ಕೊಡಗಿನಲ್ಲಿ ನಿರಂತರ ಭೂಕಂಪನ: ವಿಜ್ಞಾನಿಗಳ ವರದಿ ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು -ಸಿಎಂ ಬೊಮ್ಮಾಯಿ
ಕೊಡಗು ಜಿಲ್ಲೆಯಲ್ಲಿ ನಿರಂತರ ಭೂಕಂಪನವಾಗುತ್ತಿರುವ ಹಿನ್ನೆಲೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಭೇಟಿ ನೀಡಿದ್ದಾರೆ.
ಕೊಡಗು: ಕೊಡಗು (Kodagu) ಜಿಲ್ಲೆಯಲ್ಲಿ ನಿರಂತರ ಭೂಕಂಪನವಾಗುತ್ತಿರುವ ಹಿನ್ನೆಲೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಜಿಲ್ಲೆಗೆ ಭೇಟಿ ನೀಡಿ ಭೂಕಂಪನ (Earthquake) ಅಧ್ಯಯನಕ್ಕೆ ಭೌಗೋಳಿಕ ರಾಷ್ಟ್ರೀಯ ಸಂಸ್ಥೆಗೆ (National Institute of Geographical) ಪತ್ರ ಬರೆದಿದ್ದೇನೆ. ಭೂಕಂಪನದ ವಿಸ್ತೃತ ಅಧ್ಯಯನಕ್ಕೆ ಮನವಿ ಮಾಡಿದ್ದೇನೆ. ವಿಜ್ಞಾನಿಗಳ ಅಧ್ಯಯನ ವರದಿ ಆಧರಿಸಿ ಮುಂದಿನ ಕ್ರಮಕೈಗೊಳ್ಳಲಾಗುವುದು ಮಡಿಕೇರಿಯಲ್ಲಿ (Madikeri) ಎಂದು ಹೇಳಿದ್ದಾರೆ.
ಭೂಕುಸಿತ ತಡೆಯಲು ಹಲವು ತಂತ್ರಜ್ಞಾನ ಬಳಕೆಗೆ ಚಿಂತನೆ ಮಾಡಲಾಗುತ್ತಿದೆ. ಭೂಕುಸಿತ ತಡೆ ಸಂಬಂಧ ಅಮೃತ್ ವಿಶ್ವವಿದ್ಯಾಲಯ ಸಲಹೆ ನೀಡಲಿದೆ. ಗ್ರಾಮಾಂತರ ಪ್ರದೇಶದಲ್ಲಿ ಟಾಸ್ಕ್ ಫೋರ್ಸ್ ಮಾಡಲಾಗಿದೆ. ವಿದ್ಯುತ್ ನಿರ್ವಹಣೆಗೆ ವಿಶೇಷ ಕಂಟ್ರೋಲ್ ರೂಂ ಸ್ಥಾಪಿಸಲಾಗಿದೆ ಎಂದರು.
ಅಗತ್ಯಬಿದ್ದರೆ ಜಿಲ್ಲಾಧಿಕಾರಿಗೆ ಹೆಚ್ಚುವರಿ ಹಣ ನೀಡಲಾಗುವುದು. ಕಾಳಜಿ ಕೇಂದ್ರಗಳಲ್ಲಿ ಇರುವ ಸಂತ್ರಸ್ತರಿಗೆ ಅಗತ್ಯ ಸೌಲಭ್ಯ ನೀಡಿ. ಸಂಬಂಧಿಕರ ಮನೆಯಲ್ಲಿರುವ ಸಂತ್ರಸ್ತರಿಗೂ ಪಡಿತರ ವಿತರಿಸುತ್ತೇವೆ. ಕಾಳಜಿ ಕೇಂದ್ರದಿಂದ ಮನೆಗೆ ಮರಳುವಾಗಲೂ ಪಡಿತರ ನೀಡಬೇಕು ಎಂದು ಅಧಿಕಾರಿಗಳಿಗೆ ಅವರು ಸೂಚಿಸಿದರು.
ನೇತ್ರಾವತಿ-ಕುಮಾರಧಾರ ಸಂಗಮ ವೀಕ್ಷಿಸಿದ ಸಿಎಂ ಬೊಮ್ಮಾಯಿ
ದಕ್ಷಿಣ ಕನ್ನಡ: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಉಪ್ಪಿನಂಗಡಿಯ ನೇತ್ರಾವತಿ-ಕುಮಾರಧಾರ ಸಂಗಮವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವೀಕ್ಷಿಸಿದರು. ಸಹಸ್ರಲಿಂಗೇಶ್ವರ ದೇವಸ್ಥಾನದ ಬಳಿ ನದಿಯ ನೀರಿನ ಮಟ್ಟ ವೀಕ್ಷಣೆ ಮಾಡಿದರು. ಹಾಗೇ ಸೇತುವೆ ಬಳಿಯೇ ನಿಂತು ಬೆಳೆ ಹಾನಿಯನ್ನು ವೀಕ್ಷಿಸಿದರು. ಮುಖ್ಯಮಂತ್ರಿಗಳಿಗೆ ನದಿಪಾತ್ರದ ಗ್ರಾಮಗಳ ಬೆಳೆ ಹಾನಿ, ಇತರೆ ಹಾನಿ ಬಗ್ಗೆ ಪುತ್ತೂರು ಶಾಸಕ ಸಂಜೀವ್ ಮಠಂದೂರು ಮಾಹಿತಿ ನೀಡಿದ್ದಾರೆ.
ಉಪ್ಪಿನಂಗಡಿಯಿಂದ ನೇರವಾಗಿ ಬಂಟ್ವಾಳ ತಾಲೂಕಿನ ಬಿ.ಸಿ.ರೋಡ್ಗೆ ತಲುಪಲಿದ್ದಾರೆ. ಬಂಟ್ವಾಳ ತಲುಪಿ ಐಬಿಯಲ್ಲಿ ಪಂಜಿಕಲ್ಲು ಗುಡ್ಡ ಕುಸಿತದಿಂದ ಮೃತರಾದ ಕುಟುಂಬಿಕರಿಗೆ ಪರಿಹಾರ ಚೆಕ್ ವಿತರಣೆ ಮಾಡಲಿದ್ದಾರೆ. ಕಂದಾಯ ಸಚಿವ ಆರ್.ಅಶೋಕ್, ಸಂಸದ ನಳಿನ್ ಕುಮಾರ್, ದ.ಕ ಜಿಲ್ಲಾ ಉಸ್ತುವಾರಿ ಸಚಿವ ಸುನೀಲ್ ಕುಮಾರ್, ಸಚಿವ ಎಸ್.ಅಂಗಾರ, ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಸಾಥ್ ನೀಡಿದ್ದಾರೆ.
Published On - 3:31 pm, Tue, 12 July 22