ಭೂ ಸುಧಾರಣಾ ಕಾಯ್ದೆ ಉಲ್ಲಂಘನೆ ಆರೋಪ; ಮಾಜಿ ಸಚಿವ ನಾಡಗೌಡ ಕುಟುಂಬದ ವಿರುದ್ಧ ರೈತರ ಹೋರಾಟ

| Updated By: Rakesh Nayak Manchi

Updated on: Aug 27, 2023 | 5:01 PM

ಮಾಜಿ ಸಚಿವ ವೆಂಕಟರಾವ್ ನಾಡಗೌಡ ಕುಟುಂಬವು ರಾಯಚೂರು ಜಿಲ್ಲೆಯ ದೊಡ್ಡ ಭೂ ಮಾಲೀಕರ ಕುಟುಂಬವಾಗಿದೆ. ಸದ್ಯ ಈ ಕುಟುಂಬದ ವಿರುದ್ಧವೇ ರೈತರು ಸಿಡಿದೆದ್ದಿದ್ದಾರೆ. ಭೂ ಸುಧಾರಣಾ ಕಾಯ್ದೆ ಉಲ್ಲಂಘನೆ ಆರೋಪ ಸಂಬಂಧ ನಾಡಗೌಡ ಕುಟುಂಬದ ವಿರುದ್ಧ ರೈತರು ಹೋರಾಟ ನಡೆಸುತ್ತಿದ್ದಾರೆ.

ಭೂ ಸುಧಾರಣಾ ಕಾಯ್ದೆ ಉಲ್ಲಂಘನೆ ಆರೋಪ; ಮಾಜಿ ಸಚಿವ ನಾಡಗೌಡ ಕುಟುಂಬದ ವಿರುದ್ಧ ರೈತರ ಹೋರಾಟ
ಮಾಜಿ ಸಚಿವ ನಾಡಗೌಡ ಕುಟುಂಬದ ವಿರುದ್ಧ ರೈತರ ಹೋರಾಟ
Follow us on

ರಾಯಚೂರು, ಆಗಸ್ಟ್ 27: ಜಿಲ್ಲೆಯ ಅತಿದೊಡ್ಡ ಭೂ ಮಾಲೀಕರ ಕುಟುಂಬವಾಗಿರುವ ಮಾಜಿ ಸಚಿವ ವೆಂಕಟರಾವ್ ನಾಡಗೌಡ (Venkatrao Nadagouda) ಕುಟುಂಬದ ವಿರುದ್ಧ ರೈತರು ಸಿಡಿದೆದ್ದಿದ್ದಾರೆ. ಭೂ ಸುಧಾರಣಾ ಕಾಯ್ದೆ (Land Reforms Act) ಉಲ್ಲಂಘನೆ ಹಾಗೂ ರೈತರ ಮೇಲೆ ದಬ್ಬಾಳಿಕೆ ನಡೆಸಿದ ಆರೋಪ ಸಂಬಂಧ ರೈತರು ಹೋರಾಟ ನಡೆಸಿದ್ದು, ಸಿಂಧನೂರು ಗ್ರಾಮೀಣ ಠಾಣೆಯಲ್ಲಿ ಮಾಜಿ ಸಚಿವರ ಸಹೋದರರ ವಿರುದ್ಧ ಎಫ್ಐಆರ್ ದಾಖಲಾಗಿದೆ.

ಸರ್ಕಾರದ ಜಮೀನಿನಲ್ಲಿ ಸಾಗುವಳಿ ಮಾಡಲು ಮುಂದಾದ ರೈತರ ಮೇಲೆ ದಬ್ಬಾಳಿಕೆ ನಡೆಸಿದ ಆರೋಪ ನಾಡಗೌಡ ಕುಟುಂಬದ ವಿರುದ್ಧ ಕೇಳಿಬಂದಿದೆ. ಈ ಸಂಬಂಧ ವೆಂಟಕರಾವ್ ನಾಡಗೌಡ ಸಹೋದರರಾದ ಚಂದ್ರು, ರಾಜಶೇಖರ್ ನಾಡಗೌಡ ಸೇರಿ ಇನ್ನಿತರರ ವಿರುದ್ಧ ಪ್ರಕರಣ ದಾಖಲಾಗಿದೆ.

ಉಳುವನೇ ಭೂಮಿ ಒಡೆಯ ಕಾಯ್ದೆ ಅನ್ವಯ ಭೂಮಿ ಬಿಟ್ಟು ಕೊಡದ ಆರೋಪ ಕೇಳಿಬಂದಿದೆ. ಸರ್ಕಾರದ ಹೆಚ್ಚುವರಿ ಭೂಮಿ ಅಂತ ಘೋಷಣೆಯಾದ 61 ಎಕರೆ ಜಮೀನಿನಲ್ಲಿ ನಾಡಗೌಡ ಕುಟುಂಬಸ್ಥರು ಸಾಗುವಳಿ ಮಾಡುತ್ತಿರುವ ಆರೋಪ ಮಾಡಲಾಗಿದೆ. ಸಿಂಧನೂರು ಗ್ರಾಮೀಣ ವ್ಯಾಪ್ತಿ ಸರ್ವೇ ನಂ.419ರ 32 ಎಕರೆ 11 ಗುಂಟೆ ಭೂಮಿ ಹಾಗೂ ಸಿಂಧನೂರು ತಾಲೂಕಿನ ಸುಲ್ತಾನಪೂರ ಗ್ರಾಮದ ಸರ್ವೇ ನಂ.186ರ 29 ಎಕರೆ 31 ಗುಂಟೆ ಭೂಮಿ ಸಾಗುವಳಿ ಮಾಡುತ್ತಿರುವ ಆರೋಪ ಮಾಡಲಾಗಿದೆ.

ಇದನ್ನೂ ಓದಿ: ರಾಯಚೂರು: ಅಕ್ರಮವಾಗಿ ಮರಳು ಸಾಗಿಸ್ತಿದ್ದ ಟ್ರ್ಯಾಕ್ಟರ್​ ಡಿಕ್ಕಿ; ವಿದ್ಯಾರ್ಥಿ ಸಾವು

ಇದೇ ಸರ್ವೆ ನಂಬರ್​​ಗಳ ಸ್ಥಳದಲ್ಲಿ ಸ್ಥಳೀಯ ರೈತರು ಕೂಡ ಸಾಗುವಳಿಗೆ ಮುಂದಾಗಿದ್ದಾರೆ. ಈ ವೇಳೆ ನಾಡಗೌಡರ ಪುತ್ರ ಚಂದ್ರು ಹಾಗೂ ಸಹೋದರ ರಾಜಶೇಖರ್ ದಬ್ಬಾಳಿಕೆ, ಜೀವ ಬೆದರಿಕೆ ಹಾಕಿದ್ದಾಗಿ ರೈತರು ಆರೋಪಿಸಿ ಸಿಂಧನೂರು ಪಟ್ಟಣದಲ್ಲಿ ನಾಡಗೌಡ ಕುಟುಂಬಸ್ಥರ ವಿರುದ್ಧ ಹೋರಾಟ ನಡೆಸಿದರು.

ವಿವಾದದ ಜಮೀನು ಸರ್ಕಾರದ್ದಲ್ಲ ಎಂದ ನಾಡಗೌಡ

ಕುಟುಂಬಸ್ಥರ ವಿರುದ್ಧ ವಿವಾದದ ಬಗ್ಗೆ ಪ್ರತಿಕ್ರಿಯಿಸಿದ ಮಾಜಿ ಸಚಿವ ವೆಂಕಟರಾವ್ ನಾಡಗೌಡ, ವಿವಾದದ ಜಮೀನು ಸರ್ಕಾರದ್ದಲ್ಲ. ಸರ್ಕಾರದ ಭೂಮಿ ಅಂತ ಟ್ರಿಬ್ಯುನಲ್​ನಲ್ಲಿ ತೆಗೆದುಕೊಳ್ಳಲಾಯ್ತು. ನಂತರ ಹೈಕೋರ್ಟ್​​ನಲ್ಲಿ ಸ್ಟೇ ಆಯ್ತು. ಎರಡು ಕೇಸ್​ಗಳು ಇನ್ನೂ ಟ್ರಿಮಿನಲ್​​‌ನಲ್ಲಿ ಪೆಂಡಿಂಗ್ ಇವೆ. ಈಗ ರೀಮೆಂಡ್ ಆಗಿ ಆ ಕೇಸ್​ಗಳು‌ ಬಂದಿವೆ. ರೀಮೆಂಡ್ ಆಗಿ ಬಂದು, ಕೋರ್ಟ್​​ನಿಂದ ಸ್ಟೇ ಆಗಿವೆ. ಅದನ್ನು ನಮಗೆ ಕೊಡಿ ಅಂತ ಸರ್ಕಾರಕ್ಕೆ ಒತ್ತಾಯ ಮಾಡಿದರೆ ಏನು ಮಾಡಲು ಆಗಲ್ಲ ಎಂದರು.

ಕೋರ್ಟ್ ಸ್ಟೇ ಕಾಪಿ, ನೋಟಿಸ್ ಕೊಟ್ಟಿದ್ದೇವೆ. ಸ್ಟೇ ಆದಮೇಲೆ, ನನ್ನದೇ ಜಮೀನು ಅಂದಮೇಲೆ ನಾನೇ ಉಳಿಮೆ ಮಾಡುತ್ತೇನೆ. ಎಫ್ಐಆರ್ ಮಾಡಲಿ, ಕಾನೂನಿನಲ್ಲಿ ಅವಕಾಶ ಇದೆ. ನಾವು ತಪ್ಪು ಮಾಡಿದರೆ ನನ್ನ ಮೇಲೆ ಕ್ರಮತೆಗೆಕೊಳ್ಳುತ್ತಾರೆ. ನ್ಯಾಯಾಲಯದಲ್ಲಿ ಸಮಸ್ಯೆ ಇರುವುದರಿಂದ ಯಾರೂ ಏನು ಮಾಡಲು ಆಗಲ್ಲ ಎಂದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:45 pm, Sun, 27 August 23