500ಕ್ಕೂ ಹೆಚ್ಚು ಹೆರಿಗೆ ಮಾಡಿಸಿರುವ ಖ್ಯಾತಿ, ಆದರೂ ಸೂರಿಲ್ಲದೇ ಗುಡಿಸಲಲ್ಲೇ ವಾಸಿಸುತ್ತಿರುವ ಸೂಲಗಿತ್ತಿ ಕಮಲಮ್ಮ

ಕಲ್ಯಾಣ ಕರ್ನಾಟಕ ಭಾಗದ ಬಾಣಂತಿಯರಿಗೆ ಸೂಲಗಿತ್ತಿ ರೂಪದ ದೇವರು ಆಕೆ. ನೂರಾರು ಹೆರಿಗೆ ಮಾಡಿಸಿರುವ ಖ್ಯಾತಿ ಹಿನ್ನೆಲೆ ಆಕೆ ಈ ಬಾರೀ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ದುರಂತ ಅಂದರೆ ಆ ಮಹಿಳೆ ಹಾಗೂ ಆಕೆಯ ಕುಟುಂಬ ಇಂದಿಗೂ ಸೂರಿಲ್ಲದೇ ಗುಡಿಸಲಲ್ಲೇ ವಾಸಿಸುತ್ತಿದ್ದಾರೆ.

500ಕ್ಕೂ ಹೆಚ್ಚು ಹೆರಿಗೆ ಮಾಡಿಸಿರುವ ಖ್ಯಾತಿ, ಆದರೂ ಸೂರಿಲ್ಲದೇ ಗುಡಿಸಲಲ್ಲೇ ವಾಸಿಸುತ್ತಿರುವ ಸೂಲಗಿತ್ತಿ ಕಮಲಮ್ಮ
ಸೂಲಗಿತ್ತಿ ಕಮಲಮ್ಮ
Follow us
TV9 Web
| Updated By: Rakesh Nayak Manchi

Updated on:Nov 05, 2022 | 7:35 AM

ರಾಯಚೂರು: ಸೂಲಗಿತ್ತಿ ಕಮಲಮ್ಮ ಅಂತಲೇ ಕಮಲಮ್ಮ ಕಲ್ಯಾಣ ಕರ್ನಾಟಕ ಭಾಗದಲ್ಲಿ ಖ್ಯಾತಿ ಪಡೆದವರಾಗಿದ್ದಾರೆ. ಕಮಲಮ್ಮ ಮೂಲತಃ ರಾಯಚೂರು ಜಿಲ್ಲೆ ಲಿಂಗಸುಗೂರು ತಾಲ್ಲೂಕಿನ ಹಟ್ಟಿ ಪಟ್ಟಣದ ನಿವಾಸಿ. ಬಡತನದಲ್ಲಿಯೇ ಅರಳಿದ ಪ್ರತಿಭೆ ಇವರು. ಅನಕ್ಷರಸ್ಥರಾದರೂ ಬುರ್ರಕಥಾ, ಜನಪದ ಹೇಳುವುದರಲ್ಲಿ ಹಾಗೂ ಸೂಲಗಿತ್ತಿಯ ಕಾಯಕ ಮಾಡುವುದರಲ್ಲಿ ನಿಸ್ಸೀಮರು. ಇವರು, ಸೂಲಗಿತ್ತಿಯ ವೃತ್ತಿ ಜೊತೆ ಬುರ್ರಕಥೆಯನ್ನು ಸಹ ಕಾಯಕವನ್ನಾಗಿಸಿಕೊಂಡಿದ್ದಾರೆ. ಇವರಿಗೆ ಆರು ಗಂಡು, ಮೂರು ಹೆಣ್ಣು ಮಕ್ಕಳಿದ್ದಾರೆ. ಒಂದು ಗಂಡು, ಎರಡು ಹೆಣ್ಣು ಮಕ್ಕಳು ತೀರಿ ಹೋಗಿದ್ದಾರೆ. ಸದ್ಯ ಐದು ಗಂಡು, ಒಂದು ಹೆಣ್ಣುಸೇರಿ ಒಟ್ಟು ಆರು ಮಕ್ಕಳಿದ್ದಾರೆ. ಮೂರು ಗಂಡುಮಕ್ಕಳಿಗೆ ಮದುವೆಯೂ ಆಗಿದೆ. ಕರ್ನಾಟಕದ ಬಯಲಾಟ, ಯಕ್ಷಗಾನಗಳ ರೀತಿಯಲ್ಲಿ ಬುರ್ರಕಥೆ ಆಂಧ್ರದಲ್ಲಿ ಹೆಚ್ಚು ಜನಪ್ರಿಯತೆ ಹೊಂದಿರುವ ಕಲೆಯಾಗಿದೆ. ಆಧುನಿಕ ಜನಪ್ರಿಯ ಮನೋರಂಜನಾ ಮಾಧ್ಯಮಗಳು ಪ್ರಚಾರಕ್ಕೆ ಬರುವ ಪೂರ್ವದಲ್ಲಿ ಗ್ರಾಮೀಣ ಪರಿಸರದ ಮನೋರಂಜನಾ ಮಾಧ್ಯಮವಾಗಿದ್ದ ಕಲೆಯೇ ಬುರ್ರಕಥೆ. ಹೀಗೆ ಊರೂರು ತಿರುಗಾಡುತ್ತಾ ಬುರ್ರಕಥೆ ಕಲೆಯನ್ನ ಸಾರುತ್ತಾ ಹೊಟ್ಟೆ ತುಂಬಿಸಿಕೊಳ್ಳುವ ಈ ಕುಟುಂಬದ ಸ್ಥಿತಿ ತೀರಾ ಹಿಂದುಳಿದಿದೆ.

ಸುಲಗಿತ್ತಿ ಕಮಲಮ್ಮ ಸುಮಾರು 500ಕ್ಕೂ ಹೆಚ್ಚು ಹೆರಿಗೆ ಮಾಡಿಸಿ ಅದೆಷ್ಟೋ ಬಾಣಂತಿಯರಿಗೆ ಪುನರ್ಜನ್ಮ ಕೊಟ್ಟಿದ್ದಾರೆ. ಒಮ್ಮೆ ಹೆರಿಗೆ ನೋವು ಕಾಣಿಸಿಕೊಂಡರೆ ಸಾಕು ಕಮಲಮ್ಮ ಬಹಳ ಸುಲಭವಾಗಿ ತಮ್ಮ ಜ್ಞಾನದ ಮೂಲಕ ಹೆರಿಗೆ ಮಾಡಿಸುತ್ತಾರೆ. ಇದರ ಜೊತೆ ಜಾನಪದ, ಸೋಬಾನೆ ಪದ ಸೇರಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದದ್ದಕ್ಕೆ ಇವರಿಗೆ ಈ ಬಾರೀಯ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಒಲಿದಿದೆ. ಆದರೆ ಕಮಲಮ್ಮ ಹಾಗೂ ಕುಟುಂಬಸ್ಥರು ಈಗಲೂ ಹಟ್ಟಿ ಪಟ್ಟಣದ ಹೊರವಲಯದಲ್ಲಿ ಗುಡಿಸಲಲ್ಲೇ ಜೀವನ ಕಳೆಯುತ್ತಿದ್ದಾರೆ. ಬಿಸಿಲು, ಮಳೆ ಚಳಿಗಾಲದಲ್ಲೂ ಇದೇ ಗುಡಿಸಲ್ಲೇ ವಾಸ ಮಾಡುತ್ತಾರೆ. ಇಷ್ಟೆಲ್ಲಾ ಸಮಾಜಕ್ಕೆ ಸೇವೆ ಸಲ್ಲಿಸಿರುವ ಈ ಜೀವಕ್ಕೆ ಒಂದು ಸೂರು ಗತಿಯಿಲ್ಲದ ಸ್ಥಿತಿಯಿದೆ.

ಕರ್ನಾಟಕ ರಾಜ್ಯೋತ್ಸವದಂದು ಜಿಲ್ಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಶಂಕರ್ ಪಾಟೀಲ್ ಮುನೇನಕೊಪ್ಪ ಧ್ವಜಾರೋಹಣ ಮಾಡಿದ್ದರು. ಈ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿಗಳ ಮುಂದೆ ಕಮಲಮ್ಮ ಮತ್ತು ಅವರ ಕುಟುಂಬದ ಸ್ಥಿತಿ ಬಗ್ಗೆ ಪ್ರಸ್ತಾಪಿಸಲಾಯಿತು. ಕೂಡಲೇ ಎಚ್ಚೆತ್ತುಕೊಂಡ ಸಚಿವ ಶಂಕರ್ ಪಾಟೀಲ್ ಮುನೇನಕೊಪ್ಪ, ಕಮಲಮ್ಮ ಅವರಿಗೆ ಮನೆ ನಿರ್ಮಾಣ ಮಾಡಿ ಕೊಡುತ್ತೇವೆ. ಈ ಬಗ್ಗೆ ಜಿಲ್ಲಾಧಿಕಾರಿ ಅವರಿಗೆ ಸೂಚಿಸಿದ್ದೇನೆ ಅಂತ ತಿಳಿಸಿ ಕಮಲಮ್ಮರ ಕಷ್ಟಕ್ಕೆ ಸ್ಪಂಧಿಸುವ ಕೆಲಸ ಮಾಡಿದರು. ಅದೆನೇ ಇರಲಿ ಈಗಲಾದರೂ ಸಂಬಂಧ ಪಟ್ಟ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಎಚ್ಚೆತ್ತುಕೊಂಡು ಸಮಾಜ ಸೇವಕಿ ಸೂಲಗಿತ್ತಿ ಕಮಲಮ್ಮ ಅವರಿಗೆ ಶಾಶ್ವತ ಸೂರು ಕಟ್ಟಿ ಕೊಡುವಲ್ಲಿ ಶ್ರಮವಹಿಸಬೇಕಿದೆ.

ವರದಿ: ಭೀಮೇಶ್ ಪೂಜಾರ್, ಟಿವಿ9 ರಾಯಚೂರು

ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:35 am, Sat, 5 November 22