ಮಾಜಿ ಪ್ರಧಾನಿ ದೇವೇಗೌಡರಿಗೆ ಕೊರೊನಾ: ನಿಮ್ಮ ಆಯ್ಕೆಯ ಯಾವುದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಿರಿ ಎಂದ ಪ್ರಧಾನಿ ಮೋದಿ

|

Updated on: Mar 31, 2021 | 2:57 PM

ಪ್ರಧಾನಿ ನರೇಂದ್ರ ಮೋದಿ ಹೆಚ್.ಡಿ.ದೇವೇಗೌಡರಿಗೆ ಕರೆ ಮಾಡಿ ಆರೋಗ್ಯ ವಿಚಾರಿಸಿದ್ದಾರೆ. ಈ ಬಗ್ಗೆ ಹೆಚ್​.ಡಿ.ಡಿ ಟ್ವೀಟ್ ಮಾಡಿದ್ದು ಪ್ರಧಾನಿಗೆ ಆಭಾರಿಯಾಗಿದ್ದೇನೆ ಎಂದು ಬರೆದುಕೊಂಡಿದ್ದಾರೆ.

ಮಾಜಿ ಪ್ರಧಾನಿ ದೇವೇಗೌಡರಿಗೆ ಕೊರೊನಾ: ನಿಮ್ಮ ಆಯ್ಕೆಯ ಯಾವುದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಿರಿ ಎಂದ ಪ್ರಧಾನಿ ಮೋದಿ
ಮಾಜಿ ಪ್ರಧಾನಿ H.D.ದೇವೇಗೌಡ ಮತ್ತು ಪ್ರಧಾನಿ ನರೇಂದ್ರ ಮೋದಿ
Follow us on

ಬೆಂಗಳೂರು: ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಹಾಗೂ ಅವರ ಪತ್ನಿ ಚನ್ನಮ್ಮರಿಗೆ ಕೊರೊನಾ ಸೋಂಕು ತಗುಲಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹೆಚ್.ಡಿ.ದೇವೇಗೌಡರಿಗೆ ಕರೆ ಮಾಡಿ ಆರೋಗ್ಯ ವಿಚಾರಿಸಿದ್ದಾರೆ. ಈ ಬಗ್ಗೆ ಹೆಚ್​.ಡಿ.ಡಿ ಟ್ವೀಟ್ ಮಾಡಿದ್ದು ಪ್ರಧಾನಿಗೆ ಆಭಾರಿಯಾಗಿದ್ದೇನೆ ಎಂದು ಬರೆದುಕೊಂಡಿದ್ದಾರೆ.

ನನ್ನ ಆರೋಗ್ಯದ ಬಗ್ಗೆ ಕರೆ ಮಾಡಿ ವಿಚಾರಿಸಿದ್ದಕ್ಕಾಗಿ ಪ್ರಧಾನಿ ಅವರಿಗೆ ನಾನು ಆಭಾರಿಯಾಗಿದ್ದೇನೆ. ಯಾವುದೇ ನಗರದಲ್ಲಿ ನನ್ನ ಆಯ್ಕೆಯ ಯಾವುದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಿರಿ ಎಂದಿದ್ದಾರೆ. ಅವರ ಈ ಪ್ರಸ್ತಾಪಕ್ಕೆ ನಾನು ಆಭಾರಿಯಾಗಿದ್ದೇನೆ. ಬೆಂಗಳೂರಿನಲ್ಲಿ ನನ್ನನ್ನು ಚೆನ್ನಾಗಿ ನೋಡಿಕೊಳ್ಳಲಾಗುತ್ತಿದೆ ಎಂದು ನಾನು ಅವರಿಗೆ ಭರವಸೆ ನೀಡಿದ್ದೇನೆ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ತಮ್ಮ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಹೆಚ್‌.ಡಿ.ದೇವೇಗೌಡ ದಂಪತಿಗೆ ಕೊರೊನಾ ದೃಢವಾದ ಬಗ್ಗೆ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಮಾತನಾಡಿದ್ದು ವೈದ್ಯರು ಉತ್ತಮವಾದ ಚಿಕಿತ್ಸೆಯನ್ನು ನೀಡುತ್ತಿದ್ದಾರೆ. ಯಾರೂ ಕೂಡ ಗಾಬರಿಯಾಗಬೇಕಾಗಿಲ್ಲ ಎಂದು ವಿಡಿಯೋ ಮೂಲಕ ಹೆಚ್‌ಡಿಕೆ ತಿಳಿಸಿದ್ದಾರೆ. ಈಗ 2ನೇ ಅಲೆಯಿಂದ ಎಲ್ಲರೂ ಜಾಗೃತರಾಗಿರಬೇಕು. ನನ್ನನ್ನು ಕೆಲವು ದಿನಗಳ ಕಾಲ ಭೇಟಿ ಮಾಡಲು ಬರಬೇಡಿ. ತಮ್ಮ ಜವಬ್ದಾರಿಯನ್ನ ಪಾಲಿಸಿ ಎಂದು ಮನವಿ ಸಹ ಮಾಡಿಕೊಂಡಿದ್ದು ನಮ್ಮ ತಂದೆ, ತಾಯಿ ಶೀಘ್ರವೇ ಗುಣಮುಖರಾಗುತ್ತಾರೆ. ಅವರಿಗಾಗಿ ನೀವು ನಿಮ್ಮ ಮನೆಯಲ್ಲೇ ಪ್ರಾರ್ಥನೆ ಮಾಡಿ ಎಂದು ದೇವೇಗೌಡರ ಅಭಿಮಾನಿಗಳಿಗೆ ಕುಮಾರಸ್ವಾಮಿ ಮನವಿ ಮಾಡಿದ್ದಾರೆ.

ಇನ್ನು ಮಾಜಿ ಪ್ರಧಾನಿ ದೇವೇಗೌಡರಿಗೆ ಕೊರೊನಾ ಸೋಂಕು‌ ತಗುಲಿರುವ ಹಿನ್ನೆಲೆಯಲ್ಲಿ ಸಿಎಂ ಯಡಿಯೂರಪ್ಪ ಟ್ವೀಟ್ ಮೂಲಕ ಬೇಗ ಚೇತರಿಸಿಕೊಳ್ಳುವಂತೆ ಹಾರೈಸಿದ್ದಾರೆ. ಹಿರಿಯ ರಾಜಕಾರಣಿಗಳು ಹಾಗೂ ಮಾಜಿ ಪ್ರಧಾನ ಮಂತ್ರಿಗಳಾದ ಸನ್ಮಾನ್ಯ ದೇವೇಗೌಡರು ಮತ್ತು ಅವರ ಶ್ರೀಮತಿ ಚನ್ನಮ್ಮನವರು ಕೊರೊನಾ ಸೋಂಕಿನಿಂದ ಸಂಪೂರ್ಣ ಗುಣಮುಖರಾಗಲಿ, ಶೀಘ್ರದಲ್ಲಿ ಚೇತರಿಸಿಕೊಂಡು ಎಂದಿನಂತೆ ತಮ್ಮ ಕೆಲಸಕಾರ್ಯಗಳಲ್ಲಿ ತೊಡಗಿಕೊಳ್ಳಲಿ ಎಂದು ಹಾರೈಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: HD Deve Gowda: ಮಾಜಿ ಪ್ರಧಾನಿ ಹೆಚ್​ಡಿ ದೇವೇಗೌಡ ಹಾಗೂ ಚನ್ನಮ್ಮಗೆ ಕೊರೊನಾ ಸೋಂಕು

Published On - 2:34 pm, Wed, 31 March 21