ಮೋದಿ ತಮ್ಮ 104ನೇ ಮನ್​ಕೀ ಬಾತ್​ನಲ್ಲಿ ನೆನೆದ ಬೆಂಗಳೂರಿನ ಧನ್​ಪಾಲ್​ ಯಾರು? ಇವರ ಸಾಧನೆ ಏನು? ಇಲ್ಲಿದೆ ವಿವರ

|

Updated on: Aug 27, 2023 | 1:09 PM

ಪ್ರಧಾನಿ ನರೇಂದ್ರ ಮೋದಿ ಅವರು ಇಂದು (ಆಗಸ್ಟ್ 27) ತಮ್ಮ 104 ಮನ್​ಕೀ ಬಾತ್​ ಆವೃತ್ತಿಯಲ್ಲಿ ಚಂದ್ರಯಾನ-3 ಯಶಸ್ಸು, ಇಸ್ರೋ ವಿಜ್ಞಾನಿಗಳ ಸಾಹಸ ಹಾಗೂ ಹಬ್ಬದ ಸಮಯದಲ್ಲಿ ಸ್ಥಳೀಯ ವಸ್ತುಗಳನ್ನೇ ಖರೀದಿ ಸೇರಿದಂತೆ ಹಲವು ಸಂಗತಿಗಳ ಬಗ್ಗೆ ಹೇಳಿದರು. ಇನ್ನು ಇದೇ ವೇಳೆ ಮೋದಿ ಅವರು ತಮ್ಮ ಮನ್​ಕೀ ಬಾತ್​ನಲ್ಲಿ ಬೆಂಗಳೂರಿನ ಧನ್​ಪಾಲ್ ಎನ್ನುವವರನ್ನು ನೆನೆದಿರುವುದು ವಿಶೇಷವಾಗಿದೆ. ಹಾಗಾದ್ರೆ, ಯಾರು ಈ ಧನ್​ಪಾಲ್? ಮೋದಿ ಹೊಗಳುವಷ್ಟು ಮಾಡಿದ ಸಾಧನೆ ಏನು ಎನ್ನುವ ವಿವರ ಈ ಕೆಳಗಿನಂತಿದೆ ನೋಡಿ.

ಮೋದಿ ತಮ್ಮ 104ನೇ ಮನ್​ಕೀ ಬಾತ್​ನಲ್ಲಿ ನೆನೆದ ಬೆಂಗಳೂರಿನ ಧನ್​ಪಾಲ್​ ಯಾರು? ಇವರ ಸಾಧನೆ ಏನು? ಇಲ್ಲಿದೆ ವಿವರ
ಧನ್​ಪಾಲ್- ನರೇಂದ್ರ ಮೋದಿ
Follow us on

ಬೆಂಗಳೂರು, (ಆಗಸ್ಟ್ 27): ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಇಂದು (ಆಗಸ್ಟ್ 27) ತಮ್ಮ ಮನ್​ಕೀ ಬಾತ್​ ನ 104ನೇ ಆವೃತ್ತಿಯಲ್ಲಿ (104th Mann Ki Baat) ಬೆಂಗಳೂರಿನ ಧನ್​ಪಾಲ್(Dhanpal) ಎನ್ನುವವರನ್ನು ನೆನೆದಿರುವುದು ವಿಶೇಷವಾಗಿದೆ. ಹಾಗಾದ್ರೆ, ಯಾರು ಈ ಧನ್​ಪಾಲ್? ಮೋದಿ ಹೊಗಳುವಷ್ಟು ಮಾಡಿದ ಸಾಧನೆ ಏನು ಎನ್ನುವುದನ್ನು ನೋಡುವುದಾದರೆ, ಬೆಂಗಳೂರಿನ ಸುತ್ತಮುತ್ತಲ ಪ್ರದೇಶಗಳಿಗೆ ಬಸ್ಸಿನಲ್ಲಿ ಜನರನ್ನು ಕರೆದುಕೊಂಡು ಹೋಗುತ್ತಿದ್ದರು. ಈಗ ನಗರದ ಐತಿಹಾಸಿಕ ಶಿಲಾ ಶಾಸನಗಳನ್ನು ಹುಡುಕುವ ಮೂಲಕ ನಗರದ ಮರೆತುಹೋದ ದಂತಕಥೆಗಳನ್ನು ಹೇಳಲು ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದಾರೆ. ಕರ್ನಾಟಕ ಇತಿಹಾಸ ಅಕಾಡೆಮಿಯ ಸದಸ್ಯರೂ ಆಗಿರುವ ಧನಪಾಲ್ , 17 ವರ್ಷಗಳ ಹಿಂದೆಯೇ ಇದನ್ನು ಆರಂಭಿಸಿದ್ದ ಕೆ.ಧನಪಾಲ್ ಕಿರು ಪರಿಚಯ ಇಲ್ಲಿದೆ.

ಬೆಂಗಳೂರಿನಲ್ಲಿ ಹಲವು ಶಿಲಾ ಶಾಸನಗಳನ್ನು ಹೊರತೆಗೆದ ಹೆಗ್ಗಳಿಕೆಗೆ ಪಾತ್ರರಾಗಿರುವ ನಿವೃತ್ತ ಬಿಎಂಟಿಸಿಯ ಬೆಂಗಳೂರು ದರ್ಶಿನಿಯ ಚಾಲಕ ಮತ್ತು ಪ್ರವಾಸಿ ಮಾರ್ಗದರ್ಶಿ ಈ ಕೆ ಧನಪಾಲ್. ಬೆಂಗಳೂರು ಮಹಾನಗರ ಸಾರಿಗೆ ನಿಗಮದ ಬಸ್ ಚಾಲಕ ಧನಪಾಲ್ ಅವರನ್ನು 2006ರಲ್ಲಿ ಅದರ ದೃಶ್ಯವೀಕ್ಷಣೆಯ ವಿಭಾಗಕ್ಕೆ ವರ್ಗಾಯಿಸಲಾಗುತ್ತದೆ. ಈ ವಿಭಾಗವನ್ನು ಈಗ ‘ಬೆಂಗಳೂರು ದರ್ಶಿನಿ’ ಎಂದು ಕರೆಯಲಾಗುತ್ತದೆ. ನಗರದ ವಿವಿಧ ಸ್ಥಳಗಳನ್ನು ಒಳಗೊಂಡ ಪ್ರವಾಸಿ ಬಸ್ ಚಾಲನೆ ಅವರ ಕೆಲಸವಾಗಿತ್ತು.

ಇದನ್ನೂ ಓದಿ: Narendra Modi Mann Ki Baat: ಚಂದ್ರಯಾನ 3ರ ಯಶಸ್ಸು, ನಾರಿ ಶಕ್ತಿಯ ಜೀವಂತ ಉದಾಹರಣೆ: ಪ್ರಧಾನಿ ಮೋದಿ

ಇತಿಹಾಸದ ಮೇಲಿನ ಅವರ ಪ್ರೀತಿ ಎಷ್ಟಿತ್ತೆಂದರೆ, ಧನಪಾಲ್ ಬಿಎಂಟಿಸಿಯಲ್ಲಿ ದೈನಂದಿನ ಪಾಳಿಯ ಕೆಲಸದ ನಂತರ ಬೆಂಗಳೂರಿನ ಪರಂಪರೆ ಅನ್ವೇಷಿಸಲು ಸಮಯವನ್ನು ವಿನಿಯೋಗಿಸಲು ಪ್ರಾರಂಭಿಸಿದ್ದರು. ತಮ್ಮ ಸ್ನೇಹಿತ ಮತ್ತು ಮಾರ್ಗದರ್ಶಕ ಪ್ರೊ. ಕೆ.ಆರ್.ನರಸಿಂಹನ್ ಅವರ ಸಹಾಯದಿಂದ ವಿವಿಧ ಕಾಲಕ್ಕೆ ಸೇರಿದ 100ಕ್ಕೂ ಹೆಚ್ಚು ಶಿಲಾ ಶಾಸನಗಳನ್ನು ಪತ್ತೆ ಹಚ್ಚಿದ್ದಾರೆ. ಇನ್ನಷ್ಟು ತಿಳಿಯುವ ನಿಟ್ಟಿನಲ್ಲಿ ಧನಪಾಲ್ ಅವರು ಕನ್ನಡ ಸಾಹಿತ್ಯ ಪರಿಷತ್ತಿನ ಸಂಜೆ ಕಾಲೇಜ್ ಸೇರಿಕೊಂಡು 2020 ರಲ್ಲಿ ಎಪಿಗ್ರಫಿಯಲ್ಲಿ ಡಿಪ್ಲೊಮಾ ಪಡೆದರು. ಕೆಲ ತಿಂಗಳ ಹಿಂದೆಯೇ ಬಿಎಂಟಿಸಿಯಿಂದಯಿಂದ ನಿವೃತ್ತರಾಗಿರುವ ಇವರು ಈಗ ತಮ್ಮ ಸಂಪೂರ್ಣ ಸಮಯವನ್ನು ಬೆಂಗಳೂರಿನ ಅನ್ವೇಷಣೆಯಲ್ಲಿ ಕಳೆಯುತ್ತಿದ್ದಾರೆ.

ಶಿಲಾ ಶಾಸನ ಪತ್ತೆ ಕಾರ್ಯ ಹೇಗೆ ಆರಂಭವಾಯಿತು?

ಶಿಲಾ ಶಾಸನ ಪತ್ತೆ ಕಾರ್ಯ ಹೇಗೆ ಆರಂಭವಾಯಿತು ಎಂಬ ಬಗ್ಗೆ ಇತ್ತೀಚೆಗಷ್ಟೇ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ಮಾತನಾಡಿದ್ದ ಅವರು, ಒಂದು ದಿನ ಮಲ್ಲೇಶ್ವರಂನ ಸ್ಯಾಂಕಿ ಕೆರೆ ಸುತ್ತ ಕೆಲವು ಪ್ರವಾಸಿಗರನ್ನು ಕರೆದುಕೊಂಡು ಹೋಗುತ್ತಿದ್ದಾಗ ‘ಇದಕ್ಕೆ ‘ಸ್ಯಾಂಕಿ’ ಎಂದು ಏಕೆ ಕರೆಯುತ್ತಾರೆ?’ ಎಂದು ಪ್ರವಾಸಿಗರೊಬ್ಬರು ಕೇಳಿದಾಗ ನನ್ನಲ್ಲಿ ಉತ್ತರವಿರಲಿಲ್ಲ. ನಮ್ಮ ಸುತ್ತಲಿನ ಇತಿಹಾಸ ತಿಳಿಯದೆ ನನಗೆ ಕೊಂಚ ಮುಜುಗರವಾಯಿತು. ಅದು ಕೆರೆಯ ಇತಿಹಾಸವನ್ನು ಆಳವಾಗಿ ಅಧ್ಯಯನ ಮಾಡಲು ಪ್ರಚೋದಿಸಿತು. ನಂತರ ಅದಕ್ಕೆ ಎಂಜಿನಿಯರ್ ರಿಚರ್ಡ್ ಹೈರಾಮ್ ಸ್ಯಾಂಕಿಯ ಹೆಸರಿಡಲಾಗಿದೆ ಎಂದು ತಿಳಿದುಕೊಂಡೆ. ಅದರಂತೆ ಇತಿಹಾಸದಲ್ಲಿ ಆಸಕ್ತಿಯನ್ನು ಬೆಳೆಸಿಕೊಂಡು ಇಂದು ಬೆಂಗಳೂರಿನ ಪ್ರತಿಯೊಂದು ಸ್ಥಳದ ಹಿಂದಿನ ಕಥೆಯನ್ನು ತಿಳಿದಿದ್ದೇನೆ ಎಂದು ಸ್ವತಃ ಧನಪಾಲ್ ಹೇಳಿಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.

ಹಲವು ಶಾಸನಗಳನ್ನು ಪತ್ತೆ ಹಚ್ಚಿರುವ ಧನ್​ಪಾಲ್

ಬೆಂಗಳೂರಿನೊಳಗೆ ಅಡಗಿರುವ ಹಲವಾರು ಕಲ್ಲುಗಳಲ್ಲಿ ‘ವೀರಗಲ್ಲುಗಳಿದ್ದು, ಅವುಗಳನ್ನು ಕೆಲವನ್ನು ಧನಪಾಲ್ ಪತ್ತೆ ಹಚ್ಚಿದ್ದಾರೆ. ಇತ್ತೀಚಿನ ಪರಿಶೋಧನೆಯ ಸಂದರ್ಭದಲ್ಲಿ, ನಗರದ ಹೊರವಲಯದಲ್ಲಿರುವ ದಾಸನಪುರ ಹೋಬಳಿಯ ನಗರೂರು ಗ್ರಾಮದಲ್ಲಿ ವೀರಗಲ್ಲು ಪತ್ತೆ ಹಚ್ಚಿದ್ದರು. ಈ ಕಲ್ಲಿನಲ್ಲಿ ರಾಷ್ಟ್ರಕೂಟರ ಕಾಲಕ್ಕೆ ಸೇರಿದ ಕನ್ನಡ ಮತ್ತು ಸಿಂಧಿ ಭಾಷೆಯ ಶಾಸನವಿದೆ. ಇದು ಕ್ರಿ.ಪೂ 967 ಹಿಂದಿನದು ಎಂದು ಹೇಳಿದ್ದರು. ಅಲ್ಲದೇ ಇದರಲ್ಲಿ ಒಬ್ಬ ಮನುಷ್ಯನು ತನ್ನ ಪ್ರಾಣವನ್ನು ಪಣಕ್ಕಿಟ್ಟು ಹಸುಗಳನ್ನು ಉಳಿಸುವ ವೀರರ ಚಿತ್ರಣವಿದೆ ಎಂದು ವೀರಗಲ್ಲಿನ ಬಗ್ಗೆ ವಿವರಿಸಿದ್ದರು.

ಹೀಗೆ ಧನಪಾಲ್ ಈ ಹಿಂದೆ ಹಲವು ಶಾಸನಗಳನ್ನು ಪತ್ತೆ ಹಚ್ಚಿ ಅವುಗಳ ಶೋಧನೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದು, ಇದೀಗ ಪ್ರಧಾನಿ ನರೇಂದ್ರ ಮೋದಿ ಅವರ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ಧನ್​ಪಾಲ್​ ಕುರಿತು ಮನ್​ಕೀ ಬಾತ್​ನಲ್ಲಿ ಮೋದಿ ಹೇಳಿದ್ದೇನು?

ಯಾವಾಗ ಸಮಯ ಸಿಕ್ಕರೂ ನಮ್ಮ ದೇಶದ ವಿವಿಧತೆ ಹಾಗೂ ಸಂಪ್ರದಾಯವನ್ನು ನೋಡುವ ಅರಿಯುವ ಪ್ರಯತ್ನ ಮಾಡಿ. ಸಾಕಷ್ಟು ಮಂದಿ ತಮ್ಮ ಊರಿನ ಐತಿಹಾಸಿಕ ಪ್ರದೇಶಗಳ ಬಗ್ಗೆ ಅರಿವೇ ಇರುವುದಿಲ್ಲ. ಹಾಗೆಯೇ ಬೆಂಗಳೂರಿನ ಧನ್​ಪಾಲ್ ಅವರು ಟ್ರಾನ್ಸ್​ಪೋರ್ಟ್​ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದರು. ನಂತರ ಅವರಿಗೆ ದರ್ಶಿನಿಯಲ್ಲಿ ಬೇರೆ ರಾಜ್ಯ ಹಾಗೂ ಬೇರೆ ದೇಶಗಳ ಜನರಿಗೆ ಬೆಂಗಳೂರು ದರ್ಶನ ಮಾಡುವ ಅವಕಾಶ ದೊರೆಯಿತು. ಆಗ ಒಂದು ದಿನ ಪ್ರವಾಸಿಗರೊಬ್ಬರು ಬೆಂಗಳೂರಿನಲ್ಲಿ ಸ್ಯಾಂಕಿ ಟ್ಯಾಂಕಿ ಇದೆಯಲ್ಲಾ ಅದಕ್ಕೆ ಆ ಹೆಸರು ಹೇಗೆ ಬಂತು ಎನ್ನುವ ಪ್ರಶ್ನೆ ಕೇಳಿದ್ದರು, ಆದರೆ ಧನ್ ಪಾಲ್ ಅವರಿಗೆ ತಮ್ಮ ಬಗ್ಗೆಯೇ ಬೇಸರವೆನಿಸಿತ್ತು/ ನಂತರ ಕಲಿಕೆ ಶುರು ಮಾಡಿದರು. ಶಿಲಾಲೇಖದಲ್ಲಿ ಡಿಪ್ಲೊಮಾ ಕೂಡ ಮಾಡಿದ್ದಾರೆ, ಈಗ ರಿಟೈರ್ ಆಗಿದ್ದರೂ ಕೂಡ ತಮ್ಮ ಅಭಿರುಚಿ ಒಂದು ಚೂರು ಕಡಿಮೆಯಾಗಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ 104ನೇ ಮನ್​ಕೀ ಬಾತ್​ನಲ್ಲಿ ಧನ್​ಪಾಲ್​ ಅವರನ್ನು ನೆನಪಿಸಿಕೊಂಡಿರುವುದು ವಿಶೇಷ.

Published On - 12:25 pm, Sun, 27 August 23