ಬೆಂಗಳೂರು: ಜುಲೈ 18 ರಂದು ನಡೆಯಲಿರುವ ರಾಷ್ಟ್ರಪತಿ ಚುನಾವಣೆ (Presidential election) ಹಿನ್ನೆಲೆಯಲ್ಲಿ ಮತದಾನದ (Voting) ಅವಶ್ಯಕ ಸಾಮಾಗ್ರಿಗಳು ಹಾಗೂ ಬ್ಯಾಲೆಟ್ ಬಾಕ್ಸ್ಗಳನ್ನು (Ballot box) ಇಂದು (ಜುಲೈ 12) ನವದೆಹಲಿಯ (Delhi) ಭಾರತ ಚುನಾವಣಾ ಆಯೋಗದ (Election commission of India) ಕೇಂದ್ರ ಕಚೇರಿಯಿಂದ ಆಯಾ ರಾಜ್ಯಗಳಿಗೆ ರವಾನಿಸಲಾಗಿದೆ. ನಮ್ಮ ರಾಜ್ಯದ ಬ್ಯಾಲೆಟ್ ಜರ್ನಿಯ ನೇತೃತ್ವವನ್ನು ರಾಜ್ಯ ಜಂಟಿ ಮುಖ್ಯ ಚುನಾವಣಾಧಿಕಾರಿ ರಾಘವೇಂದ್ರ ಅವರು ವಹಿಸಿಕೊಂಡಿದ್ದಾರೆ. ಇಂದು ಸಂಜೆ ನವದೆಹಲಿಯಿಂದ ನಿರ್ಗಮಿಸಿ ರಾತ್ರಿ 8:15 ಕ್ಕೆ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಲಿದೆ.
ಈ ವಿಶೇಷ ಬ್ಯಾಲೆಟ್ ಜರ್ನಿಯ ಮುಖಾಂತರ ರಾಜ್ಯಕ್ಕೆ ಆಗಮಿಸುವ ಮತದಾನದ ಸಾಮಾಗ್ರಿಗಳನ್ನು ವಿಧಾನಸೌಧದಲ್ಲಿ ಇದಕ್ಕಾಗಿ ಮೀಸಲಿಟ್ಟಿರುವ ಕೊಠಡಿ ಸಂಖ್ಯೆ 108 ರಲ್ಲಿ (Strong Room) ಶೇಖರಿಸಿಡಲಾಗುವುದು.
ಇಂದು ರಾತ್ರಿ 9 ಗಂಟೆಗೆ ವಿಧಾನಸೌಧ ತಲುಪಲಿರುವ ಈ ವಿಶೇಷ ಬ್ಯಾಲೆಟ್ ಜರ್ನಿಯನ್ನು ರಾಜ್ಯ ಮುಖ್ಯಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ಹಾಗೂ ಸಹಾಯಕ ಚುನಾವಣಾಧಿಕಾರಿ ಶ್ರೀಮತಿ ವಿಶಾಲಾಕ್ಷಿ ಅವರು ಸ್ವಾಗತಿಸಲಿದ್ದಾರೆ..
ರಾಷ್ಟ್ರಪತಿ ಚುನಾವಣೆಗೆ ನಾಮಪತ್ರ ಸಲ್ಲಿಸಲು ಜೂನ್ 29 ಕೊನೆಯ ದಿನವಾಗಿತ್ತು. ಜುಲೈ 18ರಂದು ಮತದಾನ ನಡೆಯಲಿದ್ದು, ಜುಲೈ 21ರಂದು ಮತ ಎಣಿಕೆ ನಡೆಯಲಿದೆ.
ಬಿಜೆಪಿ ನೇತೃತ್ವದ ಎನ್ಡಿಎ ರಾಷ್ಟ್ರಪತಿ ಅಭ್ಯರ್ಥಿಯಾಗಿ ಬುಡಕಟ್ಟು ಜನಾಂಗದ ದ್ರೌಪದಿ ಮುರ್ಮು ಅವರ ಹೆಸರನ್ನು ಘೋಷಿಸಲಾಗಿದೆ. ವಿರೋಧ ಪಕ್ಷಗಳ ಜಂಟಿ ಅಭ್ಯರ್ಥಿಯಾಗಿ ಯಶವಂತ್ ಸಿನ್ಹಾ ಅವರ ಹೆಸರನ್ನು ಘೋಷಿಸಲಾಗಿದೆ.
ಕಾಂಗ್ರೆಸ್ ಪಕ್ಷದ ಎಲ್ಲಾ ಶಾಸಕರಿಗೆ ವಿಪ್ ಜಾರಿ
ಜುಲೈ 18ರಂದು ರಾಷ್ಟ್ರಪತಿ ಚುನಾವಣೆ ಹಿನ್ನೆಲೆ ಕಾಂಗ್ರೆಸ್ ತನ್ನ ಪಕ್ಷದ ಶಾಸಕರು ರಾಷ್ಟ್ರಪತಿ ಚುನಾವಣೆಯ ಪ್ರತಿಪಕ್ಷಗಳ ಅಭ್ಯರ್ಥಿ ಯಶವಂತ್ ಸಿನ್ಹಾ ಪರ ಮತ ಚಲಾಯಿಸುವಂತೆ ವಿಪ್ ಜಾರಿ ಮಾಡಿದೆ.
Published On - 2:58 pm, Tue, 12 July 22