ್ಕೆ ತೆರಳಿದ್ದಾಗ ರೆಮ್‌ಡಿಸಿವಿರ್, ಔಷಧ ಹಾಗೂ ಇತರೆ ವಿಚಾರಗಳಲ್ಲಿ ವೈದ್ಯರ ಮೇಲೆ ದಬ್ಬಾಳಿಕೆ ನಡೆಸಿದ್ದರು ಎಂದು ಬಾಗೇಪಲ್ಲಿ THO ಡಾ.ಸತ್ಯನಾರಾಯಣರೆಡ್ಡಿ ದೂರು ನೀಡಿದ್ದರು.
ಆರೋಗ್ಯ ಸಚಿವರ ಜೊತೆ ಜಿಲ್ಲೆಗೆ ಪ್ರವಾಸ ಕೈಗೊಂಡಿದ್ದಾಗ ಬಾಗೇಪಲ್ಲಿ ಹಾಗೂ ಶಿಡ್ಲಘಟ್ಟ ತಾಲೂಕು ಆಸ್ಪತ್ರೆಗಳ ಭೇಟಿ ವೇಳೆ ವೈದ್ಯರುಗಳ ಮೇಲೆ ದಬ್ಬಾಳಿಕೆ ನಡೆಸಿ ಔಷಧ ಹಾಗೂ ಹಣ ಪಡೆದಿದ್ದರು ಎಂದು ಆರೋಪಿಸಲಾಗಿತ್ತು. ಇದು ಆರೋಗ್ಯ ಸಚಿವರ ಗಮನಕ್ಕೆ ಬರುತ್ತಿದ್ದಂತೆಯೇ ಕ್ರಮ ಜರುಗಿಸಲಾಗಿದೆ. ಸದ್ಯ ದೂರಿನನ್ವಯ ಅಮಾನತುಗೊಂಡಿರುವ ಡಾ.ಮುರಳಿ ಕೃಷ್ಣ ಅವರನ್ನು ಕೊಪ್ಪಳ ಜಿಲ್ಲೆ ಯಲಬುರ್ಗಾಕ್ಕೆ ವೈದ್ಯಾಧಿಕಾರಿಯಾಗಿ ನೇಮಕ ಮಾಡಲಾಗಿದೆ.
ಇದನ್ನೂ ಓದಿ:
Karnataka Lockdown: ಕರ್ನಾಟಕದಲ್ಲಿ ಜೂನ್ 7ರ ಬೆಳಗ್ಗೆ 6ಗಂಟೆಯವರೆಗೂ ಲಾಕ್ಡೌನ್ ವಿಸ್ತರಣೆ; ಸಿಎಂ ಯಡಿಯೂರಪ್ಪ ಘೋಷಣೆ