ಬೆಂಗಳೂರು, ಮೇ 6: ಅಶ್ಲೀಲ ವಿಡಿಯೋ ಪ್ರಕರಣ ಮತ್ತು ಲೈಂಗಿಕ ದೌರ್ಜನ್ಯ ಆರೋಪದಲ್ಲಿ ತಲೆಮರೆಸಿಕೊಂಡಿರುವ ಹಾಸನ ಸಂಸದ ಪ್ರಜ್ವಲ್ಗೆ (Prajwal Revanna) ಇದೀಗ ಎಸ್ಐಟಿ (SIT) ಮುಂದೆ ವಿಚಾರಣೆಗೆ ಹಾಜರಾಗುವಂತೆ ಕುಟುಂಬಸ್ಥರು, ಆಪ್ತರಿಂದಲೇ ಒತ್ತಡ ಹೆಚ್ಚಾಗಿದೆ. ಪೆನ್ ಡ್ರೈವ್ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗುವಂತೆ ಅರೋಪಿ ಪ್ರಜ್ವಲ್ ಮೇಲೆ ರೇವಣ್ಣ ಕುಟುಂಬಸ್ಥರು ಮತ್ತು ಆಪ್ತರು ಒತ್ತಡ ಹಾಕುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ಭಾನುವಾರ ದುಬೈಯಿಂದ ಬೆಂಗಳೂರಿಗೆ ಬರಬೇಕಾಗಿದ್ದ ಪ್ರಜ್ವಲ್ ಇನ್ನೂ ಕೂಡ ಬಂದಿಲ್ಲ. ಈ ಮಧ್ಯೆ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈ ಸಂದರ್ಭದಲ್ಲಿ ವಿಚಾರಣೆಗೆ ಹಾಜರಾಗದೆ ಇದ್ದರೆ ಮತ್ತಷ್ಟು ತೊಂದರೆ ಎಂಬುದು ಕುಟುಂಬಸ್ಥರ ಅಭಿಪ್ರಾಯವಾಗಿದೆ.
ವಿಡಿಯೋ ಪ್ರಕರಣ ದಿನಕ್ಕೊಂದು ಹೊಸ ತಿರುವು ಪಡೆಯುತ್ತಿದೆ. ಈ ವೇಳೆ ವಿಚಾರಣೆಗೆ ಹಾಜರಾಗದೆ ವಿದೇಶದಲ್ಲಿ ಇರುವುದು ಕುಟುಂಬ ಮತ್ತು ಪಕ್ಷಕ್ಕೆ ಮತ್ತಷ್ಟು ಮುಜುಗರವನ್ನು ಉಂಟುಮಾಡುತ್ತದೆ. ಮೊದಲು ಎಸ್ಐಟಿ ಮುಂದೆ ಹಾಜರಾಗಿ ವಿಚಾರಣೆ ಎದುರಿಸು. ನಂತರ ಕಾನೂನು ಹೋರಾಟದಿಂದ ಪ್ರಕರಣದ ಸತ್ಯಾಂಶ ಹೊರಬರುತ್ತದೆ. ವಿಚಾರಣೆಗೆ ಹಾಜರಾಗದೆ ಕಾನೂನು ಹೋರಾಟಕ್ಕೆ ಮೊರೆ ಹೋದರೆ ಮತ್ತಷ್ಟು ಸಮಸ್ಯೆ ಆಗುತ್ತದೆ. ಈಗಾಗಲೇ ಈ ಪ್ರಕರಣದಿಂದ ಸಾಕಷ್ಟು ಡ್ಯಾಮೇಜ್ ಆಗುತ್ತಿದೆ. ಹೀಗಾಗಿ ಕೂಡಲೇ ವಕೀಲರ ಜೊತೆ ಸಮಾಲೋಚನೆ ನಡೆಸಿ ವಿಚಾರಣೆಗೆ ಹಾಜರಾಗುವಂತೆ ಕುಟುಂಬಸ್ಥರು ಪ್ರಜ್ವಲ್ ಮೇಲೆ ಒತ್ತಡ ಹೇರಿದ್ದಾರೆ ಎನ್ನಲಾಗಿದೆ.
ಈ ಮಧ್ಯೆ, ಎಸ್ಐಟಿ ಅಧಿಕಾರಿಗಳ ಜತೆ ಸಿಎಂ ಸಿದ್ದರಾಮಯ್ಯ ಸಭೆ ನಡೆಸಿದ್ದು, ಕೂಡಲೇ ಪ್ರಜ್ವಲ್ ಬಂಧನಕ್ಕೆ ಕ್ರಮ ಕೈಗೊಳ್ಳುವಂತೆ ಖಡಕ್ ಸೂಚನೆ ನೀಡಿದ್ದಾರೆ. ಗೃಹ ಸಚಿವ ಪರಮೇಶ್ವರ್ ಮಾತನಾಡಿ, ಬ್ಲೂ ಕಾರ್ನರ್ ನೋಟಿಸ್ ನೀಡಲಾಗಿದೆ. ನ್ಯಾಯಯುತ ತನಿಖೆಗಾಗಿ ಎಸ್ಐಟಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದೇವೆ ಎಂದಿದ್ದಾರೆ.
ಲೈಂಗಿಕ ಕಿರುಕುಳಕ್ಕೆ ಒಳಗಾದ ಸಂತ್ರಸ್ತೆಯರು ಸಹಾಯವಾಣಿ 6360938947 ಗೆ ಕರೆ ಮಾಡಿ ದೂರು ನೀಡಬಹುದು ಎಂದು ವಿಶೇಷ ತನಿಖಾ ದಳದ ಮುಖ್ಯಸ್ಥರು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಸಂತ್ರಸ್ತೆಯರು ಅಥವಾ ಅವರಿಗೆ ಸಂಬಂಧಿಸಿದವರು ಯಾರಾದಾರೂ ಇದ್ದಲ್ಲಿ ತಮ್ಮ ಹೇಳಿಕೆಗಳನ್ನು ನೇರವಾಗಿ ತಿಳಿಸಲಾಗದಿದ್ದಲ್ಲಿ ಕರೆ ಮಾಡಿಯೂ ಮಾಹಿತಿ ನೀಡಬಹುದು. ಅಂತವರ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು ಎಂದು ಎಸ್‌ಐಟಿ ತಿಳಿಸಿದೆ.
ಇದನ್ನೂ ಓದಿ: ಪ್ರಜ್ವಲ್ ಪ್ರಕರಣದ ಸಂತ್ರಸ್ತೆಯರಿಗೆ ಕರ್ನಾಟಕ ಸರ್ಕಾರದಿಂದ ಆರ್ಥಿಕ ನೆರವು: ರಣದೀಪ್ ಸುರ್ಜೇವಾಲ
ಪ್ರಜ್ವಲ್ ರೇವಣ್ಣ ಕೇಸ್‌ಗೆ ಸಂಬಂಧಿಸಿದ ವಿಡಿಯೋ ವಾಟ್ಸಾಪ್ ಸೇರಿದಂತೆ ಜಾಲತಾಣದಲ್ಲಿ ಹಂಚಿಕೆ ಮಾಡುವುದು ಅಪರಾಧವಾಗಿದೆ. ಹಂಚಿಕೆ ಮಾಡುವವರನ್ನು ಪತ್ತೆ ಮಾಡಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಸ್‌ಐಟಿ ಎಚ್ಚರಿಕೆ ನೀಡಿದೆ. ಯಾರೇ ಆಗಲಿ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋಗಳನ್ನು ಅಪ್ಲೋಡ್ ಮಾಡುವುದು, ಹಂಚುವುದು ಮಾಹಿತಿ ತಂತ್ರಜ್ಞಾನ ಕಾಯಿದೆ ಕಲಂ 67(ಎ) ಐಟಿ ಆಕ್ಟ್ ಹಾಗೂ ಕಲಂ 228ಎ (1), 292 ಐಪಿಸಿ ಅಡಿಯಲ್ಲಿ ಶಿಕ್ಷಾರ್ಹ ಅಪರಾಧವಾಗಿದೆ ಎಂದು ಎಸ್‌ಐಟಿ ತಿಳಿಸಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನುಓದಲು ಇಲ್ಲಿ ಕ್ಲಿಕ್ ಮಾಡಿ