ಮಂಡ್ಯ: ಅಧಿಕಾರಿಯ ಕುಟುಂಬಸ್ಥರು ಖಾಸಗಿ ಕೆಲಸಕ್ಕೆ ಪೊಲೀಸ್ ಇಲಾಖೆ ವಾಹನ ಬಳಕೆ ಮಾಡಿಕೊಳ್ಳುತ್ತಿರುವ ಬಗ್ಗೆ ಆರೋಪ ಕೇಳಿ ಬಂದಿದೆ. ಮಂಡ್ಯ ನಗರದಲ್ಲಿ ಅಧಿಕಾರಿಯೊಬ್ಬರ ಕುಟುಂಬಸ್ಥರು ಪೊಲೀಸ್ ಇಲಾಖೆಯ ವಾಹನವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರಂತೆ.
KA 11, G594ನ ಪೊಲೀಸ್ ವಾಹನದಲ್ಲಿ ನಾಲ್ವರು ಮಹಿಳೆಯರು ಹಬ್ಬದ ಶಾಪಿಂಗ್ಗೆ ಬಳಕೆ ಮಾಡಿಕೊಂಡಿದ್ದಾರಂತೆ. ಮಂಡ್ಯದ ವಿವಿಧೆಡೆ ಬಟ್ಟೆ ಶೋರೂಂ, ಫ್ಯಾನ್ಸಿ ಸ್ಟೋರ್ಗೆ ಪೊಲೀಸ್ ವಾಹನದಲ್ಲೇ ಮಹಿಳೆಯರು ಸುತ್ತಾಡಿದ್ದಾರೆ. ಅಲ್ಲದೆ ಚಾಲಕನನ್ನು ಕೆಲಸದಾಳಂತೆ ಬಳಕೆ ಮಾಡಿಕೊಂಡಿದ್ದಾರೆ.
ಮಹಿಳೆಯರು ಖರೀದಿಸಿದ್ದ ವಸ್ತುಗಳನ್ನು ಚಾಲಕನೇ ಶೋರೂಂನಿಂದ ತಂದು ವಾಹನದಲ್ಲಿ ಇರಿಸಿದ್ದಾನೆ. ಸರ್ಕಾರಿ ಸೇವಾ ನಿಷ್ಠೆಯ ಜೊತೆಗೆ ಅಧಿಕಾರಿಯ ಕುಟುಂಬಸ್ಥರಿಗೂ ಕೆಲಸ ಮಾಡುವಂತ ಪರಿಸ್ಥಿತಿ ಚಾಲಕನದ್ದಾಗಿದೆ. ಈ ರೀತಿ ಸರ್ಕಾರಿ ವಾಹನವನ್ನು ತನ್ನ ಖಾಸಗಿ ಕೆಲಸಕ್ಕೆ ದುರ್ಬಳಕೆ ಮಾಡಿದ್ದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.