ಬೆಂಗಳೂರು, ಅಕ್ಟೋಬರ್ 10: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರ ಸೋಲಿಲ್ಲದ ಸರದಾರ ಎಂಬ ಪಟ್ಟಿಯನ್ನು ಕಿತ್ತುಕೊಂಡವರು ಪ್ರಿಯಾಂಕ್ ಖರ್ಗೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ವಾಗ್ದಾಳಿ ಮಾಡಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪ್ರಿಯಾಂಕ್ ಖರ್ಗೆ ತಂದೆಯನ್ನು ಆಹುತಿ ಪಡೆದ ಮಗ. ಅವರ ದುರ್ನಡತೆಯಿಂದ ಜನ ಕುಪಿತಗೊಂಡು ಮಲ್ಲಿಕಾರ್ಜುನ ಖರ್ಗೆ ಅವರನ್ನು ಬಲಿ ತೆಗೆದುಕೊಂಡರು ಎಂದು ಕಿಡಿಕಾರಿದ್ದಾರೆ.
ಪ್ರಿಯಾಂಕ್ ಖರ್ಗೆ ಮತ್ತು ಅಜಯ್ ಸಿಂಗ್ ಸೇರಿ ಕಲಬುರಗಿ, ಯಾದಗಿರಿ ಭಾಗದಲ್ಲಿ ಕೆಆರ್ಡಿಎಲ್ನಿಂದ ಟೆಂಡರ್ ಹಾಕದೇ ತಮಗೆ ಬೇಕಾದವರಿಗೆ ವರ್ಕ್ ಆರ್ಡರ್ ಕೊಡುತ್ತಿದ್ದಾರೆ. ನಾವು ಏನೂ ಮಾಡದ ಸ್ಥಿತಿಯಲ್ಲಿ ಇದ್ದೇವೆ ಅಂತಾ ಕೆಆರ್ಡಿಎಲ್ ಅಧಿಕಾರಿಗಳು ಹೇಳುತ್ತಿದ್ದಾರೆ. ಕಲ್ಯಾಣ ಕರ್ನಾಟಕದ 5000 ಸಾವಿರ ಕೋಟಿ ರೂ. ಅನುದಾನದಲ್ಲಿ ಎರಡೂವರೆ ಸಾವಿರ ಕೋಟಿ ರೂ. ಬಿಡುಗಡೆ ಆಗಿದೆ. ಇದರಲ್ಲಿ 40% ಕಮಿಷನ್ ಪಡೆದು ತೆಲಂಗಾಣ ಚುನಾವಣೆಗೆ 500 ಕೋಟಿ ರೂ. ಹಣ ಕೊಟ್ಟಿದ್ದಾರೆ ಎಂಬ ಆಪಾದನೆ ಈಗ ಬಂದಿದೆ ಎಂದರು.
ಇದನ್ನೂ ಓದಿ: ಸತೀಶ್ ಜಾರಕಿಹೊಳಿ ಸಿಎಂ ಆಗಲಿ ಎಂದ ಪ್ರಸನ್ನಾನಂದಪುರಿ ಸ್ವಾಮೀಜಿ
ಇಷ್ಟು ಹಣ ಖರ್ಚು ಆಗಿದ್ದರೆ ಆ ಪ್ರಾಂತ್ಯ ಏಕೆ ಅಭಿವೃದ್ಧಿ ಆಗುತ್ತಿಲ್ಲ? ಇದು ತನಿಖೆ ಆಗಬೇಕು, ಸಿಬಿಐಗೆ ಕೊಡಬೇಕು. ಅಲ್ಲಿನ ಎಸ್ಸಿಇಪಿ ಟಿಎಸ್ಪಿ ಹಣ ಕೂಡ ಇದೇ ರೀತಿ ನುಂಗಲಾಗಿದೆ. ಸರ್ಕಾರದಿಂದ ಹೋಗುವ ಹಣ ಹಂಚಿಕೊಂಡು ತಿನ್ನಲು ಕೆಕೆಆರ್ಡಿಬಿಗೆ ಅಧ್ಯಕ್ಷರು ಬೇಕಾ? ಕೆಕೆಆರ್ಡಿಬಿ ಆ ಭಾಗದ ಜನರಿಗೆ ಅನ್ಯಾಯ ಮಾಡುವ ಸಂಸ್ಥೆ ಆಗಿದೆ. ಮಣ್ಣು ಚಲ್ಲು, ಬಿಲ್ ಮಾಡು ಇಷ್ಟೇ ಆಗಿದೆ ಅಲ್ಲಿ. ಯಾದಗಿರಿಯಿಂದ ಶಹಾಪುರದವರೆಗೆ ರಸ್ತೆ ಹೇಗಿದೆ ಅಂದರೆ ಗರ್ಭಿಣಿಯರು ಹೆರಿಗೆಗೆ ಆಸ್ಪತ್ರೆಗೆ ಹೋಗಬೇಕು ಅಂತಾನೇ ಇಲ್ಲ ಎಂದು ಹೇಳಿದ್ದಾರೆ.
ಕಾಂಗ್ರೆಸ್ನಲ್ಲಿ ದಲಿತ ಸಿಎಂ ಚರ್ಚೆ ವಿಚಾರವಾಗಿ ಪ್ರತಿಕ್ರಿಯಿಸಿದ್ದು, ಅಲ್ಲಿಗೆ ಕಾಂಗ್ರೆಸ್ನಲ್ಲಿ ಸಿಎಂ ಬದಲಾವಣೆ ಆಗುತ್ತದೆ ಅಂತಾ ಖಾತ್ರಿಯಾಯಿತು. ಬದಲಾವಣೆ ಆಗುತ್ತದೆ ಅಂತಾ ಕಾಂಗ್ರೆಸ್ನವರೇ ಸುಳಿವು ಕೊಟ್ಟಂತೆ ಆಯಿತು. ದಲಿತರು ಸಿಎಂ ಆಗಬೇಕು ಅಂತಾ ಹಳೆಯ ಚರ್ಚೆ ಇದೆ. 2013 ರಲ್ಲಿ ದಲಿತರು ಸಿಎಂ ಆಗುತ್ತಾರೆ ಎಂದಾಗ ಎಲ್ಲರೂ ಸೇರಿ ಪರಮೇಶ್ವರ್ ಅವರನ್ನು ಸೋಲಿಸಿದರು. ಈಗ ಎತ್ತಿಕಟ್ಟಿ ಜಾರಕಿಹೊಳಿ ಅವರನ್ನು ತರುತ್ತಿರುವರು ಯಾರು? ಇಲ್ಲಿಯವರೆಗೆ ಪರಮೇಶ್ವರ್ ಹೆಸರು ಮಾತ್ರ ಓಡಾಡುತ್ತಿತ್ತು. ದಲಿತರ ನಡುವೆ ಎತ್ತಿಕಟ್ಟಿ ಕಚ್ಚಾಡಲು ಬಿಟ್ಟು ಮೂರನೇಯವರು ಆಟ ಕಟ್ಟಿದ ರೀತಿ ಕಾಂಗ್ರೆಸ್ನಲ್ಲಿ ಕಾಣುತ್ತಿದೆ. ಇದಕ್ಕಾಗಿಯೇ ಕಾಂಗ್ರೆಸ್ ದಲಿತ ವಿರೋಧಿ ಎನ್ನುವುದು.
ವಾಲ್ಮೀಕಿ ನಿಗಮ ಮತ್ತು ಮುಡಾ ಎರಡೂ ಪ್ರಕರಣಗಳು ಸಿಎಂ ಭ್ರಷ್ಟಾಚಾರದಲ್ಲಿ ಇದ್ದಾರೆ ಎಂಬುದು ಸಾಬೀತು ಮಾಡುತ್ತದೆ. ಮುಡಾ ಪ್ರಕರಣದಲ್ಲಿ ಮಲ್ಲಿಕಾರ್ಜುನಸ್ವಾಮಿ ಅವರನ್ನು ಇಡಿ ವಿಚಾರಣೆ ನಡೆಸಲಿದೆ. ಇನ್ನು ಪಾರ್ವತಿ ಅವರನ್ನು ಕೂಡ ವಿಚಾರಣೆಗೆ ಕರೆಯುತ್ತಾರೆ. ನಂತರ ನಿಮ್ಮನ್ನು ಕೂಡಾ ಕರೆಯಬೇಕಲ್ವಾ? ಅದು ಹೇಗೆ ಸಿಎಂ ಆಗಿದ್ದುಕೊಂಡು ನೀವು ತನಿಖೆಗೆ ಹೋಗುತ್ತೀರಿ? ಇಡಿ ಕರೆಯುವ ಮೊದಲೇ ನೀವು ರಾಜೀನಾಮೆ ಕೊಟ್ಟು ಹೋಗಿ ಎಂದು ವಾಗ್ದಾಳಿ ಮಾಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.