ಬೆಂಗಳೂರು, ಅಕ್ಟೋಬರ್ 16: ಮುಂದಿನ ದಿನಗಳಲ್ಲಿ ವಿದ್ಯುತ್ ಸಮಸ್ಯೆ (Power Problem) ಬಗೆಹರಿಯಲಿದೆ ಎಂದು ಇಂಧನ ಸಚಿವ ಕೆಜೆ ಜಾರ್ಜ್ (KJ George) ಭರವಸೆ ನೀಡಿದರು. ರಾಜ್ಯದಲ್ಲಿ ವಿದ್ಯುತ್ ಅಭಾವ ಇದೆ ಎಂಬ ವರದಿಗಳ ಹಿನ್ನಲೆಯಲ್ಲಿ ಇಂಧನ ಇಲಾಖೆ ಅಧಿಕಾರಿಗಳೊಂದಿಗೆ ಸೋಮವಾರ ಬೆಸ್ಕಾಂ ಕೇಂದ್ರ ಕಚೇರಿಯಲ್ಲಿ ಅವರು ಸಭೆ ನಡೆಸಿದರು. ವಿಡಿಯೋ ಕಾನ್ಫರೆನ್ಸ್ ಮೂಲಕ ಎಲ್ಲಾ ಎಂಡಿಗಳಿಂದ ಮಾಹಿತಿ ಪಡೆದರು. ನಂತರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಇತ್ತೀಚಿಗೆ ಕೆಲ ಸುದ್ದಿಗಳು ಹರಿಡಾಡುತ್ತಿವೆ. ಅವುಗಳಲ್ಲಿ ಸತ್ಯಕ್ಕಿಂತ ಸುಳ್ಳು ಜಾಸ್ತಿ ಇವೆ. ರಾಜ್ಯದಲ್ಲಿ ಮಳೆ ಕಡಿಮೆ ಇದೆ, ಬರ ಕೂಡ ಘೋಷಣೆ ಆಗಿದೆ ಎಂದು ತಿಳಿಸಿದರು.
ಕಳೆದ ಆಗಸ್ಟ್ ಹಾಗೂ ಸೆಪ್ಟೆಂಬರ್ ಅವಧಿಯಲ್ಲಿ ಬೇಡಿಕೆ 8 ಸಾವಿರ ಮೆಗಾ ವ್ಯಾಟ್ ಇತ್ತು. ಈ ವರ್ಷ 16 ಸಾವಿರ ಮೆಗಾ ವ್ಯಾಟ್ ಬೇಡಿಕೆ ಇದೆ. ಒಂದೇ ಸಾರಿ ಇಷ್ಟು ಬೇಡಿಕೆ ಸೃಷ್ಟಿಯಾದಾಗ ಪೂರೈಕೆ ಕಷ್ಟವಾಗುತ್ತದೆ. ಮಳೆ ಕೊರೆತೆ ಹಿನ್ನೆಲೆಯಲ್ಲಿ ವಿಂಡ್, ಸೋಲಾರ್ ಪವರ್ ಕಡಿಮೆ ಆಗಿದೆ. ಈ ಕಾರಣ ವಿದ್ಯುತ್ ಅಭಾವ ಸೃಷ್ಟಿಯಾಗಿದೆ. ಆದರೂ ನಿರ್ವಹಣೆ ಮಾಡಿದ್ದೇವೆ. ಎಲ್ಲಾ ಬ್ಲಾಕ್ ಔಟ್ ಆಗಿದೆ, ಕರ್ನಾಟಕ ಕತ್ತಲೆ ಇದೆ ಎಂದು ಆರೋಪಿಸುತ್ತಿದ್ದಾರೆ ಎಂದು ಜಾರ್ಜ್ ಅಸಮಾಧಾನ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ವಿದ್ಯುತ್ ವಿಚಾರದಲ್ಲಿ ಇಂದಿನ ಈ ಸ್ಥಿತಿಗೆ ಕಾರಣ ಹಿಂದಿನ ಬಿಜೆಪಿ ಸರ್ಕಾರ. ಆದರೆ ನಾವು ಇಲ್ಲಿ ತನಕ ಯಾರನ್ನು ದೂರಿಕೊಂಡು ಬಂದಿಲ್ಲ. ಡಿಕೆ ಶಿವಕುಮಾರ್ ಇಂಧನ ಸಚಿವರಾದಾಗಿದ್ದಾಗ ಹೆಚ್ಚು ಸಂಪನ್ಮೂಲಗಳನ್ನು ಕ್ರೂಡಿಕರಣ ಮಾಡಿದ್ದರು. ಆದರೆ ಹಿಂದಿನ ಬಿಜೆಪಿ ಸರ್ಕಾರ ಅದನ್ನು ಸರಿಯಾಗಿ ನಿಭಾಯಿಸುವ ಕೆಲಸ ಮಾಡಿಲ್ಲ. ಮೊನ್ನೆ ತನಕ ಅಧಿಕಾರದಲ್ಲಿದವರು, ಸಮಸ್ಯೆ ಗೊತ್ತಿದ್ದರು ಈಗ ಆರೋಪ ಮಾಡ್ತಿದ್ದಾರೆ ಎಂದು ಜಾರ್ಜ್ ಟೀಕಿಸಿದರು.
ಇದನ್ನೂ ಓದಿ: ಅಬಕಾರಿ ಇಲಾಖೆಯಲ್ಲಿ ನಡೆಯುತ್ತಿದೆ ಭ್ರಷ್ಟಾಚಾರ: ನಿಜ ಒಪ್ಪಿಕೊಂಡ ಸಚಿವ ತಿಮ್ಮಾಪುರ
ಸೆಕ್ಷನ್ 11ರ ಅಡಿ ಪ್ರೈವೆಟ್ ಕರೆಂಟ್ ಜನರೇಟ್ ಮಾಡುವವರು ಕೂಡ ಸರ್ಕಾರಕ್ಕೆ ಕರೆಂಟ್ ಕೊಡಬೇಕು. ಇದರಿಂದ 1500 ಮೆಗಾವ್ಯಾಟ್ ಸಿಗಲಿದೆ. ಸೆಂಟರ್ ಗ್ರಿಡ್ನಿಂದ ಒದಗಿಸುವಂತೆ ಮನವಿ ಮಾಡಿದ್ದಾರೆ. ಪಂಜಾಬ್, ಉತ್ತರ ಪ್ರದೇಶದಿಂದ ರಿಟರ್ನ್ ಪಾಲಿಸಿ ಅಡಿ, ಅಂದರೆ ರಾಜ್ಯದಲ್ಲಿ ಮಳೆಯಾದ ಬಳಿಕ ವಾಪಸ್ ನೀಡುವ ಬಗ್ಗೆ ಒಪ್ಪಂದ ಮಾಡಿಕೊಂಡಿದ್ದೇವೆ. ಸದ್ಯ ಪಾವಗಡದಲ್ಲಿ 2300 ಮೆಗಾ ವ್ಯಾಟ್ ಉತ್ಪಾದನೆಗೆ ಪ್ಲ್ಯಾನ್ ಮಾಡಿದ್ದೇವೆ ಎಂದು ಜಾರ್ಜ್ ಮಾಹಿತಿ ನೀಡಿದರು.
ನಾವ್ಯಾರೂ ಕಾಣೆಯಾಗಿಲ್ಲ, ಹಗಲು ರಾತ್ರಿ ಕೆಲಸ ಮಾಡುತ್ತಿದ್ದೇವೆ. ಹಿಂದಿನ ಮುಖ್ಯಮಂತ್ರಿ, ಸಚಿವರು ಸಲಹೆ ಕೊಟ್ಟರೆ ಪಡೆಯುತ್ತೇವೆ. ಆದರೆ ಸುಮ್ಮನೆ ಆರೋಪ ಮಾಡುವುದು ಬೇಡ ಎಂದು ಜಾರ್ಜ್ ಹೇಳಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ