ಬಳ್ಳಾರಿ: ಜಿಲ್ಲೆಯಲ್ಲಿ ಬೇಸಿಗೆ ಕಾಲ ಬಂದರೆ ಸಾಕು ಜನರು ಸೂರ್ಯದೇವನ ಪ್ರತಾಪಕ್ಕೆ ಹೈರಾಣಾಗಿ ಹೋಗುತ್ತಾರೆ. ಬೀಸುವ ಬಿಸಿ ಗಾಳಿ, ಕೆಂಡದಂತಹ ಉರಿಬಿಸಿಲಿಗೆ ಜನರು ಹೊರಗಡೆ ಬರಲು ಹಿಂದೇಟು ಹಾಕುತ್ತಾರೆ. ಈ ನಡುವೆ ಸರ್ಕಾರಿ ಕಚೇರಿಗಳಲ್ಲಿ ಕೆಲಸ ಮಾಡುವ ಸಿಬ್ಬಂದಿಗಳು ಬಿಸಿ ಬಿಸಿ ಗಾಳಿ ಸೆಕೆಗೆ ಸುಸ್ತಾಗಿ ಹೋಗಿ ಬಿಡುತ್ತಾರೆ. ಆದರೆ ಇದೇ ಗಣಿನಾಡು ಬಳ್ಳಾರಿ ನಗರದಲ್ಲೊಂದು ಸರ್ಕಾರಿ ಕಚೇರಿಗೆ ಯಾವುದೇ ಬಿಸಿಲು ತಾಕುವುದಿಲ್ಲ. ಈ ಕಚೇರಿಗೆ ಎಸಿ ಬೇಕಿಲ್ಲ, ಫ್ಯಾನ್ ಬೇಕಿಲ್ಲ, ವರ್ಷದ ಎಲ್ಲಾ ದಿನಗಳಲ್ಲೂ ಈ ಕಚೇರಿ ತಂಪಾಗಿ ಇರುತ್ತದೆ.
ಬಳ್ಳಾರಿ ಸೂಪರಿಂಟೆಂಡೆಟ್ ಅಂಚೆ ಕಚೇರಿಯಲ್ಲಿ ಬೇಸಿಗೆ ಕಾಲದಲ್ಲೂ ತಂಪಅಗಿರುತ್ತದೆ. ಯಾಕೇಂದ್ರೆ ಈ ಕಟ್ಟಡ ಬ್ರಿಟಿಷರ ಆಳ್ವಿಕೆಯೊಂದಿಗೆ ಭಾರತಕ್ಕೆ ಕಾಲಿಟ್ಟ ಐರೋಪ್ಯ ವಸಾಹತು ಪೂರ್ವ ಶೈಲಿಯಲ್ಲಿದೆ. ಈ ಕಟ್ಟಡ ಅಗಲವಾಗಿ ಚಾಚಿರುವ ಛಾವಣಿ, ವೃತ್ತಾಕಾರದ ಕಿಂಡಿಗಳು, ವಾಸ್ತುಶೈಲಿ ವೈಶಿಷ್ಟವಾಗಿದೆ. ಸುಮಾರು 1870 ರಲ್ಲಿ ಮದ್ರಾಸ್ ಪ್ರೆಸಿಡೆನ್ಸಿ ಕಾಲದಲ್ಲಿ ನಿರ್ಮಿಸಿರುವ ಈ ಕಟ್ಟಡದಲ್ಲಿ ಒಂದು ಪಿಲ್ಲರ್ ಕೂಡ ಇಲ್ಲ. 30 ಕಮಾನುಗಳಿವೆ, 16 ಬಾಗಿಲುಗಳಿವೆ, 58 ಅಗಲ, 166 ಅಡಿ ಉದ್ದ, 34.6 ಅಡಿ ಎತ್ತರದಲ್ಲಿ ಅರ್ಲಿ ಕೊಲಾನಿಯಲ್ ಮಾದರಿಯಲ್ಲಿ ಈ ಕಟ್ಟಡ ನಿರ್ಮಿಸಲಾಗಿದೆ.
ವಿಶಿಷ್ಟ ಶೈಲಿ,ವಿನ್ಯಾಸಕಾರದಲ್ಲಿ ನಿರ್ಮಿಸಿರುವ ಈ ಕಟ್ಟಡದಲ್ಲಿ ಗಾಳಿ ಬೆಳಕು ಹೇರಳವಾಗಿ ಬರುತ್ತದೆ. ಈ ಕಚೇರಿಯಲ್ಲಿ ಫ್ಯಾನ್,ಲೈಟ್,ಇದ್ದರೂ ಇವುಗಳನ್ನ ಬಳಸುವುದಿಲ್ಲ.ಇನ್ನೂ ಈ ಕಟ್ಟಡ ಪಕ್ಕದಲ್ಲಿಯೇ ಪ್ರಸಿದ್ಧ ಏಕಾಶಿಲಾ ಬೆಟ್ಟವಿದ್ದರೂ ಬಿಸಿಲಿನ ಧಗೆ ಈ ಕಚೇರಿಯ ಕಟ್ಟಡಕ್ಕೆ ತಾಕುವುದಿಲ್ಲ. ಅಂದಿನ ಕಾಲದಲ್ಲಿ ಈ ಕಟ್ಟಡವನ್ನ ಅತಿಥಿಗೃಹವಾಗಿ ಬಳಸುತ್ತಿದ್ದರು. ನಂತರ ಮದ್ರಾಸ್ ಪ್ರೆಸಿಡೆನ್ಸಿ ಅವಧಿಯಲ್ಲಿ ಬಳ್ಳಾರಿ, ಅನಂತಪುರ, ಕರ್ನೂಲ್, ಕಡಪ ಜಿಲ್ಲೆಗಳ ಮುಖ್ಯ ಅಂಚೆ ಕಚೇರಿ ಇದಾಗಿತ್ತು. ಇದೀಗ ಸೂಪರಿಂಟೆಂಡೆಟ್ ಕಚೇರಿಯಾಗಿದೆ.
ಆಗಿನ ಕಾಲದಲ್ಲಿ ಬ್ರಿಟಿಷರು ಬಳ್ಳಾರಿಯ ಬಿಸಿಲಿನಿಂದ ಆಸರೆ ಪಡೆಯಲು ಇಂತಹ ಕಟ್ಟಡ ನಿರ್ಮಾಣ ಮಾಡಿದ್ದರು ಎನ್ನಲಾಗಿದೆ. ಸದ್ಯ ಬಳ್ಳಾರಿಯಲ್ಲಿ ಈಗ 40-42 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶವಿದ್ದರೂ, ಈ ಕಚೇರಿ ಒಂದರಲ್ಲಿ ಮಾತ್ರ ತಂಪಾದ ವಾತಾವರಣ ಇರುತ್ತದೆ. ಕಚೇರಿ ಕೆಲಸದಲ್ಲಿ ಎಷ್ಟೇ ಒತ್ತಡವಿದ್ದರೂ ಕಚೇರಿಯಲ್ಲಿನ ವಾತವರಣದಿಂದ ಸಿಬ್ಬಂದಿಗಳು ಚೆನ್ನಾಗಿ ಕೆಲಸ ಮಾಡಬಹುದು ಎಂದು ಅಂಚೆ ಇಲಾಖೆ ಅಕೌಂಟ್ ಅಫೀಸರ್ ಜ್ಯೋತಿ ಹೇಳಿದ್ದಾರೆ.
ಈಗ ನಿರ್ಮಾಣ ಮಾಡುತ್ತಿರುವ ಸರ್ಕಾರಿ ಕಟ್ಟಡಗಳಲ್ಲಿ ಬೇಸಿಗೆ ಕಾಲದಲ್ಲಿ ಎಸಿ, ಇಲ್ಲವೇ ಕನಿಷ್ಠ ಫ್ಯಾನೂಗಳು ಬೇಕು ಬೇಕು. ಇಲ್ಲವಾದಲ್ಲಿ ಸಿಬ್ಬಂದಿಗಳು ಕೆಲಸ ಮಾಡುವುದು ಕಷ್ಟ. ಆದರೆ ವಿಭಿನ್ನ ಶೈಲಿಯಲ್ಲಿ ನಿರ್ಮಾಣ ಮಾಡಿರುವ ಬಳ್ಳಾರಿಯ ಈ ಅಂಚೆ ಕಚೇರಿ ಮಾತ್ರ ಬಿರುಬಿಸಿಲು ಕಾಲದಲ್ಲೂ ತಂಪಾಗಿರುವುದು ವಿಶೇಷ.
(ವರದಿ: ಬಸವರಾಜ ಹರನಹಳ್ಳಿ- 998091455)
ಇದನ್ನೂ ಓದಿ:
ಮಲ್ಲೇಶ್ವರಂನಲ್ಲಿ ಮರುಜೀವ ಪಡೆಯುತ್ತಿದೆ ಹೆಚ್.ವಿ.ನಂಜುಂಡಯ್ಯ ವಾಸವಿದ್ದ ಪಾರಂಪರಿಕ ಕಟ್ಟಡ..
ಮಹಾರಾಷ್ಟ್ರ: ಥಾಣೆ ಬಳಿ ವಸತಿ ಕಟ್ಟಡದಲ್ಲಿ ಬೆಂಕಿ ಅವಘಡ; 28 ವಿದ್ಯುತ್ ಮೀಟರ್ಗಳು ಭಸ್ಮ
(Post Office Building is cool in summer days also in Bellari)