ಬೆಂಗಳೂರು/ಹಾಸನ, (ಏಪ್ರಿಲ್ 29): ಹಾಸನ(Hassan) ಸಂಸದ ಪ್ರಜ್ವಲ್ ರೇವಣ್ಣ (Prajwal Revanna )ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋ ಪ್ರಕರಣ ಕ್ಷಣ ಕ್ಷಣಕ್ಕೂ ಹೊಸ ರೂಪ ಪಡೆದುಕೊಳ್ಳುತ್ತಿದೆ. ಸಂತ್ರಸ್ತೆ ದೂರಿನ ಹಿನ್ನೆಲೆಯಲ್ಲಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಎಫ್ಐಆರ್ ದಾಖಲಾಗಿದ್ದು, ಇದೀಗ ಈ ಪ್ರಕರಣ ತನಿಖೆಯನ್ನು ಎಸ್ಐಟಿ ತಂಡ ಚುರುಕುಗೊಳಿಸಿದೆ. ವೈರಲ್ ಆದ ವಿಡಿಯೋಗಳಲ್ಲಿರುವ ಐದಾರು ಸಂತ್ರಸ್ತೆಯರನ್ನು ಎಸ್ಐಟಿ ತಂಡ ಗುರುತಿಸಿದೆ. ಅಲ್ಲದೇ ಅವರನ್ನು ಬೆಂಗಳೂರಿನಲ್ಲಿರುವ ಸಿಐಡಿ ಕಚೇರಿಗೆ ಕರೆಯಿಸಿಕೊಂಡು ವಿಚಾರಣೆ ಮಾಡಿ ಕೆಲ ಮಹತ್ವದ ಮಾಹಿತಿಯನ್ನು ಕಲೆಹಾಕಿದೆ ಎಂದು ತಿಳಿದುಬಂದಿದೆ.
ವಿಡಿಯೋಗಳಲ್ಲಿ ಕೆಲ ಸರ್ಕಾರಿ ಅಧಿಕಾರಿಗಳು, ರಾಜಕೀಯ ನಾಯಕಿಯರು ಇದ್ದಾರೆ. ಹೀಗಾಗಿ ಅವರ ಗುರುತು ಪತ್ತೆ ಎಸ್ಐಟಿ ತಂಡದಲ್ಲಿರುವ SP ಸೀಮಾ ಲಾಟ್ಕರ್ ವಿಚಾರಣೆ ನಡೆಸಿದ್ದಾರೆ. ಇನ್ನು ಸಂತ್ರಸ್ತೆಯರು ತಮ್ಮ ವಿಡಿಯೋಗಳ ಬಗ್ಗೆ ಸೀಮಾ ಲಾಟ್ಕರ್ ಮುಂದೆ ಹೇಳಿಕೆಗಳನ್ನು ದಾಖಲಿಸಿದ್ದಾರೆ ಎಂದು ತಿಳುದುಬಂದಿದೆ.
ಇದನ್ನೂ ಓದಿ: ವಿಡಿಯೋ ಕೇಸ್: ಪ್ರಜ್ವಲ್ ರೇವಣ್ಣ ತಪ್ಪು ಸಾಬೀತಾದ್ರೆ ಏನು ಶಿಕ್ಷೆ? ಕಾನೂನಿನಲ್ಲಿರುವ ಅವಕಾಶಗಳೇನು?
ಈ ವೇಳೆ ಸಂತ್ರಸ್ತೆಯರಿಗೆ ಸೀಮಾ ಲಾಟ್ಕರ್ ಅವರು ಕೆಲ ಪ್ರಶ್ನೆಗಳನ್ನು ಕೇಳಿ ಅವರಿಂದ ಬಂದ ಉತ್ತರಗಳನ್ನು ದಾಖಲಿಸಿಕೊಂಡಿದ್ದಾರೆ. ಯಾವ ಉದ್ದೇಶಕ್ಕೆ ವಿಡಿಯೋ ಮಾಡಿಕೊಳ್ಳಲಾಗಿತ್ತು?, ವೈರಲ್ ಆಗುತ್ತಿರುವ ವಿಡಿಯೋದಲ್ಲಿರುವುದು ನೀವೇನಾ?, ಸ್ವಇಚ್ಛೆಗನುಸಾರವಾಗಿ ವಿಡಿಯೋ ಮಾಡಿಕೊಳ್ಳಲಾಗಿತ್ತಾ? ಆಮಿಷ ಅಥವಾ ಭಯ ಉಂಟುಮಾಡಿ ವಿಡಿಯೋ ಮಾಡಿಕೊಂಡ್ರಾ? ಹೀಗೆ ಎಸ್ಪಿ ಸೀಮಾ ಅವರು ಸಂತ್ರಸ್ತೆಯರಿಂದ ಹತ್ತಾರು ಪ್ರಶ್ನೆಗಳಿಗೆ ಉತ್ತರ ಪಡೆದುಕೊಂಡಿದ್ದಾರೆ.
ಈ ಹಿಂದೆ ಗೌರಿ ಲಂಕೇಶ್ ಕೇಸ್ನಲ್ಲಿ ದೊಡ್ಡ ಪಾತ್ರ ವಹಿಸಿದ್ದ ಬಿ.ಕೆ ಸಿಂಗ್ ಜೊತೆ ಮೂವರು SP, 4 ಡಿವೈಎಸ್ಪಿ ಕೂಡ ಎಸ್ಐಟಿ ತಂಡದಲ್ಲಿದ್ದಾರೆ. ಇದೀಗ ಸೀಮಾ ಲಾಟ್ಕರ್ ಅವರು ಸಂತ್ರಸ್ತೆಯರಿಂದ ಕೆಲ ಮಹತ್ವದ ಮಾಹಿತಿಯನ್ನು ಪಡೆದುಕೊಂಡಿದ್ದು, ಇದರ ಆಧಾರದ ಮೇಲೆ ಮತ್ತಷ್ಟು ತನಿಖೆ ಚುರುಕುಗೊಳಿಸಲಿದ್ದಾರೆ. ಅಲ್ಲದೇ ವಿಡಿಯೋನಲ್ಲಿ ಇನ್ನಷ್ಟು ಸಂತ್ರಸ್ತ ಮಹಿಳೆಯರನ್ನ ಪತ್ತೆ ಮಾಡುವ ಕಾರ್ಯ ಮುಂದುವರೆದಿದೆ. ಇನ್ನು ತಮಗೆ ಅನ್ಯಾಯವಾಗಿದೆ ಎಂದು ಖುದ್ದು ಸಂತ್ರಸ್ತೆಯರು ಎಸ್ಐಟಿ ಮುಂದೆ ಹಾಜರಾಗಿ ವಿಡಿಯೋ ವಿಚಾರಳರಗಳನ್ನು ತಿಳಿಸುವ ಸಾಧ್ಯತೆಗಳಿವೆ ಎನ್ನಲಾಗಿದೆ.
ರಾಜ್ಯದ ಇನ್ನಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ