ರಾಯಚೂರು: ಕಲ್ಯಾಣ ಕರ್ನಾಟಕದ ವಿಜಯನಗರ ಹಾಗೂ ರಾಯಚೂರು ಜಿಲ್ಲೆಯ ವ್ಯಾಪ್ತಿಯ ಕಾಲುವೆಯನ್ನ ಆಧುನೀಕರಣ ಮಾಡಿ ಹಾಗೂ ಜಿಲ್ಲೆಯ ಮಾನ್ವಿ ತಾಲೂಕಿನ ಜುಕೂರು ಗ್ರಾಮದ ಬಳಿಯಿರುವ ಚಿಕ್ಕ ಅಣೆಕಟ್ಟನ್ನ ಇಬ್ಬಾಗ ಮಾಡಿ ಜಿಲ್ಲೆಯ ಬಿಚ್ಚಾಲಿವರೆಗೆ ಕಾಲುವೆಗಳ ಮೂಲಕ ನೀರು ಕಲ್ಪಿಸಬೇಕು. ಜೊತೆಗೆ ಜುಕೂರು ಅಣೆಕಟ್ಟನ್ನ ನವೀಕರಣ ಮಾಡಿ, ಗೇಟ್ಗಳನ್ನ ವ್ಯವಸ್ಥಿತವಾಗಿ ನಿರ್ವಹಿಸಿ, ರೈತರು ಹಾಗೂ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ 371 ಕೋಟಿ ವೆಚ್ಚದಲ್ಲಿ ಈ ಪ್ರೊಜೆಕ್ಟ್ನ್ನು ಜಾರಿಗೊಳಿಸಲಾಗಿದೆ. ಆದರೆ 371 ಕೋಟಿಯ ಈ ಪ್ರೊಜೆಕ್ಟ್ನ್ನ ಪಡೆದಿರುವ ಬೆಂಗಳೂರು ಮೂಲದ ಖಾಸಗಿ ಗುತ್ತಿಗೆದಾರ ಕಂಪೆನಿ ಕೋಟಿ ಕೋಟಿ ಹಣವನ್ನ ಹಂತಹಂತವಾಗಿ ನುಂಗಿ ನೀರು ಕುಡಿಯುತ್ತಿರುವ ಆರೋಪ ಕೇಳಿ ಬಂದಿದೆ. ಕಳಪೆ ಕಾಮಗಾರಿ ಹಾಗೂ ಅವಧಿ ಮುಗಿದರೂ ಕಾಮಗಾರಿ ಪೂರ್ಣಗೊಳಿಸದೇ ಇರೋದರಿಂದ ರಾಯಚೂರು ಭಾಗದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದೇ ಕಾರಣಕ್ಕೆ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ರೈತರು ರಾಯಚೂರು ಬಳಿಕ ಇದೀಗ ಮಂತ್ರಾಲಯ ಹೆದ್ದಾರಿಯಲ್ಲಿ ಪ್ರತಿಭಟನೆ ನಡೆಸಿದ್ದಾರೆ.
ಹೌದು ವಿಜಯನಗರ ಕಾಲುವೆ ನವೀಕರಣ ಪ್ರೊಜೆಕ್ಟ್ ಸಂಬಂಧ ರಾಯಚೂರಿನ ಜುಕೂರು ಬಳಿಯ ಚಿಕ್ಕ ಆಣೆಕಟ್ಟನ್ನ ನವೀಕರಣ ಮಾಡಿಲ್ಲ. ಬೇಕಾಬಿಟ್ಟಿಯಾಗಿ ಕಳಪೆ ಕಾಮಗಾರಿ ನಡೆಸಿರುವ ಆರೋಪವೂ ಇದೆ. ಅಲ್ಲದೇ ಈ ಪ್ರೊಜೆಕ್ಟ್ನ್ನ ಖಾಸಗಿ ಗುತ್ತಿಗೆದಾರ ಕಂಪೆನಿಗೆ 2019ರ ಮಾರ್ಚ್ನಲ್ಲಿ ನೀಡಿ, 30 ತಿಂಗಳುಗಳ ಅವಧಿಯನ್ನ ಫಿಕ್ಸ್ ಮಾಡಲಾಗಿತ್ತಂತೆ. ಆದ್ರೆ ಈ ಪ್ರೊಜೆಕ್ಟ್ ಶುರುವಾಗಿ ನಾಲ್ಕು ವರ್ಷವಾದರೂ ಇನ್ನೂ ಸಹ ಪೂರ್ಣಗೊಳಿಸಿಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈ ಆಧುನೀಕರಣದ ಪ್ರೊಜೆಕ್ಟ್ನಲ್ಲಿ ಎಸ್ಟಿಮೇಟ್ ಎಲ್ಲವೂ ತಪ್ಪಾಗಿದ್ದಾವಂತೆ. ಆಣೆಕಟ್ಟಿನ ಗೇಟ್ಗಳು ಕೊಲ್ಯಾಪ್ಸ್ ಆಗಿವೆ. ಕೆಲಸ ಪೂರ್ಣಗೊಳಿಸದೇ ಬಿಲ್ ಎತ್ತುವಳಿ ಮಾಡಲಾಗುತ್ತಿದೆ ಎಂದು ರೈತರು ಆರೋಪಿಸಿದ್ದಾರೆ.
ಇದನ್ನೂ ಓದಿ:ಕಲಬುರಗಿ: “ಸಣ್ಣ ರೈತರಿಗೆ ಕೃಷಿ ಉಪಕರಣಗಳ ಬಳಕೆ” ಕಾರ್ಯಾಗಾರಕ್ಕೆ ಅರ್ಜಿ ಆಹ್ವಾನ
251 ಕಿಲೋ ಮೀಟರ್ ಉದ್ದದ ಈ ಪ್ರೊಜೆಕ್ಟ್ನಲ್ಲಿ 12 ಕಾಲುವೆಗಳಿವೆ. ಒಟ್ಟು 1634 ಸಾವಿರ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸವಲತ್ತು ಸಿಗುತ್ತಿತ್ತು. ಆದ್ರೆ ಕಳಪೆ ಕಾಮಗಾರಿ ಹಿನ್ನೆಲೆ ರಾಯಚೂರಿನ ರೈತರು ನೀರಿಲ್ಲದೇ ಕಂಗಾಲಾಗಿದ್ದಾರೆ. ಖಾಸಗಿ ಗುತ್ತಿಗೆದಾರ ಕಂಪೆನಿ ಅಷ್ಟೇ ಅಲ್ಲದೇ ಗುಣಮಟ್ಟ ಪರೀಕ್ಷೆಗೆಂದು ಸರ್ಕಾರ ನಿಯೋಜಿಸರುವ ನಿಕೇತನ್ ಕನ್ಸಲ್ಟಂಟ್ ಕಂಪೆನಿ ಕೂಡ ಲೋಪ ಎಸಗಿದ್ದು, ಅದನ್ನು ಕೂಡ ಇದರಿಂದ ಹೊರಹಾಕಬೇಕು ಅಂತ ರೈತರು ಆಗ್ರಹಿಸಿದ್ದಾರೆ.
ಇನ್ನು ಈ ಅಕ್ರಮಕ್ಕೆ ಸಂಬಂಧಿಸಿದಂತೆ ಈಗಾಗಲೇ ಸಯ್ಯದ್ ಎನ್ನುವ ರಾಯಚೂರು ಮೂಲದ ವ್ಯಕ್ತಿ ಲೋಕಾಯುಕ್ತಕ್ಕೆ ದೂರು ನೀಡಿದ್ದಾನೆ. ಆ ಬಗ್ಗೆಯೂ ತನಿಖೆ ನಡೆಸಿ ಕೂಡಲೇ ಸರ್ಕಾರ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಂಡು ರೈತರಿಗೆ ನೀರು ಒದಗಿಸುವ ಕೆಲಸ ಮಾಡಬೇಕಿದೆ.
ವರದಿ: ಭೀಮೇಶ್ ಪೂಜಾರ್ ಟಿವಿ9 ರಾಯಚೂರು
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:17 pm, Fri, 10 March 23