ಬೆಂಗಳೂರು ಏಪ್ರಿಲ್ 29: ಹಾಸನ ಹಾಲಿ ಸಂಸದ ಪ್ರಜ್ವಲ್ ರೇವಣ್ಣ (Prjwal Revanna) ಮತ್ತು ಮಾಜಿ ಸಚಿವ ಹಾಗೂ ಹಾಲಿ ಶಾಸಕ ಹೆಚ್ಡಿ ರೇವಣ್ಣ (HD Revanna) ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪಕ್ಕೆ ಸಂಬಂಧಿಸಿದಂತೆ, ಹೆಚ್ಡಿ.ರೇವಣ್ಣ ಇರಲಿ, ಯಾರೇ ಇದ್ದರೂ ಕ್ರಮ ಕೈಗೊಳ್ಳುತ್ತೇವೆ. ದೂರುದಾರರು ಯಾರ ಹೆಸರು ಉಲ್ಲೇಖಿಸಿದ್ದಾರೆ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಜಿ. ಪರಮೇಶ್ವರ (G Parameshwara) ಹೇಳಿದರು. ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸಂತ್ರಸ್ತರಿಗೆ ಭಯ ಹುಟ್ಟಿಸಿದರೇ ಅವರಿಗೆ ನಾವು ಭದ್ರತೆ ನೀಡುತ್ತೇವೆ ಎಂದರು.
ಪ್ರಕರಣದ ತನಿಖೆಯನ್ನು ಎಸ್ಐಟಿಗೆ ವಹಿಸಿದ್ದೇವೆ. ತನಿಖಾ ತಂಡದಲ್ಲಿ ಎಸ್ಪಿ ಮಟ್ಟದ ಅಧಿಕಾರಿಗಳು ಇದ್ದಾರೆ. ಎಸ್ಐಟಿ ಅಧಿಕಾರಿಗಳ ವರದಿ ಬಂದ ನಂತರ ಕ್ರಮ ಕೈಗೊಳ್ಳಲಾಗುತ್ತೆ. ಅಧಿಕಾರಿಗಳು ಪೆನ್ಡ್ರೈವ್, ಸಾಕ್ಷಿ ಎಲ್ಲವನ್ನೂ ಕಲೆ ಹಾಕುತ್ತಿದ್ದಾರೆ. ವಿದೇಶದಿಂದ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ವಾಪಸ್ ಕರೆಸಿಕೊಳ್ಳುತ್ತೇವೆ. ಎಸ್ಐಟಿ ಅಧಿಕಾರಿಗಳಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಲಾಗಿದೆ. ಎಲ್ಲ ವಿಡಿಯೋಗಳನ್ನು ಎಫ್ಎಸ್ಲ್ಗೆ ಕಳುಹಿಸುತ್ತೇವೆ ಎಂದು ಹೇಳಿದರು.
ಹಾಸನ ಜಿಲ್ಲೆಯ ಹಲವು ಮಹಿಳೆಯರ ಜೊತೆಗಿನ ಅಶ್ಲೀಲ ವೀಡಿಯೋ ಚಿತ್ರೀಕರಿಸಿದ ಪ್ರಭಾವಿ ವ್ಯಕ್ತಿಯನ್ನು ಬಂಧಿಸುವಂತೆ ಹಾಸನ ಜಿಲ್ಲಾ ಜನಪರ ಚಳುವಳಿಗಳ ಒಕ್ಕೂಟ ಆಗ್ರಹಿಸಿದೆ. ಅಲ್ಲದೆ ಪೆನ್ಡ್ರೈವ್ ಮೂಲಕ ಮಹಿಳೆಯರ ಅಶ್ಲೀಲ ವೀಡಿಯೋ ಹಂಚಿ ಅವರ ಖಾಸಗಿ ಜೀವನಕ್ಕೆ ಧಕ್ಕೆ ತಂದವರ ವಿರುದ್ಧವೂ ಕಠಿಣ ಕ್ರಮಕ್ಕೆ ಆಗ್ರಹಿಸಿ ವಿವಿಧ ರೈತಪರ ಸಂಘಟನೆಗಳು, ಜನಪರ, ದಲಿತ, ಮಹಿಳಾ ಸಂಘಟನೆಗಳು ಇಂದು ಪ್ರತಿಭಟನೆ ನಡೆಸಲಿವೆ.
ಇದನ್ನೂ ಓದಿ: ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಪ್ರಕರಣ: ಪಕ್ಷದಿಂದ ಅಮಾನತುಗೊಳಿಸುವಂತೆ ಜೆಡಿಎಸ್ ಶಾಸಕ ಒತ್ತಾಯ
ಏಪ್ರಿಲ್ 21ರಂದು ಪೆನ್ಡ್ರೈವ್, ಸಿಡಿ ಮೂಲಕ ಹಾಸನ ಲೋಕಸಭಾ ಕ್ಷೇತ್ರದ ಎನ್ಡಿಎ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋಗಳನ್ನು ವೈರಲ್ ಮಾಡಲಾಗಿತ್ತು. ಇದರ ಬೆನ್ನಲ್ಲೇ ಜೆಡಿಎಸ್ ಚುನಾವಣಾ ಏಜೆಂಟ್, ಏಪ್ರಿಲ್ 23ರಂದು ಅರೇಹಳ್ಳಿ ನವೀನ್ ಗೌಡ ಎಂಬುವರ ವಿರುದ್ಧ ಹಾಸನದ ಸೈಬರ್ ಕ್ರೈಂ ಠಾಣೆಗೆ ದೂರು ನೀಡಿದ್ದರು. ಹಾಸನ ಎನ್ ಡಿ ಎ. ಮೈತ್ರಿ ಅಭ್ಯರ್ಥಿ ಪ್ರಜ್ವಲ್ ಮಣಿಸಲು ಅವರ ಮುಖವನ್ನ ಮಾರ್ಫ್ ಪೋಟೋ ವಿಡಿಯೋ ಮಾಡಿ ಮತದಾರರಿಗೆ ಹಂಚಿಕೆ ಮಾಡಲಾಗಿದೆ ಎಂದು ಆರೋಪಿಸಿ ದೂರು ದಾಖಲಿಸಿದ್ದರು. ಈ ದೂರಿನ ಮೇರೆಗೆ ನವೀನ್ ಗೌಡ ಎಂಬುವರ ವಿರುದ್ಧ FIR ದಾಖಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ