ಬೆಂಗಳೂರು, (ಮೇ 06): ಹಾಸನ ಸಂಸದ ಪ್ರಜ್ವಲ್ ರೇವಣ್ಣ(prajwal revanna) ಅವರದ್ದು ಎನ್ನಲಾದ ಅಶ್ಲೀಲ ವಿಡಿಯೊ ನಿಮ್ಮ ಮೊಬೈಲ್ ಅಥವಾ ಲ್ಯಾಪ್‌ಟಾಪ್‌ನಲ್ಲಿದೆಯೇ? ಇದ್ದರೆ ಅದು ದೊಡ್ಡ ಅಪರಾಧವಾಗಿದೆ. ಈಗಲೇ ಅದನ್ನು ಡಿಲೀಟ್ ಮಾಡಿಬಿಡಿ. ಒಂದು ವೇಳೆ ನೀವು ಡಿಲೀಟ್ ಮಾಡದೇ ಇದ್ದರೆ ಕಾನೂನು ಕ್ರಮಗಳನ್ನು ಎದುರಿಸಬೇಕಾದೀತು ಎಂದು ಎಸ್ಐಟಿ ಮುಖ್ಯಸ್ಥ ಬಿ.ಕೆ. ಸಿಂಗ್ ಮಾಧ್ಯಮ ಪ್ರಕಟಣೆ ಮೂಲಕ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೊ ಈಗ ದೇಶಾದ್ಯಂತ ವೈರಲ್ ಆಗಿದೆ. ಈಗಾಗಲೇ ಈ ಪ್ರಕರಣ ಸಂಬಂಧ ತನಿಖೆ ನಡೆಸಲು ರಾಜ್ಯ ಸರ್ಕಾರ ಎಸ್‌ಐಟಿಯನ್ನು ರಚನೆ ಮಾಡಿದೆ. ಇನ್ನು ವಿಡಿಯೊದಲ್ಲಿ ಹಾಸನ ಸೇರಿದಂತೆ ಹಲವು ಕಡೆಯ ಮಹಿಳೆಯರು ಇದ್ದಾರೆನ್ನಲಾಗಿದ್ದು, ಅವರ ಮುಖವನ್ನು ಬ್ಲರ್ ಮಾಡಲಾಗಿಲ್ಲ. ಹೀಗಾಗಿ ಈ ಕೇಸ್ ಮತ್ತಷ್ಟು ಜಟಿಲವಾಗಿದೆ. ಈ ಸಂಬಂಧ ಎಸ್ಐಟಿಯ ಮುಖ್ಯಸ್ಥ ಬಿ.ಕೆ. ಸಿಂಗ್ ಪ್ರಕಟಣೆ ನೀಡಿದ್ದು, ಅಶ್ಲೀಲ ವಿಡಿಯೊವನ್ನು ಸಾರ್ವಜನಿಕರು ತಮ್ಮ ಮೊಬೈಲ್‌ನಲ್ಲಿ ಇಟ್ಟುಕೊಳ್ಳುವುದು ಸಹ ಅಪರಾಧ. ಯಾವುದೇ ವ್ಯಕ್ತಿ ಸಂದೇಶಗಳನ್ನು ರೂಪಿಸುವ, ಇಟ್ಟುಕೊಳ್ಳುವ ಹಾಗೂ ಪ್ರಸಾರ ಮಾಡುವ ಕೆಲಸವನ್ನು ಮಾಡಿದರೆ, ಅಂಥ ವ್ಯಕ್ತಿಗಳನ್ನು ಸಂದೇಶ ರಚನೆಕಾರರು ಎಂದು ಪರಿಗಣಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ: ಪ್ರಜ್ವಲ್ ವಿಡಿಯೋ ಕೇಸ್: ಅಶ್ಲೀಲ ವಿಡಿಯೋ ಶೇರ್ ಮಾಡಿದ್ರೆ ಜೈಲಿಗೆ ಹೋಗ್ತೀರಿ ಹುಷಾರ್..!
ಅಶ್ಲೀಲ ವಿಡಿಯೊ ಹಾಗೂ ಧ್ವನಿ ಮುದ್ರಣವನ್ನು ಇಟ್ಟುಕೊಂಡಿದ್ದರೆ ಅದು ಅಪರಾಧವಾಗುವುದರಿಂದ ಜನರು ತಮ್ಮ ಮೊಬೈಲ್ ಅಥವಾ ಯಾವುದೇ ಎಲೆಕ್ಟ್ರಾನಿಕ್ ಉಪಕರಣಗಳಲ್ಲಿ ಇಟ್ಟುಕೊಳ್ಳಬಾರದು. ಒಂದು ವೇಳೆ ಇಟ್ಟುಕೊಂಡಿದ್ದರೆ ಕೂಡಲೇ ಡಿಲೀಟ್ ಮಾಡಿಬಿಡಿ. ಹೀಗೆ ಡಿಲೀಟ್ ಮಾಡುವುದರಿಂದ ಕಾನೂನು ಕ್ರಮಗಳಿಂದ ಪಾರಾಗುವ ಸಾಧ್ಯತೆ ಇರುತ್ತದೆ ಎಂದು ಬಿ.ಕೆ. ಸಿಂಗ್ ಪ್ರಕಟಣೆಯಲ್ಲಿ ಸೂಚನೆ ನೀಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನುಓದಲು ಇಲ್ಲಿ ಕ್ಲಿಕ್ ಮಾಡಿ