ಬೆಂಗಳೂರು: ಸತತ 9 ತಿಂಗಳು ಬ್ಯಾಂಕ್ನಿಂದ ಪಿಂಚಣಿ ಹಣ ವಿತ್ಡ್ರಾ ಮಾಡದಿದ್ದರೆ ಅಂಥ ಬ್ಯಾಂಕ್ ಖಾತೆಗಳನ್ನು ನಿರ್ಬಂಧಿಸಲಾಗುವುದು ಎಂಬ ಕಂದಾಯ ಸಚಿವ ಆರ್.ಅಶೋಕ ಅವರ ಹೇಳಿಕೆ ಗೊಂದಲ ಸೃಷ್ಟಿಸಿದೆ. ರಾಜ್ಯದಲ್ಲಿ ವಿವಿಧ ಸಾಮಾಜಿಕ ಭದ್ರತಾ ಯೋಜನೆಗಳಡಿ ಸಿಗುತ್ತಿರುವ ಪಿಂಚಣಿಯನ್ನೇ ಜೀವನಾಧಾರ ಮಾಡಿಕೊಂಡಿರುವ ಹಲವರು ಕಂದಾಯ ಸಚಿವರ ಹೇಳಿಕೆಯಿಂದ ಆತಂಕಕ್ಕೆ ಒಳಗಾಗಿದ್ದಾರೆ.
‘ಸರ್ಕಾರದಿಂದ ವಿವಿಧ ಯೋಜನೆಗಳಡಿ ಪಿಂಚಣಿ ಪಡೆಯುತ್ತಿರುವವರು 9 ತಿಂಗಳ ಅವಧಿಯಲ್ಲಿ ಹಣವನ್ನು ಡ್ರಾ ಮಾಡದಿದ್ದರೆ ಅಂಥ ಖಾತೆಗಳನ್ನು ಸ್ಥಗಿತಗೊಳಿಸಲು ಬ್ಯಾಂಕುಗಳಿಗೆ ಸೂಚಿಸುತ್ತೇವೆ. ಪ್ರತಿ ವರ್ಷ 4 ಲಕ್ಷ ಹೊಸ ಪಿಂಚಣಿದಾರರು ಸೇರ್ಪಡೆಯಾಗುತ್ತಿದ್ದಾರೆ’ ಎಂದು ಸಚಿವರು ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ಹೇಳಿಕೆ ನೀಡಿದ್ದರು.
‘ಕೊರೊನಾ ಸೋಂಕು ರಾಜ್ಯದಲ್ಲಿ ವ್ಯಾಪಕವಾಗಿ ಹರಡಿದ್ದ ಹಿನ್ನೆಲೆಯಲ್ಲಿ ಹಲವು ಹಿರಿಯ ನಾಗರಿಕರು ಸುಮಾರು ಒಂದು ವರ್ಷದಿಂದ ಬ್ಯಾಂಕ್ ಸೇರಿದಂತೆ ಜನಜಂಗುಳಿ ಹೆಚ್ಚಿರುವ ಪ್ರದೇಶಗಳಿಂದ ದೂರವೇ ಉಳಿದಿದ್ದಾರೆ. ಸಾಲಸೋಲ ಮಾಡಿ ಜೀವನ ನಡೆಸುತ್ತಿದ್ದಾರೆ. ಇಂಥ ಹೊತ್ತಿನಲ್ಲಿ ಸಚಿವರು ಪಿಂಚಣಿ ವಿತ್ಡ್ರಾ ಮಾಡದ ಬ್ಯಾಂಕ್ ಖಾತೆಯನ್ನೇ ನಿರ್ಬಂಧಿಸುತ್ತೇವೆ ಎಂದು ಹೇಳಿರುವುದು ಆತಂಕ ಮೂಡಿಸಿದೆ’ ಎಂದು ಹೆಸರು ಹೇಳಲು ಇಚ್ಛಿಸದ ವೃದ್ಧಾಪ್ಯ ವೇತನ ಫಲಾನುಭವಿಯೊಬ್ಬರು ತಿಳಿಸಿದರು.
‘ಈ ಸರ್ಕಾರಕ್ಕೆ ಏನಾಗಿದೆ? ಟಿವಿ, ಬೈಕ್, ಫ್ರಿಡ್ಜ್ ಇದ್ದವರಿಗೆ ಬಿಪಿಎಲ್ ಕಾರ್ಡ್ ಕೊಡಲ್ಲ ಎಂದು ನಿನ್ನೆ ಉಮೇಶ್ ಕತ್ತಿ ಹೇಳಿಕೆ ನೀಡಿ ಗಾಬರಿಯುಂಟು ಮಾಡಿದ್ದರು. ಈಗ ಹಣ ವಿತ್ಡ್ರಾ ಮಾಡದಿದ್ದರೆ ಬ್ಯಾಂಕ್ ಖಾತೆ ನಿರ್ಬಂಧಿಸುವುದಾಗಿ ಆರ್.ಅಶೋಕ ಹೇಳಿದ್ದಾರೆ. ಸರ್ಕಾರದಲ್ಲಿ ಆಯಕಟ್ಟಿನ ಸ್ಥಾನಗಳಲ್ಲಿರುವವರಿಗೆ ಬಡತನದ ಬಗ್ಗೆ ಮಾಹಿತಿಯ ಕೊರತೆಯಿದೆ. ಇನ್ನಾದರೂ ಇವರು ಸರಿಯಾದ ಸಲಹೆಗಾರರನ್ನು ನೇಮಿಸಿಕೊಳ್ಳುವುದು ಒಳಿತು’ ಎಂದು ಸಾಮಾಜಿಕ ಹೋರಾಟಗಳಲ್ಲಿ ಸಕ್ರಿಯರಾಗಿರುವ ಹೋರಾಟಗಾರರೊಬ್ಬರು ಪ್ರತಿಕ್ರಿಯಿಸಿದರು.
ಇದನ್ನೂ ಓದಿ: ಕರ್ನಾಟಕದಲ್ಲಿ 20ರಂದು ‘ಹಳ್ಳಿ ಕಡೆ ನಡೆಯಿರಿ’ ಕಾರ್ಯಕ್ರಮ; ಹಳ್ಳಿಗಳಿಗೆ ಡಿಸಿ, ಎಸಿ, ತಹಶೀಲ್ದಾರ್ ಭೇಟಿ: ಆರ್.ಅಶೋಕ ಘೋಷಣೆ