ಬೆಂಗಳೂರು, (ಜನವರಿ 08): ತಲೆಮರೆಸಿಕೊಂಡಿದ್ದ 6 ನಕ್ಸಲರು ಶಸ್ತ್ರಾಸ್ತ್ರ ತೊರೆದು ಮುಖ್ಯವಾಹಿನಿಗೆ ಬರಲು ಸಿದ್ಧರಾಗಿದ್ದಾರೆ. ನಾಗರಿಕ ಸಮಿತಿ, ಶರಣಾಗತಿ ಸಮಿತಿ ಮಾತುಕತೆ ಬಳಿಕ ಇಂದು ನಕ್ಸಲರು ಶರಣಾಗತಿಯಾಗುತ್ತಿದ್ದಾರೆ. ಕಾಡಿನೊಳಗೆ ಅಡಗಿ ಕುಳಿತು ಸದಾ ಸಂಘರ್ಷ, ರಕ್ತಚರಿತ್ರೆ ಬರೆಯುತ್ತಿದ್ದ ನಕ್ಸಲರು ಶಾಂತಿ ಮಂತ್ರ ಪಠಿಸಿದ್ದರು. ಆರು ನಕ್ಸಲರಾದ ಶೃಂಗೇರಿ ತಾಲೂಕಿನ ಮುಂಡುಗಾರು ಗ್ರಾಮದ ಲತಾ, ಕಳಸ ತಾಲೂಕಿನ ಬಾಳೆಹೊಳೆ ಗ್ರಾಮದ ವನಜಾಕ್ಷಿ, ದಕ್ಷಿಣ ಕನ್ನಡ ಜಿಲ್ಲೆ ಕುಂತಲೂರು ಮೂಲಕದ ಸುಂದರಿ, ರಾಯಚೂರು ಮೂಲದ ಮಾರಪ್ಪ ಅರೋಳಿ, ವಸಂತ, ಎನ್.ಜೀಶಾ ಶರಣಾಗತಿಗೆ ನಿರ್ಧರಿಸಿದ್ದಾರೆ. ಅಂತೆಯೇ ಇಂದು (ಜನವರಿ 08) ಸಂಜೆ ಬೆಂಗಳೂರಿನಲ್ಲಿ ಸಿಎಂ ಸಿದ್ದರಾಮಯ್ಯ, ಗೃಹ ಸಚಿವ ಪರಮೇಶ್ವರ್ ಸಮ್ಮುಖದಲ್ಲಿ ಶರಣಾಗಲು ನಿರ್ಧರಿಸಿದ್ದಾರೆ.
ಚಿಕ್ಕಮಗಳೂರು ಜಿಲ್ಲಾಡಳಿತದ ಮುಂದೆ ಶರಣಾಗಲು ನಿರ್ಧರಿಸಿದ್ದ ನಕ್ಸಲರನ್ನು ಈಗಾಗಲೇ ಕಾಡಿನಿಂದ ನಾಡಿಗೆ ಕರೆದುಕೊಂಡು ಬರಲಾಗಿದೆ. ಶಾಂತಿಗಾಗಿ ನಾಗರಿಕ ವೇದಿಕೆ ಸದಸ್ಯರ ಜೊತೆ ನಕ್ಸಲರು ಚಿಕ್ಕಮಗಳೂರು ಜಿಲ್ಲಾಧಿಕಾರಿಗಳ ಕಚೇರಿಗೆ ಆಗಮಿಸುತ್ತಿದ್ದರು. ಆದರೆ ಇವರು ಇದೀಗ ಸಿಎಂ ಸಿದ್ದರಾಮಯ್ಯರ ಮುಂದೆ ಶರಣಾಗಿ ಸಮಾಜದ ಮುಖ್ಯವಾಹಿನಿಗೆ ಬರಲು ನಿರ್ಧರಿಸಿದ್ದಾರೆ. ಅದಕ್ಕೆ ಸಿಎಂ ಕೂಡ ಸಮ್ಮತಿ ಸೂಚಿಸಿದ್ದಾರೆ ಎನ್ನಲಾಗಿದೆ. ನಾನೇ ನಡೆಸಿಕೊಡ್ತೇನೆ, ಬನ್ನಿ ಎಂದು ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ ಎಂದು ಹೇಳಲಾಗಿದೆ. ಹೀಗಾಗಿ ಸಿಎಂ ಎದುರು ಶರಣಾಗಲು ನಕ್ಸಲರು ಬೆಂಗಳೂರಿನತ್ತ ಹೊರಟಿದ್ದಾರೆ.
ಶೃಂಗೇರಿ ತಾಲೂಕಿನ ಲತಾ ಮಂಡಗಾರು ಬಡ ಆದಿವಾಸಿ ದಂಪತಿಯ ದೊಡ್ಡ ಕುಟುಂಬದ ಹೆಣ್ಣುಮಗಳು ಬಡತನ ಹಾಗೂ ಶಾಲೆಯ ಮಾಸ್ತರರ ಕಿರುಕುಳಗಳಿಂದಾಗಿ 6ನೆಯ ತರಗತಿಗೆ ಓದು ನಿಲ್ಲಿಸಿದರು. ಅಂತ್ಯದ ನೂರಾರು ಆದಿವಾಸಿ ಕುಟುಂಬಗಳಂತೆಯೇ ಈ ಕುಟುಂಬವು ಸಹ ಕುದುರೆಮುಖ ರಾಷ್ಟ್ರೀಯ ಉದ್ಯಾನ ಯೋಜನೆಯಡಿ ಮನೆ ಕಳೆದುಕೊಳ್ಳುವ ಪರಿಸ್ಥಿತಿ ಬಂದಾಗ ಅದರ ವಿರುದ್ಧದ ಹೋರಾಟ ನಡೆಸುತ್ತಿದ್ದ ಚಳವಳಿಯ ಭಾಗವಾದರು. ಪ್ರಜಾಸತ್ತಾತ್ಮಕ ಹೋರಾಟಗಳಿಗೆ ಬೆಲೆ ನೀಡದ ಸರ್ಕಾರದ ಧೋರಣೆಗೆ ಬೇಸತ್ತು 2000ರಲ್ಲಿ 18ನೇ ವಯಸ್ಸಿನಲ್ಲಿ ಸಶಸ್ತ್ರ ಹೋರಾಟಕ್ಕೆ ಧುಮುಕಿ ಅಂದಿನಿಂದ ಕರ್ನಾಟಕ ಹಾಗೂ ಕೇರಳಗಳಲ್ಲಿ ಸಂಚರಿಸುವ ದಳದ ಭಾಗವಾಗಿದ್ದು, ಇಂದು ಮತ್ತೆ ಜನಪದ ಚಳವಳಿಗಳಲ್ಲಿ ಪ್ರಜಾತಂತ್ರವಾಗಿ ಹೋರಾಟಗಳನ್ನು ನಡೆಸಲು ಮುಖ್ಯವಾಹಿನಿಯ ಭಾಗವಾಗುತ್ತಿದ್ದಾರೆ. ಕೇವಲ 6ನೇ ತರಗತಿಯವರೆಗೆ ಓದಿರುವ ಲತಾರವರು ಯೋಜನೆಗಳ ಸ್ಪಷ್ಟತೆ ಹಾಗೂ ಬದ್ಧತೆ ಬೆರಗು ಹುಟ್ಟಿಸುವಂಥದ್ದು. ಈಗಿನ ನಕ್ಸಲ್ ತಂಡದ ನಾಯಕಿ ಎಂದು ಹೇಳಬಹುದು.
ಸುಂದರಿಯೂ ಸಹ ಲತಾ ರೀತಿಯಲ್ಲಿ ಆದಿವಾಸಿ ಮಹಿಳೆ. ಮಕ್ಕಳಲ್ಲಿ ಸುಂದರಿ ಆರನೆಯವರು, ಬಡತನ ಹಾಗೂ ಶಾಲೆ ದೂರವಿದ್ದುದರಿಂದ ಮೂರನೆ ತರಗತಿಯ ನಂತರ ಶಾಲೆ ತೊರೆದರು. ಇವರ ಕುಟುಂಬವೂ ಸಹ ಕುದುರೆಮುಖ ರಾಷ್ಟ್ರೀಯ ಉದ್ಯಾನ ಯೋಜನೆಯಿಂದಾಗಿ ತನ್ನ ಎಲ್ಲವನ್ನು ಕಳೆದುಕೊಳ್ಳುವ ಅಪಾಯವನ್ನು ಎದುರಿಸುತ್ತಿದ್ದರು. ಪ್ರಜಾಸತ್ತಾತ್ಮಕ ಚಳವಳಿ ಫಲ ನೀಡದೆಂದು ಕಂಡಾಗ ಆಗಿನ ಹಲವರು ಯುವಜನರಂತೆ ಸುಂದರಿಯೂ ಸಹ ಆಯುಧವನ್ನು ಕೈಗೆತ್ತಿಕೊಂಡರು. ತನ್ನ 19ನೆಯ ವಯಸ್ಸಿನಲ್ಲಿ 2004ರಲ್ಲಿ ಮಾವೋವಾದಿ ಪಕ್ಷದ ಸದಸ್ಯರಾಗಿದ್ದು, ಅಂದಿನಿಂದ ಕೇರಳ ಹಾಗೂ ಕರ್ನಾಟಕದಲ್ಲಿ ಸಂಚರಿಸುತ್ತಿರುವ ದಳದ ಭಾಗವಾಗಿದ್ದರು. ತನ್ನ ಹಾಗೂ ನೆರೆಹೊರೆಯ ಕುಟುಂಬಗಳ ಮೇಲೆ ಪೊಲೀಸರು ನಡೆಸುತ್ತಿದ್ದ ದಾಳಿಗಳು ದೌರ್ಜನ್ಯಗಳನ್ನು ಇಂದಿಗೂ ನೋವಿನಿಂದ ನೆನಪಿಸಿಕೊಳ್ಳುವ ಸುಂದರಿ ತನ್ನ ಹೋರಾಟದ ಕೆಚ್ಚನ್ನು ಉಳಿಸಿಕೊಂಡಿದ್ದು ಇನ್ನು ಮುಂದೆ ಪ್ರಜಾತಾಂತ್ರಿಕ ಚಳವಳಿಗಳ ಭಾಗವಾಗಲು ಮುಖ್ಯ ವಾಹಿನಿಯನ್ನು ಸೇರಬಯಸಿದ್ದಾರೆ.
ವನಜಾಕ್ಷಿ ಎಸ್ ಎಸ್ ಎಲ್ ಸಿ ವರೆಗೂ ಓದಿರುವ ಇವರು ಈ ತಂಡದ ಅತಿ ಹಿರಿಯ ಸದಸ್ಯ 1985 ರಲ್ಲಿ ಓದು ನಿಲ್ಲಿಸಿದ ಈ ಆದಿವಾಸಿ ಮಹಿಳೆ ತನ್ನ ಗ್ರಾಮದಲ್ಲಿ ಸಾರ್ವಜನಿಕ ಜೀವನದ ಭಾಗವಾಗಿ 1992 ಮತ್ತು 1997ರಲ್ಲಿ ಗ್ರಾಮ ಪಂಚಾಯಿತಿ ಸದಸ್ಯಯಾಗಿ ಅವಿರೋಧವಾಗಿ ಆಯ್ಕೆಯಾಗಿದ್ದರು. ಎಂಟು ಜನ ಮಕ್ಕಳ ದೊಡ್ಡ ಕುಟುಂಬದ ಹೆಣ್ಣು ಮಗಳಾಗಿ ಟೈಪ ರೈಟಿಂಗ್ ಕಲಿತು ಹೊಲಿಗೆಯನ್ನು ಜೀವ ಜೀವನಾಧಾರವಾಗಿಸಿಕೊಂಡರು. ರಾಜಕೀಯವಾಗಿ ಸಕ್ರಿಯವಾಗಿದ್ದರೂ ಸಹ ಇವರಿಗೆ ಮತ್ತು ಇವರ ಕುಟುಂಬಕ್ಕೆ ಬಲಾಢ್ಯರಿಂದ ತಮ್ಮ ತುಂಡುಭೂಮಿಯನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ ಪರಿಣಾಮವಾಗಿ ತಾಯಿ ಮಾನಸಿಕ ಅಸ್ವಸ್ಥತೆಗೆ ಗುರಿಯಾದರೆ ಒಬ್ಬ ತಮ್ಮ ಆತ್ಮಹತ್ಯೆಗೆ ಶರಣಾದ. ಅಲ್ಲದೆ ಸುತ್ತಮುತ್ತ ಇದ್ದ ಹಲವು ಕುಟುಂಬಗಳು ಸಹ ತಮ್ಮಂತೆ ಬಡತನ ಶೋಷಣೆಗಳಿಗೆ ಬಲಿಯಾಗುತ್ತಿದ್ದುದ್ದನ್ನು ಕಂಡ ವನಜಾಕ್ಷಿ ವ್ಯವಸ್ಥೆಯಲ್ಲಿ ನಂಬಿಕೆಯನ್ನು ಕಳೆದುಕೊಂಡರು ಸಶಸ್ತ್ರ ಹೋರಾಟವೇ ದಾರಿ ಎಂಬ ನಿರ್ಧಾರಕ್ಕೂ ಆ ಕಾಲದಲ್ಲಿ ನಡೆಯುತ್ತಿದ್ದ ಸಶಸ್ತ್ರ ಚಳುವಳಿಯ ಪ್ರಭಾವದಿಂದಾಗಿ ಬಂದರು 2000 ನೇ ಇಸವಿಯಿಂದ ಮಾವೋವಾದಿ ಪಕ್ಷದ ಭಾಗವಾಗಿ ಕರ್ನಾಟಕ ಹಾಗೂ ಕೇರಳದಲ್ಲಿ ಸಂಚರಿಸುವ ದಳದ ಸದಸ್ಯೆಯಾಗಿದ್ದರು. ತನ್ನ ಹೋರಾಟವನ್ನು ಪ್ರಜಾಸತ್ತಾತ್ಮಕ ರೀತಿಯಲ್ಲಿಯೂ ಮುಂದುವರಿಸಬಹುದಾದ ಅವಕಾಶಗಳನ್ನು ಅರ್ಥ ಮಾಡಿಕೊಂಡು ಈಗ ಮುಖ್ಯವಾಹಿನಿಯ ಭಾಗವಾಗಲು ಸಿದ್ಧರಾಗಿದ್ದಾರೆ.
ಜಯಣ್ಣ ಆರೋಲಿ ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಅರೋಲಿ ಗ್ರಾಮದ ಜಯಣ್ಣ ಬಿಎ ವರೆಗೂ ಓದಿರುವ ದಲಿತ ಯುವಕ. ಕಾಲೇಜಿನಲ್ಲಿ ಇರುವಾಗಲೇ ಆ ಸಮಯದಲ್ಲಿ ಆ ಭಾಗದಲ್ಲಿ ನಡೆಯುತ್ತಿದ್ದ ಮಾವೋವಾದಿ ಚಳವಳಿಯ ಕಡೆ ಆಕರ್ಷಿತರಾದರು ಆಸಕ್ತಿಯಿಂದ ಚಳುವಳಿಯನ್ನು ಗಮನಿಸುತ್ತಿದ್ದ ಅವರಿಗೆ ಭಾಸ್ಕರ್ ಅವರ ಎನ್ಕೌಂಟರ್ ಹತ್ಯೆ ಆಘಾತವನ್ನುಂಟು ಮಾಡಿತು. 2000nE ಇಸವಿಯಲ್ಲಿ ತನ್ನ 24ನೇ ವಯಸ್ಸಿನಲ್ಲಿ ದಳದ ಭಾಗವಾದರು. ಅಂದಿನಿಂದ ಕೇರಳ ಕರ್ನಾಟಕಗಳಲ್ಲಿ ಇವರ ಹೋರಾಟದ ಚಟುವಟಿಕೆಗಳು ನಡೆದಿದೆ. 2018 ಮತ್ತೆ ಸಶಸ್ತ್ರ ಚಳವಳಿಗೆ ಮರಳಿದರು. ಜನರ ಜೊತೆ ಸೇರಿ ಜನಪರ ಹೋರಾಟಗಳನ್ನು ನಡೆಸಲು ಮುಖ್ಯ ವಾಹಿನಿಯ ಭಾಗವಾಗಲು ಬಯಸಿದ್ದಾರೆ. ಇನ್ನು ಸರ್ಕಾರ ಪ್ರಕಟಿಸಿರುವ ಪ್ಯಾಕೇಜ್ ಭಾಗವಾಗಿ ತಮಗೆ ಸಂದಾಯವಾಗಬಹುದಾದ ಹಣದ ಅರ್ಧ ಭಾಗವನ್ನು ತನ್ನ ಹಳ್ಳಿಯ ಶಾಲೆಯ ಅಭಿವೃದ್ಧಿಗಾಗಿ ನೀಡಬೇಕೆಂದು ತೀರ್ಮಾನಿಸಿದ್ದಾರೆ.
ತಮಿಳುನಾಡಿನ ವೆಲ್ಲೂರಿನ ವಸಂತ್ ಬಿ ಟೆಕ್ ಪದವೀಧರ ವೆಲ್ಲೂರು ಜಿಲ್ಲೆಯ ಆರ್ಕಾಟ್ ಅವರ ಊರು ಸಮಾಜಮುಖಿ ಚಿಂತನೆಗಳಿಂದ ಪ್ರಭಾವಿತರಾದ ಇವರು ಹೋರಾಟಗಳನ್ನು ಗಮನಿಸುತ್ತಿ ಬೆಳೆದವರು 2010ರಲ್ಲಿ ಪದವಿ ಮುಗಿಸಿದ ತಕ್ಷಣವೇ ಶಶಸ್ತ್ರ ಹೋರಾಟದ ಭಾಗವಾಗಿ ಅಂದಿನಿಂದಲೂ ಕೇರಳ ಕರ್ನಾಟಕಗಳಲ್ಲಿರುವ ದಳದ ಸದಸ್ಯರಾಗಿದ್ದರು. ಮಿತ ಭಾಷೆಯಾಗಿರುವ ವಸಂತ್ ತನ್ನ ಆದರ್ಶಗಳನ್ನು ಬಿಟ್ಟುಕೊಡದೆ ಹೋರಾಟದ ಮಾರ್ಗವನ್ನು ಬದಲಿಸಿ ಮುಖ್ಯವಾಹಿನಿಯನ್ನು ಸೇರಬಯಸಿದ್ದಾರೆ
ಜಿಶ ತಂಡದಲ್ಲಿನ ಎಲ್ಲರಿಗಿಂತಲೂ ತುಂಬಾ ಚಿಕ್ಕವರು. ಕೇರಳದ ಜೀಶ ವಯನಾಡ್ ಜಿಲ್ಲೆಯ ಮಕ್ಕಿಮಲದ ಆದಿವಾಸಿ ಮಹಿಳೆ ಎಂಟನೇ ತರಗತಿಯವರೆಗೂ ವಿದ್ಯಾಭ್ಯಾಸ 2018ರಲ್ಲಿ ಕೇರಳದಲ್ಲಿ ಸಶಸ್ತ್ರ ಹೋರಾಟದ ಭಾಗವಾಗಿದ್ದು 2023ರಲ್ಲಿ ತಂಡದ ಇತರೆ ಸದಸ್ಯರೊಂದಿಗೆ ಕೇರಳದಿಂದ ಕರ್ನಾಟಕಕ್ಕೆ ಬಂದವರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:31 pm, Wed, 8 January 25