ಸರ್ಕಾರದ ಫ್ರೀ ಬಸ್ ಕಲ್ಪಿಸೊ ಶಕ್ತಿ ಯೋಜನೆ ದುರುಪಯೋಗದತ್ತ ಸಾಗ್ತಿದೆ ಅನ್ನೋ ಸಂಶಯ ಮೂಡ್ತಿದೆ.. ಪೋಷಕರ ಫ್ರೀ ಬಸ್ ಓಡಾಟ ಮಕ್ಕಳ ಮೇಲೂ ಪರಿಣಾಮ ಬೀರ್ತಿದೆ.. ಹೆತ್ತವರು ಜಾತ್ರೆಗೆ ಕರೆದೊಯ್ಯಲಿಲ್ಲ ಅಂತ ಅಪ್ರಾಪ್ತ ಹೆಣ್ಣು ಮಕ್ಕಳು ಮನೆ ಬಿಟ್ಟು ಆಧಾರ್ ಕಾರ್ಡ್ ಸಮೇತ ಊರು ಬಿಟ್ಟಿದ್ದಾರೆ.
ಹೌದು..ರಾಯಚೂರಿನಲ್ಲೊಂದು ವಿಚಿತ್ರ ಪ್ರಕರಣ ಬೆಳಕಿಗೆ ಬಂದಿದೆ. ಸರ್ಕಾರ ಕೊಡಮಾಡಿರುವ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಶಕ್ತಿ ಯೋಜನೆ ಅಪ್ರಾಪ್ತ ಹೆಣ್ಣು ಮಕ್ಕಳ ಮೇಲೆ ಪ್ರಭಾವ ಬೀರುತ್ತಿದೆ. ಪೋಷಕರು ಆಧಾರ್ ಕಾರ್ಡ್ ಹಿಡಿದು ಉಚಿತವಾಗಿ ನಯಾ ಪೈಸೆ ಇಲ್ಲದೇ ಬಸ್ಗಳಲ್ಲಿ ಓಡಾಡೋದು ಮಕ್ಕಳ ಮೇಲೆ ಭಾರೀ ಪರಿಣಾಮವನ್ನುಂಟು ಮಾಡಿದೆ. ರಾಯಚೂರು ಜಿಲ್ಲೆ ಲಿಂಗಸುಗೂರು ತಾಲ್ಲೂಕಿನ ಯರಗುಂಟಿ ಗ್ರಾಮದ ನಾಲ್ಕು ಜನ 13 ವರ್ಷ ವಯಸ್ಸಿನ ಅಪ್ರಾಪ್ತ ಹೆಣ್ಣು ಮಕ್ಕಳ ಪೋಷಕರು, ಪೊಲೀಸರನ್ನ ಕಂಗಾಲಾಗುವಂತೆ ಮಾಡಿದ್ದಾರೆ.
ಅಷ್ಟಕ್ಕೂ ಈ ರಾದ್ದಾಂತವಾಗೋದಕ್ಕೆ ಕಾರಣ ಫ್ರೀ ಬಸ್ ವ್ಯವಸ್ಥೆ. ಯರಗುಂಟಿ ಗ್ರಾಮದ ನಾಲ್ಕು ಜನ ಅಪ್ರಾಪ್ತ ಹೆಣ್ಣು ಮಕ್ಕಳು ಯಾದಗಿರಿಯ ತಿಂಥಿಣಿಯ ಮೌನೇಶ್ವರ ಜಾತ್ರೆಗೆ ಕರೆದೊಯ್ಯುವಂತೆ ಪೋಷಕರಿಗೆ ಹೇಳಿದ್ದಾರೆ. ಆದ್ರೆ ಪೋಷಕರು ಅದಕ್ಕೆ ಒಪ್ಪಿರ್ಲಿಲ್ಲ. ಈ ಮಧ್ಯೆ ನಾಲ್ಕು ಜನ ಅಪ್ರಾಪ್ತರು ತಾವೇ ಡಿಸ್ಕಸ್ ಮಾಡಿಕೊಂಡು ಜಾತ್ರೆಗೆ ಹೋಗೋದಕ್ಕೆ ಪ್ಲಾನ್ ಮಾಡಿಕೊಂಡಿದ್ದಾರೆ. ಅದರಂತೆ ತಮ್ಮ ಶಾಲೆಯಲ್ಲಿ ಕ್ರೀಡಾಕೂಟ ಇದೆ. ಪಟ್ಟಣಕ್ಕೆ ಹೋಗ್ಬೇಕು ಅಂತ ಹೇಳಿ ಆಧಾರ್ ಕಾರ್ಡ್ ಹಾಗೂ ಬಟ್ಟೆ ತೆಗೆದುಕೊಂಡಿದ್ದರು. ನಂತರ ನಾಲ್ಕೂ ಜನ ಸರ್ಕಾರಿ ಬಸ್ನಲ್ಲಿ ಆಧಾರ್ ಕಾರ್ಡ್ ಮೂಲಕ ತಿಂಥಿಣಿಯ ಜಾತ್ರೆಗೆ ಹೋಗಿದ್ದಾರೆ.
ಹೌದು.. ಆ ನಾಲ್ಕು ಹೆಣ್ಣು ಮಕ್ಕಳು ಇಡೀ ದಿನ ಜಾತ್ರೆಯಲ್ಲಿ ಸುತ್ತಾಡಿದ್ದಾರೆ. ಈ ಮಧ್ಯೆ ಮಕ್ಕಳು ಮನೆಗೆ ಬಾರದೇ ಇದ್ದಾಗ ಲಿಂಗಸುಗೂರು ಪೊಲೀಸರಿಗೆ ದೂರು ನೀಡಲಾಗಿದೆ. ಇಡೀ ದಿನ ಪೊಲೀಸರು ವಾಟ್ಸ್ ಆಪ್ ಗ್ರೂಪ್ಗಳಲ್ಲಿ, ಮಾಹಿತಿದಾರರರ ಮೂಲಕ ವಿವಿಧ ಆಯಾಮಗಳಲ್ಲಿ ಮಕ್ಕಳಿಗಾಗಿ ಹುಡುಕಾಟ ನಡೆಸಿ ಸುಸ್ತಾಗಿದ್ರು. ಕೊನೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಬಿ ಗಮನಕ್ಕೆ ಬಂದು, ವಿಷಯ ಪ್ರಸ್ತಾಪವಾದಾಗ ಅವರು ನೀಡಿದ ಕೆಲ ಆಯಾಮಗಳಲ್ಲಿ ವಿಚಾರಣೆ ಶುರು ಮಾಡಲಾಗಿತ್ತು.
ನಂತರ ಮಕ್ಕಳು ಒಂದು ದಿನದ ಬಳಿಕ ತಿಂಥಿಣಿಯ ದೇವಸ್ಥಾನದಲ್ಲಿ ವಿಶ್ರಾಂತಿ ಪಡೆಯೋವಾಗ ಪತ್ತೆಯಾಗಿದ್ದಾರೆ. ನಂತರ ಪೊಲೀಸರು ಮಕ್ಕಳನ್ನ ರಕ್ಷಿಸಿ ಅವರ ಹೇಳಿಕೆ ದಾಖಲಿಸಿಕೊಂಡು ಪೋಷಕರಿಗೆ ಒಪ್ಪಿಸಿದ್ದಾರೆ. ಫ್ರೀ ಬಸ್ ನಿಂದಲೇ ಮಕ್ಕಳು ಹೇಳದೇ ಕೇಳದೇ ಊರು ಬಿಟ್ಟು ಹೋಗೊ ಸ್ಥಿತಿ ನಿರ್ಮಾಣವಾಗಿರೋದಕ್ಕೆ ಪೋಷಕರು ಆತಂಕಗೊಂಡಿದ್ದಾರೆ. ಫ್ರೀ ಬಸ್ ಸಂಬಂಧ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಈ ಬಗ್ಗೆ ಗಮನ ಹರಿಸಿ ಸೂಕ್ತ ಮಾರ್ಗದರ್ಶನ ನೀಡಬೇಕಿದೆ ಅಂತ ಸಾರ್ವಜನಿಕರು ಅಭಿಪ್ರಾಯಪಡ್ತಿದ್ದಾರೆ.
ಸದ್ಯ ಈ ಸಂಬಂಧ ಲಿಂಗಸುಗೂರು ಪೊಲೀಸರು ಪ್ರಕರಣ ಇತ್ಯರ್ಥಡಿಸಿ ಪೋಷಕರಿಗೆ ಮಕ್ಕಳನ್ನ ಒಪ್ಪಿಸಿದ್ದಾರೆ. ಆದ್ರೆ ಸರ್ಕಾರ ಈ ಬಗ್ಗೆ ಗಮನ ಹರಿಸಬೇಕಿದೆ. ಫ್ರೀ ಬಸ್ ಯೋಜನೆ ಮಕ್ಕಳ ಮೇಲೆ ಈ ರೀತಿ ಪರಿಣಾಮ ಬೀರಿ ದುರುಪಯೋಗವಾಗೋದಕ್ಕು ಮುನ್ನ ಎಚ್ಚೆತ್ತುಕೊಳ್ಳಬೇಕಿದೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 11:47 am, Sat, 24 February 24