ಗುತ್ತಿಗೆದಾರರಿಗೆ ಬಿಲ್ ಪಾವತಿಸಲು ವಿಳಂಬ ಮಾಡುತ್ತಿರುವ ಬಗ್ಗೆ ಸರ್ಕಾರಕ್ಕೆ ಹೈಕೋರ್ಟ್ ತರಾಟೆ
ಬಿಬಿಎಂಪಿ, ರಾಜ್ಯ, ಕೇಂದ್ರ ಸರ್ಕಾರದ ಅನುದಾನಗಳ ಅಡಿಯಲ್ಲಿ ಪೂರ್ಣಗೊಂಡ ಕಾಮಗಾರಿಗಳ ಗುತ್ತಿಗೆದಾರರಿಗೆ ಬಿಲ್ ಪಾವತಿಸದೆ ವಿಳಂಬ ಮಾಡಲಾಗುತ್ತಿದೆ. ಹೀಗಾಗಿ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ. ಕೆಲಸ ಮಾಡಿಸಿಕೊಂಡ ಮೇಲೆ ಬಿಲ್ ಪಾವತಿಸಲು ತಕರಾರೇಕೆ ಎಂದು ಪ್ರಶ್ನೆ ಮಾಡಿದೆ.
ಬೆಂಗಳೂರು, ಡಿ.13: ಪೂರ್ಣಗೊಂಡಿರುವ ಕಾಮಗಾರಿಗಳ ಗುತ್ತಿಗೆದಾರರಿಗೆ ಬಿಲ್ ಪಾವತಿಸಲು ವಿಳಂಬ ಮಾಡುತ್ತಿರುವ ವಿಚಾರಕ್ಕೆ ಸಂಬಂಧಿಸಿ ಸರ್ಕಾರದ (State Government) ವಿಳಂಬ ನೀತಿ ಬಗ್ಗೆ ಹೈಕೋರ್ಟ್ (High Court) ಅಸಮಾಧಾನಗೊಂಡಿದ್ದು ತರಾಟೆಗೆ ತೆಗೆದುಕೊಂಡಿದೆ. ಕೆಲಸ ಮಾಡಿಸಿಕೊಂಡ ಮೇಲೆ ಬಿಲ್ ಪಾವತಿಸಲು ತಕರಾರೇಕೆ ಎಂದು ಪ್ರಶ್ನೆ ಮಾಡಿದೆ.
ಕಾಮಗಾರಿ ಮಾಡಿಸಿಕೊಂಡ ಮೇಲೂ ಬಿಲ್ ಪಾವತಿ ಮಾಡಲು ವಿಳಂಬ ಮಾಡುತ್ತಿರುವ ಸರ್ಕಾರದ ಧೋರಣೆಗೆ ಹೈಕೋರ್ಟ್ ಅಸಮಧಾನ ವ್ಯಕ್ತಪಡಿಸಿದೆ. ಕೆಲಸ ಮಾಡಿಸಿಕೊಂಡ ಮೇಲೆ ಬಿಲ್ ಪಾವತಿಸಲು ತಕರಾರೇಕೆ ? ನಿಮ್ಮ ಧೋರಣೆಯಿಂದ ಕಾಮಗಾರಿ ಮಾಡಲು ಗುತ್ತಿಗೆದಾರರು ಹಿಂಜರಿಯುವ ಸ್ಥಿತಿ ಸೃಷ್ಟಿಸಿದ್ದೀರಿ. ಇದು ಹೀಗೆಯೇ ಮುಂದುವರಿದರೆ ಗುತ್ತಿಗೆದಾರರು ಟೆಂಡರ್ ನಲ್ಲಿ ಭಾಗವಹಿಸದೇ ಕಾಮಗಾರಿ ಮೊತ್ತ ದುಬಾರಿಯಾಗಬಹುದು. ಇದು ಯಾವ ರೀತಿಯ ಆಡಳಿತ, ಸರ್ಕಾರಕ್ಕೆ ಇಂತಹ ಸಲಹೆ ಕೊಡುತ್ತಿರುವವರಾರು ? ನಾವು ಲಾ ಕಾಲೇಜಿನಲ್ಲಿ ಆಡಳಿತಾತ್ಮಕ ಕಾನೂನು ಓದುವಾಗ ಸರ್ಕಾರವೇ ನಾಗರಿಕರ ಮೊದಲ ಶತ್ರು ಎಂಬ ಪರಿಭಾಷೆಯಿತ್ತು. ಇದೀಗ ಈ ಮಾತು ಸತ್ಯವಿರುವಂತೆ ತೋರುತ್ತಿದೆ ಎಂದು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ ವರಾಳೆ ಹಾಗೂ ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ರಿದ್ದು ಹೈಕೋರ್ಟ್ ವಿಭಾಗೀಯ ಪೀಠ ಅಭಿಪ್ರಾಯಪಟ್ಟಿದೆ.
ಇದನ್ನೂ ಓದಿ: ಲೋಕಸಭೆಯಲ್ಲಿ ಭದ್ರತಾ ಲೋಪ: ಕಲಾಪ ವೇಳೆ ನುಗ್ಗಿ ಅಶ್ರುವಾಯು ಸಿಡಿಸಿದ ಇಬ್ಬರು ವ್ಯಕ್ತಿಗಳು ವಶಕ್ಕೆ
ನಿಕ್ಷೇಪ್ ಇನ್‌ಫ್ರಾ ಪ್ರಾಜೆಕ್ಟ್ಸ್ ಸಂಸ್ಥೆ 16 ಕೋಟಿ 40 ಲಕ್ಷ ಬಿಲ್ ಪಾವತಿ ಮಾಡದ ಸರ್ಕಾರದ ವಿಳಂಬ ಧೋರಣೆ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿತ್ತು. ಹೈಕೋರ್ಟ್ ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದರೂ ಬಿಲ್ ಪಾವತಿಸದ ಹಿನ್ನೆಲೆ ನ್ಯಾಯಂಗ ನಿಂದನೆ ಮೊಕದ್ದಮೆ ದಾಖಲಿಸಿತ್ತು. ಈ ಹಿಂದೆಯೂ ವಿಚಾರಣೆ ವೇಳೆ ಹೈಕೋರ್ಟ್ ಸರ್ಕಾರದ ಕ್ರಮವನ್ನು ತರಾಟೆಗೆ ತೆಗೆದುಕೊಂಡಿತ್ತು. ಈಗಾಗಲೇ ಇಬ್ಬರು ಗುತ್ತಿಗೆದಾರರು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಸರ್ಕಾರದ ದಾಖಲೆಗಳೇ ಹೇಳುತ್ತಿದೆ. ಕಲ್ಯಾಣ ರಾಜ್ಯದಲ್ಲಿ ಇಂತಹ ಘಟನೆಗಳು ನಡೆಯಬಾರದೆಂದು ಹೈಕೋರ್ಟ್ ಅಭಿಪ್ರಾಯಪಟ್ಟಿತ್ತು. ಕಾಮಗಾರಿ ಮುಗಿಸಿದರೂ ಬಿಲ್ ಪಾವತಿಗೆ ತಡವೇಕೆ. ಹಣಕ್ಕಾಗಿ ಬಿಬಿಎಂಪಿ ಅಲೆಯಬೇಕೇ ಎಂದು ಹೈಕೋರ್ಟ್ ಪ್ರಶ್ನಿಸಿತ್ತು. ಇಂದು ವಿಚಾರಣೆ ವೇಳೆ ಸರ್ಕಾರ ಈಗಾಗಲೇ ಹಂತ ಹಂತವಾಗಿ ಹಣ ಪಾವತಿಸುತ್ತಿದೆ. ಹೈಕೋರ್ಟ್ ಏಕಸದಸ್ಯ ಪೀಠದಲ್ಲಿ ಫೆಬ್ರವರಿಗೆ ವಿಚಾರಣೆ ನಿಗದಿಯಾಗಿದೆ ಎಂಬ ಮಾಹಿತಿ ನೀಡಿದ್ರು. ಈ ಹಿನ್ನೆಲೆಯಲ್ಲಿ ಹೈಕೋರ್ಟ್ ವಿಭಾಗೀಯ ಪೀಠ ವಿಚಾರಣೆಯನ್ನು ಫೆಬ್ರವರಿ ತಿಂಗಳಿಗೆ ಮುಂದೂಡಿದೆ.
ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 1:20 pm, Wed, 13 December 23