ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಸಾವಿನ ಸಂಖ್ಯೆ ಹೆಚ್ಚುತ್ತಿದೆ. ತಮ್ಮ ಕಣ್ಣ ಮುಂದೆಯೇ ತಮ್ಮವರು ನರಳು ತಿದ್ದರೂ ಏನು ಮಾಡಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಬೆಂಗಳೂರಿನ ಚಿತಾಗಾರದ ಮುಂದೆ ಕೊರೊನಾ ವಾರಿಯರ್ ಕಣ್ಣೀರು ಹಾಕಿದ್ದಾರೆ. ಪೊಲೀಸ್ ಸಿಬ್ಬಂದಿ ತಮ್ಮ ತಾಯಿಯನ್ನು ಕಳೆದುಕೊಂಡು ಬಿಕ್ಕಿ ಬಿಕ್ಕಿ ಅತ್ತಿದ್ದಂತಹ ಕರುಳು ಹಿಂಡುವ ಘಟನೆ ನಡೆದಿದೆ.
ನಿನ್ನೆ ತಡರಾತ್ರಿ ಕೊರೊನಾದಿಂದ ಬಲಿಯಾದ ತಾಯಿಯನ್ನು ನೋಡಲು ರಾತ್ರಿ 10 ಗಂಟೆಗೆ ಸುಮನಹಳ್ಳಿ ಚಿತಾಗಾರದ ಬಳಿ ಬಂದು ಕಾಯ್ತಿದ್ದ ಹಲಸೂರು ಗೇಟ್ ಪೊಲೀಸ್ ಸಿಬ್ಬಂದಿ ತಾಯಿಯ ಶವ ಬಂದ ಬಳಿಕ ಆ್ಯಂಬುಲೆನ್ಸ್ ತಬ್ಬಿ ಕಣ್ಣೀರು ಹಾಕಿದ್ದಾರೆ. 58 ವರ್ಷದ ಲಕ್ಷ್ಮೀ ಕೊರೊನಾಗೆ ಬಲಿಯಾದ ತಾಯಿ. ಇವರ ಪತಿ ಕೂಡ ನಿವೃತ್ತ ಪೊಲೀಸ್ ಸಿಬ್ಬಂದಿ. ಮಗ ಕೂಡ ಈಗ ಹಲಸೂರು ಗೇಟ್ ಪೊಲೀಸ್ ಠಾಣೆಯ ಸಿಬ್ಬಂದಿ. ಕೊರೊನಾ ವಾರಿಯರ್ ಆದ ಈ ಕುಟುಂಬ ಕೊನೆ ಕ್ಷಣದಲ್ಲಿ ತಾಯಿಯನ್ನು ಉಳಿಸಿಕೊಳ್ಳಲು ಪರದಾಡಿದೆ.
100 ಕ್ಕೂ ಹೆಚ್ಚು ಆಸ್ಪತ್ರೆಗಳನ್ನು ಅಲೆದಾಡಿ ಬೆಡ್ಗಾಗಿ ಅಂಗಲಾಚಿದೆ. ಕೊಲಂಬಿಯಾ ಏಷಿಯಾದಲ್ಲಿ ಕಾಲಿಗೆ ಬಿದ್ರೂ ಇವರಿಗೆ ಬೆಡ್ ಸಿಕ್ಕಿಲ್ಲ. ಕೊನೆಗೆ ವಿಜಯನಗರ ಮಾರುತಿ ಆಸ್ಪತ್ರೆಗೆ ಕೊರೊನಾ ಸೋಂಕಿತ ತಾಯಿಯನ್ನು ದಾಖಲಿಸಿದ್ದಾರೆ. ಆದ್ರೆ ಅಲ್ಲಿ ಒಂದೇ ದಿನಕ್ಕೆ 1 ಲಕ್ಷ 14 ಸಾವಿರ ಬಿಲ್ ಮಾಡಿದ್ದಾರೆ. ಸರಿಯಾದ ಸಮಯಕ್ಕೆ ಆಕ್ಸಿಜನ್ ಸಿಗದ ಹಿನ್ನೆಲೆಯಲ್ಲಿ ನಿನ್ನೆ ಕೊನೆಯುಸಿರೆಳೆದಿದ್ದಾರೆ. ಇಂದು ಬೆಳಗ್ಗೆ 7.30 ಕ್ಕೆ ಅಂತ್ಯಕ್ರಿಯೆ ನಡೆದಿದ್ದು ಸರ್ಕಾರದ ವಿರುದ್ಧ ಸಂಬಂಧಿಕರು ಆಕ್ರೋಶ ಹೊರ ಹಾಕಿದ್ದಾರೆ.
ದರಿದ್ರ ಸರ್ಕಾರ ಇದು. ಕೊರೊನಾ ವಾರಿಯರ್ಸ್ ಅಂತಾರೆ ಅವರಿಗೆ ಈ ಗತಿ ಬಂದಿದೆ. ಸರ್ಕಾರಕ್ಕೆ ನಾಚಿಕೆಯಾಗಬೇಕು. ಎಷ್ಟೇ ಅಲೆದರೂ ಒಂದು ವೆಂಟಿಲೇಟರ್ ಬೆಡ್ ಸಿಗಲಿಲ್ಲ. ಬೊಮ್ಮಾಯಿ ಅವರ ಹೆಂಡತಿ ಮಕ್ಕಳನ್ನ ಮೊದಲು ಕಾಪಾಡಿಕೊಳ್ಳಲಿ. ಸರಿಯಾದ ವ್ಯವಸ್ಥೆ ಮಾಡಿಲ್ಲ ಎಂದು ಮೃತರ ಸಂಬಂಧಿ ಆಕ್ರೋಶ ಹೊರಹಾಕಿದ್ದಾರೆ.
ಇದನ್ನೂ ಓದಿ: ನಾವು ಲಸಿಕೆ ಹಾಕಿಸಿಕೊಳ್ಳೋದಿಲ್ಲ; ಇಲ್ಲಿ ಬಂದು ಕೊರೊನಾ ಹಬ್ಬಿಸಬೇಡಿ ಎಂದು ವಿಶ್ವನಾಥ್ ವಿರುದ್ಧ ಗರಂ ಆದ ಹಾಡಿ ಜನ
Published On - 11:19 am, Thu, 22 April 21