
ಬೆಳಗಾವಿ, ಡಿ.14: ಕಾಮಗಾರಿ ಮುಕ್ತಾಯಗೊಂಡರೂ ಬಿಲ್ ಪಾವತಿಸದ ಹಿನ್ನೆಲೆ ಗುತ್ತಿಗೆದಾರರು ಬೆಳಗಾವಿ (Belagavi) ಸುವರ್ಣ ವಿಧಾನಸೌಧದ ಬಳಿ ಪ್ರತಿಭಟನೆ ನಡೆಸುತ್ತಿದ್ದಾರೆ. ಸ್ಥಳಕ್ಕೆ ಆಗಮಿಸಿದ ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ (Satish Jarkiholi) ಅವರ ಜೊತೆ ಮಾತನಾಡಿದ ಸಂಘದ ಅಧ್ಯಕ್ಷ ಡಿ.ಕೆಂಪಣ್ಣ (D Kempanna), “ನಮ್ಮ ಬಾಕಿ ಬಿಲ್ ನೀಡಿ, ಇಲ್ಲದಿದ್ದರೆ ವಿಷ ಕೊಡಿ” ಎಂದಿದ್ದಾರೆ. ಈ ವೇಳೆ ಸಚಿವರು ಅನುದಾನದ ಕೊರತೆ ಬಗ್ಗೆ ಹೇಳಿಕೊಂಡಿದ್ದಾರೆ.
ಬಾಕಿ ಬಿಲ್ ಪಾವತಿಸುವಂತೆ ಆಗ್ರಹಿಸಿ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ನೇತೃತ್ವದಲ್ಲಿ ಸುವರ್ಣ ವಿಧಾನಸೌಧದ ಬಳಿ ಗುತ್ತಿಗೆದಾರರು ಪ್ರತಿಭಟನೆ ನಡೆಸುತ್ತಿದ್ದಾರೆ. ಧರಣಿ ನಡೆಯುತ್ತಿದ್ದ ಸ್ಥಳಕ್ಕೆ ಆಗಮಿಸಿದ ಸತೀಶ್ ಜಾರಕಿಹೊಳಿ ಕೆಂಪಣ್ಣ ಅವರ ಜೊತೆ ಮಾತುಕತೆ ನಡೆಸಿದ್ದಾರೆ. ಈ ವೇಳೆ, ನಮ್ಮ ಬಾಕಿ ಬಿಲ್ ನೀಡಿ, ಇಲ್ಲದಿದ್ದರೆ ವಿಷ ಕೊಡಿ ಎಂದು ಕೆಂಪಣ್ಣ ಹೇಳಿದ್ದಾರೆ.
ಇದನ್ನೂ ಓದಿ: ಗುತ್ತಿಗೆದಾರರಿಗೆ ಬಿಲ್ ಪಾವತಿಸಲು ವಿಳಂಬ ಮಾಡುತ್ತಿರುವ ಬಗ್ಗೆ ಸರ್ಕಾರಕ್ಕೆ ಹೈಕೋರ್ಟ್ ತರಾಟೆ
ಈ ವೇಳೆ ಬುಧವಾರ ಬೆಂಗಳೂರಿನಲ್ಲಿ ಸಭೆ ಕರೆದು ಚರ್ಚಿಸುವುದಾಗಿ ಸತೀಶ್ ಜಾರಕಿಹೊಳಿ ಅವರು ಕೆಂಪಣ್ಣ ಅವರಿಗೆ ಭರವಸೆ ನೀಡಿದ್ದಾರೆ ಬರುವ ಬುಧವಾರ ಒಂದೊಂದಾಗಿ ನಿಮ್ಮ ಬೇಡಿಕೆಗಳನ್ನು ಆಲಿಸೋಣ. ಬಹಳಷ್ಟು ಬೇಡಿಕೆಗಳಿವೆ, ಬಿಲ್ ಪಾವತಿ ಆಗದೆ ಇರುವ ಸಮಸ್ಯೆಗಳಿವೆ. ಬಿಲ್ ಆಗದೆ ಇರುವುದಕ್ಕೆ ಕಾರಣ ನಿಮಗೂ ಗೊತ್ತಿದೆ, ನಮಗೂ ಗೊತ್ತಿದೆ ಎಂದರು.
ನಮ್ಮ ಇಲಾಖೆಗೆ ಒಂದೂವರೆ ಸಾವಿರ ಕೋಟಿ ಅನುದಾನ ಬರುತ್ತದೆ. ಆದರೆ ಗುತ್ತಿಗೆದಾರರ ಬಾಕಿ ನೀಡಬೇಕಾಗಿರುವುದು 6 ಸಾವಿರ ಕೋಟಿ ರೂಪಾಯಿ. ಹೆಚ್ಚಿನ ಅನುದಾನ ನೀಡುವಂತೆ ಸಿಎಂ ಸಿದ್ದರಾಮಯ್ಯ ಬಳಿ ಕೇಳಿದ್ದೇವೆ. ಮುಂದಿನ ಬುಧವಾರ ಬೆಂಗಳೂರಿನಲ್ಲಿ ಸಭೆ ಕರೆದು ಚರ್ಚಿಸುವುದಾಗಿ ಭರವಸೆ ನೀಡಿದರು.
ಮುಂದಿನ ವರ್ಷ ಹೆಚ್ಚಿನ ಅನುದಾನ ನೀಡಿದರೆ ಗುತ್ತಿಗೆದಾರರನ್ನು ಒಂದ ಹಂತಕ್ಕೆ ತರುತ್ತೇವೆ ಎಂದ ಸಚಿವ ಸತೀಶ್ ಜಾರಕಿಹೊಳಿ ಹೇಳಿದರಲ್ಲದೆ, ಬೇಡಿಕೆಗಳ ಬಗ್ಗೆ ಚರ್ಚಿಸುವ ಭರವಸೆ ಮೇರೆಗೆ ಗುತ್ತಿಗೆದಾರರು ಪ್ರತಿಭಟನೆಯನ್ನು ಹಿಂಪಡೆದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:36 pm, Thu, 14 December 23