ನರೇಗಾ ಕೆಲಸದ ವೇಳೆ ಕೆರೆಗೆ ನೀರು ಕುಡಿಯಲು ಹೋದ ಅಣ್ಣನ ಮಗನ ಜೊತೆ ಚಿಕ್ಕಪ್ಪ ಮೃತ್ಯು: ತನಿಖೆಗೆ ಒತ್ತಾಯ

|

Updated on: Jun 04, 2023 | 1:01 PM

ಅದು ದುಡಿದು ಕೂಲಿ ಮಾಡಿಯೇ ಜೀವನ ನಡೆಸ್ತಿದ್ದ ಕುಟುಂಬ. ಅಲ್ಲಿ ನಿತ್ಯ ಉದ್ಯೋಗ ಖಾತ್ರಿ ಯೋಜನೆಯ ನರೇಗಾ ಕೆಲಸವೇ ಅವರ ಜೀವನಕ್ಕೆ ಆಧಾರ. ಹೀಗೆ ನರೇಗಾ ಕೆಲಸಕ್ಕೆ ಹೋಗಿ ವಾಪಸ್ಸಾಗೋ ವೇಳೆ ದುರಂತವೊಂದು ನಡೆದು ಹೋಗಿತ್ತು, ಇಬ್ಬರು ಸಾವನ್ನಪ್ಪಿದ್ದರು. ಆ ಕುಟುಂಬವೀಗ ಎರಡು ಜೀವಗಳನ್ನ ಕಳೆದುಕೊಂಡು ಕಂಗಾಲಾಗಿದೆ. ಆ ಸಾವಿಗೆ ಸೂಕ್ತ ತನಿಖೆ ನಡೆಸಿ, ಆ ಕುಟುಂಬಕ್ಕೆ ನ್ಯಾಯ ಒದಗಿಸಿಕೊಡಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ನರೇಗಾ ಕೆಲಸದ ವೇಳೆ ಕೆರೆಗೆ ನೀರು ಕುಡಿಯಲು ಹೋದ ಅಣ್ಣನ ಮಗನ ಜೊತೆ ಚಿಕ್ಕಪ್ಪ ಮೃತ್ಯು: ತನಿಖೆಗೆ ಒತ್ತಾಯ
ಮೃತರು
Follow us on

ರಾಯಚೂರು: ತಾಲ್ಲೂಕಿನ ಕೊರ್ತಕುಂದಾ ಗ್ರಾಮದ ಸಲೀಂ ಅನ್ನೋ ವ್ಯಕ್ತಿ ಮೇ 31ರಂದು ಊರಿನ ಹೊರ ಭಾಗದಲ್ಲಿ ನರೇಗಾ (NAREGA) ಕೆಲಸಕ್ಕೆಂದು ಹೋಗಿದ್ದ. ಆತನಂತೆ ಊರಿನ ಬಹುತೇಕರು ಅಲ್ಲೇ ಕೆಲಸ ಮಾಡುತ್ತಿದ್ದರು. ಅಂದು ಸಲೀಂ ಜೊತೆ ಯಾಸಿನ್ ಅನ್ನೋ ಬಾಲಕ ಕೂಡ ಇದ್ದನಂತೆ. ಮಧ್ಯಾಹ್ನ ವಿಶ್ರಾಂತಿಗೆಂದು ಎಲ್ಲ ಕಾರ್ಮಿಕರು ಕೆಲಸ ನಿಲ್ಲಿಸಿ ಹೊರಟಿದ್ರು. ಆಗ ಸಲೀಂ ಹಾಗೂ ಆತನ ಅಣ್ಣ ರಫೀ ಅನ್ನೋರ ಮಗ ಯಾಸಿನ್ ಹಿಂದೆ ಇದ್ದರು. ಬಿಸಿಲ ಬೇಗೆ ಹೆಚ್ಚಾಗಿದ್ರಿಂದ ಬಾಲಕ ಯಾಸಿನ್ ಅಲ್ಲೇ ಪಕ್ಕದಲ್ಲೇ ಇದ್ದ ಕೆರೆಯಲ್ಲಿ ಕೈಕಾಲು ತೊಳೆದು ನೀರು ಕುಡಿಯಲು ಹೋಗಿದ್ದ. ಆದ್ರೆ, ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಯಾಸಿನ್ ಕೆರೆಯಲ್ಲಿ ಮುಳುಗುತ್ತಿದ್ದ. ಈ ವೇಳೆ ಆತನ ಕಿರುಚಾಟ ಕೇಳಿ ಚಿಕ್ಕಪ್ಪ ಸಲೀಂ ತನ್ನ ಅಣ್ಣನ ಮಗ​​ನನ್ನ ರಕ್ಷಿಸಲು ಕೆರೆಗೆ ಹಾರಿದ್ದ. ಆದ್ರೆ, ದುರಂತ ಅಂದ್ರೆ, ಆತನಿಗೂ ಈಜು ಬಾರದ ಹಿನ್ನೆಲೆ ಅಣ್ಣನ ಮಗ ಯಾಸಿನ್ ಜೊತೆ ಚಿಕ್ಕಪ್ಪ ಸಲೀಂ ಕೂಡ ಕೆರೆ ಪಾಲಾಗಿದ್ದ.

ನಂತರ ಸ್ಥಳೀಯರು, ಯಾಪಲದಿನ್ನಿ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಚಿಕ್ಕಪ್ಪ ಸಲೀಂ ಹಾಗೂ ಆತನ ಅಣ್ಣನ ಮಗ ಯಾಸಿನ್ ಮೃತದೇಹವನ್ನ ಹೊರತೆಗೆದಿದ್ದರು. ಈ ಕುಟುಂಬಸ್ಥರೆಲ್ಲ ಬಡತನ ರೇಖೆಗಿಂತ ಕೆಳಗಿರೋರು. ರಫಿ ಅನ್ನೋರು ಈ ಕುಟುಂಬದ ಹಿರಿಯಣ್ಣ, ಈತನ ತಮ್ಮ ಸಲೀಂ. ಇನ್ನು ರಫಿಗೆ ಮೂರು ಜನ ಮಕ್ಕಳಿದ್ರೆ, ಸಲೀಂಗೆ ಇಬ್ಬರು ಗಂಡು ಮಕ್ಕಳು. ಇಡೀ ಕುಟುಂಬ ಇದೇ ನರೇಗಾ ಸೇರಿ ಸಣ್ಣ ಪುಟ್ಟ ಕೂಲಿ ಕೆಲಸ ಮಾಡಿ ಜೀವನ ನಡೆಸುತ್ತಿತ್ತು. ಅಂದು ಘಟನಾ ದಿನ ನರೇಗಾ ಕೆಲಸಕ್ಕೆ ಹೊರಟಿದ್ದ ಚಿಕ್ಕಪ್ಪ ಸಲೀಂ ಜೊತೆ ಯಾಸಿನ್ ಕೂಡ ಹೋಗಿದ್ದನಂತೆ. ಆದ್ರೆ, ಅಂದು ನಡೆದ ದುರಂತದಿಂದ ಇಡೀ ಕುಟುಂಬವೇ ಶೋಕ ಸಾಗರದಲ್ಲಿ ಮುಳುಗಿದೆ.

ಇದನ್ನೂ ಓದಿ:Mandya News: ಲಾರಿಗೆ ಹಿಂದಿನಿಂದ ಕಾರು ಡಿಕ್ಕಿ, ಕಾರಿನಲ್ಲಿದ್ದ ನಾಲ್ವರು ಸ್ಥಳದಲ್ಲೇ ಸಾವು

ಇತ್ತ ನರೇಗಾ ಕೆಲಸಕ್ಕೆ ಕೇವಲ ಕಾರ್ಮಿಕರು ಮಾತ್ರ ಹೋಗ್ಬೇಕು. ಅಲ್ಲಿ ಮಕ್ಕಳನ್ನ ಕರೆದೊಯ್ಯುವಂತಿಲ್ಲ. ಜೊತೆಗೆ ಮಕ್ಕಳ ಮೂಲಕ ಅಲ್ಲಿನ ಕೆಲಸ ಕಾರ್ಯಗಳನ್ನೂ ಮಾಡಿಸುವಂತಿಲ್ಲ. ಇಷ್ಟಿದ್ರು ಅಂದು ಸಲೀಂ ಜೊತೆ ಬಾಲಕ ಯಾಸಿನ್ ಹೋಗಿದ್ದ. ಇದಕ್ಕೆ ಸಗಮಗುಂಟಾ ಗ್ರಾಮ ಪಂಚಾಯಿತಿ ನೇರ ಹೊಣೆ ಅನ್ನೋ ಆರೋಪ ಕೇಳಿ ಬಂದಿದೆ. ಘಟನೆ ನಡೆದು ಮೂರು ದಿನಗಳಾದ್ರೂ, ಈ ವರೆಗೆ ಪಂಚಾಯಿತಿ ವಿರುದ್ಧವಾಗಲಿ, ಅಲ್ಲಿನ ಪಿಡಿಓ ವಿರುದ್ಧ ತನಿಖೆ ನಡೆಸಿಲ್ಲ. ಆ ಬಗ್ಗೆ ಸ್ಪಷ್ಟನೆಯನ್ನೂ ಕೂಡ ಸಂಬಂಧಪಟ್ಟ ಅಧಿಕಾರಿಗಳು ನೀಡಿಲ್ಲ. ಇದಕ್ಕೆಲ್ಲಾ ಬೇಜವಾಬ್ದಾರಿತನವೇ ಕಾರಣ ಅಂತಾರೆ ಸ್ಥಳೀಯ ಮುಖಂಡರು. ಸದ್ಯ ಘಟನೆ ಬಗ್ಗೆ ಯಾಪನದಿನ್ನಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆದ್ರೆ, ಈ ದುರಂತಕ್ಕೆ ನೇರ ಹೊಣೆ ಗ್ರಾಮ ಪಂಚಾಯಿತಿಯಾಗುತ್ತೆ. ಹೀಗಾಗಿ ಜಿಲ್ಲಾ ಪಂಚಾಯತ್​ ಅಥವಾ ಜಿಲ್ಲಾಡಳಿತ ಎಚ್ಚೆತ್ತುಕೊಂಡು ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳಬೇಕಿದೆ.

ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ