ಸಂತೋಷ್ ಮನೆಯಲ್ಲಿ ಆಕ್ರಂದನ: ಮಗ ಆತ್ಮಹತ್ಯೆ ಮಾಡಿಕೊಳ್ಳುವವನಲ್ಲ ಎಂದ ತಾಯಿ, ಇದು ಕೊಲೆ ಎಂದ ಪತ್ನಿ

ಸಂತೋಷ್ ಅವರ ಪತ್ನಿ ಜಯಶ್ರೀ ಸಹ ‘ನನ್ನ ಪತಿ ಆತ್ಮಹತ್ಯೆ ಮಾಡಿಕೊಳ್ಳುವವರಲ್ಲ. ಇದು ಕೊಲೆ. ಅವರ ಸಾವಿಗೆ ಈಶ್ವರಪ್ಪ ಕಾರಣ’ ಎಂದು ಆರೋಪಿಸಿದರು.

ಸಂತೋಷ್ ಮನೆಯಲ್ಲಿ ಆಕ್ರಂದನ: ಮಗ ಆತ್ಮಹತ್ಯೆ ಮಾಡಿಕೊಳ್ಳುವವನಲ್ಲ ಎಂದ ತಾಯಿ, ಇದು ಕೊಲೆ ಎಂದ ಪತ್ನಿ
ಸಂತೋಷ್ ಪತ್ನಿ ಜಯಶ್ರೀ ಅವರನ್ನು ಸಂತೈಸುತ್ತಿರುವ ಕುಟುಂಬದ ಸದಸ್ಯರು
Edited By:

Updated on: Apr 13, 2022 | 9:19 AM

ಬೆಳಗಾವಿ: ಸಂತೋಷ್ ಸಾವಿನ ಸುದ್ದಿ ತಿಳಿದ ನಂತರ ಕುಟುಂಬ ಸದಸ್ಯರ ಆಕ್ರಂದನ ಮುಗಿಲು ಮುಟ್ಟಿದೆ. ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ವಿರುದ್ಧ ಕಮಿಷನ್ ಆರೋಪ ಮಾಡಿದ್ದ ಸಂತೋಷ್ ಅವರ ಶಂಕಿತ ಸಾವಿನ ಕುರಿತು ಪ್ರತಿಕ್ರಿಯಿಸಿರುವ ತಾಯಿ ಪಾರ್ವತಿ, ‘ಮಗ ಆತ್ಮಹತ್ಯೆ ಮಾಡಿಕೊಳ್ಳುವಂಥವನಲ್ಲ’ ಎಂದಿದ್ದಾರೆ. ವಿಜಯನಗರದಲ್ಲಿರುವ ಸಂತೋಷ್ ಮನೆಯಲ್ಲಿ ಮೃತ ಸಂತೋಷ್​ ಅವರ ತಾಯಿ ಪಾರ್ವತಿ, ಪತ್ನಿ ಜಯಶ್ರೀ ಬಿಕ್ಕಿಬಿಕ್ಕಿ ಅಳುತ್ತಿದ್ದಾರೆ. ಮನೆಯ ಎದುರು ಗೆಳೆಯರು ಮತ್ತು ಸಂಬಂಧಿಗಳು ನೆರೆದಿದ್ದು ನೀರವ ಮೌನ ನೆಲೆಸಿದೆ.

ನನ್ನ ಮಗ ಸಂತೋಷ್ ಆತ್ಮಹತ್ಯೆ ಮಾಡಿಕೊಳ್ಳುವವನಲ್ಲ ಎಂದು ಟಿವಿ9ಗೆ ಸಂತೋಷ್ ಪಾಟೀಲ್ ತಾಯಿ ಪಾರ್ವತಿ ಹೇಳಿಕೆ ನೀಡಿದರು. ಮಗನ ಸಾವಿಗೆ ಸಚಿವ ಈಶ್ವರಪ್ಪ ಕಾರಣ. ಅವರ ಮಾತಿನಂತೆಯೇ ಮಗ ಕಾಮಗಾರಿ ಮಾಡಿಸಿದ್ದ. ಕಾಮಗಾರಿ ಮಾಡಿದ್ದನ್ನು ಸಚಿವ ನೋಡಬೇಕಿತ್ತು. ಚಿಕ್ಕವರು ಬಂದಾಗ ಏನು ಕೇಳುತ್ತಿದ್ದಾರೆ ಎನ್ನುವುದನ್ನು ಗಮನಿಸಬೇಕಿತ್ತು. ಅವ್ರು 40 ಪರ್ಸೆಂಟ್ ಕಮಿಷನ್ ಕೇಳದಿದ್ದರೆ ನನ್ನ ಮಗ ಉಳಿಯುತ್ತಿದ್ದ ಎಂದು ಸಂತೋಷನ ತಾಯಿ ಪಾರ್ವತಿ ಟಿವಿ9ಗೆ ಪ್ರತಿಕ್ರಿಯಿಸಿದರು.

ಬರ್ತೀನಿ ಎಂದು ಹೇಳಿಯೇ ಸಂತೋಷ ಮನೆಯಿಂದ ಹೊರಗೆ ಹೋಗಿದ್ದ. ಅವನು ಆತ್ಮಹತ್ಯೆ ಮಾಡಿಕೊಳ್ಳುವಂಥವನಲ್ಲ. ನನ್ನ ಮಗನನ್ನು ನನಗೆ ತಂದುಕೊಡಿ. ಕೆಲಸ ಮಾಡಿಸಿದ್ದರ ಬಗ್ಗೆಯೂ ಹೇಳಿಕೊಂಡಿದ್ದ. ನನ್ನನ್ನು ಭೇಟಿಯಾದಾಗಲೆಲ್ಲಾ ಅದರ ಬಗ್ಗೆ ಮಾತನಾಡುತ್ತಿದ್ದ. ‘ಬಿಲ್ ಬರುತ್ತೆ ಮಮ್ಮಿ’ ಎಂದಿದ್ದ. ನನ್ನ ಮಗನ ಸಾವಿಗೆ ಈಶ್ವರಪ್ಪನವರೇ ಕಾರಣ ಎಂದು ನೇರ ಆರೋಪ ಮಾಡಿದರು. ಸಂತೋಷ್ ಅವರ ಪತ್ನಿ ಜಯಶ್ರೀ ಸಹ ‘ನನ್ನ ಪತಿ ಆತ್ಮಹತ್ಯೆ ಮಾಡಿಕೊಳ್ಳುವವರಲ್ಲ. ಇದು ಕೊಲೆ. ಅವರ ಸಾವಿಗೆ ಈಶ್ವರಪ್ಪ ಕಾರಣ’ ಎಂದು ಆರೋಪಿಸಿದರು.

ಪಂಚನಾಮೆ ಪ್ರಕ್ರಿಯೆ ಆರಂಭ

ಈಶ್ವರಪ್ಪ ವಿರುದ್ಧ ಕಮಿಷನ್ ಆರೋಪ ಮಾಡಿದ್ದ ಸಂತೋಷ್ ಸಾವಿನ ತನಿಖೆ ಆರಂಭವಾಗಿದೆ. ತನಿಖೆಯ ಮೊದಲ ಹಂತವಾಗಿ ಪೊಲೀಸರು ಉಡುಪಿಯ ಖಾಸಗಿ ಹೊಟೆಲ್​ನಲ್ಲಿ ಪಂಚನಾಮೆ ಪ್ರಕ್ರಿಯೆಗೆ ಚಾಲನೆ ನೀಡಲು ಅಗತ್ಯ ಸಿದ್ಧತೆ ಮಾಡಿಕೊಂಡಿದ್ದಾರೆ. ಸಂತೋಷ್ ಅವರ ಪಾರ್ಥಿವ ಶರೀರವು ಹಾಸಿಗೆ ಮೇಲೆ ಮಲಗಿರುವಂತೆಯೇ ಇದೆ. ಹಸಿರು ಶರ್ಟ್, ಪ್ಯಾಂಟ್, ಕೇಸರಿ ಶಾಲು ಹಾಕಿದ ಸ್ಥಿತಿಯಲ್ಲಿ ಯುವಕನ ಶವ ಪತ್ತೆಯಾಗಿದೆ. ಕೊಠಡಿಯ ಡಸ್ಟ್‌ಬಿನ್​​ನಲ್ಲಿ ವಿಷದ ಬಾಟಲಿ ರೀತಿಯ ಡಬ್ಬಿ ಪತ್ತೆಯಾಗಿದೆ. ಶವ ಶೀಘ್ರ ಕೊಳೆಯಬಾರದು ಎನ್ನುವ ಕಾರಣಕ್ಕೆ ಹೊಟೆಲ್ ಸಿಬ್ಬಂದಿ ಎಸಿ ಮೂಲಕ ರೂಂ ಟೆಂಪರೇಚರ್ ಅತ್ಯಂತ ಕನಿಷ್ಠ ಮಟ್ಟಕ್ಕೆ ತಂದಿದ್ದಾರೆ.

ಇದನ್ನೂ ಓದಿ: ಕಮಿಷನ್ ಆರೋಪ ಮಾಡಿದ್ದ ಸಂತೋಷ್ ಸಾವು ಪ್ರಕರಣ: ಈಶ್ವರಪ್ಪ ಆರೋಪಿ ನಂ 1, ಎಫ್​ಐಆರ್ ದಾಖಲು

ಇದನ್ನೂ ಓದಿ: ಸಂತೋಷ್ ಸಾವು ಪ್ರಕರಣ: ಪ್ರಾಥಮಿಕ ವರದಿ ಸಿಕ್ಕ ಬಳಿಕ ತಪ್ಪಿತಸ್ಥರ ವಿರುದ್ಧ ಕ್ರಮ ಎಂದರು ಮುಖ್ಯಮಂತ್ರಿ ಬೊಮ್ಮಾಯಿ

Published On - 9:15 am, Wed, 13 April 22