ಬಿಯರ್ ಬಾಟಲಿ, ಮದ್ಯದ ಸ್ಯಾಶೆಗಳ ತಾಣವಾದ ವಿಜಯಪುರ ಡಿಸಿ ಕಚೇರಿ ಆವರಣ

ಬಿಯರ್ ಬಾಟಲಿ, ಮದ್ಯದ ಸ್ಯಾಶೆಗಳ ತಾಣವಾದ ವಿಜಯಪುರ ಡಿಸಿ ಕಚೇರಿ ಆವರಣ
ವಿಜಯಪುರ ಡಿಸಿ ಕಚೇರಿಯ ಆವರಣದಲ್ಲಿ ಮದ್ಯದ ಬಾಟಲಿ

ವಿಜಯಪುರ ಜಿಲ್ಲೆಯಲ್ಲಿರುವ ಹಲವು ಸರ್ಕಾರಿ ಕಚೇರಿ ಮತ್ತು ಕಟ್ಟಡಗಳನ್ನು ಸ್ವಚ್ಛವಾಗಿಡುವ ಮಾತು ಹಾಗಿರಲಿ ಅವುಗಳ ಆವರಣದೊಳಗೆ ಹೊರಗಿನವರು ಪ್ರವೇಶಿಸದಂತೆ ತಡೆಯುವುದೇ ದೊಡ್ಡ ಸಮಸ್ಯೆಯಾಗಿದೆ.

Arun Belly

| Edited By: Ghanashyam D M | ಡಿ.ಎಂ.ಘನಶ್ಯಾಮ

Jan 15, 2021 | 3:08 PM

ವಿಜಯಪುರ: ಸಾಮಾನ್ಯವಾಗಿ ಸರ್ಕಾರಿ ಕಚೇರಿಗಳನ್ನು ದೇವಸ್ಥಾನಗಳಿಗೆ ಹೋಲಿಸುವುದು ನಮ್ಮಲ್ಲಿ ವಾಡಿಕೆ. ಕಚೇರಿ ಮತ್ತು ಅದರ ಆಚರಣವನ್ನು ಶುಚಿಯಾಗಿವುದು ಸಿಬ್ಬಂದಿಯ ಕೆಲಸ ಮತ್ತು ಜವಾಬ್ದಾರಿ. ಇದರಲ್ಲಿ ಸಾರ್ವಜನಿಕರ ಪಾಲೂ ಸಹ ಸೇರಿದೆ.

ಇದನ್ನು ಯಾಕೆ ಹೇಳಬೇಕಾಗಿದೆಯೆಂದರೆ, ವಿಜಯಪುರ ಜಿಲ್ಲೆಯಲ್ಲಿರುವ ಹಲವು ಸರ್ಕಾರಿ ಕಚೇರಿ ಮತ್ತು ಕಟ್ಟಡಗಳನ್ನು ಸ್ವಚ್ಛವಾಗಿಡುವ ಮಾತು ಹಾಗಿರಲಿ ಅವುಗಳ ಆವರಣದೊಳಗೆ ಹೊರಗಿನವರು ಪ್ರವೇಶಿಸದಂತೆ ತಡೆಯುವುದೇ ದೊಡ್ಡ ಸಮಸ್ಯೆಯಾಗಿದೆ. ವಿಜಯಪುರ ನಗರದ ಜಿಲ್ಲಾಧಿಕಾರಿಗಳ ಕಚೇರಿ ಆವರಣವನ್ನೇ ತೆಗೆದುಕೊಳ್ಳಿ, ಸಾರ್ವಜನಿಕರು ಈ ಕಚೇರಿಯ ಆವರಣವನ್ನು ತಮ್ಮ ಸ್ವಂತ ಸ್ವತ್ತು ಎನ್ನುವಂತೆ ಬಳಸುತ್ತಿದ್ದು ಅವರನ್ನು ತಡೆಯುವುದು ಯಾರಿಗೂ ಸಾಧ್ಯವಾಗುತ್ತಿಲ್ಲ.

ರವಿವಾರಗಳ ಸಂಜೆಯಂದು ಕಚೇರಿ ಸುತ್ತಮುತ್ತ ವಾಸವಿರುವ ಪುಂಡ-ಪೋಕರಿಗಳು ಆವರಣದಲ್ಲಿ ಕುಳಿತು ಮದ್ಯ ಸೇವಿಸುತ್ತಾರೆ, ಬೀಡಿ-ಸಿಗರೇಟು ಸೇದಿ ಅವುಗಳೊಂದಿಗೆ ಗುಟ್ಕಾದ ಖಾಲಿ ಸ್ಯಾಶೆಗಳನ್ನು ಅಲ್ಲೇ ಬಿಸಾಡುತ್ತಾರೆ. ಅವರಿಗೆ ಡಿಸಿ ಆಫೀಸಿನ ಆವರಣ ಓಪನ್ ಬಾರ್ ಮತ್ತು ರೆಸ್ಟುರಾಂಟ್ ಅಗಿ ಪರಿವರ್ತನೆಯಾಗಿದೆ. ಸೋಮವಾರ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಬಿಯರ್ ಬಾಟಲ್​​​ಗಳು, ಬೇರೆ ಬೇರೆ ಬ್ರ್ಯಾಂಡಿನ ಮದ್ಯದ ಶೀಷೆಗಳು ಕಣ್ಣಿಗೆ ರಾಚುತ್ತವೆ.

ಬಾರ್, ಖಾಸಗಿ ಸ್ಥಳಗಳಲ್ಲಿ ಕುಳಿತು ಮದ್ಯ ಸೇವಿಸುವ ಬದಲು ಈ ಪೋಕರುಗಳಿಗೆ ಜಿಲ್ಲಾಧಿಕಾರಿಗಳ ಕಚೇರಿ ಆವರಣವೇ ಬೇಕು. ಸೋಜಿಗದ ಸಂಗತಿಯೆಂದರೆ ಅವರಿಗೆ ಪೊಲೀಸರೂ ಸೇರಿದಂತೆ ಯಾರ ಭಯವೂ ಇಲ್ಲ.

ಇಷ್ಟೆಲ್ಲಾ ನಡೆಯುತ್ತಿದ್ದರೂ ವಿಷಯ ಜಿಲ್ಲಾಧಿಕಾರಿಗಳ ಗಮನಕ್ಕೆ ಬಂದಿಲ್ಲವೇ ಎಂಬ ಅನುಮಾನ ಕಾಡುವುದು ಸಹಜವೇ. ಕೆಳ ಹಂತದ ಅಧಿಕಾರಿಗಳು ಇವೆಲ್ಲವನ್ನೂ ಉದ್ದೇಶಪೂರ್ವಕವಾಗಿ ಮುಚ್ಚಿಟ್ಟಿದ್ದಾರೆ ಗುಮಾನಿಯೂ ಇದೆ. ಡಿಸಿ ಕಚೇರಿಯನ್ನು ಪ್ರವೇಶ ದ್ವಾರ ಹಾಗೂ ಕಚೇರಿ ಒಳಗಡೆ ಮಾತ್ರ ಸಿಸಿ ಕೆಮೆರಾಗಳಿವೆ. ಕಚೇರಿಯ ಆವರಣದಲ್ಲಿ ಕೆಮೆರಾಗಳು ಇಲ್ಲದಿರುವುದು ಪುಂಡರು ರಾಜಾರೋಷವಾಗಿ ಅದನ್ನು ಬಳಸಿಕೊಳ್ಳುವುದಕ್ಕೆ ಆಸ್ಪದ ನೀಡಿದೆ. ಇದೇ ಆವರಣದಲ್ಲಿ ಡಿಸಿ ಅವರ ಕಚೇರಿ ಜೊತೆ ಜಿಲ್ಲಾ ಖಜಾನೆ, ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಕಚೇರಿ, ಭೂಮಾಪನ ಕೇಂದ್ರ, ಅಂಚೆ ಕಚೇರಿಗಳು ಕಾರ್ಯ ನಿರ್ವಹಿಸುತ್ತಿವೆ. ಇಡೀ ಆವರಣದಲ್ಲಿ ಕೆಮೆರಾಗಳನ್ನು ಅಳವಡಿಸುವುದು ಅತ್ಯಂತ ಜರೂರಾಗಿ ಮಾಡಬೇಕಿರುವ ಕೆಲಸವಾಗಿದೆ.

ಜಿಲ್ಲಾಧಿಕಾರಿ ಪಿ ಸುನೀಲಕುಮಾರ, ‘ನಮ್ಮ ಕಚೇರಿ ಆವರಣದಲ್ಲಿ ಬಿಯರ್ ಮತ್ತು ಮದ್ಯದ ಬಾಟಲಿಗಳು, ಗುಟ್ಕಾ ಸ್ಯಾಶೆಗಳು ಕಂಡು ಬಂದ ವಿಚಾರ ಗಮನಕ್ಕೆ ಬಂದಿಲ್ಲ. ಆಧಿಕಾರಿಗಳಿಂದ ಮಾಹಿತಿ ಪಡೆದುಕೊಂಡು ಕ್ರಮ ತೆಗೆದುಕೊಳ್ಳಲಾಗುತ್ತದೆ. ಕಾವಲು ಸಿಬ್ಬಂದಿ ಬಗ್ಗೆಯೂ ಮಾಹಿತಿ ಪಡೆದು ಹೆಚ್ಚಿನ ಸಿಬ್ಬಂದಿಯನ್ನು ನಿಯೋಜಿಸಲಾಗುತ್ತದೆ. ಆವರಣದಲ್ಲಿ ಸಿಸಿ ಕೆಮೆರಾ ಅಳವಡಿಸಲು ಇಷ್ಟರಲ್ಲೇ ವ್ಯವಸ್ಥೆ ಮಾಡಲಾಗುವುದು. ಕಿಡಿಗೇಡಿಗಳನ್ನು ಪತ್ತೆ ಮಾಡಿ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಹೇಳುತ್ತಾರೆ.

ನಮ್ಮ ಜಿಲ್ಲೆಗೆ ಬೇಕೇ ಬೇಕು ಒಂದು ಫುಡ್ ಪಾರ್ಕ್: ಇದು ವಿಜಯಪುರ ರೈತರ, ಯುವಕರ, ಉದ್ಯಮಿಗಳ ಆಗ್ರಹ

Follow us on

Related Stories

Most Read Stories

Click on your DTH Provider to Add TV9 Kannada