ಕಮಿಷನ್ ಆರೋಪ ಮಾಡಿದ್ದ ಸಂತೋಷ್ ಸಾವು ಪ್ರಕರಣ: ಈಶ್ವರಪ್ಪ ಆರೋಪಿ ನಂ 1, ಎಫ್​ಐಆರ್ ದಾಖಲು

ಕಮಿಷನ್ ಆರೋಪ ಮಾಡಿದ್ದ ಸಂತೋಷ್ ಸಾವು ಪ್ರಕರಣ: ಈಶ್ವರಪ್ಪ ಆರೋಪಿ ನಂ 1, ಎಫ್​ಐಆರ್ ದಾಖಲು
ಮೃತ ಸಂತೋಷ್, ಸಚಿವ ಕೆಎಸ್​ ಈಶ್ವರಪ್ಪ

ಸಚಿವರ ಆಪ್ತರಾದ ಬಸವರಾಜ್, ರಮೇಶ್‌ ಕಿರುಕುಳ ನೀಡಿದ್ದಾರೆ. ಸೋದರನಿಗೆ ಧಮ್ಕಿ ಹಾಕಿ ಕೊಲೆ ಬೆದರಿಕೆಯೂ ಹಾಕಿರಬಹುದು ಎಂದು ದೂರುದಾರರಾದ ಪ್ರಶಾಂತ್ ಪಾಟೀಲ್ ಹೇಳಿದ್ದಾರೆ.

TV9kannada Web Team

| Edited By: Ghanashyam D M | ಡಿ.ಎಂ.ಘನಶ್ಯಾಮ

Apr 13, 2022 | 7:15 AM

ಉಡುಪಿ: ಬಿಲ್ ಮಂಜೂರು ಮಾಡಲು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ (KS Eshwarappa) 40 ಪರ್ಸೆಂಟ್ ಕಮಿಷನ್ ಕೇಳುತ್ತಿದ್ದಾರೆ ಎಂದು ಆರೋಪ ಮಾಡಿದ್ದ ಸಂತೋಷ್ ಪಾಟೀಲ್ (Santhosh Patil) ಶಂಕಿತ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಶ್ವರಪ್ಪ ವಿರುದ್ಧ ಉಡುಪಿ ಠಾಣೆಯಲ್ಲಿ ದೂರು ದಾಖಲಾಗಿದೆ. ಈಶ್ವರಪ್ಪ ಆಪ್ತರಾದ ಬಸವರಾಜ್, ರಮೇಶ್ ಅವರ ಹೆಸರಗಳೂ ಎಫ್​ಐಆರ್​ನಲ್ಲಿ ನಮೂದಾಗಿವೆ. ಪ್ರಕರಣದಲ್ಲಿ ಸಚಿವ ಈಶ್ವರಪ್ಪ ಮೊದಲ ಆರೋಪಿ. ಸಚಿವರ ಆಪ್ತ ಬಸವರಾಜ್ A2, ಇನ್ನೋರ್ವ ಆಪ್ತ ರಮೇಶ್ A3 ಆರೋಪಿಯಾಗಿದ್ದಾರೆ. ಐಪಿಸಿ ಸೆಕ್ಷನ್ 34 ಮತ್ತು ಮತ್ತೊಂದು ಕಲಂ ಅಡಿಯಲ್ಲಿ ಸಂತೋಷ್ ಸೋದರ ಸಂಬಂಧಿ ಪ್ರಶಾಂತ ಪಾಟೀಲ್ ದೂರು ದಾಖಲಿಸಿದ್ದಾರೆ. ರಸ್ತೆ ಕಾಮಗಾರಿಯ 4 ಕೋಟಿ ಬಿಡುಗಡೆಗೆ ಈಶ್ವರಪ್ಪ ತಮ್ಮ ಆಪ್ತರ ಮೂಲಕ ಶೇ 40ರಷ್ಟು ಕಮಿಷನ್​ಗೆ ಒತ್ತಾಯಿಸಿದ್ದರು ಎಂದು ಸಂತೋಷ್ ಮನವಿ ಮಾಡಿದ್ದರು. ಈ ಬಗ್ಗೆ ಪ್ರಧಾನಿ ಸೇರಿದಂತೆ ಹಲವರಿಗೆ ಮನವಿ ಮಾಡಿದ್ದರೂ ಪ್ರಯೋಜನವಾಗಿರಲಿಲ್ಲ. ಬಿಲ್ ಮಂಜೂರು ಮಾಡದ ಕಾರಣ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ಆರೋಪ ಮಾಡಿದ್ದರು. ‘ಇದು ಅನುಮಾನಾಸ್ಪದ ಸಾವು ಇದಾಗಿದ್ದು, ಮೂವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು’ ಎಂದು ದೂರಿನಲ್ಲಿ ಪ್ರಶಾಂತ್ ಪಾಟೀಲ್ ಉಲ್ಲೇಖಿಸಿದ್ದಾರೆ.

ಈಶ್ವರಪ್ಪ ಬಂಧನದವರೆಗೆ ಮೃತದೇಹ ತೆಗೆದುಕೊಂಡು ಹೋಗುವುದಿಲ್ಲ ಎಂದು ದೂರುದಾರ ಪ್ರಶಾಂತ್ ಪಾಟೀಲ್ ಟಿವಿ9ಗೆ ಪ್ರತಿಕ್ರಿಯಿಸಿದರು. ಈಶ್ವರಪ್ಪರಿಂದ ಅನ್ಯಾಯವಾದ ಬಗ್ಗೆ ಡೆತ್‌ನೋಟ್‌ನಲ್ಲೇ ಉಲ್ಲೇಖಿಸಲಾಗಿದೆ. ಸಚಿವರ ಆಪ್ತರಾದ ಬಸವರಾಜ್, ರಮೇಶ್‌ ಕಿರುಕುಳ ನೀಡಿದ್ದಾರೆ. ಸೋದರನಿಗೆ ಧಮ್ಕಿ ಹಾಕಿ ಕೊಲೆ ಬೆದರಿಕೆಯೂ ಹಾಕಿರಬಹುದು. ಅನ್ಯಾಯವಾದ ಬಗ್ಗೆ ಸುದ್ದಿಗೋಷ್ಠಿಯಲ್ಲೂ ಸಂತೋಷ್ ಹೇಳಿದ್ದರು. ನಮಗೆ ಸರ್ಕಾರ ಸಹ ಅನ್ಯಾಯ ಮಾಡಿದೆ. ಎಫ್‌ಐಆರ್ ಆದ ಕೂಡಲೇ ಮೂವರನ್ನೂ ಬಂಧಿಸಬೇಕು. ಅರೆಸ್ಟ್ ಆಗದಿದ್ದರೆ ನಾವು ಮೃತದೇಹ ಕೊಂಡೊಯ್ಯುವುದಿಲ್ಲ. ಅರೆಸ್ಟ್ ಆದ ಬಳಿಕವೇ ಮುಂದಿನ ಪ್ರಕ್ರಿಯೆ ನಡೆಸುತ್ತೇವೆ ಎಂದು ಸ್ಪಷ್ಟಪಡಿಸಿದರು.

ಈಶ್ವರಪ್ಪ ವಿರುದ್ಧ ಕಮಿಷನ್ ಆರೋಪ ಮಾಡಿದ್ದ ಸಂತೋಷ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉಡುಪಿಯ ಶಾಂಭವಿ ಲಾಡ್ಜ್‌ನಲ್ಲಿ ಇಂದು ಪೊಲೀಸರು ಸಂತೋಷ್ ಪಾಟೀಲ್ ಕುಟುಂಬ ಸದಸ್ಯರ ಸಮ್ಮುಖದಲ್ಲಿ ಪಂಚನಾಮೆ ನಡೆಸಲಿದ್ದಾರೆ. ಈ ಪ್ರಕ್ರಿಯೆಯು ಸುಮಾರು 3-4 ಗಂಟೆಗಳ ಕಾಲ ನಡೆಯಬಹುದು ಎಂದು ಹೇಳಲಾಗುತ್ತಿದೆ. ಪಂಚನಾಮೆ ಬಳಿಕ ಮಣಿಪಾಲ ಶವಾಗಾರಕ್ಕೆ ಮೃತದೇಹ‌ ರವಾನಿಸಲಾಗುವುದು. ಮಧ್ಯಾಹ್ನದ ಬಳಿಕ ಸಂತೋಷ್ ಮರಣೋತ್ತರ ಪರೀಕ್ಷೆ ನಡೆಸುವ ಸಾಧ್ಯತೆಯಿದೆ.

ಎಫ್​ಐಆರ್​ನಲ್ಲಿ ನಮೂದಾಗಿರುವ ಅಂಶಗಳ ಸಂಕ್ಷಿಪ್ತ ರೂಪ ಇಲ್ಲಿದೆ… 2020-21ನೇ ಸಾಲಿನಲ್ಲಿ ಹಿಂಡಲಗಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಲಕ್ಷ್ಮೀದೇವಿ ಜಾತ್ರೆ ಜರುಗುವ ಹಿನ್ನಲೆಯಲ್ಲಿ ಊರಿನ ಪ್ರಮುಖರು ಮತ್ತು ಸ್ವಾಮಿಗಳು ಸೇರಿಕೊಂಡು ಗ್ರಾಮೀಣ ಅಭಿವೃದ್ಧಿ ಸಚಿವರಾದ ಕೆ.ಎಸ್.ಈಶ್ವರಪ್ಪನವರನ್ನು ಬೆಂಗಳೂರಿನಲ್ಲಿ ಭೇಟಿ ಮಾಡಿ, ಜಾತ್ರೆಯ ವಿಷಯ ತಿಳಿಸಿ ರಸ್ತೆ ಕಾಮಗಾರಿ, ಚರಂಡಿ ಕಾಮಗಾರಿ, ಪೆವರ್ಸ್ ಜೋಡಣೆ ಇತ್ಯಾದಿ ಕಾಮಗಾರಿಗಳನ್ನು ಮಾಡಿಕೊಡಬೇಕೆಂದು ವಿನಂತಿಸಿದ್ದರು. ಆಗ ಸಚಿವರು (ಕೆ.ಎಸ್ ಈಶ್ವರಪ್ಪನವರು) ನೀವು ನಮ್ಮ ಕಾರ್ಯಕರ್ತರು ಇದ್ದಿರಿ, ನೀವು ಕೆಲಸ ಶುರು ಮಾಡಿ, ಎಷ್ಟೇ ಹಣ ಆದರೂ ಪರವಾಗಿಲ್ಲಾ ಕೆಲಸ ಮಾಡಿ ಎಂದು ಈಶ್ವರಪ್ಪ ಹೇಳಿದ್ದರು.

ಊರಿಗೆ ಹಿಂದಿರುಗಿದ ಪ್ರಮುಖರು ಹಾಗೂ ಹಿಂಡಲಗಾ ಗ್ರಾ.ಪಂ. ಅಧ್ಯಕ್ಷರು ಸಂತೋಷ ಕ ಪಾಟೀಲ್ ಅವರಿಗೆ ಕೆಲಸ ಪ್ರಾರಂಭಿಸಲು ಸೂಚಿಸಿದರು. ಅದರಂತೆ ಸಂತೋಷ ಕ ಪಾಟೀಲ್ ಮತ್ತು ಉಳಿದ ಗುತ್ತಿಗೆದಾರರು ಸುಮಾರು 4 ಕೋಟಿಗೂ ಅಧಿಕ ಮೊತ್ತದ ಕಾಮಗಾರಿಯನ್ನು ಸ್ವಂತ ಹಣದಿಂದ ಹಾಗೂ ಇತರರ ಸಹಾಯದಿಂದ ಸರ್ಕಾರದ ಹಣವಿಲ್ಲದೇ ಪೂರ್ಣಗೊಳಿಸಿರುತ್ತಾರೆ. ಕಾಮಗಾರಿಗಳ ಬಿಲ್​ಗಾಗಿ ಸಚಿವರಾದ ಕೆ.ಎಸ್.ಈಶ್ವರಪ್ಪ ಮತ್ತು ಅವರ ಆಪ್ತರಾದ ಬಸವರಾಜ್ ಮತ್ತು ರಮೇಶ್ ಅವರನ್ನು ಹಲವು ಸಾರಿ ಭೇಟಿಯಾಗಿ ಕೆಲಸ ಪೂರ್ಣಗೊಳಿಸಿದ್ದೇವೆ ಬಿಲ್ ಮಂಜೂರು ಮಾಡಲು ವಿನಂತಿಸಿಕೊಂಡಿರುತ್ತಾರೆ.

ಅವರೆಲ್ಲರೂ ಶೇ 40 ಕಮೀಷನ್ ನೀಡಿದರೆ ಬಿಲ್ ಪಾಸ್ ಮಾಡಿಸುವುದಾಗಿ ಹೇಳಿದ್ದರು. ಈ ಕಮಿಷನ್ ವಿಷಯ ಕುರಿತು ಬೆಳಗಾವಿ ಗುತ್ತಿಗೆದಾರರ ಸಂಘದವರು ಸರಕಾರಕ್ಕೆ ದೂರು ಸಲ್ಲಿಸಿರುತ್ತಾರೆ. ಅದೇ ರೀತಿ ಗುತ್ತಿಗೆದಾರರಾದ ಸಂತೋಷ ಕ ಪಾಟೀಲ್ ಅವರು ಮಾದ್ಯಮಗಳ ಮುಖೇನ ಮಾರ್ಚ್​ ತಿಂಗಳಿನಲ್ಲಿ ಸಚಿವರಾದ ಕೆ.ಎಸ್ ಈಶ್ವರಪ್ಪ ವಿರುದ್ಧ ಮಾಧ್ಯಮಗಳಲ್ಲಿ ಆರೋಪಿಸಿದ್ದರು. ಇದಕ್ಕೆ ಮುಂಚಿತವಾಗಿ ಸಂತೋಷನು ತನ್ನ ಹೆಂಡತಿ ಜಯಾ ಹಾಗೂ ಫಿರ್ಯಾದುದಾರರ ಬಳಿ ಈ ವಿಷಯ ತಿಳಿಸಿರುತ್ತಾರೆ. ಸಂತೋಷರವರಿಗೆ ಪದೇಪದೇ ಏಕೆ ಬೆಂಗಳೂರಿಗೆ ಹೋಗುವುದು ಎಂದು ಪ್ರಶ್ನಿಸಿದಾಗ ಅವರು ಈ ಕಾಮಗಾರಿಗಳ ಬಿಲ್ ವಿಷಯವಾಗಿ ಕೆ.ಎಸ್ ಈಶ್ವರಪ್ಪ ಸಚಿವರು ಅವರನ್ನು ಭೇಟಿಯಾಗಿ ಬಿಲ್ ಪಾಸ್ ಮಾಡಿಸಲು ಹೋಗುತ್ತಿದ್ದೇನೆಂದು ತಿಳಿಸುತ್ತಿದ್ದರು.

ಬಿಲ್ ಪಾಸ್ ಆಗದ ಕಾರಣ ಆರ್.ಡಿ.ಪಿ.ಆರ್ ಸಚಿವರಾದ ಕೆ.ಎಸ್ ಈಶ್ವರಪ್ಪ ಮತ್ತು ಅವರ ಆಪ್ತರಾದ ರಮೇಶ್ ಮತ್ತು ಬಸವರಾಜ್ ಅವರ ವಿರುದ್ಧ ವಿಡಿಯೊ ಫೂಟೇಜ್ ಮುಖೇನ 4 ಕೋಟಿ ಕಾಮಗಾರಿ ಹಣದ ಬಿಲ್ ಪಾಸ್ ಮಾಡದ ಕಾರಣ ಮುಂದೆ ಆಗುವ ಅನಾಹುತಕ್ಕೆ ನೀವೇ ಕಾರಣರಾಗಿರುತ್ತೀರಿ ಎಂದು ಮಾದ್ಯಮಗಳ ಮುಖೇನ ವಿಷಯ ಪ್ರಸ್ತಾಪಿಸಿದ್ದರು. ಈ ಕುರಿತು ರಾಜ್ಯ ಬಿಜೆಪಿ ಉಸ್ತುವಾರಿಯಾದ ಅರುಣ ಸಿಂಗ್ ಹಾಗೂ ದೆಹಲಿ ಮಟ್ಟದ ಬಿಜೆಪಿ ವರಿಷ್ಠರಿಗೆ ಪ್ರಧಾನ ಮಂತ್ರಿಗಳ ಕಚೇರಿಗೆ ಭೇಟಿ ನೀಡಿ ಮನವಿ ಸಲ್ಲಿಸಿದ್ದರು. ಆದರೂ ಸಹ ಬಿಲ್ ಪಾಸ್ ಆಗಿರುವುದಿಲ್ಲ.

ಅದೇ ವಿಷಯದಲ್ಲಿ ಮನನೊಂದು ತನ್ನ ಮೊಬೈಲಿನಿಂದ ವಾಟ್ಸ್ ಅಫ್ ಮುಖೇನ ಡೆತ್ ನೋಟ್ ಸಂದೇಶವನ್ನು ಮಾದ್ಯಮಗಳಿಗೆ ಮತ್ತು ಆಪ್ತರಿಗೆ ಕಳುಹಿಸಿ ಏಪ್ರಿಲ್ 11ರ ರಾತ್ರಿ 11 ಗಂಟೆಯಿಂದ 12ರ ಬೆಳಿಗ್ಗೆ 10 ಗಂಟೆಯ ಮಧ್ಯಾವಧಿಯಲ್ಲಿ ಉಡುಪಿಯ ಶಾಂಭವಿ ಲಾರ್ಡ್​ನ ರೂಂ ನಂಬರ್ 207 ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾರೆ. ಈ ಸಾವಿಗೆ ಸಚಿವ ಕೆ.ಎಸ್.ಈಶ್ವರಪ್ಪ, ಬಸವರಾಜ್, ರಮೇಶ್ ಹಾಗೂ ಇತರರು ಕಾರಣ. ಅವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಕೋರುತ್ತೇನೆ.

ದನ್ನೂ ಓದಿ: Santosh Suicide: ಸಚಿವ ಈಶ್ವರಪ್ಪ ವಿರುದ್ಧ ಗುತ್ತಿಗೆದಾರ ಸಂತೋಷ್ ಲಂಚದ ಕುರಿತು ಮಾಡಿದ್ದ ಗಂಭೀರ ಆರೋಪಗಳ ವಿವರ ಇಲ್ಲಿದೆ

ಇದನ್ನೂ ಓದಿ: ಈಶ್ವರಪ್ಪ ವಿರುದ್ಧ ಭ್ರಷ್ಟಾಚಾರ, ಕೊಲೆ ಪ್ರಕರಣ ದಾಖಲಿಸಿ, ವಜಾಗೊಳಿಸಿ: ಕಾಂಗ್ರೆಸ್ ಆಗ್ರಹ

Follow us on

Related Stories

Most Read Stories

Click on your DTH Provider to Add TV9 Kannada