ಕೊರೊನಾ ಭೀತಿ ನಡುವೆಯೂ.. ತುಂಗಭದ್ರಾ ನದಿ ತಟದುದ್ದಕ್ಕೂ ಪುಷ್ಕರ ಸ್ನಾನದ ಸಡಗರ

| Updated By: ಸಾಧು ಶ್ರೀನಾಥ್​

Updated on: Dec 12, 2020 | 4:08 PM

ಪುಷ್ಕರದ ನದಿ ಸ್ನಾನ ಮಾಡಿದ್ರೆ ಪಾಪಗಳೆಲ್ಲ ಪರಿಹಾರವಾಗುತ್ತವೆ ಅನ್ನೋದು ವಾಡಿಕೆ. ಇನ್ನು ನ. 20 ಕ್ಕೆ ಮಂತ್ರಾಲಯದ ಪೀಠಾಧಿಪತಿ ಸುಭುದೇಂದ್ರ ತೀರ್ಥ ಮಹಾಸ್ವಾಮಿಗಳು ನದಿಗಿಳಿದು ಸ್ನಾನ ಮಾಡುವ ಮೂಲಕ ಪುಷ್ಕರಕ್ಕೆ ಅಧಿಕೃತವಾಗಿ ಚಾಲನೆ ನೀಡಿದ್ದರು. ಸ್ವತಃ ಶ್ರೀಗಳೇ ತುಂಗಭದ್ರಾ ನದಿಯಲ್ಲಿ ಮುಳುಗಿ ಮಿಂದೆದ್ದ್ದರು.

ಕೊರೊನಾ ಭೀತಿ ನಡುವೆಯೂ.. ತುಂಗಭದ್ರಾ ನದಿ ತಟದುದ್ದಕ್ಕೂ ಪುಷ್ಕರ ಸ್ನಾನದ ಸಡಗರ
ಮಂತ್ರಾಲಯದ ಪೀಠಾಧಿಪತಿ ಸುಭುದೇಂದ್ರ ತೀರ್ಥ ಮಹಾಸ್ವಾಮಿಗಳು ನದಿಗಿಳಿದು ಪುಷ್ಕರ ಸ್ನಾನ ಮಾಡುತ್ತಿರುವ ದೃಶ್ಯ
Follow us on

ರಾಯಚೂರು: ಗುರು ರಾಯರು ನೆಲಸಿರುವ ಪುಣ್ಯಕ್ಷೇತ್ರ ಮಂತ್ರಾಲಯ. ಇಲ್ಲಿ ಈ ಬಾರಿಯ ಪುಷ್ಕರ ಸ್ನಾನವನ್ನು ತುಂಗಭದ್ರಾ ನದಿ ತಟದಲ್ಲಿ ಅತ್ಯಂತ ಸಡಗರ ಸಂಭ್ರದಿಂದ ನಡೆಸಲಾಯಿತು. ನವೆಂಬರ್ 20 ರಿಂದ ಡಿಸೆಂಬರ್ 1 ರವರೆಗೆ ನಡೆದ ತುಂಗಭದ್ರಾ ಪುಷ್ಕರದಲ್ಲಿ ಮಿಂದೇಳಲು ನಾಡಿನ ಮೂಲೆ ಮೂಲೆಯಿಂದಲೂ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರ ದಂಡೆ ಹರಿದು ಬಂದಿತ್ತು.

12 ವರ್ಷಗಳಿಗೊಮ್ಮೆ ದೇಶದ ಪವಿತ್ರ ನದಿಗಳಲ್ಲಿ ನಡೆಸಲಾಗುವ ಪುಷ್ಕರ ಸ್ನಾನವನ್ನು ಈ ಬಾರಿ ತುಂಗಭದ್ರಾ ತಟದಲ್ಲಿ ನಡೆಸಲಾಯಿತು. ಪುಷ್ಕರದ ವೇಳೆಯಲ್ಲಿ ನದಿ ಸ್ನಾನ ಮಾಡಿದ್ರೆ ಪಾಪಗಳೆಲ್ಲ ಪರಿಹಾರವಾಗುತ್ತದೆ ಎನ್ನುವುದು ಭಕ್ತರ ನಂಬಿಕೆ.

ಆದರೆ ಈ ಬಾರಿ ಕೊರೊನಾ ಹೆಮ್ಮಾರಿ ಹರಡುವ ಭೀತಿ ಇದೆಲ್ಲಕ್ಕಿಂತ ಹೆಚ್ಚಾಗಿತ್ತು. ಈ ಹಿನ್ನೆಲೆಯಲ್ಲಿ ಪುಷ್ಕರದ ವೇಳೆ ಜನರ ಆರೋಗ್ಯದ ಹಿತ ದೃಷ್ಟಿಯಿಂದ ಆಂಧ್ರ ಪ್ರದೇಶದ ಸರ್ಕಾರ ನದಿ ಸ್ನಾನ ನಿಷೇಧಿಸಿತ್ತು. ಆದರೂ ಭಕ್ತರು ಇದ್ಯಾವುದನ್ನು ಲೆಕ್ಕಿಸದೇ ಪಾಪ ಪರಿಹಾರಕ್ಕಾಗಿ ನದಿಸ್ನಾನ ಮಾಡಿ ಪುನೀತರಾದರು.

ತುಂಗಭದ್ರಾ ಪುಷ್ಕರದಲ್ಲಿ ಸ್ನಾನ

ಇನ್ನು ಮೊದಲನೇ ದಿನದ ತುಂಗಭದ್ರಾ ಪುಷ್ಕರದಲ್ಲಿ ಮಾಜಿ ಸಚಿವ ಅರವಿಂದ ಲಿಂಬಾವಳಿ ಭಾಗವಹಿಸಿದ್ದು, ಸಾಮಾಜಿಕ ಅಂತರವೇ ಇಲ್ಲದೆ ಪುಷ್ಕರಕ್ಕೆ ಚಾಲನೆ ನೀಡಿದ ದೃಶ್ಯ ಎಲ್ಲರ ಗಮನ ಸೆಳೆದಿತ್ತು. ಮಂತ್ರಾಲಯ ಅಷ್ಟೇ ಅಲ್ಲದೇ ತುಂಗಭದ್ರಾ ನದಿ ಹರಿಯುವ ಸ್ಥಳದಲ್ಲೆಲ್ಲ, ವಿಶೇಷವಾಗಿ ರಾಯಚೂರು, ಬಳ್ಳಾರಿ, ಕೊಪ್ಪಳ, ಶಿವಮೊಗ್ಗ, ದಾವಣಗೆರೆ ಸೇರಿದಂತೆ ತುಂಗಭದ್ರಾ ನದಿ ತಟಗಳಲ್ಲಿ ಜನ ಪುಷ್ಕರದ ವೇಳೆ ನದಿ ಸ್ನಾನ ಮಾಡಿದ್ದು ವಿಶೇಷವಾಗಿತ್ತು.

ಪುಷ್ಕರದ ನದಿ ಸ್ನಾನ ಮಾಡಿದ್ರೆ ಪಾಪಗಳೆಲ್ಲ ಪರಿಹಾರವಾಗುತ್ತವೆ ಅನ್ನೋದು ವಾಡಿಕೆ. ಇನ್ನು ನವೆಂಬರ್ 20 ಕ್ಕೆ ಮಂತ್ರಾಲಯದ ಪೀಠಾಧಿಪತಿ ಸುಭುದೇಂದ್ರ ತೀರ್ಥ ಮಹಾಸ್ವಾಮಿಗಳು ನದಿಗಿಳಿದು ಸ್ನಾನ ಮಾಡುವ ಮೂಲಕ ಪುಷ್ಕರಕ್ಕೆ ಅಧಿಕೃತವಾಗಿ ಚಾಲನೆ ನೀಡಿದ್ದರು. ಸ್ವತಃ ಶ್ರೀಗಳೇ ತುಂಗಭದ್ರಾ ನದಿಯಲ್ಲಿ ಮುಳುಗಿ ಮಿಂದೆದ್ದ್ದರು. ಇದೇ ವೇಳೆಯಲ್ಲಿ ಅದ್ದೂರಿಯಾಗಿ ಪ್ರಹ್ಲಾದರಾಜರ ಉತ್ಸವವೂ ನಡೆದಿದ್ದು, ಈ ಉತ್ಸವಕ್ಕೆ ಸಹಸ್ರಾರು ಭಕ್ತರು ಸಾಕ್ಷಿಯಾಗಿದ್ದರು. ಪ್ರಹ್ಲಾದರಾಜರ ಉತ್ಸವದ ನಂತರ ನದಿ ದಂಡೆಯಲ್ಲಿ ಶ್ರೀಗಳು ವಿಶೇಷ ಪೂಜೆ ಸಲ್ಲಿಸಿದರು. ಇದಾದ ನಂತರ ಗುರು ರಾಯರ ಬೃಂದಾವನಕ್ಕೆ ವಿಶೇಷ ಪೂಜೆ ಸಲ್ಲಿಸಿ ಮಹಾ ಮಂಗಳಾರತಿ ಮಾಡಲಾಯಿತು.

ದೇವಿಯ ದರ್ಶನದ ಚಿತ್ರಣ

ಮಂತ್ರಾಲಯದ ಶ್ರೀಮಠ ತುಂಗಭದ್ರಾದ ಪುಷ್ಕರದ ವೇಳೆ ಕೇವಲ ಪಿಂಡ ಪ್ರಧಾನ ಮತ್ತು ಧಾರ್ಮಿಕ ವಿಧಿ ವಿಧಾನ ನಡೆಸಿ ನದಿ ನೀರು ಪ್ರೋಕ್ಷಣೆಗೆ ಮಾತ್ರ ಸೂಕ್ತ ವ್ಯವಸ್ಥೆ ಕಲ್ಪಿಸಿತ್ತು. ಆದರೂ ಮಂತ್ರಾಲಯಕ್ಕೆ ಆಗಮಿಸಿದ್ದ ರಾಯರ ಭಕ್ತರು ಯಾವುದನ್ನು ಲೆಕ್ಕಿಸದೇ ನದಿ ಸ್ನಾನ ಮಾಡಿ ಪುನೀತರಾಗಿದ್ದು ವಿಶೇಷವಾಗಿತ್ತು. ಹೀಗಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮತ್ತು ಭಕ್ತರು ನದಿಸ್ನಾನ ಮಾಡದಂತೆ ತಡೆಗಟ್ಟಲು ಆಂಧ್ರಪ್ರದೇಶ ಪೊಲೀಸರು ಹರ ಸಾಹಸವೇ ಪಡಬೇಕಾಯಿತು.

ತುಂಗಭದ್ರಾ ಪುಷ್ಕರದ ವೇಳೆ ಮಂತ್ರಾಲಯ ಶ್ರೀಮಠದಲ್ಲಿ ನಿತ್ಯವೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಸಹ ಆಯೊಜಿಸಲಾಗಿತ್ತು. ಪ್ರತಿನಿತ್ಯವೂ ರಾಯರ ಮೂಲ ಬೃಂದಾವನಕ್ಕೆ ವಿಶೇಷ ಪಂಚಾಮೃತ ಅಭಿಷೇಕ ಮಹಾ ಮಂಗಳಾರತಿ ಮಾಡಲಾಯಿತು. ಪುಷ್ಕರದ ವೇಳೆಯಲ್ಲಿ ನಾಡಿನ ವಿವಿಧ ಮಠಾಧೀಶರ ದಂಡೆ ಮಂತ್ರಾಲಯಕ್ಕೆ ಹರಿದು ಬಂದಿದ್ದು, ಒಟ್ಟಾರೆಯಾಗಿ ಡಿಸೆಂಬರ್ 1ರವರಗೆ ನಡೆದ ತುಂಗಭದ್ರಾ ಪುಷ್ಕರವನ್ನ ಅತ್ಯಂತ ಸಡಗರಸಂಭ್ರಮ‌ದಿಂದ ಆಚರಿಸಲಾಯಿತು.
ಸಿದ್ದು ಬಿರಾದಾರ್

ಕೊವಿಡ್-19 ಹಿನ್ನೆಲೆಯಲ್ಲಿ ಈ ಬಾರಿಯ ತುಂಗಭದ್ರಾ ಪುಷ್ಕರ ಸಾಂಕೇತಿಕ ಮಾತ್ರ! | Amid Covid-19 scare no holy dip in Tungabhadra this time