ಚಿಕ್ಕಮಗಳೂರು: ಪುನೀತ್ ರಾಜ್‍ಕುಮಾರ್ ಎಂದಾಕ್ಷಣ ಕಣ್ಮುಂದೆ ಬರುವುದು ಬೆಟ್ಟದ ಹೂ ಚಿತ್ರ. ಆ ಪುಟ್ಟ ಬಾಯಲ್ಲಿ ಶೆರ್ಲಿ ಮೇಡಂ ಎನ್ನುವುದು, ರಾಮಾಯಣ ಬುಕ್‍ಗಾಗಿ ಹಣವನ್ನು ಕೂಡಿಡುವುದು ಎಲ್ಲವೂ ಕಣ್ಣಿಗೆ ಕಟ್ಟಿದಂತಿದೆ. ಇಂದು ಪುನೀತ್ ನಮ್ಮೊಂದಿಗಿಲ್ಲ. ಆದರೆ, ಕಾಫಿನಾಡ ದಟ್ಟಕಾನನದಲ್ಲಿ ಅವರ ಹೆಜ್ಜೆ ಗುರುತುಗಳು ಅಚ್ಚಳಿಯದೆ ಉಳಿದಿದೆ. ಬೆಟ್ಟದ ಹೂ ಚಿತ್ರದ ಪಳಯುಳಿಕೆಗಳು ಮಲೆನಾಡಲ್ಲಿ ಇಂದಿಗೂ ಜೀವಂತವಾಗಿವೆ. ಪುನೀತ್ ಓದಿದ ಶಾಲೆ, ರಾಮಾಯಣ ಪುಸ್ತಕ ಖರೀದಿ ಮಾಡಲು ಹೋಗುವ ಅಂಗಡಿ. ಪ್ರಾರ್ಥನೆ ಮಾಡಿದ ಶಾಲಾ ಆವರಣ ಇಂದಿಗೂ ಹಾಗೇ ಇದೆ. ಇಂತಹ ಹತ್ತಾರು ಚಿತ್ರ, ದೃಶ್ಯ, ನೆನಪುಗಳ ಮೂಲಕ ಕನ್ನಡಿಗರ ಮನೆ-ಮನಗಳಲ್ಲಿ ಪುನೀತ್ ಎಂದೆಂದಿಗೂ ಅಜರಾಮರ ಎನ್ನುವುದರಲ್ಲಿ ಎರಡು ಮಾತಿಲ್ಲ.
ನಟಿಸಿದ ಮೊದಲ ಚಿತ್ರದಲ್ಲೇ ರಾಷ್ಟ್ರ ಪ್ರಶಸ್ತಿ ಪಡೆದ ಭಾರತೀಯ ಚಿತ್ರರಂಗದ ಏಕೈಕ ನಟ ಅಂದರೆ ಅದು ಪುನೀತ್ ರಾಜ್‍ಕುಮಾರ್. ಹುಟ್ಟಿದ ಒಂದೇ ವರ್ಷಕ್ಕೆ ಅಪ್ಪನ ಜೊತೆ ತೆರೆ ಹಂಚಿಕೊಂಡ ಪುನೀತ್, ನಟಿಸಿದ ಚಿತ್ರಗಳೆಲ್ಲಾ ಸೂಪರ್ ಹಿಟ್. ಆರು ವರ್ಷದ ಮಕ್ಕಳಿಂದ 60 ವರ್ಷದ ವೃದ್ಧರು ಇಷ್ಟಪಡುವ ಉತ್ತಮ ನಟ ಅಂದರೆ ಅದು ಪವರ್ ಸ್ಟಾರ್. ಕನ್ನಡ ಚಲನಚಿತ್ರರಂಗಕ್ಕೆ ಮುತ್ತಿನಂತಹ ಮಾಣಿಕ್ಯ ರಾಜ್ ಕುಟುಂಬದ ಕುಡಿ ಪುನೀತ್. ಅಪ್ಪು ಅಭಿನಯಿಸಿದ ಮೊದಲ ಚಿತ್ರವೇ ದೊಡ್ಡ ಯಶಸ್ಸನ್ನು ತಂದು ಕೊಟ್ಟಿತು.
ಬೆಟ್ಟದ ಹೂ ಸಿನಿಮಾದ ರಾಮುವಿನ ಪಾತ್ರ ಅಪ್ಪುವಿಗೆ ರಾಷ್ಟ್ರಪ್ರಶಸ್ತಿಯನ್ನು ಪಡೆಯುವ ಹಾಗೇ ಮಾಡಿತು. ಬೆಟ್ಟದ ಹೂವು ಚಿತ್ರವನ್ನು ಚಿಕ್ಕಮಗಳೂರು ತಾಲೂಕಿನ ಮುಳ್ಳಯ್ಯನಗಿರಿ ತಪ್ಪಲಿನ ಅತ್ತಿಗುಂಡಿ ಗ್ರಾಮದಲ್ಲಿ 1984ರಲ್ಲಿ ಚಿತ್ರೀಕರಿಸಲಾಗಿತ್ತು. ಆಗ ಪುನೀತ್ಗೆ ಕೇವಲ 9 ವರ್ಷ ವಯಸ್ಸು, 1985ರಲ್ಲಿ ಚಿತ್ರ ತೆರೆಕಂಡಿತು. ಅಂದು ಚಿತ್ರೀಕರಣಗೊಂಡ ಸ್ಥಳಗಳು ಹೇಗಿದ್ದವೂ ಇಂದಿಗೂ ಹಾಗೇ ಇದೆ.
ಬದಲಾದ ಕಾಲಘಟ್ಟದಲ್ಲಿ ಒಂದಷ್ಟು ಬದಲಾವಣೆಗೊಂಡಿವೆಯಷ್ಟೆ. ಪುನೀತ್ ಓದುತ್ತಿದ್ದ ಶಾಲೆ, ತಾಯಿ ಶಾರದೆ ಲೋಕ ಪೂಜಿತ ಜ್ಞಾನದಾತು ನಮೋಸ್ತುತೆ ಎಂದು ಪ್ರಾರ್ಥನೆ ಸಲ್ಲಿಸಿದ ಜಾಗ, ಶೆರ್ಲಿ ಮೇಡಂಗಾಗಿ ಬೆಟ್ಟಕ್ಕೆ ಹೋಗಿ ತರುತ್ತಿದ್ದ ಹೂವಿನ ಬೆಟ್ಟ, ಹಣ ಕೂಡಿಟ್ಟು ರಾಮಾಯಣ ಪುಸ್ತಕ ಖರೀದಿಸಲು ಹೋಗಿ ಬರುತ್ತಿದ್ದ ಅಂಗಡಿ ಎಲ್ಲವೂ ಇಂದಿಗೂ ಹಾಗೇ ಇದೆ. ಆದರೆ, ಆ ರಾಮು ಮಾತ್ರ ಇಂದು ನಮ್ಮೊಂದಿಗಿಲ್ಲ. ಆ ನೋವು ಗ್ರಾಮಸ್ಥರನ್ನು ಕಾಡುತ್ತಿದೆ. ಅಂದು ಪುನೀತ್ ಜೊತೆ ನಟಿಸಿದ್ದ ಮಕ್ಕಳು ಇಂದು ದೊಡ್ಡವರಾಗಿದ್ದು, ಬೆಟ್ಟದ ಹೂವು ಚಿತ್ರದ ಚಿತ್ರೀಕರಣದ ನೆನಪುಗಳು ಇಂದಿಗೂ ಹಸಿರಾಗಿವೆ.
ಇನ್ನು ಬೆಟ್ಟದ ಹೂ ಚಿತ್ರದ ವಿಶೇಷತೆ ಎಂದರೆ 10 ರೂಪಾಯಿ ಮೌಲ್ಯದ ರಾಮಾಯಣ ಪುಸ್ತಕವನ್ನು ಕೊಂಡುಕೊಳ್ಳಲು ಬಾಲಕ ರಾಮು ಮಾಡುವ ಹೋರಾಟ. ಪುಸ್ತಕ ಖರೀದಿಗೆ ಎಳೆ ಹುಡುಗ ಪುನೀತ್ ಅನುಭವಿಸುವ ಕಷ್ಟ ಎಂತದ್ದು ಎನ್ನುವುದನ್ನು ಬೆಟ್ಟದ ಹೂವು ನೋಡಿದವರಿಗೆ ಅರಿವಿಗೆ ಬಾರದೇ ಇರುವುದಿಲ್ಲ. ಆ ಪುಸ್ತಕದ ಅಂಗಡಿ ಕೂಡ ಇಂದಿಗೂ ಹಾಗೇ ಇದೆ.
ಚಿತ್ರಕ್ಕಾಗಿ ಅಂದು ಪುಸ್ತಕದ ಮಳಿಗೆಯಾಗಿದ್ದ ಅಂಗಡಿ, 35 ವರ್ಷಗಳು ಕಳೆದರೂ ಇಂದಿಗೂ ಚಿಲ್ಲರೆ ಅಂಗಡಿಯಾಗೇ ಉಳಿದಿರುವುದು ವಿಶೇಷ. ಬೆಟ್ಟದ ಹೂ ಚಿತ್ರೀಕರಣದ ಸಮಯದಲ್ಲಿ ರಾಮು ಜೊತೆ ನಟಿಸಿದ ಮಕ್ಕಳು ಇಂದು ಪುನೀತ್‍ರನ್ನು ನೆನೆದು ಭಾವುಕರಾಗುತ್ತಿದ್ದಾರೆ. ನಮ್ಮ ಮನದಲ್ಲಿ ಆ ಹರಕುಲು ಚಡ್ಡಿ, ಗುಂಡಿ ಇಲ್ಲದ ಶರ್ಟ್ ಹಾಕ್ಕೊಂಡು ನಮ್ಮ ಮಧ್ಯೆ ಓಡಾಡಿದ್ದ ಪುನೀತ್ ಚಿರಸ್ಥಾಯಿ ಎಂದು ಪುನೀತ್ ಜೊತೆ ನಟಿಸಿದ್ದ ದ್ರಾಕ್ಷಾಯಿಣಿ ಹೇಳಿದ್ದಾರೆ.
ಒಂದ್ಕಡೆ ಕಾಫಿನಾಡಿನಲ್ಲಿ ಅರಳಿದ ಬೆಟ್ಟದ ಹೂವಿನಿಂದಾಗಿ ಪುನೀತ್ ಸಿನಿ ಬದುಕು ಪ್ರಜ್ವಲಿಸಿದರೆ ಮತ್ತೊಂದೆಡೆ ಕಾಕಾತಾಳೀಯವೆಂಬಂತೆ ಚಿಕ್ಕಮಗಳೂರಿನ ಹುಡುಗಿ ಅಶ್ವಿನಿಯವರನ್ನು ವರಿಸುವ ಮೂಲಕ ಕಾಫಿನಾಡಿನ ಬಾಂದವ್ಯವನ್ನು ಪುನೀತ್ ಹಚ್ಚಹಸಿರಾಗಿಸಿದರು. ಪುನೀತ್ ಕಾಫಿನಾಡಿಗೆ ಬಂದಾಗೆಲ್ಲಾ ಸ್ನೇಹಿತರು, ಸಂಬಂಧಿಗಳ ಜೊತೆ ಬೆಟ್ಟದ ಹೂವು ಚಿತ್ರದ ಬಗ್ಗೆ ಹೆಚ್ಚು ಮಾತನಾಡುತ್ತಿದ್ದರು. ಕಳೆದ ಎರಡು ವರ್ಷದ ಹಿಂದೆ ಸ್ವತಃ ಪುನೀತ್ ಅತ್ತಿಗುಂಡಿಗೆ ಬಂದು ಚಿತ್ರದ ಚಿತ್ರೀಕರಣದ ಸ್ಥಳವನ್ನು ಸೆಲ್ಫಿ ವಿಡಿಯೋ ಮಾಡಿ ಖುಷಿ ಪಟ್ಟಿದ್ದರು.
ಒಟ್ಟಾರೆ ಪುನೀತ್ ರಾಜ್‍ಕುಮಾರ್ ಹಳ್ಳಿಗರು, ಅಭಿಮಾನಿಗಳ ಮನದಲ್ಲಿ ಕೇವಲ ಒಬ್ಬ ನಟನಾಗಿ ಮಾತ್ರ ಉಳಿದಿಲ್ಲ. ಸರಳತೆಯ ರಾಯಭಾರಿಯಾಗಿ ಉಳಿದಿದ್ದಾರೆ. ಸದಾ ಹಸನ್ಮುಖಿಯ ಮಾಸದ ನಗುವಿನಿಂದ ಜನಮಾನಸದಲ್ಲಿ ಚಿರಸ್ಥಾಯಿಯಾಗಿದ್ದಾರೆ. ವೃತ್ತಿಯನ್ನು ಮೀರಿದ ಸ್ನೇಹ-ಸಂಬಂಧದಿಂದ ಮಾಸದ ನೆನಪುಗಳನ್ನು ಬಿಟ್ಟು ಅಜರಾಮರವಾಗಿದ್ದಾರೆ.
ವರದಿ: ಪ್ರಶಾಂತ್
ಇದನ್ನೂ ಓದಿ:
Puneeth Rajkumar: ‘ಡಾ. ರಾಜ್ ಸಮಾಧಿ ಮಣ್ಣನ್ನು ಫ್ಯಾನ್ಸ್ ತೋಡಿದ್ದರು; ಅಂಥ ಸ್ಥಿತಿ ಪುನೀತ್ಗೆ ಬರಬಾರದು’; ರಾಘಣ್ಣ ಮನವಿ