ಒಂದು ಗಂಟೆ ಬ್ಯಾಂಕ್ನಲ್ಲಿ ಆಪರೇಟ್ ಮಾಡಿ 7 ಲಕ್ಷ ರೂ. ಉಡೀಸ್! ನಕಲಿ ಪೊಲೀಸರ ಹಾವಳಿಗೆ ಬೆಚ್ಚಿ ಬಿದ್ದ ರಾಯಚೂರು ಜನ
ಖಾಜಾ ಹುಸೇನ್ ಎಂಬುವವರು 7 ಲಕ್ಷ ರೂ ಕಳೆದುಕೊಂಡಿದ್ದು, ತಮಿಳುನಾಡು ಮೂಲದ ಗ್ಯಾಂಗ್ವೊಂದು ಈ ಕೃತ್ಯವೆಸಗಲಾಗಿದೆ ಎನ್ನಲಾಗುತ್ತಿದೆ.
ರಾಯಚೂರು: ವ್ಯಕ್ತಿಯೋರ್ವರ ಗಮನ ಬೇರೆಡೆ ಸೆಳೆದು ₹7 ಲಕ್ಷ ರೂ. ಹಣ ದರೋಡೆ (Robbery) ಮಾಡಿ, ದುಷ್ಕರ್ಮಿಗಳು ಪರಾರಿಯಾಗಿರುವಂತಹ ಘಟನೆ ಮಾನ್ವಿ ಪಟ್ಟಣದ ಬ್ಯಾಂಕ್ ಆಫ್ ಬರೋಡಾ ಶಾಖೆ ಬಳಿ ನಡೆದಿದೆ. ಖಾಜಾ ಹುಸೇನ್ ಎಂಬುವವರ 7 ಲಕ್ಷ ರೂ ಕಳೆದುಕೊಂಡ ವ್ಯಕ್ತಿ. ತಮಿಳುನಾಡು ಮೂಲದ ಗ್ಯಾಂಗ್ವೊಂದು ಕೃತ್ಯವೆಸಗಲಾಗಿದೆ ಎನ್ನಲಾಗುತ್ತಿದೆ. ಬ್ಯಾಂಕ್ನಲ್ಲಿ ಹಣ ಬಿಡಿಸಿಕೊಳ್ಳುವುದನ್ನು ಕಿಡಿಗೇಡಿಗಳು ಗಮನಿಸಿದ್ದು, ಬ್ಯಾಂಕ್ ಹೊರಗೆ ಹುಸೇನ್ ಬಳಿ ಇದ್ದ ಹಣ ಕಿತ್ತುಕೊಂಡು ಎಸ್ಕೇಪ್ ಆಗಿದ್ದಾರೆ. ಬಳಿಕ ಆರೋಪಿಗಳನ್ನು ಚೇಸ್ ಮಾಡಿ ಹಿಡಿಯಲು ಯುವಕರು ಯತ್ನಿಸಿದ್ದಾರೆ. ಆದರೆ ಕಿಡಿಗೇಡಿಗಳ ಬಳಿ ಇದ್ದ ಮಾರಕಾಸ್ತ್ರ ನೋಡಿ ಸುಮ್ಮನಾಗಿದ್ದಾರೆ. ಈ ಸಂಬಂಧ ಮಾನ್ವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಈ ಕುರಿತಾದ ಸಂಕ್ಷಿಪ್ತ ವರದಿ ಇಲ್ಲಿದೆ.
ಹುಸೇನ್ ಬ್ಯಾಂಕ್ ಆಫ್ ಬರೋಡಾದಿಂದ 7 ಲಕ್ಷ ಹಣ ಡ್ರಾ ಮಾಡಿಕೊಂಡಿದ್ರು. ಆದರೆ ಆತನ ಹಿಂದೆಯೇ ಬೇತಾಳನಂತೆ ಕಿರಾತಕನೊಬ್ಬ ತನ್ನನ್ನ ವಾಚ್ ಮಾಡುತ್ತಿದ್ದಾನೆ ಅನ್ನೋದು ಗೊತ್ತಿರಲಿಲ್ಲ. ಐನಾತಿಯೊಬ್ಬ ಒಂದು ಗಂಟೆ ಕಾಲ ಇದೇ ಬ್ಯಾಂಕ್ ಆಫ್ ಬರೋಡಾದಲ್ಲಿ ಬ್ಯಾಂಕ್ಗೆ ಬರೋ ಗ್ರಾಹಕರನ್ನ ಗಮನಿಸುತ್ತಿದ್ದ. ಯಾರೂ ಹೆಚ್ಚಿನ ಹಣ ಡ್ರಾ ಮಾಡುತ್ತಾರೆ ಅನ್ನೋದನ್ನ ಖಚಿತಪಡಿಸಿಕೊಳ್ಳುತ್ತಿದ್ದ. ಇದೇ ವೇಳೆ ಖಾಜಾ ಹುಸೇನ್ 7 ಲಕ್ಷ ಹಣ ಡ್ರಾ ಮಾಡಿಕೊಂಡು ಹೊರ ಬಂದು ಬೈಕ್ನಲ್ಲಿ ಹಣ ಇಟ್ಟಿದ್ರು. ಅದೇ ವೇಳೆ ಪರಿಚಿತ ವ್ಯಕ್ತಿಯೋರ್ವ ಬಂದು, ಸರ್ ನಿಮ್ಮ ಹಣ ಕೆಳಗಡೆ ಬಿದ್ದಿದೆ ನೋಡಿ ಅಂತ ಗಮನ ಬೇರೆಡೆ ಸೆಳೆದಿದ್ದ. ಆಗ ಖಾಜಾ ಹುಸೇನ್ ಹಣ ತೆಗೆದುಕೊಳ್ಳೊವಾಗ, ಆ ಐನಾತಿ ಬೈಕ್ನಲ್ಲಿದ್ದ 7 ಲಕ್ಷ ಹಣ ಎಗರಿಸಿದ್ದ. ನಂತರ ಬೈಕ್ವೊಂದರಲ್ಲಿ ಬಂದ ಇನ್ನೊಬ್ಬ ವ್ಯಕ್ತ, ಹಣ ಎಗರಿಸಿದ ತನ್ನ ಪಾರ್ಟನರ್ನನ್ನ ಕರೆದೊಯ್ದಿದ್ದ. ಇದನ್ನ ಗಮನಿಸಿದ್ದ ಸ್ಥಳೀಯ ಯುವಕರು ಆ ಆರೋಪಿಗಳನ್ನ ಚೇಸ್ ಮಾಡಿದ್ರು. ಆದರೆ ಮಾರ್ಗ ಮಧ್ಯೆ ಆರೋಪಿಗಳ ಬಳಿ ಮಾರಕಾಸ್ತ್ರಗಳಿರೊ ಮಾಹಿತಿ ತಿಳಿದು, ಅದೇ ಭಯದಲ್ಲಿ ವಾಪಸ್ ಆಗಿದ್ರು.
ನಕಲಿ ಪೊಲೀಸರ ಹಾವಳಿ: ಬೆಚ್ಚಿ ಬಿದ್ದ ಜನ
ಇದಷ್ಟೇ ಅಲ್ಲದೇ ರಾಯಚೂರಿನಲ್ಲಿ ನಕಲಿ ಪೊಲೀಸರ ಹಾವಳಿಗೆ ಜನ ಬೆಚ್ಚಿ ಬಿದ್ದಿದ್ದಾರೆ. ಈ ನಕಲಿ ಪೊಲೀಸರಿಗೆ ರೈತರೇ ಟಾರ್ಗೆಟ್ ಆಗಿದ್ದು, ಎಲ್ಲೆಂದರಲ್ಲಿ ಹಣ ವಸೂಲಿ ಮಾಡಲಾಗುತ್ತಿದೆ. ಇತ್ತೀಚೆಗೆ ತೆಲಂಗಾಣ ಮೂಲದ ರೈತ ವೆಂಕಟೇಶ್ವರಲು ಅನ್ನೋರು ಗೂಡ್ಸ್ ಆಟೊದೊಂದಿಗೆ ಹತ್ತಿಯನ್ನ ಮಾರಾಟ ಮಾಡಲು ರಾಯಚೂರು ನಗರಕ್ಕೆ ಬಂದಿದ್ರು. ನಂತರ ಇಲ್ಲಿ ಮಿಲ್ನಲ್ಲಿ ಹತ್ತಿ ಮಾರಾಟ ಮಾಡಿ ಸುಮಾರು 4 ಲಕ್ಷ 91 ಸಾವಿರ ಹಣ ತೆಗೆದುಕೊಂಡು ವಾಪಸ್ ಹೋಗುತ್ತಿದ್ರು. ಈ ವೇಳೆ ರಾಯಚೂರು ನಗರದ ಗದ್ವಾಲ್ ರಸ್ತೆಯಲ್ಲಿ ಇಬ್ಬರು ಆರೋಪಿಗಳು ರೈತ ವೆಂಕಟೇಶ್ವರಲು ಹೋಗುತ್ತಿದ್ದ ಆಟೋ ಅಡ್ಡಗಟ್ಟಿದ್ರು. ನಾವು ಪೊಲೀಸರು ನಿಮ್ಮ ವಾಹನ ಪರಿಶೀಲನೆ ಮಾಡಬೇಕು. ನೀವು ದಾಖಲೆಗಳಿಲ್ಲದೇ ಹಣ ಸಾಗಾಟ ಮಾಡುತ್ತಿದ್ದೀರಿ ಎಂದು ಬೆದರಿಸಿದ್ದಾರೆ. ರೈತ ವೆಂಕಟೇಶ್ವರಲು ಬಳಿ ಇದ್ದ 9 ಲಕ್ಷ 91 ಸಾವಿರ ಹಣ ಹಾಗೂ ಎರಡು ಫೋನ್ಗಳನ್ನ ಪೀಕಿ ಪೊಲೀಸ್ ಠಾಣೆಗೆ ಬನ್ನಿ ಅಂತ ಹೇಳಿ ಬೈಕ್ನಲ್ಲಿ ಆರೋಪಿಗಳು ಹೊರಟು ಹೋಗಿದ್ರು. ನಂತರ ರೈತ ವೆಂಕಟೇಶ್ವರಲು ನೀಡಿದ ದೂರಿನನ್ವಯ ಮಾರ್ಕೆಟ್ ಯಾರ್ಡ್ ಪೊಲೀಸರು ತನಿಖೆ ನಡೆಸಿ ಶ್ರೀಕಾಂತ್ ಹಾಗೂ ನರೇಂದ್ರ ಅನ್ನೋ ಇಬ್ಬರು ಆರೋಪಿಗಳನ್ನ ಬಂಧಿಸಿದ್ದಾರೆ. ಬಂಧಿತರಿಂದ 4 ಲಕ್ಷ 65 ಸಾವಿರ ನಗದನ್ನ ಜಪ್ತಿ ಮಾಡಲಾಗಿದೆ.
ಈ ನಕಲಿ ಪೊಲೀಸರ ಹಾವಳಿಗೆ ಖಾಕಿ ಪಡೆಯೇ ಶಾಕ್ ಆಗಿದೆ. ಹೀಗಾಗಿ ಯಾರಾದ್ರೂ ಪೊಲೀಸರ ಸೋಗಿನಲ್ಲಿ ಅಡ್ಡಗಟ್ಟೋದು, ಹಣ ವಸೂಲಿ ಮಾಡಿದರೆ ಕಂಟ್ರೋಲ್ ರೂಂಗೆ ದೂರು ನೀಡಿ. ಇಲ್ಲ ಆಯಾ ವ್ಯಕ್ತಿಗಳ ಐಡಿ ಕಾರ್ಡ್ ಪರಿಶೀಲಿಸಿ ಅಂತ ರಾಯಚೂರು ಎಸ್ಪಿ ನಿಖಿಲ್ ಸಾರ್ವಜನಿಕರಿಗೆ ಸಲಹೆ ನೀಡಿದ್ದಾರೆ.
ವರದಿ: ಭೀಮೇಶ್ ಪೂಜಾರ್, ಟಿವಿ9, ರಾಯಚೂರು
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:29 pm, Thu, 27 October 22