AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Uttara Kannada: ಸೂಕ್ತ ನಿರ್ವಹಣೆ ಇಲ್ಲದೇ ಪ್ರವಾಸಿಗರ ಆಟಾಟೋಪ, ಪಾಳುಬಿದ್ದ ತೂಗು ಸೇತುವೆಗಳು

ಗುಜರಾತ್ ಮೊರ್ಬಿಯಲ್ಲಿ ತೂಗುಸೇತುವೆ ಕುಸಿದು ನೂರಾರು ಜನ ಮೃತಪಟ್ಟ ಘಟನೆ ಹಸಿಯಾಗಿರುವಾಗಲೇ ಉತ್ತರ ಕನ್ನಡ ಜಿಲ್ಲೆಯಲ್ಲಿರುವ ತೂಗು ಸೇತುವೆಗಳು ಸಹ ಸೂಕ್ತ ನಿರ್ವಹಣೆ ಇಲ್ಲದೇ ಪ್ರವಾಸಿಗರ ಆಟಾಟೋಪಕ್ಕೆ ಇದೀಗ ಹಾಳುಬಿದ್ದಿವೆ.

Uttara Kannada: ಸೂಕ್ತ ನಿರ್ವಹಣೆ ಇಲ್ಲದೇ ಪ್ರವಾಸಿಗರ ಆಟಾಟೋಪ, ಪಾಳುಬಿದ್ದ ತೂಗು ಸೇತುವೆಗಳು
ಸೂಕ್ತ ನಿರ್ವಹಣೆ ಇಲ್ಲದೇ ಹಾಳುಬಿದ್ದ ತೂಗು ಸೇತುವೆಗಳು
TV9 Web
| Updated By: Rakesh Nayak Manchi|

Updated on:Nov 05, 2022 | 7:03 AM

Share

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕೆಲವೊಂದು ತೂಗು ಸೇತುವೆಗಳು ಜನರ ಬಲಿ ಪಡೆಯಲು ಸಿದ್ಧವಾಗಿವೆ. ಸರಿಯಾದ ನಿರ್ವಹಣೆ ಇಲ್ಲದೆ ಪ್ರವಾಸಿಗರ ಆಟೋಟಪಕ್ಕೆ ಇದೀಗ ಸೇತುವೆಗಳು ಹಾಳುಬಿದ್ದಿವೆ. ಜನರು ಜೀವ ಭಯದಿಂದಲೇ ಸೇತುವೆ ಮೇಲೆ ಓಡಾಡುತ್ತಿದ್ದಾರೆ. ಕೆಲವು ದಿನಗಳ ಹಿಂದೆಯಷ್ಟೇ ಗುಜರಾತ್‌ನ ಮೊರ್ಬಿಯಲ್ಲಿ ತೂಗುಸೇತುವೆ ಕುಸಿದು ನೂರಾರು ಜನ ಮೃತಪಟ್ಟ ಘಟನೆ ನಮ್ಮ ಕಣ್ಣೆದುರಿದೆ. ಆದರೇ ಇದರಿಂದ ಸರ್ಕಾರ ಮತ್ತು ಜನರು ಮಾತ್ರ ಎಚ್ಚೆತ್ತುಕೊಂಡಿಲ್ಲ. ಉತ್ತರ ಕನ್ನಡ ಜಿಲ್ಲೆಯಲ್ಲಿ ಆರು ತೂಗು ಸೇತುವೆಗಳನ್ನು ನಿರ್ಮಾಣ ಮಾಡಲಾಗಿತ್ತು. ಆದರೇ ಮಳೆಯ ಅಬ್ಬರಕ್ಕೆ ಅಂಕೋಲದ ಸುಂಕಸಾಳ, ಗುಂಡಬಾಳ ಹಾಗೂ ರಾಮನಗುಳಿ ತೂಗು ಸೇತುವೆ ಸಂಪೂರ್ಣ ನಾಶವಾಗಿದೆ. ಆದರೆ ಹೊನ್ನಾವರ ಭಾಗದ ಕರ್ಕಿಯ ಮಾವಿನಕುರ್ವಾ ಮತ್ತು ಕುದುರಗಿ ತೂಗುಸೇತುವೆಗಳು ಹಾಗೂ ಯಲ್ಲಾಪುರದ ಶಿವಪುರ ತೂಗು ಸೇತುವೆಗಳು ಅಲ್ಲಿನ ಪರಿಸರದಿಂದಾಗಿ ಪ್ರವಾಸಿಗರನ್ನು ತನ್ನತ್ತ ಸೆಳೆಯುತಿದ್ದು ಪ್ರವಾಸಿಗರ ಮೆಚ್ಚಿನ ತಾಣ ಸಹ ಆಗಿದೆ. ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಇವುಗಳ ನಿರ್ವಹಣೆಯನ್ನು ಸ್ಥಳೀಯ ಸಂಸ್ಥೆಗಳಿಗೆ ನೀಡಿದೆ. ಆದರೆ ಹಣದ ಕೊರತೆಯಿಂದ ಇವುಗಳ ನಿರ್ವಹಣೆಯನ್ನು ಮಾಡಲು ಸಾಧ್ಯವಾಗದೇ ತೂಗು ಸೇತುವೆಗಳು ಜೀರ್ಣಾವಸ್ಥೆಗೆ ತಲುಪಿವೆ.

ತೂಗು ಸೇತುವೆಯ ರೋಪ್​ಗಳು ತುಕ್ಕು ಹಿಡಿದು ಹೋದರೆ, ಸೇತುವೆಯ ಲಿಂಕ್​ಗಳು ಅಲ್ಲಲ್ಲಿ ಮುರಿದು ಹೋಗಿವೆ. ಇನ್ನು ಚಿಕ್ಕ ಸೇತುವೆಯಲ್ಲಿ ನಿರ್ಬಂಧವಿದ್ದರೂ ವಾಹನಗಳ ಸಂಚಾರ ಮಾಡುತ್ತಾ ಪ್ರವಾಸಿಗರು ಮೋಜು ಮಸ್ತಿಯಲ್ಲಿ ತೊಡಗಿದ್ದಾರೆ. ನಿಗದಿತ ಭಾರಕ್ಕಿಂತ ಹೆಚ್ಚಿನದ್ದು ಸೇತುವೆಮೇಲೆ ಬೀಳುತಿದ್ದು ಇದರಿಂದಾಗಿ ತೂಗು ಸೇತುವೆಯ ಲಿಂಕ್​ಗಳು ಸಡಿಲವಾಗಿದ್ದು ಯಾವಾಗ ಬೇಕಾದರೂ ಕಳಚಿ ಬೀಳುವ ಸ್ಥಿತಿ ತಲುಪಿದೆ.‌

ಜಿಲ್ಲೆಯು ಗುಡ್ಡಗಾಡುಗಳನ್ನ ಹೊಂದಿರುವುದರಿಂದ ಹಲವು ಭಾಗದಲ್ಲಿ ಗ್ರಾಮಗಳ ಸಂಪರ್ಕಕ್ಕಾಗಿ ತೂಗು ಸೇತುವೆಯನ್ನು ಲಕ್ಷಾಂತರ ರೂಪಾಯಿ ವ್ಯಹಿಸಿ ಉಡುಪಿಯ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಗಿರೀಶ್ ಭಾರದ್ವಜ್​ರವರ ಸಹಕಾರದಲ್ಲಿ ಉತ್ತಮ ಸೇತುವೆಯನ್ನು ನಿರ್ಮಿಸಿತ್ತು. ಆದರೇ ಇದೀಗ ಈ ಸೇತುವೆಗಳು ನಿರ್ವಹಣೆ ಇಲ್ಲದೇ ಎಂದು ಬೀಳುತ್ತದೋ ಎನ್ನುವಂತಾಗಿದ್ದು, ಪ್ರತಿ ದಿನ ಈ ಸೇತುವೆಯಲ್ಲಿ ಓಡಾಡುವ ಜನ ಜೀವ ಕೈಯಲ್ಲಿ ಹಿಡಿದು ಹೋಗುವಂತಾಗಿದೆ. ಈ ಕುರಿತು ಜಿಲ್ಲಾ ಉಸ್ತುವಾರಿ ಸಚಿವರನ್ನು ಕೇಳಿದರೆ ಅಧಿಕಾರಿಗಳು ಅಧ್ಯಯನ ನಡೆಸಿ ವರದಿ ತರಿಸಿಕೊಂಡು ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಅಲ್ಲದೆ ಸೇತುವೆಗಳು ಅಪಾಯಕಾರಿ ಆಗಿದ್ದರೆ ಸೂಕ್ತ ಕ್ರಮ ಕೈಗೊಂಡು ಮುಂದಿನ ಯೋಜನೆ ರೂಪಿಸುತ್ತೆವೆ ಎನ್ನುತ್ತಾರೆ.

ಒಟ್ಟಿನಲ್ಲಿ ಜನರ ಉಪಯೋಗಕ್ಕೆ ಎಂದು ನಿರ್ಮಿಸಿದ ತೂಗು ಸೇತುವೆಗಳು ಇದೀಗ ನಿರ್ವಹಣೆಯ ನಿರ್ಲಕ್ಷ್ಯದಿಂದ ಜನರ ಬಲಿಗೆ ಕಾದು ನಿಂತಂತಿದೆ ಜಿಲ್ಲೆಯ ತೂಗುಸೇತುವೆಗಳಿವೆ. ಊರಿಗೆ ಬೆಂಕಿ ಬಿದ್ದಮೇಲೆ ಬಾವಿ ತೋಡುವುದಕ್ಕಿಂತ ಸರ್ಕಾರ ಎಚ್ಚೆತ್ತು ಇವುಗಳನ್ನು ನಿರ್ವಹಣೆ ಮಾಡಿ ಸರಿಪಡಿಸಬೇಕಿದೆ.

ವರದಿ: ವಿನಾಯಕ ಬಡಿಗೇರ, ಟಿವಿ 9 ಕಾರವಾರ

ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:03 am, Sat, 5 November 22