ಬಿಜೆಪಿಯ ಡಬಲ್ ಎಂಜಿನ್ ಸರ್ಕಾರದಿಂದ ಕ್ಷಿಪ್ರ ಅಭಿವೃದ್ಧಿ ಸಾಧ್ಯವಾಗಿದೆ. ಇದಕ್ಕೆ ಸಾಕ್ಷಿ ಜಲ್ ಜೀವನ್ ಮಿಷನ್. ಇದರಿಂದ ಮನೆ ಮನೆಯ ನಲ್ಲಿ ನಲ್ಲಿಯಲ್ಲಿ ನೀರು ಬರುತ್ತಿದೆ. ರಾಜ್ಯದಲ್ಲಿ ಶೇ 60ರಷ್ಟು ಕೆಲಸ ಆಗಿದೆ. ಸಿಎಂ ಬಸವರಾಜ ಬೊಮ್ಮಾಯಿ ಅವರ ಆಸಕ್ತಿಯಿಂದ ಅದು ಸಾಧ್ಯವಾಗಿದೆ ಎಂದು ಮೋದಿ ಬಣ್ಣಿಸಿದರು.
ಮಲ್ಲಿಕಾರ್ಜುನ ಖರ್ಗೆ ಅವರ ಬಗ್ಗೆ ನನಗೆ ಗೌರವ ಇದೆ. ಛತ್ತೀಸಗಢದಲ್ಲಿ ಕಾಂಗ್ರೆಸ್ ಅಧಿವೇಶನ ನಡೆಯುತ್ತಿದೆ. ಅಲ್ಲಿ ಮಲ್ಲಿಕಾರ್ಜುನ ಖರ್ಗೆ ಕೂಡ ಭಾಗಿಯಾಗಿದ್ದಾರೆ. ಅಲ್ಲಿ ಭಾರೀ ಬಿಸಿಲಿತ್ತು. ಆದರೆ ಖರ್ಗೆ ಅವರನ್ನು ಬಿಟ್ಟು ಬೇರೆ ಯಾರಿಗೋ ಕೊಡೆ ಹಿಡಿಯಲಾಗಿತ್ತು. ತಮ್ಮ ಪಕ್ಷದ ಅಧ್ಯಕ್ಷರಿಗೇ ಕಾಂಗ್ರೆಸ್ ಗೌರವ ನೀಡುವುದಿಲ್ಲ ಎಂದು ಮೋದಿ ಟೀಕಿಸಿದರು.
ದೇಶದ ಹಲವು ರಾಜ್ಯಗಳಲ್ಲಿ ಪರಿವಾರ ವಾದ (ವಂಶಾಡಳಿತ) ಇದೆ. ಕರ್ನಾಟಕದಲ್ಲಿಯೂ ಇದೆ. ಅದನ್ನು ನಿರ್ಮೂಲನೆ ಮಾಡಬೇಕಿದೆ ಎಂದು ಮೋದಿ ಕರೆ ನೀಡಿದರು.
ಕರ್ನಾಟಕದ ಸಂಪರ್ಕ ವ್ಯವಸ್ಥೆಗೆ ಹೆಚ್ಚಿನ ಪಾಮುಖ್ಯತೆಯನ್ನು ನೀಡಿದ್ದೇವೆ. ಇಂದು ದೇಶದಲ್ಲಿ 45 ಸಾವಿರ ಕೋಟಿ ರೂ. ಮೌಲ್ಯದ ರೈಲ್ವೆ ಕಾಮಾಗಿರಿ ಪ್ರಗತಿಯಲ್ಲಿದೆ ಎಂದು ಮೋದಿ ಹೇಳಿದರು.
ಬಜೆಟ್ನಲ್ಲಿ ಕಬ್ಬು ಬೆಳೆಗಾರರಿಗೆ ವಿಶೇಷ ಯೋಜನೆ ಘೋಷಿಸಿದ್ದೇವೆ. ಕಬ್ಬು ಬೆಳೆಗಾರರಿಗೆ ಅನುಕೂಲವಾಗುವಂಥ ಯೋಜನೆ ಜಾರಿಗೊಳಿಸಿದ್ದೇವೆ. ಕಬ್ಬು ಬೆಳೆಯಿಂದ ಎಥೆನಾಲ್ ಉತ್ಪಾದನೆಗೂ ಹೆಚ್ಚು ಒತ್ತು ನೀಡುತ್ತಿದ್ದೇವೆ ಎಂದು ಮೋದಿ ಹೇಳಿದರು.
ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರನ್ನು ರೈತ ಬಂಧು ಎಂದು ಮೋದಿ ಬಣ್ಣಿಸಿದರು. ಈ ವೇಳೆ ಕಾರ್ಯಕರ್ತರ ಹರ್ಷೋದ್ಘಾರ ಮುಗಿಲುಮುಟ್ಟಿತು. ಬಿಎಸ್ವೈ ಅವರ ಸಹಕಾರ ಸಿರಿಧಾನ್ಯ ಯೋಜನೆಯಲ್ಲಿ ಬಹಳಷ್ಟಿದೆ ಎಂದ ಮೋದಿ ಶ್ರೀಅನ್ನದ ಬಗ್ಗೆಯೂ ಉಲ್ಲೇಖಿಸಿದರು. ಶ್ರೀ ಅನ್ನ ಯೋಜನೆಗಾಗಿ ಯಡಿಯೂರಪ್ಪಅಭಿಯಾನ ಮಾಡಿದ್ದರು ಎಂದು ಅವರು ಹೇಳಿದರು.
ಭಾರತದ ಭವಿಷ್ಯದ ದೃಷ್ಟಿಯಿಂದ ಕೃಷಿ ಕ್ಷೇತ್ರಕ್ಕೆ ಹೆಚ್ಚು ಒತ್ತು ನೀಡಿದ್ದೇವೆ. ಬಜೆಟ್ನಲ್ಲಿ ಕೃಷಿ ಕ್ಷೇತ್ರಕ್ಕೆ 1 ಲಕ್ಷ ಕೋಟಿಗೂ ಹೆಚ್ಚು ಅನುದಾನ ಮೀಸಲಿಡಲಾಗಿದೆ. ರೈತರಿಗಾಗಿ ಪಿಎಂ ಪ್ರಮಾಣ್ ಸೇರಿದಂತೆ ಅನೇಕ ಯೋಜನೆಗಳನ್ನು ಪ್ರಕಟಿಸಿದ್ದೇವೆ.
ಕಾಂಗ್ರೆಸ್ ಸರ್ಕಾರ ಇದ್ದಾಗ ಕೋಟಿ ಹಣ ಬಿಡುಗಡೆ ಮಾಡಿದ್ರೆ ಪೂರ್ಣವಾಗಿ ಯಾರ ಕೈಗೂ ತಲುಪುತ್ತಿರಲಿಲ್ಲ. ದಶಕದ ವರೆಗೂ ರೈತರನ್ನು ಕಡೆಗಣಿಸಿದ್ದರು. ಪಿಎಂ ಕಿಸಾನ್ ಯೋಜನೆಯಿಂದ ರೈತರ ಖಾತೆಗಳಿಗೆ ನೇರವಾಗಿ ಹಣ ಜಮಾವಣೆಯಾಗಿದೆ. 50 ಸಾವಿರ ಕೋಟಿಗೂ ಹೆಚ್ಚು ಹಣ ಮಹಿಳಾ ರೈತರ ಖಾತೆಗೆ ಜಮೆಯಾಗಿದೆ ಎಂದು ಮೋದಿ ಹೇಳಿದರು.
ಭಾರತದ ನವ ನಿರ್ಮಾಣದಲ್ಲಿ ಬೆಳಗಾವಿಯ ಪಾತ್ರ ಸಾಕಷ್ಟಿದೆ. 100 ವರ್ಷಗಳಿಗೂ ಮೊದಲೇ ಇಲ್ಲಿ ಸ್ಟಾರ್ಟಪ್ ಆರಂಭಗೊಂಡಿತ್ತು. ಬಾಬುರಾವ್ ಅವರು ಇಲ್ಲಿ ಸಣ್ಣದಾದ ಘಟಕವೊಂದನ್ನು ಸ್ಥಾಪಿಸಿದ್ದರು. ಈಗ ಬೆಳಗಾವಿಯ ಅಭಿವೃದ್ಧಿಗೆ ಹೊಸ ಗತಿ ಸಿಗಲಿದೆ ಎಂದು ಮೋದಿ ಹೇಳಿದರು.
ಬೆಳಗಾವಿಯ ಈ ಭೂಮಿಯಲ್ಲಿ ಡಬಲ್ ಎಂಜಿನ್ ಸರ್ಕಾರ ಅನೇಕ ಅಭಿವೃದ್ಧಿ ಕಾರ್ಯಕಗಳನ್ನು ಕೈಗೊಂಡಿದೆ. ಇಂದು ಚಾಲನೆ ನೀಡಿದ ಯೋಜನೆಗಳು ಬೆಳಗಾವಿಯ ಇತಿಹಾಸದಲ್ಲಿ ಹೊಸ ಅಧ್ಯಾಯ ಆರಂಭಿಸಲಿವೆ. ಹಿಂದೂಸ್ತಾನದ ಎಲ್ಲ ರೈತರನ್ನು ಇಂದು ಬೆಳಗಾವಿ ಜತೆ ಬಾಂಧವ್ಯ ಹೊಂದುವಂತೆ ಮಾಡಲಾಗಿದೆ. ದೇಶದ ಎಲ್ಲ ರೈತರ ಖಾತೆಗಳಿಗೆ ಒಂದು ಕ್ಲಿಕ್ ಮೂಲಕ ಹಣ ವರ್ಗಾವಣೆ ಆಗಿದೆ. ಮಧ್ಯವರ್ತಿಗಳ ಕಾಟ ಇಲ್ಲದೇ ನೇರವಾಗಿ ರೈತರ ಖಾತೆಗೆ ಜಮೆ ಮಾಡಲಾಗಿದೆ. ಇಂದು ಬದಲಾಗುತ್ತಿರುವ ಭಾರತದಲ್ಲಿ ಒಂದಾದ ಮೇಲೊಂದರಂತೆ ಅಭಿವೃದ್ಧಿಯಾಗುತ್ತಿದೆ.
ನಮ್ಮ ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಮಂತ್ರದ ಸ್ಫೂರ್ತಿಯಾದ ಭಗವಾನ್ ಬಸವೇಶ್ವರ ಅವರಿಗೆ ನಮಸ್ಕಾರಗಳು. ಬೆಳಗಾವಿಯ ಜನರ ಪ್ರೀತಿ ಮರೆಯಲಾರದು. ಬೆಳಗಾವಿಯ ನನ್ನ ಬಂಧು ಭಗಿನಿಯರಿಗೆ ನಮಸ್ಕಾರಗಳು ಎಂದು ಕನ್ನಡದಲ್ಲೇ ಮಾತು ಆರಂಭಿಸಿದ ಮೋದಿ, ಬೆಳಗಾವಿಗೆ ಭೇಟಿ ನೀಡುವುದೆಂದರೆ ಯಾವ ತೀರ್ಥಯಾತ್ರೆಗೂ ಕಡಿಮೆಯಲ್ಲ. ಇದು ಕಿತ್ತೂರು ರಾಣಿ ಚೆನ್ನಮ್ಮ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣರ ನಾಡು ಎಂದು ಹೇಳಿದರು.
ಒಟ್ಟು 2,250 ಕೋಟಿ ವೆಚ್ಚದ ಯೋಜನೆಗೆ ಮೋದಿ ಚಾಲನೆ ನೀಡಿದರು. 190 ಕೋಟಿ ರೂ. ವೆಚ್ಚದಲ್ಲಿ ನವೀಕರಣಗೊಂಡ ರೈಲು ನಿಲ್ದಾಣ ಉದ್ಘಾಟನೆ ಮಾಡಿದರು. ಜತೆಗೆ, ಘಟಪ್ರಭಾ-ಬೆಳಗಾವಿ-ಲೋಂಡಾ ಡಬಲ್ ಲೈನ್ ಮಾರ್ಗಕ್ಕೆ ಚಾಲನೆ ನೀಡಿದರು. 1,120 ಕೋಟಿ ರೂ. ವೆಚ್ಚದ ಜಲಜೀವನ್ ಮಿಷನ್ ಯೋಜನೆಗೂ ಚಾಲನೆ ನೀಡಿದರು. 1,132 ಕೋಟಿ ರೂ. ವೆಚ್ಚದ ಕುಡಿಯುವ ನೀರಿನ ಯೋಜನೆಗೆ ಶಂಕುಸ್ಥಾಪನೆ ಮಾಡಿದರು. ಬೆಳಗಾವಿ-ಧಾರವಾಡ ರೈಲು ಮಾರ್ಗದ ಕಾಮಗಾರಿಗೂ ಚಾಲನೆ ನೀಡಿದರು.
ಪಿಎಂ ಕಿಸಾನ್ ಯೋಜನೆಯ 13ನೇ ಕಂತಿನ ಹಣವನ್ನು ಪ್ರಧಾನಿ ನರೇಂದ್ರ ಮೋದಿ ಬೆಳಗಾವಿಯ ಮಾಲಿನಿ ಸಿಟಿಯಲ್ಲಿ ಆಯೋಜಿಸಿರುವ ಸಮಾವೇಶದಲ್ಲಿ ಬಿಡುಗಡೆ ಮಾಡಿದರು. ಇದರೊಂದಿಗೆ ಸುಮಾರು 16,000 ಕೋಟಿ ರೂ. ಮೊತ್ತ ರೈತರ ಖಾತೆಗಳಿಗೆ ಜಮೆಯಾಗಿದೆ. ಕರ್ನಾಟಕದ 49 ಲಕ್ಷ ರೈತರಿಗೆ ಇದರಿಂದ ಪ್ರಯೋಜನವಾಗಿದೆ.
ಬೆಳಗಾವಿಯಲ್ಲಿ ಇಂದು ಹೊಸ ದಾಖಲೆ ನಿರ್ಮಾಣವಾಗಿದೆ. ಪ್ರಧಾನಿ ಮೋದಿಗೆ ನೀವು ಕೊಟ್ಟ ಪ್ರೀತಿ, ವಿಶ್ವಾಸ ಅವಿಸ್ಮರಣೀಯವಾದದ್ದು. ಬೆಳಗಾವಿಯಲ್ಲಿ ಇಂಥದ್ದೊಂದು ಸಮಾವೇಶ ಹಿಂದೆ ಎಂದೂ ನಡೆದಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಹಿಂದಿನ ಸರ್ಕಾರಗಳಲ್ಲಿ ಅಸಾಧ್ಯವಾಗಿರುವುದನ್ನು ಮೋದಿ ಮಾಡಿದ್ದಾರೆ. ಅಸಾಧ್ಯವಾಗಿರುವುದನ್ನು ಸಾಧ್ಯವಾಗಿ ತೋರಿಸಿ ಕೊಟ್ಟಿದ್ದಾರೆ. ಭಾರತದ ಭಗೀರಥ ಪ್ರಧಾನಿ ಮೋದಿ ಎಂದು ಸಿಎಂ ಬೊಮ್ಮಾಯಿ ಬಣ್ಣಿಸಿದ್ದಾರೆ.
ಬೆಳಗಾವಿಯ ಮಾಲಿನಿ ಸಿಟಿಯಲ್ಲಿ ನಡೆಯುತ್ತಿರುವ ಬೃಹತ್ ಸಮಾವೇಶದಲ್ಲಿ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಕೂಡ ಭಾಗವಹಿಸಿದ್ದಾರೆ. ಸಮಾವೇಶದಲ್ಲಿ ಮಾತನಾಡಿದ ಅವರು, ಪಿಎಂ ಕಿಸಾನ್ ಸಮ್ಮಾನ್ ಹಣ ಮೋದಿ ಬಿಡುಗಡೆ ಮಾಡಲಿದ್ದಾರೆ. ಪ್ರಧಾನಿ ಮೋದಿಯವರಿಗೆ ಹೃದಯಪೂರ್ವಕವಾಗಿ ಸ್ವಾಗತಿಸುತ್ತೇನೆ. ಇಂತಹ ದೊಡ್ಡ ಯೋಜನೆ ವಿಶ್ವದ ಬೇರೆ ಯಾವುದೇ ದೇಶದಲ್ಲಿ ಇಲ್ಲ ಎಂದು ಹೇಳಿದರು.
ರೋಡ್ ಶೋದಲ್ಲಿ ಭಾಗಿಯಾದ ಪ್ರಧಾನಿ ಮೋದಿ ಮಾಲಿನಿ ಸಿಟಿಯಲ್ಲಿನ ಸಮಾವೇಶ ವೇದಿಕೆಗೆ ಆಗಮಿಸಿದರು. ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಗೆ ಏಲಕ್ಕಿ ಹಾರ ಹಾಕಿ, ಪೇಟ ತೊಡಿಸಿ, ಸವದತ್ತಿ ಯಲ್ಲಮ್ಮ ಭಾವಚಿತ್ರ ನೀಡಿ ಗೌರವ ಸಲ್ಲಿಸಲಾಯಿತು.
ಕಾಂಗ್ರೆಸ್ ನವರಿಗೆ ಬಹುಶಃ ಡಿಕೆಶಿ, ಸಿದ್ದರಾಮಯ್ಯ ನಡುವಿನ ಜಗಳ ನಿಲ್ಲಿಸುವುದಕ್ಕೆ ಆಗುತ್ತಿಲ್ಲ. ಆದರೆ ಮೋದಿಯವರು ಎರಡು ದೇಶಗಳ ನಡುವಿನ ಯುದ್ಧ ನಿಲ್ಲಿಸಿದ್ದಾರೆ. 2024ಕ್ಕೆ ಮತ್ತೆ ಪ್ರಧಾನಿಯಾಗಲು ಮೋದಿ ಕೈ ಬಲಪಡಿಸಬೇಕು. ಮುಂದಿನ ಚುನಾವಣೆಯಲ್ಲಿ ಬೊಮ್ಮಾಯಿ ಅವರ ಕೈ ಬಲಪಡಿಸೋಣ. ಈ ಮೂಲಕ ಮೋದಿಯವರ ಕೈ ಬಲಪಡಿಸೋಣ ಎಂದು ಲಕ್ಷ್ಮಣ ಸವದಿ ಮನವಿ ಮಾಡಿದ್ದಾರೆ.
ಭಾರತ ವಿಶ್ವದ ಹಿರಿಯಣ್ಣ ಆಗುವ ಕಾಲ ದೂರವಿಲ್ಲ. ಇಡೀ ಜಗತ್ತೇ ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತಕ್ಕೆ ತಲೆದೂಗಿದೆ. ಒಂದು ಕಾಲವಿತ್ತು, ಭಾರತದ ಪ್ರಧಾನಿ ಬೇರೆ ದೇಶಕ್ಕೆ ಹೋದರೆ ಸಾಲ ಕೇಳೋಕೆ ಬಂದಿದ್ದಾರೆ ಅಂತ ಭಾವಿಸುತ್ತಿದ್ದರು. ಆದರೆ, ಈಗ ನಮ್ಮ ಪ್ರಧಾನಿ ಬಳಿ ಬಂದು ನಮ್ಮ ದೇಶದಲ್ಲಿ ಹೂಡಿಕೆಗೆ ಅವಕಾಶ ಕೇಳುತ್ತಿದ್ದಾರೆ ಎಂದು ಗೋವಿಂದ ಕಾರಜೋಳ ಹೇಳಿದ್ದಾರೆ.
ಬೆಳಗಾವಿಯಲ್ಲಿ ರೋಡ್ ಶೋದಲ್ಲಿ ಭಾಗಿಯಾಗಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹಾದಿಯುದ್ದಕ್ಕೂ ಹೂಮಳೆಯ ಸ್ವಾಗತ ದೊರೆತಿದೆ. ರಸ್ತೆಯ ಇಕ್ಕೆಲಗಳಲ್ಲಿ ನಿಂತಿರುವ ಜನರು ಪ್ರಧಾನಿ ಮೇಲೆ ಹೂಮಳೆಗರೆಯುತ್ತಿದ್ದಾರೆ.
ಪ್ರಧಾನಿ ಮೋದಿಯವರು ವೈಯಕ್ತಿಕ ಜೀವನ ಬದಿಗಿಟ್ಟು ದೇಶಕ್ಕಾಗಿ ಕೆಲಸ ಮಾಡುತ್ತಿದ್ದಾರೆ. ಇದು ನಮ್ಮ ಸೌಭಾಗ್ಯ. ರೈತರಿಗೆ ಈಗ ಸಮ್ಮಾನ್ ಆಗುತ್ತಿದೆ. ರೈತರ ಬೆಳೆಗೆ ಡಬಲ್ ಲಾಭ ಸಿಗುತ್ತಿದೆ ಎಂದು ಶಶಿಕಲಾ ಜೊಲ್ಲೆ ಮೋದಿಯವರನ್ನು ಹಾಡಿಹೊಗಳಿದರು.
ಬೆಳಗಾವಿಯಲ್ಲಿ ಪ್ರಧಾನಿ ಮೋದಿ ಕಾರ್ಯಕ್ರಮದ ವೇದಿಕೆ ಮುಂಭಾಗ ಕುಳಿತುಕೊಳ್ಳುವ ವಿಚಾರಕ್ಕೆ ಕಾರ್ಯಕರ್ತರು ಕೈ ಕೈ ಮಿಲಾಯಿಸಿದ್ದಾರೆ. ಹೊಡೆದಾಟದ ವಿಡಿಯೋ ಚಿತ್ರೀಕರಣ ಮಾಡಿದ ವಾಹಿನಿ ಛಾಯಾಗ್ರಾಹಕನ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ. ಇದಕ್ಕೆ ಛಾಯಾಗ್ರಾಹಕರು ವರದಿಗಾರರಿಂದ ವಿರೋಧ ವ್ಯಕ್ತವಾಗಿದ್ದು, ನಂತರ ಬಿಜೆಪಿ ಮುಖಂಡರು ಕ್ಷಮೆ ಕೋರಿದ್ದಾರೆ.
ಬೆಳಗಾವಿಯಲ್ಲಿ ವೈಭವದ ರೋಡ್ ಶೋ ನಡೆಸಿದ ಪ್ರಧಾನಮಂತ್ರಿ ನರೇಂದ್ರ ಮೋದಿ, ನಗರದ ಮಾಲಿನಿ ಸಿಟಿಯಲ್ಲಿ ನಡೆಯುತ್ತಿರುವ ಬೃಹತ್ ಸಮಾವೇಶಕ್ಕೆ ಆಗಮಿಸಿದ್ದಾರೆ.
ಬೆಳಗಾವಿಯಲ್ಲಿ ಕೆಲವೇ ಕ್ಷಣಗಳಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ರೋಡ್ಶೋ ನಡೆಸಲಿದ್ದಾರೆ. ಕಿತ್ತೂರು ರಾಣಿ ಚೆನ್ನಮ್ಮ ರೋಡ್ಶೋ ಆರಂಭವಾಗಲಿದ್ದು, ಪೊಲೀಸ್ ಬಿಗಿ ಬಂದೋಬಸ್ತ್ನಲ್ಲಿ ಪ್ರಧಾನಿ ಮೋದಿ ರೋಡ್ಶೋ ನಡೆಸಲಿದ್ದಾರೆ. ಚೆನ್ನಮ್ಮ ವೃತ್ತದಿಂದ 10.7 ಕಿ.ಮೀ. ರೋಡ್ಶೋ ನಡೆಯಲಿದೆ. ಕಾಲೇಜು ಮಾರ್ಗವಾಗಿ ಸಂಭಾಜಿ ವೃತ್ತ, ಕಿರ್ಲೋಸ್ಕರ್ ರಸ್ತೆ, ಶನಿ ಮಂದಿರ, ಕಪಿಲೇಶ್ವರ ದೇವಸ್ಥಾನ ರಸ್ತೆ, ಶಿವಾಜಿ ಗಾರ್ಡನ್, ಓಲ್ಡ್ ಪಿಬಿ ರೋಡ್ ಮಾರ್ಗವಾಗಿ ಪ್ರಧಾನಿ ಮಾಲಿನಿ ಸಿಟಿ ತಲುಪಲಿದ್ದಾರೆ.
ಬೆಳಗಾವಿಯ ಕೆಎಸ್‌ಆರ್‌ಪಿ ಮೈದಾನಕ್ಕೆ ಪ್ರಧಾನಿ ಮೋದಿ ಆಗಮಿಸಿದರು. ಭಾರತೀಯ ವಾಯುಸೇನೆ ಹೆಲಿಕಾಪ್ಟರ್ನಲ್ಲಿ ಸಾಂಬ್ರಾ ಏರ್ಪೋರ್ಟ್ನಿಂದ ಪ್ರಧಾನಿ ಮೋದಿ ಆಗಮಿಸಿದರು.
ಬೆಳಗಾವಿ ಸಾಂಬ್ರಾ ಏರ್‌ಪೋರ್ಟ್‌ಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಎಡಿಜಿಪಿ ಅಲೋಕ್ ಕುಮಾರ್, ಬೆಳಗಾವಿ ಪ್ರಾದೇಶಿಕ ಆಯುಕ್ತ ಎಂ.ಜಿ.ಹಿರೇಮಠ, ಸಂಜಯ್ ಪಾಟೀಲ್ ಸ್ವಾಗತಿಸಿದರು. ಶಿವಮೊಗ್ಗದಿಂದ ವಾಯುಪಡೆ ವಿಮಾನದಲ್ಲಿ ಆಗಮಿಸಿದ ಮೋದಿ ಇದೀಗ ಬೆಳಗಾವಿಯ ಕೆಎಸ್‌ಆರ್‌ಪಿ ಮೈದಾನಕ್ಕೆ ತೆರಳಿದ್ದಾರೆ.
ಶಿವಮೊಗ್ಗ ಸಮಾವೇಶದ ವೇದಿಕೆಯಿಂದ ಮೋದಿ ನಿರ್ಗಮಿಸಿದ್ದು ಬೆಳಗಾವಿಯತ್ತ ಪ್ರಯಾಣ ಬೆಳೆಸಿದ್ದಾರೆ.
ಬಿಜೆಪಿ ಸರ್ಕಾರ ಬಡವರ ಪರದ ಸರ್ಕಾರವಾಗಿದೆ. ಬಿಜೆಪಿ ಸರ್ಕಾರ ಬಡವರ ಕಲ್ಯಾಣ ಮಾಡುವ ಸರ್ಕಾರ. ಮಹಿಳೆ, ಮಕ್ಕಳ ಕಲ್ಯಾಣ ಮಾಡುವುದೇ ಬಿಜೆಪಿ ಸರ್ಕಾರದ ಮುಖ್ಯ ಉದ್ದೇಶ. ಅಡಿಕೆ ಮನೆಯಲ್ಲಿ ಗ್ಯಾಸ್ ಇಲ್ಲದಿರುವುದು, ನೀರಿನ ಸಮಸ್ಯೆ ನಮ್ಮ ಅಕ್ಕ-ತಂಗಿಯರಿಗೆ ಬಹಳ ತೊಂದರೆಯಾಗುತ್ತಿತ್ತು. ನಾವೀಗ ಈ ಸಮಸ್ಯೆಯನ್ನು ದೂರ ಮಾಡುತ್ತಿದ್ದೇವೆ. ಬಿಜೆಪಿ ಸರ್ಕಾರ ಪ್ರತಿ ಮನೆಗೂ ಶುದ್ಧ ಕುಡಿಯುವ ನೀರಿನ ಸೌಲಭ್ಯ ನೀಡಿದೆ. ಸ್ವತಂತ್ರ್ಯ ನಂತರದ ಭಾರತದಲ್ಲಿ ಇದೇ ಮೊದಲ ಬಾರಿಗೆ ಈ ರೀತಿಯ ಗಳಿಗೆ ಬಂದಿದೆ. ಇಡೀ ಜಗತ್ತಿನಲ್ಲಿ ಭಾರತ ಸದ್ದು ಮಾಡುತ್ತಿದೆ. ಎಲ್ಲರೂ ಭಾರತಕ್ಕೆ ಬರಲು ಉತ್ಸಾಹಕರಾಗಿದ್ದಾರೆ. ಇದರಿಂದ ಯುವಕರಿಗೆ ಅನೇಕ ಅವಕಾಶಗಳು ಸಿಗಲಿವೆ. ಕರ್ನಾಟಕದ ಈ ವಿಕಾಸ ಇನ್ನಷ್ಟು ವೇಗ ಪಡೆಯಲಿದೆ. ನಾವೆಲ್ಲಾ ಒಟ್ಟಿಗೆ ಮುನ್ನುಗ್ಗಬೇಕಿದೆ. ನಾವೆಲ್ಲ ಒಟ್ಟಿಗೆ ಸಾಗಬೇಕಿದೆ. ಕರ್ನಾಟಕ ಜನರ, ಶಿವಮೊಗ್ಗ ಜನರ ಕನಸು ನನಸು ಮಾಡಬೇಕಿದೆ ಎನ್ನುವ ಮೂಲಕ ಮೋದಿ ಅವರು ತಮ್ಮ ಭಾಷಣ ಮುಗಿಸಿದರು.
ಶಿವಮೊಗ್ಗ ಪಶ್ಚಿಮ ಘಟ್ಟದಲ್ಲಿ ಬರುವ ಮಲೆನಾಡಿನ ಹೆಬ್ಬಾಗಿಲು. ಇಲ್ಲಿ ನದಿ, ವನ್ಯ ಸಂಪತ್ತು ಅದ್ಭುತವಾಗಿದೆ. ಇಲ್ಲಿ ಜೋಗ್ ಜಲಪಾತ, ಆನೆಗಳ ಬಿಡಾರವೂ ಇದೆ. ಆಗುಂಬೆಯ ಸೂರ್ಯಾಸ್ತ ಯಾರು ಮರೆಯೋದಕ್ಕೆ ಸಾಧ್ಯವಿಲ್ಲ. ಗಂಗಾ ಸ್ನಾನ, ತುಂಗಾ ಪಾನ ಎಂದು ಉಕ್ತಿಯೇ ಇದೆ. ಸಿಗಂದೂರು ಚೌಡೇಶ್ವರಿ, ಕೋಟೆ ಆಂಜನೇಯ ದೇವಸ್ಥಾನವಿದೆ. ಇಲ್ಲಿಗೆ ವಿಮಾನ ಪ್ರಯಾಣದ ಸಂಪರ್ಕ ಅವಶ್ಯಕವಾಗಿದೆ. ಶಿವಮೊಗ್ಗ ವಿಮಾನ ನಿಲ್ದಾಣದಿಂದ ಅಭಿವೃದ್ಧಿ ಆಗಲಿದೆ. ಶಿವಮೊಗ್ಗ-ಶಿಕಾರಿಪುರ-ರಾಣೆಬೆನ್ನೂರು ಹೊಸ ರೈಲು ಮಾರ್ಗ ನಿರ್ಮಾಣವಾದ್ರೆ ಸಾಕಷ್ಟು ಲಾಭವಾಗಲಿದೆ. ಹಾವೇರಿವರೆಗೂ ಜನರಿಗೆ ಸಂಪರ್ಕ ಸಾಧ್ಯವಾಗುತ್ತದೆ.
ಕರ್ನಾಟಕದ ಅಭಿವೃದ್ಧಿ, ಅಭಿವೃದ್ಧಿ ರಥದ ಪಥದಲ್ಲಿ ಸಾಗುತ್ತಿದೆ. ಡಬಲ್ ಇಂಜಿನ್ ಸರ್ಕಾರದಿಂದ ಅಭಿವೃದ್ಧಿಯ ರಥ ಸಾಗುತ್ತಿದೆ. ವಿಮಾನಯಾನ ಕ್ಷೇತ್ರದಲ್ಲಿ ಭಾರತ ಸಾಕಷ್ಟು ಅಭಿವೃದ್ಧಿ ಹೊಂದಿದೆ. 2014ರಕ್ಕಿಂತ ಮೊದಲು ಕೇವಲ ದೊಡ್ಡ ನಗರಗಳಿಗೆ ಮಾತ್ರ ವಿಮಾನ ನಿಲ್ದಾಣ ಸೀಮಿತವಾಗಿತ್ತು. ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಸಣ್ಣಪುಟ್ಟ ನಗರಗಳಲ್ಲಿಯೂ ಏರ್ಪೋರ್ಟ್ ಮಾಡಲಾಗುತ್ತಿದೆ. ಬಿಜೆಪಿ ಸರ್ಕಾರ ಬಡವರ ಕಲ್ಯಾಣಕ್ಕಾಗಿ ಶ್ರಮಿಸುತ್ತಿದೆ. ಬಡವನು ಕೂಡ ವಿಮಾನಯಾನ ಮಾಡುವಂತಾಗಬೇಕು. ಹೀಗಾಗಿ ಕಡಿಮೆ ಮೆಚ್ಚದಲ್ಲಿ ಟಿಕೆಟ್ ಮಾಡಲಾಗುತ್ತಿದೆ ಎಂದು ಮೋದಿ ತಮ್ಮ ಭಾಷಣದಲ್ಲಿ ಹೇಳಿದರು.
ವೇದಿಕೆ ಮೇಲೆ ಭಾಷಣದ ಮೇಲೆ ನರೇಂದ್ರ ಮೋದಿಯವರು ನೆರದಿದ್ದ ಜನರಿಗೆ ತಮ್ಮ ಮೊಬೈಲ್ ಟಾರ್ಚ್ ಆನ್ ಮಾಡಿ ಬಿಎಸ್ ಯಡಿಯೂರಪ್ಪನವರಿಗೆ ಹುಟ್ಟು ಹಬ್ಬದ ಶುಭಾಶಯ ತಿಳಿಸಲು ಹೇಳಿದರು. ಈ ವೇಳೆ ಅವರು ಬಿಎಸ್ ಯಡಿಯೂರಪ್ಪನವರನ್ನು ಹೊಗಳಿದ್ದಾರೆ. ಇಂದು ಯಡಿಯೂರಪ್ಪ ಅವರ ಜನ್ಮದಿನವಾಗಿದೆ. ಬಿಎಸ್ವೈ ವಿಧಾನಸಭೆಯಲ್ಲಿ ಭಾಷಣ ಮಾಡಿದ್ರು.
ಇದು ಎಲ್ಲರಿಗೂ ಪ್ರೇರಣೆ ನೀಡುವಂಥದ್ದಾಗಿದ್ದೆ. 50 ವರ್ಷಗಳಿಂದ ಯಡಿಯೂರಪ್ಪನವರು ಜನಸೇವೆಯಲ್ಲಿದ್ದಾರೆ. ಕರ್ನಾಟಕದ ಅಭಿವೃದ್ಧಿ ರಥದಲ್ಲಿ ಅಭಿವೃದ್ಧಿ ಪಥವಿದೆ. ಡಬಲ್ ಇಂಜಿನ್ ಸರ್ಕಾರದಿಂದ ಅಭಿವೃದ್ಧಿಯ ರಥ ಸಾಗುತ್ತಿದೆ. ವಿಮಾನಯಾನ ಕ್ಷೇತ್ರದಲ್ಲಿ ಭಾರತ ಸಾಕಷ್ಟು ಅಭಿವೃದ್ಧಿ ಹೊಂದಿದೆ ಎಂದರು.
ವಿಮಾನ ನಿಲ್ದಾಣ ಉದ್ಘಾಟಿಸಿ ಕನ್ನಡದಲ್ಲೇ ಪ್ರಧಾನಿ ನರೇಂದ್ರ ಮೋದಿ ಭಾಷಣ ಆರಂಭಿಸಿದ್ದಾರೆ. ಕರ್ನಾಟಕದ ಎಲ್ಲಾ ಸಹೋದರ, ಸಹೋದರಿಯರಿಗೆ ನನ್ನ ನಮಸ್ಕಾರ. ಸಿರಿಗನ್ನಡಂ ಗೆಲ್ಗೆ ಸಿಗನ್ನಡಂ ಬಾಳ್ಗೆ ಎಂದು ರಾಷ್ಟ್ರಕವಿ ಕುವೆಂಪು ಅವರನ್ನು ಪ್ರಧಾನಿ ನರೇಂದ್ರ ಮೋದಿ ಸ್ಮರಿಸಿದರು. ಶಿವಮೊಗ್ಗದಿಂದ ನಾನು ಬೆಳಗಾವಿಗೆ ಹೋಗಬೇಕಿದೆ. ಶಿವಮೊಗ್ಗದ ಬಹುದಿನದ ಬೇಡಿಕೆ ಈಗ ಈಡೇರಿದೆ. ಶಿವಮೊಗ್ಗಕ್ಕೆ ವಿಮಾನ ನಿಲ್ದಾಣದ ದೊರೆತಿದೆ. ಇಂದು ಸಾಕಷ್ಟು ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಿದ್ದೇನೆ ಎಂದರು.
ಶಿವಮೊಗ್ಗದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಪ್ರಧಾನಿ ಮೋದಿ ಚಾಲನೆ ನೀಡಿದ್ದಾರೆ. ಸ್ಮಾರ್ಟ್ಸಿಟಿ ಕಾಮಗಾರಿ, ಶಿಮುಲ್ ಹಾಲು ಪ್ಯಾಕಿಂಗ್ ಘಟಕ, ಮಾಮ್ ಕೋಸ್ ಆಡಳಿತ ಭವನ, ಶಿಮೊಗ್ಗ-ಶಿಕಾರಿಪುರ, ರಾಣೆಬೆನ್ನೂರು ಹೊಸ ರೈಲು ಮಾರ್ಗಕ್ಕೆ ಚಾಲನೆ ಹಾಗೂ ಕೋಟೆಗಂಗೂರು ರೈಲ್ವೆ ಕೋಚಿಂಗ್ ಡಿಪೋಗೆ ಶಿಲಾನ್ಯಾಸ ಮಾಡಿದರು. ಜಲಜೀವನ್ ಮಿಷನ್ ಕಾಮಗಾರಿ ಉದ್ಘಾಟಿಸಿದರು.
Prime Minister Narendra Modi inaugurates Shivamogga Airport in Karnataka. pic.twitter.com/3fkDgwAN7c
— ANI (@ANI) February 27, 2023
ಶಿವಮೊಗ್ಗದಲ್ಲಿ ನೂತನ ಏರ್ಪೋರ್ಟ್ ಉದ್ಘಾಟನಾ ಸಮಾರಂಭ ಸಮಾವೇಶದಲ್ಲಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಭಾಷಣ ಮಾಡಿದ್ದು ನರೇಂದ್ರ ಮೋದಿ ಅವರನ್ನು ಹಾಡಿ ಹೊಗಳಿದ್ದಾರೆ. ಇಡೀ ವಿಶ್ವವೇ ಮೆಚ್ಚಿರುವ ಆದರ್ಶ ನಾಯಕ ಪ್ರಧಾನಿ ಮೋದಿ. ಇವರು ಶಿವಮೊಗ್ಗ ಏರ್ಪೋರ್ಟ್ ಉದ್ಘಾಟಿಸಿರುವುದು ಸಂತಸ ತಂದಿದೆ. ಕೊಟ್ಟ ಮಾತಿನಂತೆ ಏರ್ಪೋರ್ಟ್ ನಿರ್ಮಾಣ ಮಾಡಿ ಉದ್ಘಾಟನೆ ಮಾಡಿದ್ದಾರೆ. ಈ ದಿನ ಬಹಳ ವೈಶಿಷ್ಟ್ಯಪೂರ್ಣವಾದದ್ದು ಮಲೆನಾಡು ಭಾಗದ ಜನರ ಕನಸು ನನಸಾಗುತ್ತಿರುವ ಶುಭ ಸಂಕೇತ. ಮೋದಿ ಆಶೀರ್ವಾದದಿಂದ ನಾಡಿನ ಜನರ ಸೇವೆ ಮಾಡಲು ಅವಕಾಶ ಸಿಕ್ಕಿದೆ. ಇಂತಹ ಅವಕಾಶ ನನಗೆ ಸಿಕ್ಕಿದ್ದಕ್ಕೆ ಜನರಿಗೆ ನಾನು ಋಣಿಯಾಗಿದ್ದೇನೆ. ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು ಮಾತಿನಂತೆ ಕೆಲಸ ಮಾಡಿದ್ದೇನೆ. ಸಾಮಾಜಿಕ ನ್ಯಾಯವನ್ನು ಎಲ್ಲರಿಗೂ ಒದಗಿಸಿಕೊಟ್ಟಿದ್ದೇನೆ. ಮೋದಿ ನೇತೃತ್ವದಲ್ಲಿ ಡಬಲ್ ಇಂಜಿನ್ ಸರ್ಕಾರದಿಂದ ಸಾಕಷ್ಟು ಅಭಿವೃದ್ಧಿಯಾಗಿದೆ ಎಂದರು.
ಶಿವಮೊಗ್ಗದಲ್ಲಿ ನೂತನ ಏರ್ಪೋರ್ಟ್ ಉದ್ಘಾಟನಾ ಸಮಾರಂಭ ಸಮಾವೇಶದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಮ್ಮ ಭಾಷಣದ ವೇಳೆ ನರೇಂದ್ರ ಮೋದಿಯವರನ್ನು ಹೊಗಳಿ ಕೊಂಡಾಡಿದ್ದಾರೆ. ಕರ್ನಾಟಕ ಆರ್ಥಿಕತೆ ಜೊತೆಗೆ ಸಾಮಾಜಿಕವಾಗಿ ಅಭಿವೃದ್ಧಿಯಾಗುತ್ತಿದೆ. ಡಬಲ್ ಇಂಜಿನ್ ಸರ್ಕಾರದಿಂದ ದೇಶ ಅಭಿವೃದ್ಧಿಯತ್ತ ಮುನ್ನುಗುತ್ತಿದೆ ಎಂದರು.
ಶಿವಮೊಗ್ಗ ನೂತನ ಏರ್ಪೋರ್ಟ್ ಉದ್ಘಾಟಿಸಿದ ಪ್ರಧಾನಿ ಮೋದಿ.
Prime Minister Narendra Modi inspects the model of Karnataka's Shivamogga Airport that will be inaugurated by him today. pic.twitter.com/noSnD3ZBaN
— ANI (@ANI) February 27, 2023
ಶಿವಮೊಗ್ಗದಲ್ಲಿ ನೂತನ ಏರ್ಪೋರ್ಟ್ ಉದ್ಘಾಟನಾ ಸಮಾವೇಶದ ವೇದಿಕೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಆಗಮಿಸಿದ್ದಾರೆ. ಸಮಾವೇಶದಲ್ಲಿ ಸಿಎಂ ಬೊಮ್ಮಾಯಿ, ಮಾಜಿ ಸಿಎಂ ಯಡಿಯೂರಪ್ಪ, ಕೇಂದ್ರ ಸಚಿವ ಜೋಶಿ, ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್, ಸಚಿವರಾದ ನಾರಾಯಣಗೌಡ, ಭೈರತಿ ಬಸವರಾಜ್, ಸಿ.ಸಿ.ಪಾಟೀಲ್, ಸಂಸದ ಬಿ.ವೈ.ರಾಘವೇಂದ್ರ ಸೇರಿದಂತೆ ಹಲವು ನಾಯಕರು ಉಪಸ್ಥಿತರಿದ್ದಾರೆ.
ರಾಜ್ಯಕ್ಕೆ ಮೋದಿ ಆಗಮನ ವಿಚಾರಕ್ಕೆ ಸಂಬಂಧಿಸಿ ವಿಪಕ್ಷ ನಾಯಕ ಸಿದ್ದರಾಮಯ್ಯ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಪ್ರವಾಹ, ಜನ ಸತ್ತಾಗ ಬರಲಿಲ್ಲ ಈಗ ಬರಲು ಶುರು ಮಾಡಿದ್ದಾರೆ. ಯಾಕೆಂದರೆ ಬಿಜೆಪಿ ಅವರಿಗೆ ಲೀಡರ್ ಶಿಪ್ ಇಲ್ಲ. ಅದಕ್ಕೆ ಮೋದಿ ಮುಖ ಇಟ್ಟೊಕೊಂಡು ವೋಟ್ ಕೇಳ್ತಾರೆ ಎಂದು ಬಿಜೆಪಿ ನಾಯಕರನ್ನು ಸಿದ್ದರಾಮಯ್ಯ ಕುಟುಕಿದರು.
ಶಿವಮೊಗ್ಗ ನೂತನ ವಿಮಾನ ನಿಲ್ದಾಣ ಉದ್ಘಾಟನೆಗೆ ಕ್ಷಣಗಣನೆ ಶುರುವಾಗಿದ್ದು ಸಮಾವೇಶ ಸ್ಥಳಕ್ಕೆ ಯಡಿಯೂರಪ್ಪ ಕುಟುಂಬಸ್ಥರು ಆಗಮಿಸಿದ್ದಾರೆ. ಯಡಿಯೂರಪ್ಪ, ಪುತ್ರರಾದ ರಾಘವೇಂದ್ರ, ಬಿ.ವೈ.ವಿಜಯೇಂದ್ರ, ಬಿಎಸ್ವೈ ಪುತ್ರಿಯರು, ಸೊಸೆಯಂದಿರು, ಮೊಮ್ಮಕ್ಕಳ ಆಗಮಿಸಿದ್ದಾರೆ. ಬಿಎಸ್ವೈ ಜತೆ ಕೆ.ಎಸ್.ಈಶ್ವರಪ್ಪ, ಪಟ್ಟಾಭಿರಾಮ್ ಕುಳಿತಿದ್ದಾರೆ.
ಕರ್ನಾಟಕ ಪ್ರಗತಿಯ ಪಥದಲ್ಲಿ ಮುನ್ನಡೆಯುತ್ತಿದೆ. ಶಿವಮೊಗ್ಗ ಏರ್ಪೋರ್ಟ್ ಉದ್ಘಾಟನೆ ಒಂದು ಮೈಲಿಗಲ್ಲು ಎಂದು ಶಿವಮೊಗ್ಗದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ. ಯಡಿಯೂರಪ್ಪನವರ ಪರಿಶ್ರಮದಿಂದ ಏರ್ಪೋರ್ಟ್ ಆಗಿದೆ. ಪ್ರಧಾನಿ ಮೋದಿ ಸರ್ಕಾರದಲ್ಲಿ ವಿಮಾನಯಾನ ಕ್ಷೇತ್ರ ಅಭಿವೃದ್ಧಿ ಆಗ್ತಿದೆ. ಉಡಾನ್ ಯೋಜನೆಯಡಿ ವಿಮಾನ ನಿಲ್ದಾಣಗಳ ನಿರ್ಮಾಣ ಮಾಡಲಾಗಿದೆ. ಬಿಎಸ್ವೈ ಪರಿಶ್ರಮಕ್ಕೆ ಸಂದ ಫಲ ಇದು. ಮಲೆನಾಡಿನ ಆರ್ಥಿಕ & ಪ್ರವಾಸೋದ್ಯಮಕ್ಕೆ ಸಹಾಯವಾಗಲಿದೆ. ಯಡಿಯೂರಪ್ಪ ಹುಟ್ಟುಹಬ್ಬದ ದಿನವೇ ಏರ್ಪೋರ್ಟ್ ಉದ್ಘಾಟನೆಯಾಗುತ್ತಿದ್ದುಇದು ಅತ್ಯಂತ ವಿಶೇಷ ಹಾಗೂ ದೈವ ಇಚ್ಛೆ ಎಂದು ಬೊಮ್ಮಾಯಿ ಹೇಳಿದರು.
ಕುಟುಂಬ ಸಮೇತರಾಗಿ ಬಿಎಸ್ ಯಡಿಯೂರಪ್ಪ ನೂತನ ಏರ್ ಪೋರ್ಟ್ ನತ್ತ ತೆರಳಿದ್ದಾರೆ. ಪುತ್ರಿ ಅರುಣಾ ಹಾಗೂ ಕುಟುಂಬಸ್ಥರು ಸಹ ಏರ್ ಪೋರ್ಟ್ ನತ್ತ ಪ್ರಯಾಣ ಬೆಳೆಸಿದ್ದಾರೆ.
ಶಿವಮೊಗ್ಗಕ್ಕೆ ಮೋದಿ ಭೇಟಿ ಹಿನ್ನೆಲೆ ಅಭಿಮಾನಿಗಳಿಗೆ, ಕಾರ್ಯಕರ್ತರಿಗೆ ತಿಂಡಿ ವ್ಯವಸ್ಥೆ ಮಾಡಲಾಗಿದೆ. ಬಿಸಿಬೆಲೆ ಬಾತ್, ಮೈಸೂರ್ ಪಾಕ್, ಕೇಸರಿಬಾತ್ ಸೇರಿದಂತೆ ತಿಂಡಿ ವ್ಯವಸ್ಥೆ ಮಾಡಲಾಗಿದ್ದು ಬೆಳಿಗ್ಗೆ 1 ಲಕ್ಷಕ್ಕೂ ಕ್ಕೂ ಹೆಚ್ಚು ಜನ ಸೇರುವ ನಿರೀಕ್ಷೆ ಇದೆ. ಬೆಳಿಗ್ಗೆ ತಿಂಡಿಗೆ ಎರಡು ಕಡೆ ತಿಂಡಿ ವ್ಯವಸ್ಥೆ ಮಾಡಲಾಗಿದೆ. 300ಕ್ಕೂ ಹೆಚ್ಚು ಕೌಂಟರ್ಗಳ ವ್ಯವಸ್ಥೆ ಮಾಡಲಾಗಿದೆ. ಬಿಎಸ್ವೈ ಅಭಿಮಾನಿಗಳು ಕಾರ್ಯಕರ್ತರಿಗೆ ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡಲಾಗಿದ್ದು ಮಧ್ಯಾಹ್ನ ಊಟಕ್ಕೆ ಪಲಾವ್, ಮೊಸರು ಬಜ್ಜಿ, ಹುಗ್ಗಿ, ಮೊಸೂರನ್ನ, ಮಜ್ಜಿಗೆ ಇರಲಿದೆ.
ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪಗೆ ಹುಟ್ಟುಹಬ್ಬದ ಸಂಭ್ರಮ. ಶಿವಮೊಗ್ಗದ ತಿಲಕನಗರದಲ್ಲಿರುವ ರಾಘವೇಂದ್ರಸ್ವಾಮಿ ಮಠಕ್ಕೆ ಕುಟುಂಬ ಸಮೇತ ಭೇಟಿ ನೀಡಿ ಬಿಎಸ್ ಯಡಿಯೂರಪ್ಪನವರು ವಿಶೇಷ ಪೂಜೆ ಸಲ್ಲಿಸಿದ್ದಾರೆ.
ನನ್ನ ಹುಟ್ಟುಹಬ್ಬದ ವೇಳೆ ಸ್ವತಃ ಮೋದಿ ಆಗಮಿಸುತ್ತಿರುವುದು ವಿಶೇಷ. ರಾಜ್ಯದಲ್ಲಿ ಸಿಎಂ ಬೊಮ್ಮಾಯಿ ಒಳ್ಳೆಯ ಆಡಳಿತ ಕೊಟ್ಟಿದ್ದಾರೆ. ಮತ್ತೊಮ್ಮೆ ರಾಜ್ಯದ ಜನರು ಬಿಜೆಪಿಗೆ ಆಶೀರ್ವಾದ ಮಾಡಬೇಕು ಎಂದು ಶಿವಮೊಗ್ಗದಲ್ಲಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಮನವಿ ಮಾಡಿದರು.
ಇಂದು(ಫೆ.27) ಶಿವಮೊಗ್ಗದಲ್ಲಿ ಮಾತನಾಡಿದ ಯಡಿಯೂರಪ್ಪನವರ ಪುತ್ರಿ ಅರುಣಾದೇವಿ, ಇಡೀ ದೇಶದ್ಯಂತ ಹುಟ್ಟುಹಬ್ಬದ ಶುಭಾಶಯಗಳು ಬರ್ತಿದೆ. ನನ್ನ ಜೀವನ ಹಿಂದಿರುಗಿ ನೋಡಿದಾಗ ತೃಪ್ತಿ ತಂದಿದೆ ಎಂದಿದ್ದಾರೆ. 25 ವರ್ಷನ ಯುವಕನ ಶಿಸ್ತು ಇನ್ನೂ ಅವರಲ್ಲಿದೆ. ಯುವಕರಿಗೆ ಅವಕಾಶ ಕೊಟ್ಟಿದ್ದಾರೆ. ಅವರು ಮೂಲೆಯಲ್ಲಿ ಕೂರುತ್ತಿಲ್ಲ ರಾಜ್ಯಸುತ್ತಿ ಕೆಲಸ ಮಾಡುತ್ತಿದ್ದಾರೆ. ನಮ್ಮ ತಂದೆ ಜೈಲಿಗೆ ಹೋಗಿದ್ದು ಕರಾಳದಿನಗಳು ಅವರ ಖರ್ಚಿ ಅಲ್ಲಾಡಿಸಲು ಎಂತಹ ಕೃತ್ಯಗಳು ಮಾಡಿದ್ದರು. ಅ ಸಂದರ್ಭದಲ್ಲಿ ರಾಜಕೀಯ ಅಸಹ್ಯ ಅನ್ನಿಸಿತ್ತು ಎಂದರು.
ತಂದೆಯ ಹುಟ್ಟುಹಬ್ಬದಂದೇ ಡೈರಿ ಬಾಂಬ್ ಸಿಡಿಸಿದ ಪುತ್ರಿ ಅರುಣಾ ದೇವಿ@BSYBJP @BJP4Karnataka #dairy #arunadevi #politics #Karnataka https://t.co/izIJibvOT4
— TV9 Kannada (@tv9kannada) February 27, 2023
ಶಿವಮೊಗ್ಗದಲ್ಲಿ ಪ್ರಧಾನಿ ಮೋದಿ ಸ್ವಾಗತಿಸಲು ಮುಖ್ಯಮಂತ್ರಿ ಬೊಮ್ಮಾಯಿ ಬೆಂಗಳೂರಿನಿಂದ ಶಿವಮೊಗ್ಗದತ್ತ ಹೊರಟಿದ್ದಾರೆ. HALನಿಂದ ಹೆಲಿಕಾಪ್ಟರ್ ಮೂಲಕ ಪ್ರಯಾಣ ಬೆಳೆಸಿದ್ದಾರೆ.
ಇಡೀ ರಾಜ್ಯಾದ್ಯಂತ ಬಿಎಸ್ವೈ ಹುಟ್ಟುಹಬ್ಬ ಆಚರಿಸುತ್ತಿದ್ದಾರೆ. ಶಿವಮೊಗ್ಗ ಏರ್ಪೋರ್ಟ್ ಲೋಕಾರ್ಪಣೆ ಮರೆಯಲಾಗದ ಕ್ಷಣ ಎಂದು ಶಿವಮೊಗ್ಗದಲ್ಲಿ ರಾಜ್ಯ ಬಿಜೆಪಿ ಉಪಾಧ್ಯಕ್ಷ ವಿಜಯೇಂದ್ರ ತಿಳಿಸಿದರು. ಮೋದಿ ಏರ್ಪೋರ್ಟ್ ಉದ್ಘಾಟನೆ ಮಾಡ್ತಿರೋದು ನಮ್ಮ ಸೌಭಾಗ್ಯ. ಶಿವಮೊಗ್ಗ ಏರ್ಪೋರ್ಟ್ ಯಡಿಯೂರಪ್ಪ ಕನಸು ಎಂದರು.
ಇಂದು 11.30ಕ್ಕೆ ಮೋದಿ ಅವರು ಶಿವಮೊಗ್ಗ ನೂತನ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ. ಶಿವಮೊಗ್ಗ ಟರ್ಮಿನಲ್‌ನ ವೀಕ್ಷಣೆ ಮಾಡಲಿದ್ದಾರೆ. ಬಳಿಕ ವೇದಿಕೆ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಬಿಎಸ್ವೈ ಮನೆಯಿಂದ ನೇರವಾಗಿ ಶಿವಮೊಗ್ಗ ತಿಲಕ ನಗರದಲ್ಲಿರುವ ರಾಘವೇಂದ್ರ ಮಠಕ್ಕೆ ಭೇಟಿ ನೀಡಲಿದ್ದು ರಾಘವೇಂದ್ರ ಸ್ವಾಮಿಗೆ ಕುಟುಂಬ ಸಮೇತ ಪೂಜೆ ಸಲ್ಲಿಸಲಿದ್ದಾರೆ ಎಂದು ಶಿವಮೊಗ್ಗದಲ್ಲಿ ಸಂಸದ ಬಿವೈ ರಾಘವೇಂದ್ರ ತಿಳಿಸಿದ್ದಾರೆ.
ಇಂದು ಶಿವಮೊಗ್ಗ ನಗರಕ್ಕೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಲಿದ್ದು ನೂತನ ಏರ್ಪೋರ್ಟ್ ಉದ್ಘಾಟಿಸಲಿದ್ದಾರೆ. ಶಿವಮೊಗ್ಗ ತಾಲೂಕಿನ ಸೋಗಾನೆ ಗ್ರಾಮದ ಬಳಿ ನೂತನ ಏರ್ಪೋರ್ಟ್ ನಿರ್ಮಾಣಗೊಂಡಿದೆ. 775 ಎಕರೆ ಭೂಮಿಯಲ್ಲಿ 384 ಕೋಟಿ ವೆಚ್ಚದಲ್ಲಿ ವಿಮಾನ ನಿಲ್ದಾಣ ನಿರ್ಮಾಣಗೊಂಡಿದೆ. 2008ರಲ್ಲಿ ಹೊಸ ಏರ್ಪೋರ್ಟ್ ಕಾಮಗಾರಿಗೆ ಚಾಲನೆ ನೀಡಲಾಗಿತ್ತು. 2023ರಲ್ಲಿ ಕಾಮಗಾರಿ ಪೂರ್ಣಗೊಂಡಿದೆ.
ಮೋದಿ ಭೇಟಿ ಹಿನ್ನೆಲೆ ಇಡೀ ಬೆಳಗಾವಿ ಮದುವನಗಿತ್ತಿಯಂತೆ ಸಿಂಗಾರಗೊಂಡಿದೆ. ಬೆಳಗಾವಿಯ ಮುಖ್ಯ ರಸ್ತೆಗಳು ಸಂಪೂರ್ಣ ಕೇಸರಿಮಯವಾಗಿದೆ. ರಸ್ತೆಯೂದ್ದಕ್ಕೂ ಬಿಜೆಪಿ ಬಾವುಟ ಮತ್ತು ಭಗವಾ ದ್ವಜ ರಾರಾಜಿಸುತ್ತಿವೆ. ರಸ್ತೆ ಪಕ್ಕದ ಬ್ಯಾರಿಕೇಡ್ ಗೆ ಮತ್ತು ರಸ್ತೆ ಮಧ್ಯದ ವಿದ್ಯುತ್ ದೀಪಗಳ ಕಂಬಕ್ಕೆ ಕೇಸರಿ ಬಟ್ಟೆ ಕಟ್ಟಿ ಸಿಂಗರಿಸಲಾಗಿದೆ.
ಬೆಳಗಾವಿ ನಗರಕ್ಕೆ ಇಂದು ಪ್ರಧಾನಿ ನರೇಂದ್ರ ಮೋದಿ ಭೇಟಿ ಹಿನ್ನೆಲೆ ಬೆಳಗಾವಿಯ ಯಡಿಯೂರಪ್ಪ ರಸ್ತೆಯಲ್ಲಿರುವ ಮಾಲಿನಿ ಸಿಟಿಯಲ್ಲಿ ಬೃಹತ್ ವೇದಿಕೆ ನಿರ್ಮಾಣ ಮಾಡಲಾಗಿದೆ. ಸುಮಾರು 2 ಲಕ್ಷ ಜನರಿಗೆ ಆಸನದ ವ್ಯವಸ್ಥೆ ಮಾಡಲಾಗಿದೆ. 50 ಎಕರೆ ಪ್ರದೇಶದಲ್ಲಿ ಮೂರು ಕಡೆ ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದ್ದು ಸಮಾವೇಶಕ್ಕೆ ಬರುವ ಜನರಿಗೆ 1,500ಕ್ಕೂ ಹೆಚ್ಚು ಬಸ್ಗಳ ವ್ಯವಸ್ಥೆ ಮಾಡಲಾಗಿದೆ.
ಬೆಳಗಾವಿ ನಗರದ ಹಲವೆಡೆ ವಾಹನ ಸಂಚಾರದಲ್ಲಿ ಬದಲಾವಣೆ ಮಾಡಲಾಗಿದೆ. ನಿಪ್ಪಾಣಿಯಿಂದ ಖಾನಾಪುರ, ಗೋವಾಕ್ಕೆ ತೆರಳುವ ಮಾರ್ಗ ಬದಲಾವಣೆ ಮಾಡಲಾಗಿದೆ. ಬಾಕ್ಸೈಟ್ ರಸ್ತೆ, ಹಿಂಡಲಗಾ ಗಣಪತಿ ದೇವಸ್ಥಾನ, ಶೌರ್ಯ ಸರ್ಕಲ್, ಕಾಂಗ್ರೆಸ್ ರಸ್ತೆ ಮೂಲಕ ವಾಹನಗಳ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ. ಶಹಾಪುರ ಕಡೆಯಿಂದ ಬರುವ ವಾಹನಗಳು ಇದೇ ಮಾರ್ಗವಾಗಿ ನಿಪ್ಪಾಣಿ ಕಡೆಗೆ ಸಂಚರಿಸುವಂತೆ ಬೆಳಗಾವಿ ಸಂಚಾರ ಪೊಲೀಸರು ಸೂಚಿಸಿದ್ದಾರೆ. ಪ್ರಧಾನಿ ಸಂಚರಿಸುವ ಮಾರ್ಗದಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ.
ಪ್ರಧಾನಿ ನರೇಂದ್ರ ಮೋದಿ ಇಂದು ಬೆಳಗಾವಿಗೆ ಆಗಮನ ಹಿನ್ನೆಲೆ ಪ್ರಧಾನಮಂತ್ರಿ ಸ್ವಾಗತಿಸಲು ಸಾಮಾನ್ಯ ನಾಗರಿಕರಿಗೆ ಅವಕಾಶ ನೀಡಲಾಗಿದೆ. ನೇಕಾರ, ಪೌರ ಕಾರ್ಮಿಕ ಮಹಿಳೆ, ರೈತ ಕಾರ್ಮಿಕ ಮಹಿಳೆ, ಆಟೋ ಚಾಲಕ, ಕಟ್ಟಡ ಕಾರ್ಮಿಕರಿಂದ ಮೋದಿಗೆ ಸ್ವಾಗತಿಸಲಾಗುತ್ತೆ. ಬೆಳಗಾವಿ ದಕ್ಷಿಣ ಶಾಸಕ ಅಭಯ ಪಾಟೀಲ್ ನೇತೃತ್ವದಲ್ಲಿ ಜನರನ್ನು ಆಯ್ಕೆ ಮಾಡಲಾಗಿದೆ. ಮೋದಿ ಸ್ವಾಗತಿಸುವವರಿಗೆ ಈಗಾಗಲೇ ಕೊವಿಡ್ ಟೆಸ್ಟ್ ಮಾಡಿಲಾಗಿದೆ.
ಇಂದು ಬೆಳಗಾವಿಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ ಹಿನ್ನೆಲೆ ಬೆಳಗಾವಿ ಜಿಲ್ಲೆಯಲ್ಲಿ ಪ್ರಥಮ ಪಿಯುಸಿ ಪರೀಕ್ಷೆ ಮುಂದೂಡಲಾಗಿದೆ. ಇಂದು ನಡೆಯಬೇಕಿದ್ದ ಪರೀಕ್ಷೆ ಮಾರ್ಚ್ 6ರಂದು ನಡೆಸಲು ಸೂಚಿಸಲಾಗಿದೆ. ಬೆಳಗಾವಿ ಜಿಲ್ಲೆಯ ಎಲ್ಲಾ ಪಿಯು ಕಾಲೇಜುಗಳಿಗೂ ನಿಯಮ ಅನ್ವಯಿಸಲಿದೆ.
ಫೆ.27ಕ್ಕೆ ಮೋದಿ ಬೆಳಗಾವಿಗೆ, ವಾಹನ ಸಂಚಾರ ಬದಲಾವಣೆ, ಪ್ರಥಮ PUC ಪರೀಕ್ಷೆ ಮುಂದೂಡಿಕೆ#NarendraModi #Belagavi #pucexams #narendramodikarnatakahttps://t.co/L8We1pzij0
— TV9 Kannada (@tv9kannada) February 26, 2023
ಇಂದು ಬೆಳಗಾವಿ ನಗರಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ ಹಿನ್ನೆಲೆ ಮುನ್ನೆಚ್ಚರಿಕೆ ಕ್ರಮವಾಗಿ ಬೆಳಗಾವಿಯಲ್ಲಿ ಭಾರಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಬೆಳಗಾವಿಯಲ್ಲಿ 3 ಸಾವಿರಕ್ಕೂ ಹೆಚ್ಚು ಪೊಲೀಸರ ನಿಯೋಜಿಸಿದ್ದೇವೆ. ರೋಡ್ ಶೋ ಸ್ಥಳ, ಸಮಾವೇಶ ನಡೆಯುವ ಸ್ಥಳದಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಹೆಲಿಪ್ಯಾಡ್, ವೇದಿಕೆ, ಎಂಟ್ರಿ ಗೇಟ್ ಬಳಿ ಓರ್ವ ಎಸ್‌ಪಿ ನೇತೃತ್ವದಲ್ಲಿ ಪಾರ್ಕಿಂಗ್, ಊಟದ ಸ್ಥಳದಲ್ಲಿ ಓರ್ವ ಎಸ್‌ಪಿ ನೇತೃತ್ವದಲ್ಲಿ ಭದ್ರತೆ ಕೈಗೊಂಡಿದ್ದೇವೆ. ಮೋದಿ ರೋಡ್ ಶೋ ನಡೆಸುವ ಮಾರ್ಗದಲ್ಲಿ ಸಂಚಾರ ನಿರ್ಬಂಧ ಹೇರಲಾಗಿದೆ. ಹೀಗಾಗಿ ಬದಲಿ ರಸ್ತೆಗಳಲ್ಲಿ ಸಂಚರಿಸುವಂತೆ ಸಾರ್ವಜನಿಕರಿಗೆ ಮನವಿ ಮಾಡುತ್ತೇನೆ ಎಂದು ಟಿವಿ9ಗೆ ಬೆಳಗಾವಿ ಪೊಲೀಸ್ ಆಯುಕ್ತ ಡಾ.ಬೋರಲಿಂಗಯ್ಯ ಮಾಹಿತಿ ನೀಡಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿ ಬೆಳಗಾವಿಗಿಂದು ಆಗಮಿಸಲಿದ್ದು ಸಮಾವೇಶದ ವೇದಿಕೆಗೆ ಆಗಮಿಸುವ ಮುನ್ನ ರೋಡ್ ಶೋ ಮಾಡಲಿದ್ದಾರೆ. ಚೆನ್ನಮ್ಮ ಸರ್ಕಲ್ನಿಂದ 10.7 ಕಿ.ಮೀ ರೋಡ್ ಶೋ ನಡೆಯಲಿದೆ. ರೋಡ್ ಶೋ ಬಳಿಕ ವೇದಿಕೆಗೆ ಆಗಮಿಸುವ ಪ್ರಧಾನಿ ನರೇಂದ್ರ ಮೋದಿ ಬೆಳಗಾವಿಯ ಮಾಲಿನಿ ಸಿಟಿಯಲ್ಲಿ ನಡೆಯಲಿರುವ ಬೃಹತ್ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ. ಕಿಸಾನ್ ಸಮ್ಮಾನ್ ಯೋಜನೆಯ ದೇಶದ 8 ಕೋಟಿ ರೈತರಿಗೆ 16 ಸಾವಿರ ಕೋಟಿ ರೂಪಾಯಿ ಬಿಡುಗಡೆ ಮಾಡಲಿದ್ದಾರೆ.
ನಾಳೆ ಬೆಳಗಾವಿಯಲ್ಲೇ ಪಿಎಂ ಕಿಸಾನ್ 13ನೇ ಕಂತಿನ ಹಣ ಬಿಡುಗಡೆ ಮಾಡಲಿರುವ ಮೋದಿ, ಪಟ್ಟಿಯಲ್ಲಿ ನಿಮ್ಮ ಹೆಸರಿದೆಯಾ? ಚೆಕ್ ಮಾಡಿ@BJP4Karnataka @narendramodi #karnataka #PMKisanSammanNidhi #belagavi #farmers https://t.co/t4gXwdyTUs
— TV9 Kannada (@tv9kannada) February 26, 2023
ಇಂದು ರಾಜ್ಯಕ್ಕೆ ಪ್ರಧಾನಮಂತ್ರಿ ನರೇಂದ್ರಮೋದಿ ಭೇಟಿ ನೀಡಲಿದ್ದಾರೆ. ಬೆಳಗ್ಗೆ 11.35ಕ್ಕೆ ಶಿವಮೊಗ್ಗ ಏರ್‌ಪೋರ್ಟ್‌ಗೆ ಮೋದಿ ಆಗಮಿಸಲಿದ್ದು ಶಿವಮೊಗ್ಗ ಏರ್‌ಪೋರ್ಟ್ ಉದ್ಘಾಟಿಸಲಿದ್ದಾರೆ. ಬೆಳಗ್ಗೆ 11.45ರಿಂದ 11.55ರವರೆಗೆ ಟರ್ಮಿನಲ್ ಬಿಲ್ಡಿಂಗ್ ವೀಕ್ಷಣೆ ಮಾಡಲಿದ್ದಾರೆ. ಮಧ್ಯಾಹ್ನ 12ರಿಂದ 1.15ರವರೆಗೆ ಸಾರ್ವಜನಿಕ ಸಮಾವೇಶದಲ್ಲಿ ಭಾಗಿಯಾಗಿ ಕಾಮಗಾರಿಗಳ ಉದ್ಘಾಟನೆ, ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಬಳಿಕ ಮಧ್ಯಾಹ್ನ 1.30ಕ್ಕೆ ಶಿವಮೊಗ್ಗದಿಂದ ಬೆಳಗಾವಿಯತ್ತ ಪ್ರಯಾಣಿಸಲಿದ್ದಾರೆ.
ಕರ್ನಾಟಕ ವಿಧಾನಸಭಾ ಚುನಾವಣೆಗೆ ಕ್ಷಣಗಣನೆ ಶುರುವಾಗಿದೆ. ಬಿರುಸಿನ ಪ್ರಚಾರ, ಮತಬೇಟೆಯ ಅಬ್ಬರ ಜೋರಾಗಿದೆ. ಕರ್ನಾಟಕದಲ್ಲಿ ಮತ್ತೆ ಕಮಲ ಅರಳಿಸೋಕೆ ಬಿಜೆಪಿ ತೊಡೆ ತಟ್ಟಿನಿಂತಿದೆ. ಹೈಕಮಾಂಡ್ ಕರ್ನಾಟಕವನ್ನೇ ಟಾರ್ಗೆಟ್ ಮಾಡಿ ಪದೇ ಪದೇ ರಾಜ್ಯಕ್ಕೆ ದಂಡೆತ್ತಿ ಬರ್ತಿದ್ದಾರೆ. ಲಕ್ಷ ಲಕ್ಷ ಜನ ಸೇರಿಸೋ ಮೂಲಕ ಕೇಸರಿ ಕಹಳೆ ಮೊಳಗಿಸ್ತಿದ್ದಾರೆ. ಇಂದು ಕರ್ನಾಟಕಕ್ಕೆ ಪ್ರಧಾನಿ ನರೇಂದ್ರ ಮೋದಿ ಬಂದಿದ್ದಾರೆ. ಒಂದಲ್ಲ, ಎರಡಲ್ಲ ಬರೋಬ್ಬರಿ 5ನೇ ಬಾರಿ ಇಂದು ಭೇಟಿ ನೀಡಿದ್ದಾರೆ. ಅಭಿವೃದ್ಧಿಯ ಹೆಸರಿನಲ್ಲಿ ಪ್ರಧಾನಿ ಮೋದಿ ಮತಬೇಟೆಗೆ ಮುಂದಾಗಿದ್ದಾರೆ. ಕರುನಾಡನ್ನೇ ಟಾರ್ಗೆಟ್ ಮಾಡಿ ಒಂದೇ ಕಲ್ಲಿನಲ್ಲಿ 2 ಹಕ್ಕಿ ಹೊಡೆಯೋ ತಂತ್ರ ರೂಪಿಸಿದ್ದಾರೆ. ಒಂದು ಕಡೆ ಮಲೆನಾಡಿನಲ್ಲಿ ವಿಮಾನ ನಿಲ್ದಾಣ ಉದ್ಘಾಟಿಸಲಿದ್ದು ಮತ್ತೊಂದೆಡೆ ಬೆಳಗಾವಿಯಲ್ಲಿ 10 ಕಿ.ಮೀ ರೋಡ್ ಶೋ ಮೂಲಕ ಮತಬೇಟೆಗೆ ಇಳಿದಿದ್ದಾರೆ. ಜೊತೆಗೆ ಇಂದು ಬಿಎಸ್ ಯಡಿಯೂರಪ್ಪನವರು 80 ವರ್ಷದ ವಸಂತಕ್ಕೆ ಕಾಲಿಡಲಿದ್ದು ವಿಮಾನ ನಿಲ್ದಾಣ ಉದ್ಘಾಟಿಸುವ ಮೂಲಕ ಭರ್ಜರಿ ಗಿಫ್ಟ್ ನೀಡಿದ್ದಾರೆ. ಇಂದಿನ ಮೋದಿ ಕಾರ್ಯಕ್ರಮದ ಕ್ಷಣ ಕ್ಷಣದ ಅಪ್ಡೇಟ್ಸ್ ಇಲ್ಲಿದೆ.
Published On - 7:01 am, Mon, 27 February 23