ಸೋನಿಯಾ ಮಾತ್ರವಲ್ಲ ಯಡಿಯೂರಪ್ಪ, ವಿಜಯೇಂದ್ರ ಕೂಡ ಜೈಲಿಗೆ ಹೋಗುತ್ತಾರೆ: ಹೊಸ ಬಾಂಬ್ ಸಿಡಿಸಿದ ಯತ್ನಾಳ್
ಸೋನಿಯಾ ಗಾಂಧಿ ಮಾತ್ರವಲ್ಲ, ಯಡಿಯೂರಪ್ಪ ಮತ್ತು ವಿಜಯೇಂದ್ರ ಕೂಡ ಜೈಲಿಗೆ ಹೋಗುತ್ತಾರೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ಹಾವೇರಿ: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ (B.S.Yediyurappa) ಮತ್ತು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ (B.Y.Vijayendra) ಅವರ ವಿರುದ್ಧ ಗುಡುಗಿರುವ ವಿಜಯಪುರದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basavana gowda Patil Yatnal), ಸೋನಿಯಾ ಗಾಂಧಿ (Sonia Gandhi) ಮಾತ್ರವಲ್ಲ, ಯಡಿಯೂರಪ್ಪ ಮತ್ತು ವಿಜಯೇಂದ್ರ ಕೂಡ ಜೈಲಿಗೆ ಹೋಗುತ್ತಾರೆ ಎಂದು ಹೇಳಿದ್ದಾರೆ. ಯಡಿಯೂರಪ್ಪ ಆಪ್ತ ಉಮೇಶ್ ಮನೆಯಲ್ಲಿ ಸಿಕ್ಕ ಕೋಟ್ಯಾಂತರ ರೂ. ಬಿಎಸ್ ಯಡಿಯೂರಪ್ಪ ಹಾಗೂ ವಿಜಯೇಂದ್ರ ಅವರಿಗೆ ಸೇರಿದ್ದು ಎಂದು ಗಂಭೀರ ಆರೋಪ ಮಾಡಿದ್ದಾರೆ.
ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ಬೇಲೂರು ಗ್ರಾಮದಲ್ಲಿ ಪಂಚಮಸಾಲಿ ಸಮಾಜದ 2ಎ ಮೀಸಲಾತಿ ಹೋರಾಟದ ಸಭೆಯಲ್ಲಿ ಭಾಗವಹಿಸಲು ಆಗಮಿಸಿದ್ದ ವೇಳೆ ಮಾತನಾಡಿದ ಅವರು, ಕಾಂಗ್ರೆಸ್ನವರು ಮಾತ್ರವಲ್ಲ ಬಿಜೆಪಿಯ ಯಡಿಯೂರಪ್ಪ ಮತ್ತು ಅವರ ಮಗ ವಿಜಯೇಂದ್ರ ಜೈಲಿಗೆ ಹೋಗುವ ಸಮಯ ಬರುತ್ತದೆ. ದುಬೈ ಮತ್ತು ಮಾರಿಸಸ್ನಲ್ಲಿ ಆಸ್ತಿ ಮಾಡಿಟ್ಟ ಹಿನ್ನೆಲೆ ವಿಜಯೇಂದ್ರ ಆಗಾಗ ದುಬೈ ಮತ್ತು ಮಾರಿಸಸ್ಗೆ ಹೋಗುತ್ತಾರೆ. ಯಡಿಯೂರಪ್ಪ ಆಪ್ತ ಉಮೇಶ ಮನೆಯಲ್ಲಿ ಸಿಕ್ಕ 10 ಸಾವಿರ ಕೋಟಿ ರೂ. ಯಡಿಯೂರಪ್ಪ ಮತ್ತು ವಿಜಯೇಂದ್ರಗೆ ಸೇರಿದ್ದು ಎಂದರು.
ಬ್ರಿಟನ್ ರಾಣಿಯ ನಂತರ ಸೋನಿಯಾ ಗಾಂಧಿಯೇ ದೊಡ್ಡ ಶ್ರೀಮಂತೆಯಾಗಿದ್ದಾರೆ. ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ವಿರುದ್ಧ ಇಡಿ ತನಿಖೆ ಮಾಡಲು ಕೇಂದ್ರ ಸರಕಾರ ಒತ್ತಡ ಹಾಕಿಲ್ಲ. ಬದಲಾಗಿ ಸುಪ್ರೀಂಕೋರ್ಟ್ ಆದೇಶದಂತೆ ಇಡಿ ತನಿಖೆ ನಡೆಯುತ್ತಿದೆ ಎಂದು ಹೇಳಿದರು.
ಇದನ್ನೂ ಓದಿ: ನ್ಯಾಷನಲ್ ಹೆರಾಲ್ಡ್ ಪ್ರಕರಣ; ಕೂಡಲೇ ಮಧ್ಯ ಪ್ರವೇಶಿಸುವಂತೆ ರಾಷ್ಟ್ರಪತಿಗೆ ಮನವಿ ಸಲ್ಲಿಸಿದ ಕೆಪಿಸಿಸಿ
ಸಿಎಂ ಬದಲಾವಣೆ ಸುಳ್ಳು ಸುದ್ದಿ
ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಎಂಬುದು ಸುಳ್ಳು ಸಿದ್ದಿಯಾಗಿದೆ. ಜೂ.18ರಂದು ಪಕ್ಷದ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಅವರು ರಾಜ್ಯಕ್ಕೆ ಆಗಮಿಸುವ ವೇಳೆ ಈ ಬಗ್ಗೆ ಸ್ಪಷ್ಟ ಸಂದೇಶ ನೀಡಲಿದ್ದಾರೆ. ಕೆಲವು ಸ್ವಾಮೀಜಿಗಳು 10 ಕೋಟಿ ರೂಪಾಯಿ ಹೊಡೆದು ಮೀಸಲಾತಿ ಹೋರಾಟ ಮಾಡುವುದನ್ನು ಬಿಟ್ಟು ಸುಮ್ಮನಿದ್ದಾರೆ. ಕೋಟ್ಯಾಂತರ ರೂಪಾಯಿ ಪಡೆದು ಬೊಮ್ಮಾಯಿಯವರೆ ಗಡಿಬಿಡಿ ಮಾಡಬೇಡಿ, ಮೀಸಲಾತಿ ಬೇಗನೆ ಕೊಡಬೇಡಿ ಅಂದಿದ್ದಾರೆ. ನಮ್ಮ ಬಸವಜಯ ಮೃತ್ಯುಂಜಯ ಸ್ವಾಮೀಜಿಗಳಂತೆ ಎಂದೂ ಕಟ್ಟಕಡೆಯ ಹಳ್ಳಿಗೆ ಹೋಗಿ ಹೋರಾಟ ಮಾಡಿಲ್ಲ. ಶೀಘ್ರವೇ ಮಠದ ಹತ್ತು ಕೋಟಿ ರೂಪಾಯಿ ಹಗರಣ ಬೆಳಕಿಗೆ ಬರಲಿದೆ ಎಂದು ಯತ್ನಾಳ್ ಹೇಳಿದರು.
ಯಡಿಯೂರಪ್ಪ ಅವರು ಮಠಕ್ಕೆ 10 ಕೋಟಿ ಕೊಟ್ಟು ಸಮಾಜವನ್ನು ಖರೀದಿ ಮಾಡಿದ್ದೇವೆ ಎಂದು ತಿಳಿದುಕೊಂಡಿದ್ದರು. ಈಗ ಅವರ ಜೊತೆ ಅವರು ಅಂದುಕೊಂಡಂತೆ ಲಿಂಗಾಯತ ಸಮಾಜವಿಲ್ಲ. ಕೆಲವು ಫರ್ಸೆಂಟ್ ಮಾತ್ರ ಇದೆ. ನಮ್ಮ ಸ್ವಾಮೀಜಿಗಳ ಹೋರಾಟ ಜೋರಾಗುತ್ತಿದ್ದಂತೆ ನಿನ್ನೆ ಮುಖ್ಯಮಂತ್ರಿ ಅವರಿಗೆ ಗಡಿಬಿಡಿ ಮಾಡಬೇಡಿ ಅಂದವರಏ ನಿನ್ನೆ ಮನವಿ ಪತ್ರ ನೀಡಿದ್ದಾರೆ ಅಂತಾ ಪರೋಕ್ಷವಾಗಿ ವಚನಾನಂದ ಸ್ವಾಮೀಜಿ ವಿರುದ್ಧ ವಾಗ್ದಾಳಿ ನಡೆಸಿದರು.
ಇದನ್ನೂ ಓದಿ: ಪ್ರತಿಭಟನೆಯಲ್ಲಿ ಓವರ್ ಆ್ಯಕ್ಟಿಂಗ್ ಮಾಡಿದವರಿಗೆ ಬಹುಮಾನ, ಕ್ಯಾಮೆರಾ ಕಂಡ ಕೂಡಲೆ ಆ್ಯಕ್ಟಿಂಗ್ ಶುರು: ರಾಜುಗೌಡ ವ್ಯಂಗ್ಯ
ಮಂತ್ರಿ ಸ್ಥಾನದ ಪಟ್ಟಿಯಲ್ಲಿ ಯತ್ನಾಳ್ ನಂ.1:
ಮುಖ್ಯಮಂತ್ರಿ ಸ್ಥಾನದ ವಿಚಾರವಾಗಿ ಮಾತನಾಡಿದ ಯತ್ನಾಳ್, ನಾನೇನು ಮಂತ್ರಿ ಆಗಬೇಕು ಅಂದವನಲ್ಲ. ಮುಖ್ಯಮಂತ್ರಿ ಅವರು ಯತ್ನಾಳರೇ ಮಂತ್ರಿ ಸ್ಥಾನದ ಪಟ್ಟಿಯಲ್ಲಿ ನಿಮ್ಮ ಹೆಸರೇ ಮೊದಲಿದೆ ಅಂದಿದ್ದಾರೆ. ಆದರೆ ನನಗೆ ಮಂತ್ರಿ, ಉಪಮುಖ್ಯಮಂತ್ರಿ, ಹತ್ತು ಖಾತೆ ಕೊಟ್ಟರೂ ಬೇಡ. ನಮ್ಮ ಸಮಾಜಕ್ಕೆ ಮೀಸಲಾತಿ ಕೊಡಿ ಸಾಕು ಅಂದಿದ್ದೇನೆ. 2ಎ ಮೀಸಲಾತಿ ಕೊಟ್ಟರೆ ನಮ್ಮ ಸಮಾಜ ಬಿಜೆಪಿ ಪರ ನಿಲ್ಲಲಿದೆ. ಇಲ್ಲದಿದ್ದರೆ ನಿನ್ನೆ ಬೆಳಗಾವಿ ರಿಸಲ್ಟ್ ನೋಡಿದ್ದೀರಲ್ಲ ಎಂದ ಅವರು, ಸಿಎಂ ಬಸವರಾಜ ಬೊಮ್ಮಾಯ್ ಅವರು ಈ ತಿಂಗಳ 22ರಂದು ಮೀಸಲಾತಿ ಸಂಬಂಧ ಸ್ಪಷ್ಟ ನಿಲುವು ವ್ಯಕ್ತಪಡಿಸುತ್ತಾರೆ ಎಂಬ ವಿಶ್ವಾಸವಿದೆ. ಸ್ಪಷ್ಟ ನಿಲುವು ವ್ಯಕ್ತವಾಗದಿದ್ದಲ್ಲಿ ಜೂ.22ರ ನಂತರ ಹೋರಾಟದ ರೂಪುರೇಷೆ ಬಗ್ಗೆ ನಿರ್ಣಯ ಆಗಲಿದೆ ಎಂದಿದ್ದಾರೆ.
ರಾಜಕೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ