ಫೀಸು ಕಟ್ಟದಿದ್ದರೆ ಅನ್ಲೈನ್ ಪಾಠ ನಿಲ್ಲಿಸುವ ಬೆದರಿಕೆಯೊಡ್ಡಿದ ಖಾಸಗಿ ಶಾಲೆಗಳು!
ಪೋಷಕರು ತಮ್ಮ ಮಕ್ಕಳ ಫೀಸು ಕಟ್ಟದಿದ್ದರೆ ಅವರಿಗೆ ನೀಡುತ್ತಿರುವ ಆನ್ಲೈನ್ ಪಾಠಗಳನ್ನು ನಿಲ್ಲಿಸುವುದಾಗಿ ಘೋಷಿಸಿದ ನಂತರ ಶಕ್ಷಣ ಸಚಿವ ಎಸ್ ಸುರೇಶ್ ಕುಮಾರ್ ಅವರು ಖಾಸಗಿ ಶಾಲೆಗಳ ಪ್ರತಿನಿಧಿಗಳೊಂದಿಗೆ ಚರ್ಚೆ ನಡೆಸಿ ಪರಿಹಾರ ಸೂಚಿಸುವುದಾಗಿ ಹೇಳಿದ್ದಾರೆ.

ಶಾಲೆಗಳನ್ನು ಪುನರಾರಂಭಿಸುವ ಮತ್ತು ಆನ್ಲೈನ್ ಕ್ಲಾಸ್ಗಳನ್ನು ನಡೆಸುತ್ತಿರುವ ಖಾಸಗಿ ಶಾಲೆಗಳು, ವಿದ್ಯಾರ್ಥಿಗಳ ಪಾಲಕರಿಂದ ಫೀಸು ವಸೂಲಿ ಮಾಡಲು ಪ್ರಯತ್ನಿಸುತ್ತಿರುವ ಬಗ್ಗೆ ಸರ್ಕಾರ ಇದುವರೆಗೆ ಯಾವುದೇ ನಿರ್ಧಾರಕ್ಕೆ ಬಾರದಿರುವುದು ಪೋಷಕರಿಗೆ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ.
ಫೀಸು ಕಟ್ಟಿಸಿಕೊಳ್ಳುವ ವಿಷಯದಲ್ಲಿ ಈಗ ಮತ್ತೊಂದು ಹೆಜ್ಜೆ ಮುಂದೆ ಹೋಗಿರುವ ಖಾಸಗಿ ಶಾಲೆಗಳು ಫೀಸು ಕಟ್ಟದಿರುವ ವಿದ್ಯಾರ್ಥಿಗಳಿಗೆ ಆನ್ಲೈನ್ ಪಾಠಗಳನ್ನು ನಿಲ್ಲಿಸುವುದಾಗಿ ಬೆದರಿಕೆಯೊಡ್ಡಿವೆ.
ಸದರಿ ವಿಷಯಕ್ಕೆ ಸಂಬಂಧಿಸಿದಂತೆ ಇಂದು ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತಾಡಿದ ಶಿಕ್ಷಣ ಸಚಿವ ಎಸ್ ಸುರೇಶ್ ಕುಮಾರ್ ಅವರು ಖಾಸಗಿ ಶಾಲೆಗಳ ಸಂಘಟನೆ ತೋಡಿಕೊಳ್ಳುತ್ತಿರುವ ಸಮಸ್ಯೆ ಸರ್ಕಾರದ ಗಮನಕ್ಕೆ ಬಂದಿದೆ, ಸಂಘಟನೆಯ ಪ್ರತಿನಿಧಿಗಳೊಂದಿಗೆ ಚರ್ಚಿಸಿ ಆದಷ್ಟು ಬೇಗನೇ ಪರಿಹಾರ ಸೂಚಿಸುವುದಾಗಿ ಹೇಳಿದರು.
ನವೆಂಬರ್ 27ರಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತ ಅನ್ಬುಕುಮಾರ್ ಸಂಘಟನೆಗಳ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸುತ್ತಾರೆ. ವರದಿಯಲ್ಲಿರುವ ಸಾಧಕ-ಬಾಧಕಗಳನ್ನು ಚರ್ಚಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳುವುದಾಗಿ ಸುರೇಶ್ ಕುಮಾರ್ ಸ್ಪಷ್ಟನೆ ನೀಡಿದರು.
Published On - 9:18 pm, Wed, 25 November 20