ದಾಖಲಾತಿಗಳೆಲ್ಲ ಚಾಲ್ತಿಯಲ್ಲಿವೆ; 1 ತಿಂಗಳ ತೆರಿಗೆ ಮನ್ನಾ ಮಾಡಿ ಸಾಕು: ಖಾಸಗಿ ಬಸ್ ಮಾಲೀಕರ ಒಕ್ಕೂಟದ ಅಧ್ಯಕ್ಷ ನಟರಾಜ್
ಸರ್ಕಾರಿ ಬಸ್ಗಳು 20ರಿಂದ 35 ಲಕ್ಷ ಮೌಲ್ಯ ಹೊಂದಿದ್ದರೆ ನಮ್ಮ ಬಸ್ಗಳು 40ರಿಂದ50 ಲಕ್ಷ ಮೌಲ್ಯದ್ದಾಗಿರುತ್ತವೆ. ಖಾಸಗಿ ಬಸ್ ಮಾಲೀಕರು ಬಹಳ ಕಷ್ಟದಲ್ಲಿದ್ದಾರೆ ಎಂದು ಅವರು ಮನವಿ ಮಾಡಿದರು.
ಬೆಂಗಳೂರು: ನಾವು ಪ್ರಯಾಣಿಕರಿಂದ ಹಗಲು ದರೋಡೆ ಮಾಡುತ್ತಿಲ್ಲ. ನಾವ್ಯಾರೂ ಸಹ ಇನ್ಶುರೆನ್ಸ್ ಇಲ್ಲದೆ ವಾಹನ ತೆಗೆಯುವುದಿಲ್ಲ. ಪ್ರಯಾಣಿಕರ ಜೀವವೇ ನಮ್ಮ ಜವಾಬ್ದಾರಿಯಾಗಿದೆ. ಕೊವಿಡ್ ಸಂಕಷ್ಟದಿಂದ ಖಾಸಗಿ ಬಸ್‌ಗಳಿಗೆ ನಷ್ಟವಾಗಿದೆ. ಕೆಎಸ್‌ಆರ್‌ಟಿಸಿ ದರದಲ್ಲೇ ಖಾಸಗಿ ಬಸ್ಗಳಿಗೂ ಅವಕಾಶ ಮಾಡಿಕೊಡಲಿ. ನಮಗೆ ಒಂದು ತಿಂಗಳು ತೆರಿಗೆ ಮನ್ನಾ ಮಾಡಿದರೆ ಸಾಕು. ಉಳಿದ ಯಾವುದೇ ಪರ್ಯಾಯ ಸೌಲಭ್ಯಗಳ ಅಗತ್ಯ ಬೇಡ ಎಂದು ರಾಜ್ಯ ಖಾಸಗಿ ಬಸ್ ಮಾಲೀಕರ ಒಕ್ಕೂಟದ ಅಧ್ಯಕ್ಷ ನಟರಾಜ್ ಶರ್ಮಾ ಬೆಂಗಳೂರಿನಲ್ಲಿ ಸಾರಿಗೆ ಇಲಾಖೆಯ ನಗರ ಜಂಟಿ ಆಯುಕ್ತ ಹಾಲಸ್ವಾಮಿ ಬಳಿ ಮನವಿ ಮಾಡಿದರು.
ನಮ್ಮನ್ನು ಕೇರಳ ಹಾಗೂ ತಮಿಳುನಾಡು ರಾಜ್ಯಗಳಿಗೆ ಹೋಲಿಕೆ ಮಾಡಲಾಗುತ್ತಿದೆ. ಖಾಸಗಿ ಬಸ್‌ಗಳಿಗೆ ಬಸ್ಸ್ಟ್ಯಾಂಡ್ನಲ್ಲಿ ಪಿಕಪ್ ಮಾಡುವ ಅವಕಾಶ ಅವರಿಗೆ ನೀಡಲಾಗಿದೆ. ಆದರೆ ಆ ಅವಕಾಶವನ್ನು ನಮಗೆ ನೀಡಿಲ್ಲ. ಸರ್ಕಾರಿ ಬಸ್ಗಳು 20ರಿಂದ 35 ಲಕ್ಷ ಮೌಲ್ಯ ಹೊಂದಿದ್ದರೆ ನಮ್ಮ ಬಸ್ಗಳು 40ರಿಂದ50 ಲಕ್ಷ ಮೌಲ್ಯದ್ದಾಗಿರುತ್ತವೆ. ಖಾಸಗಿ ಬಸ್ ಮಾಲೀಕರು ಬಹಳ ಕಷ್ಟದಲ್ಲಿದ್ದಾರೆ. ನಮ್ಮ ಮೂಗಿಗೆ ಸರ್ಕಾರ ಬೆಣ್ಣೆ ಇಟ್ಟಿದೆ ಅಷ್ಟೇ. ದಯವಿಟ್ಟು ನಮ್ಮ ಬೇಡಿಕೆಗಳನ್ನು ಈಡೇರಿಸಿ ಎಂದು ಅವರು ಮನವಿ ಮಾಡಿಕೊಂಡರು.
ಸಾರಿಗೆ ನೌಕರರನ್ನು ಮನವೊಲಿಸುವ ಪ್ರಶ್ನೆಯೇ ಇಲ್ಲ; ಸಿಎಂ ಯಡಿಯೂರಪ್ಪ
ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಸಾರಿಗೆ ನೌಕರರು ಮುಷ್ಕರಕ್ಕೆ ಇಳಿದಿದ್ದಾರೆ. ಇಂದು ಮುಷ್ಕರ ಎರಡನೇ ದಿನಕ್ಕೆ ಕಾಲಿಟ್ಟಿದೆ. ಈ ಕುರಿತಂತೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಮಾತನಾಡಿ ಸಾರಿಗೆ ನೌಕರರನ್ನು ಮನವೊಲಿಸುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾರೆ.
ಒಂಬತ್ತು ಬೇಡಿಕೆಗಳಲ್ಲಿ ಎಂಟು ಬೇಡಿಕೆಯನ್ನು ಈಗಾಗಲೇ ಈಡೇರಿಸಲಾಗಿದೆ. ಕೂಡಲೇ ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗಬೇಕು. ಇಲ್ಲವಾದಲ್ಲಿ ತೀವ್ರವಾದ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಎಚ್ಚರಿಕೆ ನೀಡಿದ್ದಾರೆ.
ಸಾರಿಗೆ ನೌಕರರ ಮುಷ್ಕರ; ಬಿ.ಎಸ್ ಯಡಿಯೂರಪ್ಪ ಸಂಜೆ 5 ಗಂಟೆಗೆ ಅಧಿಕಾರಿಗಳ ಜತೆ ಸಭೆ ನಡೆಸುವ ಸಾಧ್ಯತೆ ರಾಜ್ಯದಲ್ಲಿ ಸಾರಿಗೆ ನೌಕರರ ಅನಿರ್ದಿಷ್ಟಾವಧಿ ಮುಷ್ಕರ ಹಿನ್ನೆಲೆಯಲ್ಲಿ ಸಂಜೆ 5 ಗಂಟೆಗೆ ಅಧಿಕಾರಿಗಳ ಜತೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಸಭೆ ನಡೆಸುವ ಸಾಧ್ಯತೆ ಇದೆ. ಸಿಎಂ ಅಧಿಕೃತ ನಿವಾಸ ಕಾವೇರಿಯಲ್ಲಿ ಸಭೆ ನಡೆಯುವ ಸಾಧ್ಯತೆ ಇದೆ. ಬಿಕ್ಕಟ್ಟು ಪರಿಹಾರಕ್ಕೆ ಇರುವ ಅವಕಾಶಗಳ ಬಗ್ಗೆ ಸಮಾಲೋಚನೆ ನಡೆಸಲಾಗುವುದು. ಇದೀಗ ಬೆಳಗಾವಿಯಿಂದ ಬೆಂಗಳೂರಿಗೆ ಸಿಎಂ ಬಿ.ಎಸ್ ಯಡಿಯೂರಪ್ಪ ಆಗಮಿಸಿದ್ದಾರೆ.
ಇದನ್ನೂ ಓದಿ: Karnataka Bus Strike Live: ಎರಡನೇ ದಿನಕ್ಕೆ ಕಾಲಿಟ್ಟ ಸಾರಿಗೆ ನೌಕರರ ಮುಷ್ಕರ, ಪೊಲೀಸರ ಭದ್ರತೆಯೊಂದಿಗೆ ಕೆಲ ಬಸ್ ಸಂಚಾರ
ಮುಷ್ಕರ ಕೈ ಬಿಡಿ ಇಲ್ಲವಾದ್ರೆ ಮನೆ ಖಾಲಿ ಮಾಡಿ: ಸಾರಿಗೆ ಸಿಬ್ಬಂದಿಗೆ ಹಿರಿಯ ಅಧಿಕಾರಿಗಳಿಂದ ನೋಟಿಸ್