ಹಾಸನ: ಇಲ್ಲಿನ ಹೊಳೆನರಸೀಪುರದಲ್ಲಿ ನಿಯಮ ಉಲ್ಲಂಘಿಸಿ ಮದುವೆ ಮಾಡುತ್ತಿದ್ದವರಿಗೆ ದಂಡ ವಿಧಿಸಲಾಗಿದೆ. ಹಾಸನ ಜಿಲ್ಲೆ ಪೊಲೀಸರು ನಿಯಮ ಮೀರಿ ಮದುವೆ ಮಾಡುತ್ತಿದ್ದವರ ಮೇಲೆ ದಂಡ ಹಾಕಿದ್ದಾರೆ. ಮದುವೆ ಕಾರ್ಯಕ್ರಮದಲ್ಲಿ ಕೊವಿಡ್ ನಿಯಮ ಮೀರಿ 50ಕ್ಕೂ ಹೆಚ್ಚು ಜನರು ಭಾಗಿಯಾಗಿದ್ದರು. ಈ ಕಾರಣದಿಂದ ಮದುವೆ ಮನೆಯವರಿಗೆ 5 ಸಾವಿರ ರೂಪಾಯಿ ದಂಡ ಹಾಕಲಾಗಿದೆ.
ಮದುವೆ ಸಮಾರಂಭದಲ್ಲಿ ಮಾಸ್ಕ್ ಧರಿಸದೆ, ದೈಹಿಕ ಅಂತರ ಪಾಲಿಸದ ಜನರನ್ನು ಪೊಲೀಸರು ಕಲ್ಯಾಣ ಮಂಟಪದಿಂದ ಹೊರಗೆ ಕಳುಹಿಸಿದ್ದಾರೆ. ಘಟನೆ ಮರುಕಳಿಸಿದರೆ ಕಲ್ಯಾಣ ಮಂಟಪದ ಮಾಲೀಕರಿಗೆ ಕೇಸ್ ಹಾಕುವುದಾಗಿ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.
ಬೆಂಗಳೂರು: ನವ ವಿವಾಹಿತರು ತೆರಳ್ತಿದ್ದ ಕಾರು ಬಿಟ್ಟು ಕಳಿಸಿದ ಪೊಲೀಸರು
ನಗರದ ಟ್ರಿನಿಟಿ ಸರ್ಕಲ್ನಲ್ಲಿ ಪೊಲೀಸರು ತಪಾಸಣೆಯಲ್ಲಿ ತೊಡಗಿದ್ದಾರೆ. ಈ ವೇಳೆ ಪೊಲೀಸರು ನವವಿವಾಹಿತರ ಕಾರು ತಡೆದಿದ್ದರು. ಮದುವೆ ಆದ ನವಜೋಡಿ ಪೊಲೀಸರಿಗೆ ಹಾರ, ಮಾಂಗಲ್ಯ ತೋರಿಸಿದರು. ಹೀಗಾಗಿ, ನವ ಜೋಡಿಗೆ ಒಳ್ಳೆಯದಾಗಲಿ ಎಂದು ಶುಭಹಾರೈಸಿ ಪೊಲೀಸರು ಬಿಟ್ಟುಕಳಿಸಿದ್ದಾರೆ.
ಮದುವೆಗೆ ಹೊಸ ಗೈಡ್ಲೈನ್ಸ್
ಕೊರೊನಾ ಸೋಂಕು ತೀವ್ರಗತಿಯಲ್ಲಿ ಹರಡುತ್ತಿರುವ ಕಾರಣ ಹಾಗೂ ಸೋಂಕನ್ನು ನಿಯಂತ್ರಿಸುವ ಅನಿವಾರ್ಯತೆ ಇರುವುದರಿಂದ ಕಠಿಣ ಮಾರ್ಗಸೂಚಿಯನ್ನು ಸರ್ಕಾರ ಜಾರಿಗೊಳಿಸಿದೆ. 10ನೇ ತಾರೀಕಿನಿಂದ ಜಾರಿಯಲ್ಲಿರುವಂತೆ ಹೊಸ ನಿಯಮಾವಳಿಗಳನ್ನು ಸರ್ಕಾರ ರೂಪಿಸಿದೆ. ಇದೀಗ ಮದುವೆ ಸಮಾರಂಭಕ್ಕೆ ಸಂಬಂಧಿಸಿ ಹೊಸ ಗೈಡ್ಲೈನ್ ಪ್ರಕಟವಾಗಿದೆ. ಅದರನ್ವಯ ಬದಲಿಯಾದ ನಿಯಮಾವಳಿಗಳು ಈ ಕೆಳಗಿನಂತಿದೆ.
ಲಾಕ್‌ಡೌನ್ ವೇಳೆ ಮದುವೆಗೆ 40 ಜನರಿಗೆ ಮಾತ್ರ ಅವಕಾಶ ನೀಡಲಾಗುತ್ತದೆ. ಮದುವೆಗೆ ಹಾಜರಾಗುವವರಿಗೆ ಪಾಸ್ ಫಿಕ್ಸ್ ಮಾಡಿ ಆದೇಶ ಹೊರಡಿಸಲಾಗಿದೆ. ಮದುವೆ ಸಮಾರಂಭವನ್ನು ಅವರ ಮನೆಗಳಲ್ಲೇ ಮಾಡಬೇಕು ಎಂದು ಸೂಚಿಸಲಾಗಿದೆ. ಮದುವೆ ಕಾರ್ಯಕ್ರಮಕ್ಕೆ ಆಹ್ವಾನ ಪತ್ರಿಕೆ ತೋರಿಸಿ ಅಧಿಕಾರಿಗಳ ಅನುಮತಿ ಅಗತ್ಯವಾಗಿದೆ. ಬಿಬಿಎಂಪಿ ಅಥವಾ ತಹಶೀಲ್ದಾರ್‌ಗಳಿಂದ ಪಾಸ್ ಪಡೆದಿರಬೇಕು ಎಂದು ತಿಳಿಸಲಾಗಿದೆ.
ಮದುವೆಯಲ್ಲಿ ಭಾಗಿಯಾಗುವ 40 ಅತಿಥಿಗಳಿಗೂ ಪಾಸ್ ನೀಡಬೇಕು. ಪಾಸ್ ಹೊಂದಿರುವವರಿಗೆ ಮಾತ್ರವೇ ಮದುವೆಗೆ ಪ್ರವೇಶ. ಷರತ್ತು ಉಲ್ಲಂಘಿಸಿದ್ರೆ ಮದುವೆ ಆಯೋಜಕರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಸರ್ಕಾರ ಮದುವೆ ಸಮಾರಂಭಕ್ಕೆ ಇನ್ನಷ್ಟು ಷರತ್ತು ಹೇರಿದೆ. ಜೊತೆಗೆ ಯಾವುದೇ ಕಾರಣಕ್ಕೂ ಪಾಸ್ ವರ್ಗಾಯಿಸುವಂತಿಲ್ಲ. ಪಾಸ್ ವರ್ಗಾಯಿಸಿದ್ರೆ ಕಠಿಣ ಕ್ರಮಕೈಗೊಳ್ಳುವ ಎಚ್ಚರಿಕೆಯನ್ನೂ ನೀಡಲಾಗಿದೆ.
ಇದನ್ನೂ ಓದಿ: ಲಾಕ್‌ಡೌನ್ ಅವಧಿಯಲ್ಲಿ ಮದುವೆ ನಡೆಸಲು ಹೊಸ ಗೈಡ್ಲೈನ್ಸ್ ಬಿಡುಗಡೆ; ವಿವರ ಇಲ್ಲಿದೆ
Published On - 5:27 pm, Sun, 9 May 21