ಅಕಾಲಿಕ ಮಳೆಗೆ ನಲುಗಿದ ಯಾದಗಿರಿ; ವರುಣನ ಅಬ್ಬರಕ್ಕೆ ಶೇಂಗಾ ಬೆಳೆ ನೀರು ಪಾಲು
ಶೇಂಗಾ ಬೆಳೆಯನ್ನು ಎಪಿಎಂಸಿ ಯಾರ್ಡ್ನಲ್ಲಿ ಒಣ ಹಾಕಿ ಮಾರಾಟ ಮಾಡಲು ಯೋಜನೆ ಮಾಡಲಾಗಿತ್ತು. ಆದರೆ ಸಂಜೆ ಸುರಿದ ಅಕಾಲಿಕ ಬಾರಿ ಮಳೆ ಎಲ್ಲ ಉಲ್ಟಾ ಮಾಡಿದೆ.
ಯಾದಗಿರಿ: ಮಳೆ ಬಂದಷ್ಟು ಚಂದ ಮಗ ಉಂಡಷ್ಟು ಚಂದ ಎನ್ನುತ್ತಾರೆ. ಆದರೆ ಎಪ್ರಿಲ್ 5 ರಂದು ಸಂಜೆ ಯಾದಗಿರಿ ಜಿಲ್ಲೆಯಲ್ಲಿ ಸುರಿದ ಅಕಾಲಿಕ ಮಳೆಯಿಂದ ಅವಾಂತರ ಸೃಷ್ಟಿಯಾಗಿದೆ. ಮಳೆ ಅಬ್ಬರಕ್ಕೆ ಎಪಿಎಂಸಿ ಯಾರ್ಡ್ ಸಂಪೂರ್ಣ ಹಳ್ಳದಂತಾಗಿ ರೈತರು ಮಾರಾಟ ಮಾಡಲು ತಂದಿದ್ದ ಬೆಳೆ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದೆ. ಇತ್ತ ರೈತರಿಂದ ಬೆಳೆ ಖರೀದಿ ಮಾಡಿದ ವರ್ತಕರು ಸಹ ಅಕಾಲಿಕ ಮಳೆಗೆ ಕಂಗಲಾಗಿದ್ದಾರೆ.
ಗುಡುಗು, ಗಾಳಿ ಸಹಿತ ಬಾರಿ ಮಳೆಗೆ ಯಾದಗಿರಿ ಜಿಲ್ಲೆಯ ಜನ ಅಕ್ಷರಶಃ ಕಂಗಲಾಗಿ ಹೋಗಿದ್ದಾರೆ. ಬಿಸಿಲಿನ ಹೊಡೆತ್ತಕ್ಕೆ ತತ್ತರಿಸಿದ ಬಿಸಿಲುನಾಡು ಯಾದಗಿರಿ ಜಿಲ್ಲೆಯ ಜನರಿಗೆ ಮಳೆರಾಯ ತಂಪೇರದರೆ ಇನ್ನೊಂದು ಕಡೆ ರೈತಾಪಿ ವರ್ಗ ಅಕ್ಷರಶಃ ನಲುಗಿ ಹೋಗುವಂತೆ ಮಾಡಿದೆ. ಜಿಲ್ಲೆಯ ನಾನಾ ಗ್ರಾಮಗಳಿಂದ ರೈತರು ರಾಶಿ ಮಾಡಿದ್ದ ಶೇಂಗಾ ಬೆಳೆಯನ್ನ ಮಾರಾಟ ಮಾಡಲು ಯಾದಗಿರಿಗೆ ಬಂದಿದ್ದರು.
ಶೇಂಗಾ ಬೆಳೆಯನ್ನು ಎಪಿಎಂಸಿ ಯಾರ್ಡ್ನಲ್ಲಿ ಒಣ ಹಾಕಿ ಮಾರಾಟ ಮಾಡಲು ಯೋಜನೆ ಮಾಡಲಾಗಿತ್ತು. ಆದರೆ ಸಂಜೆ ಸುರಿದ ಅಕಾಲಿಕ ಬಾರಿ ಮಳೆ ಎಲ್ಲ ಉಲ್ಟಾ ಮಾಡಿದೆ. ಗಾಳಿ ಸಹಿತ ಮಳೆಗೆ ಯಾರ್ಡ್ ನಲ್ಲಿ ಒಣಗಲು ಹಾಕಿದ ಲಕ್ಷಾಂತರ ರೂಪಾಯಿ ಮೌಲ್ಯದ ನೂರಾರು ಚೀಲ ಶೇಂಗಾ ಬೆಳೆ ಮಳೆ ನೀರಿನಲ್ಲಿ ಕೊಚ್ಚಿ ಹೋಗಿದೆ. ನಾಲ್ಕು ತಿಂಗಳು ಕಣ್ಣಲ್ಲಿ ಕಣ್ಣಿಟ್ಟು ಬೆಳೆದು ಇನ್ನೇನು ರಾಶಿ ಮಾಡಿ ಮಾರಾಟ ಮಾಡುವ ಖುಷಿಯಲ್ಲಿ ಇದ್ದೇವು ಮಾಡಿದ ಸಾಲವನ್ನ ತೀರಿಸಬೇಕು ಎಂದುಕೊಂಡಿದ್ದೇವು ಆದರೆ ಮಳೆ ಎಲ್ಲಾ ಹಾಳು ಮಾಡಿದೆ ಎಂದು ರೈತ ಶರಣಪ್ಪ ಹೇಳಿದ್ದಾರೆ.
ಕಳೆದ 15 ದಿನಗಳಿಂದ ಜಿಲ್ಲೆಯಲ್ಲಿ ಭರ್ಜರಿಯಾಗಿ ಶೇಂಗಾ ರಾಶಿಯಾಗುತ್ತಿದೆ. ಹೀಗಾಗಿ ರೈತರು ರಾಶಿ ಮಾಡಿ ಯಾದಗಿರಿ ನಗರದಲ್ಲಿರುವ ಎಪಿಎಂಸಿ ಯಾರ್ಡ್ ಗೆ ಮಾರಾಟ ಮಾಡಲು ಬರುತ್ತಿದ್ದಾರೆ. ಅದರಂತೆ ನಿನ್ನೆಯೂ ಸಹ ನೂರಾರು ರೈತರು ಟ್ರಾಕ್ಟರ್ ಲೋಡ್ ಮಾಡಿಕೊಂಡು ಎಪಿಎಂಸಿ ಯಾರ್ಡ್ ಗೆ ಬಂದಿದ್ದರು. ಆದರೆ ನಿನ್ನೆ ಸುರಿದ ಮಳೆ ರೈತರು ಕಂಗಲಾಗುವಂತೆ ಮಾಡಿದೆ. ಇದಕ್ಕೆಲ್ಲ ಪ್ರಮುಖ ಕಾರಣ ಎಪಿಎಂಸಿ ಅಧಿಕಾರಿಗಳ ನಿರ್ಲಕ್ಷ್ಯ ಎಂದು ವರ್ತಕರಾದ ಪಾಂಡುರಂಗ ಹೇಳಿದ್ದಾರೆ.
ಅವೈಜ್ಞಾನಿಕವಾಗಿ ರಸ್ತೆ ಹಾಗೂ ಚರಂಡಿ ಕಾಮಗಾರಿ ಮಾಡಿದ್ದರಿಂದ ಸಮಸ್ಯೆ ಉಲ್ಬಣಿಸಿದೆ. ಯಾಕೆಂದರೆ ಎಪಿಎಂಸಿ ಯಾರ್ಡ್ನಲ್ಲಿರುವ ರಸ್ತೆಗಳ ಎರಡು ಬದಿಯಲ್ಲಿರುವ ಚರಂಡಿಗಳು ಎತ್ತರದಲ್ಲಿವೆ. ಇದೆ ಕಾರಣಕ್ಕೆ ಮಳೆ ಬಂದರೆ ಸಾಕು ರಸ್ತೆ ಮೇಲಿನ ನೀರು ಚರಂಡಿ ಒಳಗೆ ಹೋಗದೆ ದೊಡ್ಡ ಕಾಲುವೆಯಂತೆ ರಸ್ತೆಯ ಮೇಲೆ ಹರಿದು ರೈತರ ತಂದಂತಹ ಬೆಳೆಯಡಿ ನುಗ್ಗುತ್ತವೆ. ಚರಂಡಿ ರಸ್ತೆಗಿಂತ ಕೆಳ ಮಟ್ಟದಲ್ಲಿ ಇದ್ದಿದ್ದರೆ ರಸ್ತೆ ಮೇಲಿನ ನೀರು ಚರಂಡಿ ಮೂಲಕ ಹರಿದು ಹೋಗುತ್ತಿತ್ತು. ಆದರೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ರೈತರು ಹಾಗೂ ವರ್ತಕರು ಪ್ರತಿ ಬಾರಿ ಮಳೆ ಬಂದಾಗ ಈ ರೀತಿ ಸಂಕಷ್ಟ ಅನುಭವಿಸುವಂತಾಗಿದೆ ಎಂದು ವರ್ತಕರಾದ ಪಾಂಡುರಂಗ ತಿಳಿಸಿದ್ದಾರೆ.
ಇನ್ನು ನಿನ್ನೆ ಸುರಿದ ಮಳೆಗೆ ಯಾದಗಿರಿ ನಗರಸಭೆಯ ಸಭಾಂಗಣದ ಮೇಲ್ಛಾವಣಿ ಕುಸಿದು ಬಿದ್ದು, ಒಳಗಿದ್ದ ಕುರ್ಚಿ ಹಾಗೂ ಟೇಬಲ್ಗಳು ಜಖಮ್ ಆಗಿವೆ. ಇನ್ನು ನಗರದ ಸುಭಾಷ್ ವೃತ್ತದದಲ್ಲಿ ಟೇರಸ್ ಮೇಲೆ ಗೋಡೆ ಕುಸಿದು ಬಿದಿದ್ದು, ಕೆಳಗಿದ್ದ ಹತ್ತಾರು ಬೈಕ್ಗಳು ಜಖಮ್ ಆಗಿವೆ. ಸದ್ಯ ಟೇರಸ್ ಮೇಲಿನ ಗೋಡೆ ಕುಸಿತದ ದೃಶ್ಯ ಮೊಬೈಲ್ ನಲ್ಲಿ ಸೆರೆಯಾಗಿದ್ದು, ಈ ವಿಡಿಯೋ ಸದ್ಯ ವೈರಲ್ ಆಗಿದೆ.
ಒಟ್ಟಿನಲ್ಲಿ ಬಿಸಿಲಿನಿಂದ ಬೆಂಡಾಗಿದ್ದ ಗಿರಿನಾಡಿನ ಜನರಿಗೆ ಮಳೆರಾಯ ತಂಪೇರದರೆ ಇನ್ನೊಂದು ಕಡೆ ರೈತರಿಗೆ ಹೊಡೆತ ನೀಡಿದ್ದಾನೆ. ಇನ್ನು ಯಾದಗಿರಿ ಎಪಿಎಂಸಿ ಅಧಿಕಾರಿಗಳು ಮತ್ತೊಮ್ಮೆ ಮಳೆ ಬರುವುದಕ್ಕೂ ಮೊದಲೆ ರಸ್ತೆ ಮತ್ತು ಚರಂಡಿ ವ್ಯವಸ್ಥೆ ಸರಿ ಪಡಿಸಬೇಕು ಎನ್ನುವುದು ಸದ್ಯ ಸಾರ್ವಜನಿಕರ ಕಳಕಳಿಯಾಗಿದೆ.
(ವರದಿ: ಅಮೀನ್ ಹೊಸುರು- 9980914141)
ಇದನ್ನೂ ಓದಿ: ಟೊಮ್ಯಾಟೊ ದರ ಒಮ್ಮೆಲೆ ಕುಸಿತ: ಬೆಳೆದ ಟೊಮ್ಯಾಟೊವನ್ನೆಲ್ಲಾ ರಸ್ತೆಗೆ ಸುರಿದು ರೈತರ ಆಕ್ರೋಶ
ಭಾರಿ ಮಳೆಗೆ ಗೋಪನಹಳ್ಳಿ ಬಳಿ ಜಮೀನುಗಳು ಜಲಾವೃತ, ಬೆಳೆ ಹಾನಿ
( peanuts crop destroyed by heavy rain in yadgir)